ಅಥವಾ

ಒಟ್ಟು 22 ಕಡೆಗಳಲ್ಲಿ , 9 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಪ್ಪತ್ತೈದು ಕಂಬದ ಶಿವಾಲಯದೊಳಗೆ ಒಬ್ಬ ಅಂಗನೆ, ಹದಿನೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ, ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಅಂಗನೆಯ ಕೈಹಿಡಿದು ಹದಿನೆಂಟು ಕೇರಿಗಳ ಕೆಡಿಸಿ ಇಪ್ಪತ್ತೈದು ಕಂಬದ ಶಿವಾಲಯವ ಮೀರಿ ನಿಶ್ಚಿಂತ ನಿರಾಳಲಿಂಗದಲ್ಲಿ ಬೆರೆದಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಪ್ರಶಿಖಾಮಂಡಲದಲ್ಲಿ ಅಮೃತತೃಪ್ತಿಯೆಂಬ ಅಂಗನೆಯ ಉದರದಲ್ಲಿ ಚಿತ್‍ಶಿಖಿಯೆಂಬ ಕಿಚ್ಚು ಹುಟ್ಟಿ ಮೃತ್ಯುಗಳ ಮೊತ್ತವ ಸಂಹರಿಸಿ ತತ್ ತ್ವಂ ಅಸಿಯೆಂಬ ಪದವ ನುಂಗಿ ಪರಾಪರವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ! ಆ ಅಂಗನೆಯ ಮನೆಯೊಳಗಿರ್ದು, ತಾವಾರೆಂಬುದನರಿಯದೆ; ಬಾಯ್ಗೆ ಬಂದಂತೆ ನುಡಿವರು, ಗುಹೇಶ್ವರಾ ನಿಮ್ಮನರಿಯದ ಜಡರುಗಳು.
--------------
ಅಲ್ಲಮಪ್ರಭುದೇವರು
ಅಂಗನೆಯ ಸಂಗಮೋಹಿಗೆ ಗುರುನಿಷೆ*ಯಿಲ್ಲ, ಲಿಂಗನಿµ*ಯಿಲ್ಲ, ಜಂಗಮನಿಷೆ*ಯಿಲ್ಲ, ಪಾದೋದಕಪ್ರಸಾದನಿಷೆ*ಯಿಲ್ಲ, ಈ ಪಂಚವಿಧ ಪ್ರಸನ್ನಸುಖವರಿಯದ ಮಲಸುಖಿಯು ತಾನೊಂದು ಕಾರ್ಯವರಿದುಬಂದು ಕಾರಣಿಕಪುರುಷನೆಂದರೆ ಈ ಹುಸಿ ಬಾಯಿಗೆ ಮುಂದೆ ಕಸಮಲ ಹುಡಿಯ ತುಂಬುವುದೇ ಸಾಕ್ಷಿ. ಇದು ಕಾರಣ, ಈ ಹುಸಿನಾಲಿಗೆಯನು ಇದರ ಚೇತನವನು ಅದರಾಸ್ವಾದವನು ಸುಟ್ಟು ಬಟ್ಟಿಟ್ಟಲ್ಲದೆ ಭಕ್ತಾದಿಕುಳವೆಂದರೆ ಅಘೋರನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿಶ್ವಾಸದಿಂದ ಅಂಗನೆಯ ಕುಚ, ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಬಳ್ಳ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಆಡಿನ ಹಿಕ್ಕೆ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಲಿಂಗವನಪ್ಪಿದ ಹೆಣ್ಣು ಗಂಡಾದುದಿಲ್ಲವೆ? ವಿಶ್ವಾಸದಿಂದ ಓಗರವು ಪ್ರಸಾದವಾಗಿ ಎಂಜಲೆಂದ ವಿಪ್ರರ ಮಂಡೆಯ ಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ? ಇದು ಕಾರಣ, ವಿಶ್ವಾಸದಿಂದ ಗುರು; ವಿಶ್ವಾಸದಿಂದ ಲಿಂಗ; ವಿಶ್ವಾಸದಿಂದ ಜಂಗಮ, ವಿಶ್ವಾಸದಿಂದ ಪ್ರಸಾದ. ವಿಶ್ವಾಸಹೀನಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ? ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ? ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ? ಭಾವಭ್ರಮೆಯಳಿದು, ಗುಹೇಶ್ವರಾ ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ ಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಆದಿ ಅಂಗನೆಯ ಉದರದಲೊಂದು ಅದ್ಭುತದ ಕಿಚ್ಚು ಹುಟ್ಟಿ ಮೂರು ಹಂಸೆಯ ನುಂಗಿ ಮುಪ್ಪುರವ ಸುಟ್ಟು ಆರೂಢಪದದಲ್ಲಿ ನಿಂದ ಅದ್ವಯ ಲಿಂಗೈಕ್ಯವನೇನೆಂದುಪಮಿಸುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಬರದ ಮನೆಯೊಳಗೆ ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ. ಆಕೆಯ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗ ಅಂಗನೆಯ ರೂಪಲ್ಲದೆ, ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು. ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ ! ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ
--------------
ಅಲ್ಲಮಪ್ರಭುದೇವರು
ಬಿಂದಿನ ಕೊಡನ ಹೊತ್ತಾಡುವ ಅಂಗನೆಯ ಒಂದಾಗಿ ಹುಟ್ಟಿದರೈವರು ಸ್ತ್ರೀಯರು. ಚಂದ ಚಂದದ ಮನೆಯ ರಚಿಸಿ ಅಲ್ಲಿ ಸರ್ವರ ಒಂದುಗೂಡುವುದ ಕಂಡೆನಯ್ಯಾ. ಬಿಂದಿನ ಕೊಡ ತುಳುಕಿ ಚಂದ್ರಾಮೃತವೊಗಲು ಚಂದಚಂದದ ಮನೆಯಳಿದು ಒಂದಾಗಿ ಹುಟ್ಟಿದವರೈವರು ಒಬ್ಬನ ನೆರೆದು ನಿಬ್ಬೆರಗಾದುದ ಕಂಡು ನಾನು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದೊಳಗಣ ಸವಿ, ಸಂಗದೊಳಗಣ ರುಚಿ, ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು ! ಚಂದ್ರಕಾಂತದ ಗಿರಿಗೆ ಬಿಂದುತೃಪ್ತಿಯ ಸಂಚ ! ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು. ಚಂದ್ರಮನ ಷೋಡಶಕಳೆಯ ಇಂದ್ರನ ವಾಹನ ನುಂಗಿ, ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು
--------------
ಅಲ್ಲಮಪ್ರಭುದೇವರು
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಮಹಾಘನಲಿಂಗವು ಭಕ್ತಂಗೆ ಸಾಕಾರವಾಗಿ ತನುತ್ರಯಕ್ಕೆ ಇಷ್ಟ-ಪ್ರಾಣ-ಭಾವಲಿಂಗ ಸ್ವರೂಪವಾಗಿರ್ದ ಕಾರಣ, ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿ ಲಿಂಗದೊಳಗಿಪ್ಪಾತನೆ ಭಕ್ತ. ಹೀಗಲ್ಲದೆ ನಿತ್ಯವಾದ ಲಿಂಗಕ್ಕೆ ಕೇಡ ಬಯಸುವ ತನ್ನ ಸಂಕಲ್ಪ ವಿಕಲ್ಪ ಸಂದೇಹದಿಂದ ನುಡಿದಡೆ ತನ್ನ ಭಾವಕ್ಕಲ್ಲದೆ ಆ ಮಹಾಘನಲಿಂಗವ ನಂಬಿದವರಿಗೆ ಇಂಬಾಗಿಪ್ಪನು ವಿಶ್ವಾಸದಿಂದ. ವಿಶ್ವಾಸದಿಂದ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆ ಲಿಂಗವಾದುದಿಲ್ಲವೆ ? ಸದ್ಭಾವದಿಂದ ಬಳ್ಳೇಶಮಲ್ಲಯ್ಯಂಗೆ ಬಳ್ಳ ಲಿಂಗವಾದುದಿಲ್ಲವೆ? ಭಾವದಿಂದ ನಂಬೆಣ್ಣಂಗೆ ಅಂಗನೆಯ ಕುಚ ಲಿಂಗವಾದುದಿಲ್ಲವೆ ? ವಿಶ್ವಾಸದಿಂದ ಕೆಂಬಾವಿ ಭೋಗಣ್ಣಂಗೆ ಲಿಂಗ ಒಡನೆ ಹೋದುದಿಲ್ಲವೆ? ಮತ್ತೆ ಇಷ್ಟಲಿಂಗದೊಳಗೆ ನೀಲಲೋಚನೆಯಮ್ಮನವರ ಶರೀರವೆ ಏಕಾಕಾರವಾಗಲಿಲ್ಲವೆ ? ಸಾಕ್ಷಿ: ''ಕರ್ಪೂರಮನಲಗ್ರಾಹ್ಯಂ ರೂಪಂ ನಾಸ್ತಿ ನಿರಂತರಂ | ತಥಾ ಲಿಂಗಾಂಗಸಂಯೋಗೇ ಅಂಗೋ ನಿರ್ವಯಲಂ ಗತಃ ||' ಎಂದುದಾಗಿ, ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು. ಇಂತಪ್ಪ ಮಹಾಲಿಂಗದ ನಿಲವ ಅರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ದುರ್ಭಾವಕರು ಎತ್ತ ಬಲ್ಲರು ನೋಡಾ !
--------------
ಗಣದಾಸಿ ವೀರಣ್ಣ
ಅಂಗನೆಯ ಸಂಗವ ಮಾಡಿಹೆನು ನಾನು, ಆನುವಂಗನೆಯಲ್ಲ. ಆ ಅಂಗನೆಯ ಅಂಗಸಂಗವ ಕಂಡು ನಿಂದವಳಯ್ಯ. ನಿಲವನರಿದು, ನೆಲೆಯ ತಿಳಿದು, ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಆರ ಮುತ್ತಿಗಳೆದು ತೋರಿದ್ದ ಸೀಮೆಯನು. ಆರನೊಯೈದಲ್ಕೆ ಏಳೆಂಟನತಿಗಳೆದು ತೋರಿರ್ದನೆರಡರಲಿ ಮುಕ್ತ್ಯಂಗನೆ. ಸಂಗಸುಖವನೆ ಅಳಿದು ಹಂಗುಹರಿದಿಹ ಬ್ರಹ್ಮ ಅಂಗನೆಯ ಅಕ್ಷರತ್ರಯದ ಕಂಗಳಲ್ಲಿ ಏವುಂಟು ಕಾನನದಲೋಲಾಡಿ ಲಿಂಗ ನಿಮ್ಮ ಬೆರಸಿದ ಕಪಿಲಸಿದ್ಧಮಲ್ಲೇಶ್ವರಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->