ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (4) (0) (0) (0) (2) (0) (0) (0) (1) (0) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಂಚಾಕ್ಷರದೊಳಗೆ ಪಂಚಾಂಗವಡಗಿತ್ತಾಗಿ, ಪಂಚಾಕ್ಷರವ ತಿಳಿದೆನಾಗಿ ಎನಗೆ ಪಂಚಾಂಗ ನಾಸ್ತಿಯಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಪಂಚಾಂಗವೆಂಬ ಶಬ್ದಕ್ಕೆ ಅರ್ಥ : ಪಂಚವೆಂದರೆ ಐದು ; ಅಂಗವೆಂದರೆ ದೇಹ. ಈ ಉಭಯ ಕೂಡಿದರೆ ದೇಹವಾಯಿತ್ತು. ಈ ದೇಹವೆ ಪಂಚಾಂಗವೆನಿಸಿತ್ತು. ಅದು ಹೇಗೆಂದಡೆ : ನಕಾರ ಮಕಾರ ಶಿಕಾರ ವಕಾರ ಯಕಾರದ ನಿಕ್ಷೇಪವನರಿವುದೇ ಪಂಚಾಂಗ. ಕ್ರಿಯಾ ಜ್ಞಾನ ಇಚ್ಫಾ ಆದಿ ಪರಾ ಚಿಚ್ಫಕ್ತಿಯ ಎಚ್ಚರನರಿವುದೆ ಪಂಚಾಂಗ. ಇಚ್ಫೆಯೊಳಗಿರುವುದೆ ಪಂಚಾಂಗವಯ್ಯ. ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು, ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು, ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ? ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ ಜೋಯಿಸರು ಕೆಟ್ಟರು ; ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು. ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ. ಪಂಚ ಅಂದರೆ ಐದು ; ಅಂಗವೆಂದರೆ ದೇಹ, ಪೃಥ್ವಿ ಅಪ್ಪು ತೇಜ ವಾಯು ಆಕಾಶ- ಈ ಐದು ಕೂಡಿ ದೇಹವಾಯಿತ್ತು. ಆ ದೇಹದೊಳಗೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ. ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ. ಆಣವಮಲ ಮಾಯಾಮಲ ಕಾರ್ಮಿಕಮಲವ ಮುಟ್ಟದಿರುವುದೇ ಪಂಚಾಂಗ. ತನ್ನ ಸತಿಯ ಸಂಗವಲ್ಲದೆ ಪರಸತಿಯರ ಮುಟ್ಟದಿರುವುದೇ ಪಂಚಾಂಗ. ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ. ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ. ಸೂತಕ ನಾಸ್ತಿಯಾದುದೆ ಪಂಚಾಂಗ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ. ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರವೆ ಪಂಚಾಂಗ. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ. ಇಂತೀ ಪಂಚಾಂಗದ ನಿಲವನರಿಯದೆ ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ ಎನಗೊಮ್ಮೆ ತೋರದಿರಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಪಂಚಾಂಗದ ಭೂತವಳಿದು ಪಂಚಭೂತಗಳ ನಿವೃತ್ತಿಯಮಾಡಬಲ್ಲರೆ ಪಂಚಾಂಗ. ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ ದುರ್ಭಾವ ನಿರಾಳಹಸ್ತವನರಿವುದೆ ಪಂಚಾಂಗ. ಆಚಾರ ಗುರು, ಶಿವ ಜಂಗಮ, ಪ್ರಸಾದ ಮಹಾಲಿಂಗದ ನೆಲೆವನೆಯ ನೆಲೆಗೊಂಬುದೆ ಪಂಚಾಂಗ. ಪಂಚಾಂಗದ ವಿವರವ ಗುರುಮುಖದಲ್ಲಿ ತಿಳಿವುದೆ ಪಂಚಾಂಗ. ಪಂಚಪ್ರಸಾದವ ಸೇವಿಸಿ ಅಡಗಲರಿಯದೆ ವಿರಂಚಿ ಸೃಷ್ಟಿಯೊಳಗಾಗಿ ಚೌರಾಸಿ ಲಕ್ಷ ಜೀವದಲ್ಲಿ ಹುಟ್ಟಿ ಸತ್ತು ಹೋಗುವ ವ್ಯರ್ಥರಿಗೆ ಇನ್ನೆತ್ತಣ ಪಂಚಾಂಗವಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ