ಅಥವಾ

ಒಟ್ಟು 84 ಕಡೆಗಳಲ್ಲಿ , 25 ವಚನಕಾರರು , 75 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು ಕಂಡಕಂಡವರ ಹಾಸ್ಯ ಮಾಡುತಿಪ್ಪ ನೋಡಾ. ಇದು ಕಾರಣ ಹೆತ್ತ ತಾಯ ಶಿಶುವು ನುಂಗಿ ಆ ಭಾಷೆಗಳ್ಳನ ಕೊಂದು, ದೇಶಕ್ಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಡೆದು ಕಂಡವರೆಂದು ನುಡಿದು ಸಿಲುಕಿ ಬಿದ್ದು ಹೋಗುವ ಪಾತಕರು ಒಡೆಯನವಸರವನವರೆತ್ತ ಬಲ್ಲರೋ ! ಮಾಂಸಕ್ಕೆ ಬಿದ್ದ ಶುನಿಭಾವದಂತೆ ಕೊಡುಕೊಳ್ಳೆ ಬೆಳೆಯುಂಟು ಕಾಲನಲ್ಲಿ, ಅರಿದು ಮರೆದವರಂತಲ್ಲ ಕೊಡುಕೊಳ್ಳೆ ಬೆಳೆಯುಂಟು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಕರಜಾತರೆಂದು ಬರಿಯ ಬೊಮ್ಮದ ಮಾತ ನುಡಿದು ಮನಬಲ್ಲಂತೆ ಹರಿದಾಡಿ, ಹಿರಿಯರನರಿಯದೆ ಹಳಿದು ಮರೆಯಿಂದೆ ದುರ್ಬುದ್ಧಿಯ ಮಡುಗಿ ಹೆಮ್ಮೆ ಮುಮ್ಮೊಗನಾಗಿ ಮೆರೆದು ಹೋಗುವ ಬರಿವೇಷಭಾರಕರಿಗೆ ಪರಮಕ್ರಿಯಾ ನಿಜಜ್ಞಾನದ ನಿಲುವೆಂತು ಸಾಧ್ಯವಪ್ಪುದಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುಣ ನೋಡುವಡೆ ಕೀಳು ಗುಣವಯ್ಯಾ ಧೇನುವಿನಲ್ಲಿ. ನಿಂದಿಸುವ, ಬಂದ ಭಕ್ತರ ಹಾದು ಹೋಗುವ ಕುಂದುವಡೆಯದೆ, ಮಲತ್ರಯ ಪೊಂದದ ಸಚ್ಚಿದಾನಂದ ಗುಣವುಂಟಯ್ಯಾ ಮಹೇಶನಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಟ್ಟಿದ ಮನೆಯ ಸುಟ್ಟು ನೆರಮನೆಯ ಸುಟ್ಟು ಹೋಗುವಾಹುತಿ ಹೋತ್ರನಂತೆ, ದೇಹಾಬ್ಥಿಮಾನವಿಡಿದು ಉಪದೇಶವಾಗಿ ತನುವಿಕಾರ ಬಿಡದೆ ಗುರುಭಕ್ತಿ ದಹನಮಾಡಿ, ಜಂಗಮಲಿಂಗವ ಕಂಡು ನಿಂದಿಸಿ ಜಂಗಮಭಕ್ತಿಯ ದಗ್ಧಮಾಡಿ ದುರ್ಗತಿಯಕೂಡಿ ಹೋಗುವ ನರಕಜೀವಿಗಳಿಗೆಂತು ಭಕ್ತಿನೆಲೆಗೊಂಬುವುದಯ್ಯಾ? ನಿತ್ಯಾನಂದ ನಿಲುವಿಗೆ ಸತ್ಯವಾಗಿತ್ತಡೆ ಕರ್ತುವಿಗೆ ಭಕ್ತಿ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಳ್ಳದೊಳು ತೇಲಿಹೋಗುವ ಕಂಬಕೆ ತೊರೆನೆರೆಗಳು ಮುಸುಕಿ ಹೋಗುತಿದೆ ನೋಡಾ ! ತೊರೆನೆರೆಗಳ ಸಂಭ್ರಮದಲ್ಲಿ ಹೋಗುವ ಸ್ತಂಭ ಆರಿಗೆ ಕಾಣಬಾರದು ನೋಡಾ ! ಹಳ್ಳವ ಬತ್ತಿಸೆ, ತೊರೆನೆರೆಗಳ ಕೆಡಿಸಿ, ಹಳ್ಳದೊಳಿಹ ಕಂಬದೊಳಿಪ್ಪ ಮಾಣಿಕ್ಯವ ಸಾದ್ಥಿಸಿಕೊಳಬಲ್ಲರೆ ನಿಃಸಂಸಾರಿ ನಿರಾಭಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ? ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ
--------------
ಅಲ್ಲಮಪ್ರಭುದೇವರು
ದೊಡ್ಡ ದೊಡ್ಡ ಶೆಟ್ಟಿಗಳ ಕಂಡು ಅಡ್ಡಗಟ್ಟಿ ಹೋಗಿ, ಶರಣಾರ್ಥಿ ಎಂಬ ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೇ ಎಂಬರು. ಹೋಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ ಅಡ್ಡ ಮೋರೆಯನಿಕ್ಕಿಕೊಂಡು ಸುಮ್ಮನೆ ಹೋಗುವ ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು. ದುಡ್ಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ ಹೊಡಹೊಡಕೊಂಡು ನಗುತಿರ್ದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ ಬಣ್ಣದ ಮಾತೇಕೊ ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ ಮಹಾಜ್ಞಾನಿಗಳ ಮಾತೇಕೊ ? ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ ? ಅಮುಗೇಶ್ವರಲಿಂಗವನರಿದವಂಗೆ ?
--------------
ಅಮುಗೆ ರಾಯಮ್ಮ
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೋಗುವ ಬನ್ನಿರಯ್ಯ ; ಶಕ್ತಿಪಾತವಾದ ಶಿವಯೋಗೀಶ್ವರರು ಶಿವಭಕ್ತರು ಹೋಗುವ ಬನ್ನಿರಯ್ಯ. ಸುಕ್ಷೇತ್ರದಲ್ಲಿರ್ಪ ಮಹಲಿಂಗದರುಶನಕೆ ಹೋಗುವ ಬನ್ನಿರಯ್ಯ. ಜೀವಸಂಚಾರವೆಂಬ ಪ್ರಾಕೃತವೆನಿಸುವ ಅಧೋಕುಂಡಲಿಸ್ವರೂಪಮಾದ ಅಹಂ ಎಂಬ ಹೆಬ್ಬಟ್ಟೆಯಂ ಬಿಟ್ಟು, ಸಜ್ಜೀವವೆಂಬ ವೈಕೃತವೆನಿಸುವ ಮಧ್ಯಕುಂಡಲಿಸ್ವರೂಪಮಾದ ಸೋಹಮೆಂಬ ಸಣ್ಣಬಟ್ಟೆಯ ಹಿಡಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ಕೇವಲ ಶಿವಯೋಗವೆಂಬ ಏಕವೆನಿಸುವ ಊಧ್ರ್ವಕುಂಡಲಿಸ್ವರೂಪಮಾದ ಓಂ ಎಂಬ ನುಸುಳುಗಂಡಿಯಂ ನುಸಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ದ್ವಯಮಂಡಲವ ಭ್ರೂಮಧ್ಯವೆಂಬ ಮಹಾಮೇರುವ ಮಧ್ಯದಲ್ಲಿ ಏಕಮಂಡಲಾಕಾರ ಮಾಡಿ, ಆ ಕಮಲಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಮಹಾಲಿಂಗದಲ್ಲಿ ಜೀವಪರಮರಿಬ್ಬರನೇಕಾರ್ಥವಂ ಮಾಡಿ, ಶಾಂಭವೀಮುದ್ರಾನುಸಂಧಾನದಿಂದೆ ಅಧೋಮುಖಕಮಲವೆಲ್ಲ ಊಧ್ರ್ವಮುಖವಾಗಿ, ಆ ಮಹಾಲಿಂಗವ ನೋಡುತಿರಲು ಆ ಕಮಲಸೂತ್ರವಿಡಿದಿಹ ಷಡಾಧಾರಚಕ್ರಂಗಳ ಊಧ್ರ್ವಮುಖವಾಗಿ ಆ ಕಮಲದಲ್ಲಿ ಅಡಗಿ, ಆ ಕಮಲದ ಎಸಳು ಐವತ್ತೆರಡಾಗಿ ಎಸೆವುತಿರ್ಪವು. ಪರಿಪೂರ್ಣ ಜ್ಞಾನದೃಷ್ಟಿಯಿಂ ಆ ಮಹಾಲಿಂಗಮಂ ನಿರೀಕ್ಷಿಸಲು ಆ ಕಮಲದಲ್ಲಿ ಮಹಾಲಿಂಗಸ್ವರೂಪಮಾಗಿ ಸಕಲ ಕರಣೇಂದ್ರಿಯಂಗಳು ಆ ಮಹಾಲಿಂಗದಲ್ಲಿಯೆ ಅಡಗಿ, ಸುನಾದಬ್ರಹ್ಮವೆಂಬ ಇಷ್ಟವೆ ಮಹಾಲಿಂಗವೆಂದರಿದು ನೋಡುತ್ತಿರಲು, ಜ್ಯೋತಿರ್ಮಯವಾಗಿ ಕಾಣಿಸುತಿಪ್ಪುದು. ಅದೇ ಜೀವಪರಮರೈಕ್ಯವು ; ಅದೇ ಲಿಂಗಾಂಗಸಂಬಂಧವು. ಆ ಮಹಾಲಿಂಗದ ಕಿರಣಂಗಳೆ ಕರಣಂಗಳಾಗಿ ಆ ಕಮಲವು ಅಧೋಮುಖವಾಗಿ ಆ ಮಹಾಲಿಂಗವು ತನ್ನ ನಿಜನಿವಾಸವೆನಿಸುವ `ಅಂತರೇಣ ತಾಲುಕೇ' ಎಂಬ ಶ್ರುತಿ ಪ್ರಮಾಣದಿ ತಾಲುಮೂಲದ್ವಾದಶಾಂತವೆಂಬ ಬ್ರಹ್ಮರಂಧ್ರದ ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪುದೊಂದು ಶಿವಚಕ್ರವು. ಆ ಶಿವಚಕ್ರವೆ ಶಿವಲೋಕವೆನಿಸುವುದು. ಆ ಶಿವಲೋಕವೆ ಶಾಂಭವಲೋಕವೆನಿಸುವುದು. ಶಾಂಭವಲೋಕವೆ ಶಾಂಭವಚಕ್ರವೆನಿಸುವುದು. ಆ ಶಾಂಭವಚಕ್ರದಲ್ಲಿ ಆಧಾರವಾದಿ ಪಶ್ಚಿಮಾಂತ್ಯವಾದ ನವಚಕ್ರಂಗಳು ಸಂಬಂಧವಾಗಿರುತಿರ್ಪವು. ಅದು ಹೇಗೆಂದೊಡೆ ; ಆ ಶಾಂಭವಚಕ್ರಮಧ್ಯದ ಚತುರ್ದಳಾಗ್ರದಲ್ಲಿ ಅಗ್ನಿಮಂಡಲದಲ್ಲಿ ಅಷ್ಟದಳ ಇರ್ಪುವು. ಆ ಅಷ್ಟದಳ ಚತುರ್ದಳದಲ್ಲಿ `ವಶಷಸ' ಎಂಬ ನಾಲ್ಕಕ್ಷರಯುಕ್ತವಾದ ಆಧಾರಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ನ' ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ತಾರಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಗ್ನಿಮಂಡಲದ ಚತುರ್ದಳದ ಈಶಾನ್ಯ ದಳದಲ್ಲಿ `ಬ ಭ ಮ ಯ ರ ಲ' ಎಂಬ ಆರಕ್ಷರಯುಕ್ತವಾದ ಸ್ವಾದ್ಥಿಷ್ಠಾನಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಮ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದಂಡಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳಾಗ್ರದಲ್ಲಿ ಸೂರ್ಯಮಂಡಲವಿರ್ಪುದು. ಆ ಸೂರ್ಯಮಂಡಲದಲ್ಲಿ `ಡಢಣ ತಥದಧನ ಪಫ' ಎಂಬ ದಶಾಕ್ಷರಯುಕ್ತವಾದ ಮಣಿಪೂರಕಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಶಿ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಕುಂಡಲಾಕೃತಿಯಲ್ಲಿ ಸಂಬಂಧವಾಗಿರ್ಪುದು. `ಕಖಗಘಙ ಚಛಜಝಞ ಟಠ' ಎಂಬ ದ್ವಾದಶಾಕ್ಷರಯುಕ್ತವಾದ ಅನಾಹತಚಕ್ರವು ಸೂರ್ಯಮಂಡಲದಲ್ಲಿ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ವ'ಕಾರವು ಆ ಮಹಾಲಿಂಗಸ್ವರೂಪವಾದಪ್ರಣವದ ಅರ್ಧಚಂದ್ರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳದಮಧ್ಯದಲ್ಲಿ ಚಂದ್ರಮಂಡಲವಿರ್ಪುದು. ಆ ಚಂದ್ರಮಂಡಲದಲ್ಲಿ- `ಅ ಆ ಇ ಈ ಉ ಊ ಋ Iೂ ಲೃ ಲೂೃ ಏ ಐ ಓ ಔ ಅಂ ಅಃ' ಎಂಬ ಷೋಡಶಾಕ್ಷರಯುಕ್ತವಾದ ವಿಶುದ್ಧಿಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಯ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಮಹಾಲಿಂಗಕ್ಕೆ ಪೀಠಮಾಗಿರ್ದ ಬಿಂದುಯುಕ್ತಮಾದ ಪ್ರಣವವು ಆ ಮಹಾಲಿಂಗದ ಮುಂದಿರ್ದ `ಹಂ ಳಂ ಹಂ ಕ್ಷಂ' ಎಂಬ ಚುತವರ್ಣಾಕ್ಷರಯುಕ್ತವಾದ ಆಜ್ಞಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಓಂಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಜ್ಯೋತಿರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಚತುರ್ದಳವು ತ್ರಿದಳದಲ್ಲಿ ಕ್ಷ ಉ ಸ ಎಂಬ ತ್ರಯಕ್ಷರಯುಕ್ತವಾದ ಶಿಖಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ಕ್ಷ' ಕಾರವು ಆ ಮಹಾಲಿಂಗಸ್ವರೂಪವಾದ ಕುಂಡಲಾಕೃತಿ ಅರ್ಧಚಂದ್ರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಆ ಚತುರ್ದಳದ ಮಧ್ಯದಲ್ಲಿ ಬಟುವೆ ಏಕದಳವೆನಿಸಿಕೊಂಬುದು. ಆ ಏಕದಳದಲ್ಲಿ ಪಶ್ಚಿಮಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಹ್ರಾಂ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿ ಜ್ಯೋತಿರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಹೀಂಗೆ ಅಷ್ಟಚಕ್ರಂಗಳ ತನ್ನೊಳಗೆ ಗಬ್ರ್ಥೀಕರಿಸಿಕೊಂಡು ಬೆಳಗುತ್ತಿರ್ಪುದೊಂದು ಬ್ರಹ್ಮರಂಧ್ರಚಕ್ರವು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಹ್ರೀಂ ಕಾರಗಳು. ಆ ಹರದನಹಳ್ಳಿಯ ಪ್ರಭುಲಿಂಗಗುರುಸ್ವಾಮಿಯ ಶಿಷ್ಯರು ನಿಜಾನಂದ ಗುರುಚೆನ್ನಯ್ಯನವರು. ಆ ನಿಜಾನಂದ ಗುರುವಿನ [ಶಿಷ್ಯರು] ಗುರುಸಿದ್ಧವೀರೇಶ್ವರದೇವರು. ಆ ಸಿದ್ಧವೀರೇಶ್ವರದೇವರ ಕರಕಮಲದಲ್ಲಿ ಉದಯವಾದ ಬಾಲಸಂಗಯ್ಯನು ನಾನು. ಆ ನಿರಂಜನ ಗುರುವೆ ತಮ್ಮ ಕೃಪೆಯಿಂದ ತಮ್ಮಂತರಂಗದಲ್ಲಿರ್ದ ಅತಿರಹಸ್ಯವಾದ ಶಾಂಭವಶಿವಯೋಗವೆಂಬ ಮಹಾಜ್ಞಾನೋಪದೇಶಮಂ ಹರಗುರು ವಾಕ್ಯಪ್ರಮಾಣಿನಿಂ ಎನ್ನ ಹೃದಯಕಮಲದಲ್ಲಿ ಕರತಳಾಮಳಕದಂತೆ ತೋರಿ, ಆ ಹೃದಯಕಮಲಕರ್ಣಿಕಾಮಧ್ಯದಲ್ಲಿರ್ಪ ನಿರಂಜನಗುರುವೆ ನಿರಂಜನಮಹಾಲಿಂಗವೆಂದರಿದು ಆ ನಿರಂಜನಮಹಾಲಿಂಗವೆ ಕರಸ್ಥಲದಲ್ಲಿರ್ಪ ಸುನಾದಬ್ರಹ್ಮವೆಂಬ ಇಷ್ಟಲಿಂಗವೆಂದರಿದು, ಆ ಕರಸ್ಥಲದಲ್ಲಿರ್ಪ ಇಷ್ಟಲಿಂಗವೆ ತಾನೆಂದರಿದು ``ಮಂತ್ರಮಧ್ಯೇ ಭವೇತ್‍ಲಿಂಗಂ ಲಿಂಗಮಧ್ಯೇ ಭವೇತ್‍ಮಂತ್ರಂ | ಮಂತ್ರಲಿಂಗದ್ವಯಾದೇಕಂ ಇಷ್ಟಲಿಂಗಂತು ಶಾಂಕರಿ ||' ಎಂದುದಾಗಿ, ಎನ್ನ ಹೃತ್ಕಮಲಕರ್ಣಿಕಾಮಧ್ಯದಲ್ಲಿ ಶಾಂಭವೀಮುದ್ರಾನುಸಂಧಾನದಿಂದ ಆ ಲಿಂಗವೆ ಮಂತ್ರ, ಮಂತ್ರವೆ ಲಿಂಗವೆಂದರಿದು ಓಂ ಓಂ ಎಂದು ಶಿವಸಮಾದ್ಥಿಯ ಜಪಮಂ ಜಪಿಸುತ್ತ ಜ್ಯೋತಿರ್ಲಿಂಗಮಂ ಕೇಳುತ, ಜ್ಯೋತಿರ್ಲಿಂಗದೊಳು ಮುಳುಗಾಡುತ್ತಿರ್ದೆನಯ್ಯಾ ಬಸವಣ್ಣಪ್ರಿಯ ಚೆನ್ನಸಂಗಯ್ಯನೆಂಬ ಗುರುವಿನ ಕೃಪೆಯಿಂದ, ನಿಮ್ಮ ಶರಣರ ಪಡುಗ ಪಾದರಕ್ಷೆಯ ಹಿಡಿವುದಕ್ಕೆ ಯೋಗ್ಯನಾದೆನಯ್ಯ ನಿಮ್ಮ ಕೃಪೆಯಿಂದ.
--------------
ಭಿಕ್ಷದ ಸಂಗಯ್ಯ
ಚಂದ್ರ ಮೂಡಿದನಂತೆ, ಚಂದ್ರಿಕೆಯೊಳು ನಿಂದು ನೋಡಿದನಂತೆ, ಎಮ್ಮೊಡೆಯನ ಕುತ್ತಿಗೆಯ ಕೊಯ್ದನಂತೆ, ಎಮ್ಮೊಡತಿಯ ಮೊಲೆ ಮೂಗ ಹರಿದು ಹಾಕಿದನಂತೆ, ಗಾರುಡಿಗನಾಟವ ಕಲಿತುಕೊಂಡನಂತೆ, ನಮ್ಮೆಲ್ಲರ ಕೊಂದು ಕೊಂಬುವನಂತೆ, ನಿರಂಜನ ಚನ್ನಬಸವಲಿಂಗನಂತೆ, ಬಲ್ಲಕಡೆಗೆ ಹೋಗುವ ಬನ್ನಿರತ್ತತ್ತ ಅರಿಯದಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಂದಿಯ ತಂದಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ಅಜ್ಜ ಪಣಜ ಸತ್ತದ್ದು ಕೇಳುತ್ತಿದ್ದಿ, ನಿಮ್ಮ ತಾಯಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಾಯಿಯ ತಾಯಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ತಾಯಿಯ ಅಜ್ಜಿ ಪಣಜಿ ಸತ್ತದ್ದು ಕೇಳುತ್ತಿದ್ದಿ. ನಿನ್ನ ಸತಿಸುತರು ಒಡಹುಟ್ಟಿದ ಬಂಧುಗಳು ಸ್ನೇಹಿತರು ಬೀಗರು ಮೊದಲಾದ ಸಕಲಲೋಕಾದಿಲೋಕಂಗಳು ನಿಮ್ಮ ಕಣ್ಣಮುಂದೆ ವೃಕ್ಷದ ಪರ್ಣಗಳು ಉದುರಿದ ಹಾಗೆ ಸಕಲರು ಅಳಿದುಹೋಗುವುದ ನೋಡುತ್ತಿದ್ದಿ. ಇದಲ್ಲದೆ ದೃಷ್ಟಾಂತ: ಒಬ್ಬ ರೋಮಜಋಷಿಗೆ ಮೂರುವರೆಕೋಟಿ ರೋಮಂಗಳುಂಟು, ಅಂತಹ ಋಷಿಗೂ ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗವೆಂಬ ಚತುರ್ಯುಗ ಪ್ರಳಯವಾದಲ್ಲಿ ಒಂದು ರೋಮ ಉದುರುವದು. ಹೀಗೆ ಈ ಪರಿಯಲ್ಲಿ ಮೂರುವರೆಕೋಟಿ ರೋಮಂಗಳು ಉದುರಿದಲ್ಲಿ ಆ ರೋಮಋಷಿಯೆಂಬ ಮುನೀಶ್ವರನು ಪ್ರಳಯವಾಗುವನು. ಮತ್ತೆ ದೇವಲೋಕದ ಸನಕ ಸನಂದಾದಿ ಮುನಿಜನಂಗಳು ಅನಂತಕೋಟಿ ಋಷಿಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ತೆತ್ತೀಸಕೋಟಿ ದೇವರ್ಕಳು ಇಂತಿವರೆಲ್ಲರು ಎತ್ತಲಾನುಕಾಲಕ್ಕೆ ಮರಣಕ್ಕೆ ಒಳಗಾದರು. ವೇದಾಗಮ ಶಾಸ್ತ್ರ ಪುರಾಣ ಶ್ರುತಿ ಪ್ರಮಾಣಗಳಿಂದ ಮತ್ತೆ ಹರ, ಗುರು, ಪುರಾತನರ ವಾಕ್ಯದಿಂದ ನಿಮ್ಮ ಉಭಯ ಕರ್ಣದಿಂ ಕೇಳುತ್ತಿದ್ದಿ. ಇಂತೀ ಎಲ್ಲವನು ಕಂಡು ಕೇಳಿ ಗಾಢನಿದ್ರೆಯ ಮನುಷ್ಯನ ಹಾಂಗೆ ನಿನ್ನ ನಿಜಸ್ವರೂಪವ ಮರದು ತ್ರಿವಿಧಮಲವ ಕಚ್ಚಿ ಶುನಿ ಶೂಕರನ ಹಾಗೆ ಕಚ್ಚಿ ಕಡಿದಾಡಿ ಸತ್ತು ಹೋಗುವ ವ್ಯರ್ಥಗೇಡಿ ಮೂಳ ಹೊಲೆಮಾದಿಗರ ಕಿವಿ ಹರಿದು, ಕಣ್ಣುಗುಡ್ಡಿಯ ಮೀಟಿ, ನೆತ್ತಿಯ ಮೇಲೆ ಮೂರು ಪಟ್ಟೆಯನೆ ಕೆತ್ತಿ ಅವನ ಮುಖದ ಮೇಲೆ ಹೆಂಡಗಾರನ ಮುಖದಿಂದ ಲೊಟ್ಟಲೊಟ್ಟನೆ ಉಗುಳಿಸಿ ಪಡುವಲದಿಕ್ಕಿಗೆ ಅಟ್ಟೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->