ಅಥವಾ

ಒಟ್ಟು 13 ಕಡೆಗಳಲ್ಲಿ , 7 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆಂಬೆನೆ, ಕಂಡಕಂಡವರಿಗೆ ಲಿಂಗವ ಕೊಟ್ಟು, ದ್ರವ್ಯಕ್ಕೆ ಹಂಗಿಗನಾದ. ಲಿಂಗವೆಂಬೆನೆ, ಸಂಸಾರಕ್ಕೆ ಅಂಗವ ಕೊಟ್ಟ. ಜಂಗಮವೆಂಬೆನೆ, ಕಂಡಕಂಡವರ ಅಂಗಳವ ಹೊಕ್ಕು, ಬಂಧನಕ್ಕೊಳಗಾದ. ಎನಗಿದರಂದವಾವುದೊ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ ಷಟ್‍ಕೃಷಿವ್ಯಾಪಾರವ ಮಾಡುವಾತ ಜಂಗಮವಲ್ಲ. ಆ ಜಂಗಮದ ಪಾದೋದಕ ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ, ಸಂಗದಲ್ಲಿ ನುಡಿದಂತೆ, ಕುಂಬ್ಥಿನಿಪಾತಕ. ಅವರನು ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ ಪಂಚಾಚಾರಕ್ಕೆ ಹೊರಗು. ಮಾಟಕೂಟದವರೆಲ್ಲ ಜಗದಾಟದ ಡೊಂಬರೆಂಬೆ. ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ ವಂಚನೆಯ ಮಾಡಿ ಒಳಗಿಟ್ಟುಕೊಂಡು, ನೆಲನ ತೋಡಿ ಬಚ್ಚಿಟ್ಟುಕೊಂಡು. ಹಲವು ತೆರದ ಆಭರಣಂಗಳ ಮಾಡಿಸಿ, ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು, ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ; ಆ ಭಕ್ತನು ಪಂಚಾಬ್ಥಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ವಿಭೂತಿಯ ಧರಿಸಿದಡೆ ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಗಂಧವ ಧರಿಸಿದರೆ ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಅಕ್ಷತೆಯನೇರಿಸಿದರೆ ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ಪುಷ್ಪವ ಧರಿಸಿದರೆ ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ ! ಆ ಭಕ್ತನು ಧೂಪವ ಬೀಸಿದರೆ ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ದೀಪಾರತಿಯನೆತ್ತಿದರೆ ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು ಬಾ[ದ್ಥಿ]ಸಿದಂತಾಯಿತ್ತಯ್ಯಾ ! ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು ಬಾದ್ಥಿಸಿದಂತಾಯಿತ್ತಯ್ಯಾ ! ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ? ಆತನ ಅಂಗಳವ ಮೆಟ್ಟಬಹುದೆ ? ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ, ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ, ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ, ಶಕ್ತಿಯಾದಲ್ಲಿ ತನ್ನ ನೇಮದ ವ್ರತಿಗಳಿಗೆ ಕೊಟ್ಟಿಹೆನೆಂದು ಸುತನಾದಲ್ಲಿ ತನ್ನ ನೇಮದ ವ್ರತಿಗಳಲ್ಲಿ ತಂದೆಹೆನೆಂದು, ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂ ಕಟ್ಟಿ ಇಪ್ಪುದು ಖಂಡಿತನ ವ್ರತ, ಶೀಲ, ನೇಮ. ಹಾಗಲ್ಲದೆ ದಿಂಡೆಯತನದಿಂದ ಹೋರಿ, ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು ಬುದ್ಧಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ ಅದೆಂತೆಂದಡೆ ವ್ರತದ ಅಂಗಳದಲ್ಲಿ ಬೆಳೆದ ಗರ್ಭವ ಮತ್ತಂದಿಗಾಗಲಿಯೆಂಬ ಭಂಡರ ನೋಡಾ ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು. ಅದೆಂತೆಂದಡೆ ತನ್ನಂಗದಲ್ಲಿ ಆದ ಲಿಂಗದೇಹಿಯ ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು, ಅವನೊಂದಾಗಿ ನುಡಿದಡೆ ಕುಂಭೀನರಕ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಅವನ ಹಂಗಿರಬೇಕಯ್ಯಾ.
--------------
ಅಕ್ಕಮ್ಮ
ಸರ್ವಶೀಲದ ವ್ರತದಾಯತವೆಂತುಟೆಂದಡೆ ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು. ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು. ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು. ಅದೆಂತೆಂದಡೆ ಗುರುವಿಗೂ ಗುರು ಉಂಟಾಗಿ, ಲಿಂಗಕ್ಕೂ ಉಭಯಸಂಬಂಧ ಉಂಟಾಗಿ. ಆ ಜಂಗಮಕೂ ಗುರುಲಿಂಗ ಉಭಯವುಂಟಾಗಿ ಜಂಗಮವಾದ ಕಾರಣ. ಇಂತೀ ಗುರುಲಿಂಗಜಂಗಮಕ್ಕೂ ಪಂಚಾಚಾರ ಶುದ್ಧವಾಗಿರಬೇಕು. ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರ ಉಂಟೆ ? ಇಂತೀ ಉಭಯದ ವ್ರತವೊಡಗೂಡಿದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವೆ ವಸ್ತು.
--------------
ಅಕ್ಕಮ್ಮ
ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ ! ಅದೆಂತೆಂದಡೆ : ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿಗೆ ಬ್ರಹ್ಮನಧಿದೇವತೆ, ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ ! ಸ್ವಾದಿಷಾ*ನ ಚಕ್ರ ಅಪ್ಪುವಿನ ಸಂಬಂಧ, ಅಲ್ಲಿಗೆ ವಿಷ್ಣು ಅಧಿದೇವತೆ, ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ ! ಮಣಿಪೂರಕಚಕ್ರ ಅಗ್ನಿಯ ಸಂಬಂಧ, ಅಲ್ಲಿಗೆ ರುದ್ರನಧಿದೇವತೆ, ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ ! ಅನಾಹತಚಕ್ರ ವಾಯು ಸಂಬಂಧ, ಅಲ್ಲಿಗೆ ಈಶ್ವರನಧಿದೇವತೆ, ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ ! ವಿಶುದ್ಧಿಚಕ್ರ ಆಕಾಶ ಸಂಬಂಧ, ಅಲ್ಲಿಗೆ ಸದಾಶಿವನಧಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ ! ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನಧಿದೇವತೆ, ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ ! ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ ! ಆ ಲಿಂಗ ನಿಮಗೆಂತಪ್ಪವು ? ಇದು ಕಾರಣ, ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಸರ್ವಲೋಕೋಪಕಾರವಾಗಿ ಶಿವನೇ ಜಂಗಮವಾಗಿ ಬಂದನೆಂದರಿಯದವನ ಮುಖವ ನೋಡಲಾಗದು. ಸರ್ವಲೋಕ ಪಾವನ ಮಾಡಲೋಸುಗ ಶಿವನೇ ಜಂಗಮವಾಗಿ ಬಂದನೆಂದು ನಂಬದವನ ಅಂಗಳವ ಮೆಟ್ಟಲಾಗದು. ಅದೆಂತೆಂದೊಡೆ : ``ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ | ಚರತ್ಯತಿಥಿರೂಪೇಣ ನಮಸ್ತೇ ಜಂಗಮಾತ್ಮನೇ ||'' ಎಂದುದಾಗಿ, ಇಂತಪ್ಪ ಜಂಗಮದ ಘನವರಿಯದ ಭಂಗಗೇಡಿಗಳ ಭಕ್ತರೆಂದಡೆ ಭವಹಿಂಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರೆಭಕ್ತರಾದವರ ನೆರೆಮನೆಯಲ್ಲಿರಲಾಗದು ಲಿಂಗನಿಷೆ*ಯಿಲ್ಲದವರ ಅಂಗಳವ ಮೆಟ್ಟಲಾಗದು ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು ಪ್ರಸಾದ ಪ್ರಸನ್ನಿಕೆಯಿಲ್ಲದವರ ಸಹಪಂಕ್ತಿಯಲ್ಲಿ ಕುಳ್ಳಿರಲಾಗದು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ನೀವು ಸಾಕ್ಷಿಯಾಗಿ ಚತುರ್ವಿಧ ಸನ್ನಹಿತರಲ್ಲದವರ ಮೆಚ್ಚರು ನಿಮ್ಮ ಶರಣರು.
--------------
ಚನ್ನಬಸವಣ್ಣ
ಶಿವಭಕ್ತ ಆವ ಊರೊಳಗಿದ್ದರೇನು ? ಆವ ಕೇರಿಯಲಿದ್ದರೇನು ? ಹೊಲಗೇರಿಯೊಳಗಿದ್ದರೇನು ? ಶಿವಭಕ್ತನಿದ್ದುದೇ ಕೈಲಾಸ ! ಆತನ ಮನೆಯೇ ಶಿವನ ಅರಮನೆ ! ಆತನ ಮನೆಯ ಸುತ್ತಮುತ್ತಲಿದ್ದ ಲೋಕವೆಲ್ಲ ಶಿವಲೋಕ ! ಸಾಕ್ಷಿ : 'ಚಾಂಡಾಲವಾಟಿಕಾಯಾಂ ಚ ಶಿವಭಕ್ತಃ ಸ್ಥಿತೋ ಯದಿ | ಅತ್ಯ್ರಾಪಿ ಶಿವಲೋಕಃ ಸ್ಯಾತ್ ತದ್ಗøಹಂ ಶಿವಮಂದಿರಂ ||' ಎಂದುದಾಗಿ, ಇಂತಪ್ಪ ಶಿವಭಕ್ತನ ಅಂಗಳವ ಕಂಡಡೆ ಕೋಟಿ ಬ್ರಹ್ಮಹತ್ಯ ಕೋಟಿ ಶಿಶುಹತ್ಯ ಇವೆಲ್ಲ ಅಳಿದುಹೋಗುವವು. ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದವರಿಗೆ ಅಷ್ಟೈಶ್ವರ್ಯ ಅಷ್ಟಮಹಾಸಿದ್ಧಿ ಫಲವು ತಪ್ಪದು. ಅವರ ಒಕ್ಕುಮಿಕ್ಕ ಪ್ರಸಾದವ ಕೊಂಡಡೆ ಸದ್ಯೋನ್ಮುಕ್ತರಪ್ಪುದು ತಪ್ಪದು. ಇಂತಪ್ಪ ಶಿವಭಕ್ತರಿಗೆ ಏನೆಂದು ಉಪಮಿಸುವೆನಯ್ಯ ಆತನು ಮಹಾದೇವನಲ್ಲದೆ ಬೇರುಂಟೆ ? ಆತ ಅಗಮ್ಯ ಅಗೋಚರ ಅಪ್ರಮಾಣ ಆನಂದಮಹಿಮನು. ಅಂತಪ್ಪ ಸದ್ಭಕ್ತನ ಶ್ರೀಚರಣವ ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಮಹಾಭಕ್ತರು ಮಾಡುವ ಅಭ್ಯಾಸ, ಕ್ರೀ ಲೇಸಿನ ಭಕ್ತಿಯ ಕೇಳಿರಣ್ಣಾ. ಜಂಗಮದ ಕೈಯಲ್ಲಿ ಅಸಿ ಕೃಷಿ ವಾಣಿಜ್ಯ ಮುಂತಾದ ಊಳಿಗವ ಮಾಡಿಸಿಕೊಂಡು, ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ, ಸಂಗದಲ್ಲಿ ನುಡಿದಡೆ ಕುಂಭೀಪಾತಕ. ಅವರ ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ, ಪಂಚಾಚಾರ ಶುದ್ಧಕ್ಕೆ ದೂರ. ಇದು ಕಾರಣ, ಮಾಟಕೂಟದವರೆಲ್ಲಾ ಜಗದಾಟದ ಡೊಂಬರೆಂದೆ. ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟ್ಯನುಕೋಟಿ, ಒಬ್ಬ ಶಿವಶರಣನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಯ್ಯಾ. ಅದೇನು ಕಾರಣವೆಂದಡೆ: ಆ ಶಿವಶರಣನ ಅಂತರಂಗದಲ್ಲಿ ಶಿವನಿಪ್ಪನು. ಶಿವನಿದ್ದಲ್ಲಿ ಕೈಲಾಸವಿಪ್ಪುದು ಕೈಲಾಸವಿದ್ದಲ್ಲಿ ಸಮಸ್ತ ರುದ್ರಗಣಂಗಳಿಪ್ಪರು. ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಪ್ಪವು. ಇಂತಪ್ಪ ಶರಣಬಸವಣ್ಣನ ಅಂಗಳವ ಕಂಡೆನಾಗಿ ಗುಹೇಶ್ವರಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ವಿಪ್ರಂಗೆ ವೇದಮಂತ್ರವ ಬಿಟ್ಟು ವಿಜಾತಿಯಲ್ಲಿ ಬೆರಸಲಿಕ್ಕೆ ಸುಜಾತಿಗೆ ಹೊರಗಪ್ಪರು ನೋಡಾ. ಶ್ರೀ ವಿಭೂತಿ ಶ್ರೀ ರುದ್ರಾಕ್ಷಿ ಶಿವಲಿಂಗ ಮುಂತಾದ ನಾನಾ ವ್ರತ ನೇಮ ನಿತ್ಯದ ಭಾವವ ಬಿಟ್ಟು ಬಂದವನ ಗುರುವಾದಡು ಲಿಂಗವಾದಡು ಜಂಗಮವಾದಡು ನೋಡಿದಡೆ ನುಡಿಸಿದಡೆ ಆ ಘಟವಿದ್ದೆಡೆಯಲ್ಲಿ ನಾನಿದ್ದೆನಾದಡೆ ಎನ್ನ ವ್ರತಕ್ಕದೆ ಭಂಗ. ಅನುಸರಣೆಯಲ್ಲಿ ಬಂದವರ ಕಂಡು ಕೇಳಿ ಅವರ ಅಂಗಳವ ಕೂಡಿಕೊಂಡವರ ಇದ ನಾನರಿತು ಅಂಗೀಕರಿಸಿದೆನಾದಡೆ ಇಹಪರಕ್ಕೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ವ್ರತಬಾಹ್ಯವಾದಡೆ ಎತ್ತಿಹಾಕುವೆನು.
--------------
ಅಕ್ಕಮ್ಮ
-->