ಅಥವಾ
(3) (0) (0) (1) (0) (0) (0) (0) (9) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಎಲಾ, ಶೈವ ವೀರಶೈವ ಎಂಬುವವು ಉಭಯ ಮತಗಳುಂಟು. ಅವು ಎಂತೆಂದಡೆ, ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ; ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ. ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ : ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ ? ಈಗ ಯತಿಯ ನುಡಿದ ಜಿಹ್ವೆ ಪೋಗಿ ಪರಸ್ತ್ರೀಯರ ಅಧರಪಾನ ಮಾಡಬಹುದೆ ? ಮಹಾಮಂತ್ರವ ಕೇಳಿದ ಕರ್ಣ ಪೋಗಿ ಪರತಂತ್ರವ ಕೇಳಬಹುದೆ ? ಲಿಂಗಪೂಜಕರ ಅಂಗ ಪೋಗಿ ಪರರಂಗವನಪ್ಪಬಹುದೆ ? ಇವನು ಶೈವ ಭಕ್ತನಲ್ಲಾ ! ಶೈವನಾಗಲಿ ವೀರಶೈವನಾಗಲಿ ಏಕಲಿಂಗನಿಷ್ಠಾಪರನಾಗಿ, ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ, ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು, ಆರು ಚಕ್ರವ ಹತ್ತಿ ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ವೀರಶೈವನೆಂದು ನಮೋ ಎಂಬುವೆನಯ್ಯಾ ಬರಿದೆ ವೀರಶೈವನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಎಲಾ ಶಿವಭಕ್ತನೇ ನೀ ಕೇಳು : ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವಿರಲ್ಲ ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯಾ ? ಅದು ಎಂತೆಂದರೆ : ಶಿವಭಕ್ತನಾದ ಬಳಿಕ ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು : ತನುವ ಕೊಡಬೇಕು ಗುರುವಿಗೆ ; ಮನವ ಕೊಡಬೇಕು ಲಿಂಗಕ್ಕೆ ; ಧನವ ಕೊಡಬೇಕು ಜಂಗಮಕ್ಕೆ]. ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು, ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಶಿವಭಕ್ತನೆಂದು ನಮೋ ಎಂಬುವೆನಯ್ಯಾ. ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವ, ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ ; ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ ? ಜಲದಿಂದ ಮಜ್ಜನವ ನೀಡುವಿರಿ ; ಜಲ ಮೀನಿನೆಂಜಲು. ಅಡವಿಯಂ ತಿರುಗಿ, ಪುಷ್ಪವಂ ತಂದು, ಶಿವಗಂ ಅರ್ಪಿ[ಸುವಿರಿ]; ಪುಷ್ಪ ಭೃಂಗದೆಂಜಲು. ಪಂಚಾಭಿಷೇಕ[ವ]ಮಾಡುವಿರಿ; ಕ್ಷೀರ ಕರುವಿನೆಂಜಲು. ಮಧು[ವ] ಅಭಿಷೇಕವ ಮಾಡುವಿರಿ; [ಮಧು] ಮಧು[ಕ]ರಮಯಂ. [ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ ? ಅದು ಎಂತೆಂದಡೆ: ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] | ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ || ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು ಮಾನಸವೆಂಬೋ ಕಲ್ಲಿನ ಮೇಲೆ ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು, ಸತ್ಯವೆಂಬೋ ಗಂಧವಂ ಹಚ್ಚಿ, ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು, ಗುರುಕೀಲೆಂಬೋ ಒರಳಿನಲ್ಲಿ ಮದಮಚ್ಚರವೆಂಬೋ ತಂಡಿಲಂ ಕುಟ್ಟಿ, ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ, ನಿಜವೆಂಬೋ ಅನ್ನವಂ ಮಾಡಿ, ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ, ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು, ಕಾಮಕ್ರೋಧವೆಂಬೋ ಬತ್ತಿಯ ಹೊಸೆದು, ಗುರುಪ್ರಣುತವೆಂಬೋ ಪಣತಿಯೊಳಗೆ ನಿರ್ಮಳವೆಂಬೋ ತೈಲವಂ ಎರೆದು ಜ್ಯೋತಿಯ ಮುಟ್ಟಿಸಿ, ನಿರ್ಮಳ ಲಿಂಗಕ್ಕಂ ಅರ್ಪಿಸಿ ಮೋಕ್ಷವ ಕಂಡಡೆ ಶಿವಪೂಜಕನೆಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಶಿವಪೂಜೆ' 'ನೀ ಶಿವಪೂಜಕ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಎಲಾ, ಪರಮ ಪಾವನಚರಿತ ಪಾರ್ವತೀಶ ಪಾಪನಾಶ ಪರಮೇಶ ಈಶ. ಇಂತಪ್ಪ ಈಶನು ಭಕ್ತನಾ ಕರಸ್ಥಲದಲ್ಲಿ ಬಂದ ಬಳಿಕ ಭಕ್ತನೇ ದೊಡ್ಡಿತ್ತು ಕಾಣೆಲಾ ! ಇಂತಪ್ಪ ಭಕ್ತನಾ ಶರೀರಕ್ಕೆ ರೋಗ ಬಂದರೆ, ಬಳಿಕ ವೈದ್ಯನಾ ಕರೆಸಿ, ಮಹಾವೈದ್ಯವಾ ಮಾಡಿಸಿ, ವೈದ್ಯ ಭಾಗವ ತೆಗೆದು, ವೈದ್ಯ ಸೇವಿಸಿ, ಮಿಕ್ಕ ಎಂಜಲ ತಿಂದು ಬದುಕೇನೆಂಬೋ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಎಲಾ, ಓದಿದವರಿಗೆ ಮೋಕ್ಷವಿಲ್ಲಾ! ಅದು ಎಂತೆಂದಡೆ, ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ ಮತ್ತೊಂದು ನೋಡುವೆ. ಮತ್ತೊಂದು ಮತ್ತೊಂದು [ಎಂದು] ನೋಡುವರೆ ದಿವಸ ಸಮೀಪಿಸಿತ್ತು. ಸಮೀಪಿಸಿದ ಬಳಿಕ ಯಮದೂತರು ಬಂದು ವಿಪ್ಲವ[ವ] ಮಾಡುವರು. ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ ! ಅದು ಎಂತೆಂದಡೆ, ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ ಎಲ್ಲರ ಮನ್ನಣೆಯುಂಟು. ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ. ಇದರಂತೆ, ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಬಿಳಿಯ ವಸ್ತ್ರವು ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ, ಅದಕ್ಕೆ ಅಧಿಕವುಂಟೇ ? ಇದರಂತೆ ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ. ಅದೇನು ಕಾರಣವೆಂದಡೆ, ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ ! ಕಂಬಳಿಗೆ ಮನ್ನಣೆಯುಂಟೆ ? ಹಾಸಿದರೆ ಮಾಸುವುದೆ ? ಹೊದ್ದರೆ ಚಳಿಯ ತೋರುವುದೆ ? ರಜಕನ ಮನೆಯ ಕಂಡುಬಲ್ಲುದೆ ? ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ (?) ದೇವರಿಗೆ ಜೇಷ್ಮು(?) ಎಲ್ಲಾ ಬರವಾಗಿ ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ ? ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ. ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ, ಬರಿದೆ ಶಾಸ್ತ್ರವನೋದಿ, ಕಂಡಕಂಡವರಲ್ಲಿ ಬಗುಳಿ, ಕಾಲಕ್ಷೇಪವ ಕಳೆವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಎಲಾ, ದೇವರು ಹಿಡಿಯಿತೆಂಬೋ ನಾಯಿಮಗನೇ ನೀ ಕೇಳು : ಎಲಾ, ಹಿಂದಕ್ಕೆ ಅನಂತ ಋಷಿಗಳು ದೇವರ ಕುರಿತು ತಪಸ್ಸುಮಾಡಿ ದೇವರ ಕಾಣದೆ ಪೋದರು. ತ್ರಿಕಾಲದಲ್ಲಿ ಮಹಾಪುರುಷರು ಶಿವಪೂಜೆ ಅಂಗೀಕರಿಸಿ, ಕೋಟ್ಯಾಂತರ ದ್ರವ್ಯವನ್ನು ಜಂಗಮಕ್ಕೆ ನೀಡಿ, ಮಾಡಿ, ಸ್ವಪ್ನದಲ್ಲಿ ದೇವರ ಪಾದವ ಕಾಣದೆ ಹೋದರು. ಈಗಿನವರು ಮಹಾಮಲಿನವಾದ ಕಾಯಕೂಷ್ಣವೂಷ್ಣವು (?), ಬಿಷ್ಣದ (?) ದೇಹ, ಕನಿಷ್ಟದ ನಡತೆ, ಕಾರ್ಕೋಟಕ ಬುದ್ಧಿ ಕರ್ಮೇಂದ್ರಿಯಂಗಳಲ್ಲಿ ಹೊರಳಾಡುವ ಹೊಲೆಯ[ರಿ]ಂಗೆ ದೇವರೆಲ್ಲೈತೆಲಾ ? ಆದರೂ ಚಿಂತೆಯಿಲ್ಲ. ಎಲಾ, ಹನುಮಂತ ದೇವರು ಹಿಡೀತು ಎಂಬವನೇ ನೀ ಕೇಳು : ಹಿಂದಕ್ಕೆ ಹನುಮಂತದೇವರು ಸಂಜೀವನಕ್ಕೆ ಪೋಗಿ ಅರ್ಧಬೆಟ್ಟವನ್ನು ಕಿತ್ತುಕೊಂಡು ಬಂದಿರ್ದ. ಅಂಥ ಹನುಮಂತದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ ಈಗ ಹನ್ನೆರಡು ಮಣವು ಕಲ್ಲನಾದರು ಎತ್ತಿ ನೆತ್ತಿಮೇಲೆ ಇಟ್ಟುಕೊಂಡರೆ ದೇವರೆನಬಹುದು ! ಎಲಾ, ವೀರಭದ್ರದೇವರು ಹಿಡೀತು ಎಂಬುವನೇ ನೀ ಕೇಳು : ಹಿಂದಕ್ಕೆ ವೀರಭದ್ರದೇವರು ಮುನ್ನೂರು ಮೂರು ಕೋಟಿ ರಾಕ್ಷಸರನ್ನು ಸಂಹರಿಸಿದ. ಅಂತಪ್ಪ ವೀರಭದ್ರದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ ಕತ್ತಿ ಕಿತ್ತುಕೊಂಡು ಒಬ್ಬ ಇಬ್ಬರನಾದಡೆ ಸಂಹರಿಸಿದಡೆ ದೇವರೆನಬಹುದು! ಇದಂ ಬಿಟ್ಟು, ನೀನು ದೇವರುಹಿಡೀತು ಎಂದು ಕೂಗುವಾಗ, ಗಟ್ಟಿಯುಳ್ಳವ ಬಂದು ತೆಕ್ಕೆಯೊಳಗೆ ಪಿಡಿದರೆ, ತೆಕ್ಕೆಯೊಳಗೆ ಸೇರಿಕೊಂ[ಬೆಯ]ಲ್ಲದೆ ತೆಕ್ಕೆ ಬಿಡಿಸಿಕೊಂ[ಬ]ಸಾಮಥ್ರ್ಯ ನಿನಗಿಲ್ಲಾ ! ನಿಮಗೆ ಹಿಡಿವುದು ಪಿಶಾಚಿ, ಪಿಶಾಚಿ ವಡವದೇ (?) ಪಾದರಕ್ಷೆ ಇಂಥಾ ದೇವರ ಮಹಾತ್ಮೆಯಂ ತಿಳಿದು, [ತ]ಮ್ಮ ಸುಜ್ಞಾನವಂ, ಮರೆದು, 'ಇವರೇ ದೇವರೆ'ಂದು ಅಡ್ಡಬೀಳುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಎಲಾ, ಸೂಳೆಮಗನೇನ ಬಲ್ಲನಯ್ಯಾ ಕುದುರೆಯಾ ಕುರುಹನು ? ಶೀಲವಂತನೇನ ಬಲ್ಲನಯ್ಯಾ ಗುರುಲಿಂಗ ಜಂಗಮದ ಕುರುಹನು ? ಗುರುಲಿಂಗ ಜಂಗಮವು ಮನೆಗೆ ಬಂದು ಬೀಯೆಂಬೋ ಪಾಪವು ಕ್ಷಯವಾಗಲೆಂದು 'ಭಿಕ್ಷಾ'ಎಂದು ನಿಂದಡೆ 'ಅಯ್ಯಾ ನಮ್ಮ ಹಿರಿಯರು ಬಂದಿಲ್ಲಾ' 'ನಮ್ಮ ಕಟ್ಟುಬಿನ್ನದ ಜಂಗಮವು ಬಂದಿಲ್ಲಾ' 'ಇನ್ನೂ ಶೀಲವು ತೀರಿಲ್ಲಾ, ತಿರುಗಿ ಬಾ' ಎಂದು ಹಿಂದಕ್ಕೆ ಕಳುಹಿದಡೆ ಜಂಗಮದ ನೆಲೆ ಯಾವುದೆಲಾ ? ಶೀಲವಂತನಿಗೆ ಶೀಲ ಯಾವುದೆಂದಡೆ, ಅದಂ ಪೇಳ್ವೆ ಕೇಳು : ಪರಕ್ರೂರತ್ವವ ಮರೆದು, ಪರಭೋಗದಭಿಲಾಷೆಯ ಬಿಟ್ಟು, ಪರಮ ವಿರಕ್ತಿಯಂ ಅಂಗೀಕರಿಸಿ, ಪಾಪಮಂ ಮುಟ್ಟಿನೋಡದೆ ಕಾಣದೆ ಕೇಳದೆ ನಿರ್ಲಿಪ್ತನಾಗಿ ನಿಜವಸ್ತುವಾದಾ ಶಿವಲಿಂಗ ಜಂಗಮವು ಮನೆಗೆ ಬಂದಡೆ ಅನ್ನ ಅಗ್ಗಣಿಯ ಕೊಟ್ಟು ತೃಪ್ತಿಯ ಬಡಿಸಿ ನಿತ್ಯತ್ವನಾಗಿ ಮೋಕ್ಷವ ಕಂಡಡೆ, ಶೀಲವಂತನೆಂದು ನಮೋ ಎಂಬುವೆನಯ್ಯಾ. ಬರಿದೆ, 'ನಾ ಶೀಲವಂತ' 'ನೀ ಶೀಲವಂತ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಎಲಾ ಬ್ರಾಹ್ಮಣಾ ನೀ ಕೇಳು : ಬರಿದೆ 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವಿರಲ್ಲದೆ, ಬ್ರಹ್ಮದ ನೆಲೆಯ ಬಲ್ಲಿರೇನಯ್ಯಾ? ಅದು ಎಂತೆಂದಡೆ : ವೇದಮಯವಾಗಿರ್ಪುದೇ ಬ್ರಹ್ಮ; ಬ್ರಹ್ಮಮಯವಾಗಿರ್ಪುದೇ ವೇದ. ಇಂತೀ ಚತುರ್ವೇದ ಪ್ರಕರಣಮಂ ಓದಿ ಹಾದಿಯಂ ತಪ್ಪಿ ಬೀದಿಯ ಸೂಳೆ[ಯ] ಹಿಂದೆ ತಿರುಗಿದ ಬಳಿಕ ನಿನಗೆ ಬ್ರಹ್ಮತ್ವವು ಎಲೈತೆಲಾ? ಬ್ರಹ್ಮತ್ವವು ದಾವುದೆಂದಡೆ ಪೇಳುವೆನು ಕೇಳೆಲಾ: ವೇದದೊಳಗಣ ತತ್ತ್ವಸಾರವನು ತೆಗೆದು, ಗುರುಪಥವು ಅನುಸರಣೆಯಾಗಿ, ನಿಜಮಾರ್ಗವ ಕಂಡು ನಿತ್ಯತ್ವ ನೀನಾಗಿ, ನಿರುಪಮ ನಿರ್ಮಾಯ ನಿರ್ವೇದ ವಸ್ತುವ ತಿಳಿದು, ಸಾಧುಸಜ್ಜನರೊಡನಾಡಿ ಸಾಕ್ಷಾತ್ಕಾರವಾಗಿ, ಸಾಯುಜ್ಯ ಸಾಮಿಪ್ಯ ಪಥಮಂ ಕಂಡುಳಿದು, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಬ್ರಾಹ್ಮಣನೆಂದು ನಮೋ ಎಂಬುವೆನಯ್ಯಾ. ಬರಿದೆ ಬಡಿವಾರಕ್ಕೆ ಮಿಂದುಟ್ಟು 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ, ಕೂಡಲಾದಿ ಚೆನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ