ಅಥವಾ

ಒಟ್ಟು 32 ಕಡೆಗಳಲ್ಲಿ , 22 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಂಬಳಕ್ಕೆ ಹೋದಲ್ಲಿ ಅವರಂಗವ ಹೊತ್ತು ಹೋಹನ್ನಕ್ಕ, ಸಂಬಂಧಕ್ಕೆ ಕೂಲಿಯ ಮಾಡಿ ತಂದು ಸಂದುದೇ ಕಾಯಕದೊಳಗು, ಎನ್ನಂಗದ ಸತ್ತಿಗೆಯ ಕಾಯಕ. ಸಂಗನಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ. ಕಾಯಕ ನಿಂದುದೆಂಬ ಭಾಷೆ, ಎನಗೆ ಐಘಂಟೇಶ್ವರಲಿಂಗವಿಲ್ಲಾ ಎಂಬ ಶಪಥ.
--------------
ಸತ್ತಿಗೆ ಕಾಯಕದ ಮಾರಯ್ಯ
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ರಾಜ್ಯ ಹೋದಲ್ಲಿ ರಾಯತನ ಉಂಟೆ? ಪೂಜೆ ಅಡಗಿದಲ್ಲಿ ಪುಣ್ಯದ ಹಂಗುಂಟೆ? ಮಾಟಕೂಟ ನಷ್ಟವಾದಲ್ಲಿ ಮಹಾಮನೆಯ ಎಡೆಯಾಟವುಂಟೆ? ಸಟ್ಟೆಯನೊಪ್ಪಿಸಿದವಂಗೆ ಮತ್ತೆ ಒಪ್ಪದ ಚೀಟುಂಟೆ? ಭಕ್ತನಾಗಿ ಮಾಡಿ ಕಂಡೆ, ಭೃತ್ಯನಾಗಿ ಕಾಯಿದು ಕಂಡೆ ಮತ್ತೆ ನೀ ನೀವೊಪ್ಪಿ ಕೊಟ್ಟಿರಿ. ಎನ್ನಂಗದಲ್ಲಿ ಮತ್ರ್ಯರೂಪನ ರೂಪ ನಿಮಗೆ ಒಪ್ಪಿಸಿದೆಯೆಂಬುದಕ್ಕೆ ಮೊದಲೇ ಬಚ್ಚಬಯಲಾಯಿತ್ತು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ. ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ, ಬರುಮುಖರಾಗಿ ಇದ್ದಿರಲ್ಲಾ. ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ, ವೇದವೇ ದೈವವೆಂದು ಕೆಟ್ಟಿರಲ್ಲಾ. ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ, ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ. ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ. `ಯತ್ರ ಶಿವಸ್ತತ್ರ ಮಾಹೇಶ್ವರ'ನೆಂದು ಹೇಳಿತ್ತು ಮುನ್ನ, ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಭಕ್ತಿ ಜ್ಞಾನವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ `ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ. ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ ನಿಜಮುಕ್ತಿಯನರಸುವ ಅಣ್ಣಗಳಿರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹುಣಚಿಯ ಮರದಲ್ಲೊಂದು ಹಣಚಿಯ ಬೆರಳಿಟ್ಟು ಹೋದಲ್ಲಿ, ಆ ಹುಣಚಿಯ ಮರ ಹಣಚಿಯ ಮರವಾಗಿ ತಾ ಕಣಚಿ ಹೋದುದ ಕಂಡೆ. ಈ ಹುಣಚಿಯ ಹಣಚಿಯ ಹವಣವ ತಿಳಿದು ಅರಿಯಬಲ್ಲಡೆ, ಹಣೆಯ ಕಣ್ಣಿನ ಶರಣನೆಂಬೆ ನೋಡಾ, ತ್ರಿಣಯನ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶಿಕಾರಿಯ ಹೋದಲ್ಲಿ ಶುನಿಗಳ ಕೊಂದು ಕಾಡಬೆಕ್ಕಿನ ಬೇಟೆಯನಾಡಿ ನರಿಯ ಕೊಲ್ಲದೆ ಗುದ್ದಹೊಕ್ಕ ಇಲಿಯಕೊಂದು ರಾತ್ರಿಯ ಕಳೆದು ಹಗಲಳಿದು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಟ್ಟಕಡೆಯ ಕಟ್ಟಲು ಬಲಿವುದೆ ? ವ್ರತ ಹೋದಲ್ಲಿ ವ್ರತ ಒಪ್ಪುವುದೆ ? ಕೆಟ್ಟಕಣ್ಣಿಂಗೆ ದೃಷ್ಟಿಯುಂಟೆ ? ಭವಹರ ಕುರಂಗೇಶ್ವರಲಿಂಗಾ ?
--------------
ಮಹಾದೇವೀರಯ್ಯ
[ಕ]ಟ್ಟಕಡೆಯ ಕಟ್ಟಲು ಬಲಿವುದೆ ? ವ್ರತ ಹೋದಲ್ಲಿ ವ್ರತ ಒಪ್ಪುವದೆ? ಕೆಟ್ಟ ಕಣ್ಣಿಂಗೆ ದೃಷ್ಟಿಯುಂಟೆ, ಭವಹರ ಕುರಂಗೇಶ್ವರಲಿಂಗಾ ?
--------------
ಬೊಮ್ಮಗೊಂಡೇಶ್ವರ
ಇಷ್ಟಲಿಂಗ ಪ್ರಾಣಲಿಂಗವೆಂದು ಭಿನ್ನಭಾವದಿಂದ ಹಿಂಗಿಸುವ ಪರಿಯಿನ್ನೆಂತೊ ? ಕಾಯದಲ್ಲಿ ನೋವಾದಡೆ ಜೀವಕ್ಕೆ ಭಿನ್ನವೆ ? ಜೀವ ಹೋದಲ್ಲಿ ಕಾಯ ಉಳಿಯಬಲ್ಲುದೆ ? ಈ ಉಭಯದ ಭೇದವನರಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯಾಗಿ, ಕೊಂಬೆಗೆ ಕೋಡಗನಾಗಿ ಅವರವರ ಬೆಂಬಳಿಯಲ್ಲಿ ಅಜಬೀಜವ ಕಾವ ಜಂಬುಕನಂತೆ ತಿರುಗಲೇತಕ್ಕೆ? ಆಯುಷ್ಯ ತೀರಿದಲ್ಲಿ ಮರಣ, ಐಶ್ವರ್ಯ ಹೋದಲ್ಲಿ ದಾರಿದ್ರ ್ಯ ಬಪ್ಪುದು ಎಲ್ಲಿದ್ದಡೂ ತಪ್ಪದೆಂದರಿದ ಮತ್ತೆ ಬಾಯಿಮುಚ್ಚಿ ಸತ್ತಂತಿಪ್ಪ ತೆರ. ಇದು ಭಕ್ತಿವಿರಕ್ತಿಯ ಪಥ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 100 ||
--------------
ದಾಸೋಹದ ಸಂಗಣ್ಣ
ಮಹಾವ್ರತಸ್ಥರು ವ್ರತಿಗಳ ಮನೆಗೆ ಹೋದಲ್ಲಿ, ಕಂಡುದ ಬೇಡದೆ, ಬಾಯಿಗೆ ಬಂದಂತೆ ನುಡಿಯದೆ, ಕಾಮದೃಷ್ಟಿಯಲ್ಲಿ ಮತ್ತೇನುವ ನೋಡದೆ, ಶಿವಲಿಂಗಪೂಜೆ ಶಿವಧ್ಯಾನಮೂರ್ತಿ ಶಿವಕಥಾ ಪ್ರಸಂಗ ಶಿವಶರಣರ ಸಂಗ ತಮ್ಮ ಕ್ರಿಯಾನುಭಾವದ ವಿಚಾರ ಹೀಂಗಲ್ಲದೆ ಸರಸ, ಸಮೇಳ, ಪಗುಡಿ, ಪರಿಹಾಸಕ, ಚದುರಂಗ ನೆತ್ತ ಪಗಡಿ ಜೂಜು ಶಿವಭಕ್ತಂಗೆ ಉಂಟೆ ? ಆತ್ಮನಲ್ಲಿದ್ದಡೆ ಎನ್ನ ಬೇಗೆ, ನುಡಿದಡೆ ಶರಣರ ಬೇಗೆ. ಈ ಒಡಲೇಕೆ ಅಡಗದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನಿನ್ನ ಕೊರಳೇಕೆ ಉಡುಗದು ?
--------------
ಅಕ್ಕಮ್ಮ
ಜಂಗಮವೆಂದು ಭಕ್ತನಾಶ್ರಯಕ್ಕೆ ಹೋದಲ್ಲಿ ಉಪಾಧಿಕನಂಗೀಕರಿಸಿ ಮಜ್ಜನ ಭೋಜನ ಪರಿಮಳಂಗಳಲ್ಲಿ ಕೀಳಾಗಿ ಪೂಜಿಸುವಲ್ಲಿ ಮೇಲಾದ ಪರಿಯಿನ್ನೆಂತಯ್ಯಾ? ಆತ ಮಾಡುವುದಕ್ಕೆ ಮುನ್ನವೆ ಬೇಡದಿಪ್ಪುದೆ ವಸ್ತುಗುಣ. ಆತ ಕಾಡುವುದಕ್ಕೆ ಮುನ್ನವೆ ಮಾಡುತ್ತಿಪ್ಪುದೆ ಭಕ್ತಿಗುಣ. ಉಭಯದಾರೈಕೆಯನರಿದು ಆರೈದಾಗಲೆ ಉಭಯಸ್ಥಲ ನಿರುತ. ಆ ಗುಣವಾದಲ್ಲಿ ಉಭಯ ಏಕೀಕರವಾಯಿತ್ತು. ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ.
--------------
ಡಕ್ಕೆಯ ಬೊಮ್ಮಣ್ಣ
ಇನ್ನಷ್ಟು ... -->