ಅಥವಾ

ಒಟ್ಟು 1215 ಕಡೆಗಳಲ್ಲಿ , 69 ವಚನಕಾರರು , 763 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಪರುಷದ ಪುತ್ಥಳಿಯ ಬಸುರಲ್ಲಿ ಅವಲೋಹ ಹುಟ್ಟುವುದೆ ಅಯ್ಯಾ ? ಮರಳಿ ಮರಳಿ ಪರುಷ ಮುಟ್ಟಿ ಸುವರ್ಣವಹರೆ, ಮುನ್ನ ಮುಟ್ಟಿತ್ತೆಲ್ಲಾ ಹುಸಿಯೇ ? ಇದು ಕಾರಣ ಕೂಡಲಚೆನ್ನಸಂಗಯ್ಯ ಮೆಚ್ಚ, ಭವಿಯ ಕಳೆದು ಸಂಬಂಧಿಗೆ ಸಂಗವಾದರೆ.
--------------
ಚನ್ನಬಸವಣ್ಣ
ಸ್ವಯವಿದ್ದಂತೆ ಲಯವ ಕೂಡುವರೆ ಅಯ್ಯಾ ? ಪರುಷವಿದ್ದಂತೆ ಹೇಮವನರಸುವರೆ ಅಯ್ಯಾ ? ಸ್ವಯಂಜ್ಯೋತಿಯಿದ್ದಂತೆ ದೀಪವನರಸುವರೆ ಅಯ್ಯಾ ? ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಭಿನ್ನವ ಹೇಳಯ್ಯಾ ? ಕಣ್ಣಿಲಿ ನೋಡಿ ಕಣ್ಣ ಮರೆದೆನೆಂದು ಆ ಭಿನ್ನಭಾವದಂತೆ ಆದಿರಲ್ಲಾ ? ಅದು ನಿಮ್ಮ ಗುಣವಲ್ಲ, ಎನ್ನ ಗುಣ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುಲ್ಲವೆ? ಅಯ್ಯಾ. ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು ಭಾವಶುದ್ಧವಾಗಿರ್ಪನು.
--------------
ಸಿದ್ಧರಾಮೇಶ್ವರ
ಅಂಗೈಯೊಳಗಣ ಲಿಂಗಮ್ರ್ಕೂಯ ಕಂಗಳಲ್ಲಿಂಗಗೊಟ್ಟಡೆ, ತಿಂಗಳ ಸೂಡನಾದೆ ನೋಡಾ ಅಯ್ಯಾ. ಮಂಗಳಮೂರ್ತಿ ಗಂಗಾಜೂಟಾಂಗಮಯ ಕಪಿಲಸಿದ್ಧ ಮಲ್ಲಿಕಾರ್ಜುನಂಗ ಬೇರೆಂದರಿಯಲ್ಲ ನೋಡಾ, ನಿಜದ ನಿರ್ವಯಲಲ್ಲಯ್ಯನೆ.
--------------
ಸಿದ್ಧರಾಮೇಶ್ವರ
ಮತ್ತಂ, ಆ ಶಿಷ್ಯನ ಪ್ರಳಾಪವೆಂತೆಂದಡೆ : ಅಯ್ಯಾ, ಅನಂತ ಜನ್ಮದಲ್ಲಿ ಮಾಡಿದ ಪಾಪಂಗಳೆಂಬ ಪಂಕವ ನಿಮ್ಮ ಚಿದ್ವಾಕ್ಯಪ್ರಭೆಯಲ್ಲಿ ಮುಳುಗಿಸುವುದಯ್ಯ. ಎನ್ನ ಭವಾರಣ್ಯವ ನಿಮ್ಮ ಮಹಾಜಾÕನ ಶಸ್ತ್ರದಲ್ಲಿರಿದು ಖಂಡಿಸುವುದಯ್ಯ. ಎನ್ನ ಭವರೋಗಂಗಳೆಂಬ ಕಾಷ್ಠಂಗಳ ನಿಮ್ಮ ಮಹಾಜಾÕನಾಗ್ನಿಯಲ್ಲಿ ದಹಿಸುವುದಯ್ಯ. ಅಪ್ರಮಾಣಕೂಡಲಸಂಗಮದೇವಾ ಶಿವಧೋ ಶಿವಧೋ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಆಧಾರಚಕ್ರವೆ ಶ್ರೀಶೈಲಕ್ಷೇತ್ರ : ಅಲ್ಲಿರ್ಪ ಆಚಾರಲಿಂಗವೇ ಶ್ರೀಮಲ್ಲಿಕಾರ್ಜುನದೇವರು. ಎನ್ನ ಸ್ವಾದ್ಥಿಷ್ಠಾನಚಕ್ರವೆ ಸೇತುಬಂಧಕ್ಷೇತ್ರ; ಅಲ್ಲಿರ್ಪ ಗುರುಲಿಂಗವೆ ರಾಮೇಶ್ವರನು. ಎನ್ನ ಮಣಿಪೂರಕ ಚಕ್ರವೇ ಪಂಪಾಕ್ಪೇತ್ರ; ಅಲ್ಲಿರ್ಪ ಶಿವಲಿಂಗವೆ ವಿರೂಪಾಕ್ಷೇಶ್ವರನು. ಎನ್ನ ಅನಾಹತಚಕ್ರವೇ ಹಿಮವತ್ಕೇದಾರಕ್ಷೇತ್ರ; ಅಲ್ಲಿರ್ಪ ಜಂಗಮಲಿಂಗವೆ ಹಿಮಗಿರೀಶ್ವರನು. ಎನ್ನ ವಿಶುದ್ಧಿಚಕ್ರವೆ ಅವಿಮುಕ್ತಿಕ್ಷೇತ್ರ: ಅಲ್ಲಿರ್ಪ ಪ್ರಸಾದಲಿಂಗವೆ ವಿಶ್ವೇಶ್ವರನು. ಎನ್ನ ಆಜಾÕಚಕ್ರವೆ ಸಂಗಮಕ್ಷೇತ್ರ: ಅಲ್ಲಿರ್ಪ ಮಹಾಲಿಂಗವೆ ಸಂಗಮೇಶ್ವರನು. ಇಂತಿವು ಮೊದಲಾದ ಸಕಲಕ್ಷೇತ್ರಂಗಳನೊಳಕೊಂಡ ಎನ್ನ ಬ್ರಹ್ಮಚಕ್ರವೆ ಮಹಾಕೈಲಾಸ. ಅಲ್ಲಿರ್ಪ ನಿಷ್ಕಲಲಿಂಗವೆ ಅನಾದಿ ಪರಶಿವನು ನೀನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ ನಿನ್ನ ಸಂಗದಲ್ಲಿ ಸಂಗಿಯಾದೆ ಅಯ್ಯಾ, ನಿನ್ನ ಸಂಗದಿಂದ ಕಾಕುತನವ ಬಿಟ್ಟು ಬೇಕಾದ ಹಾಂಗೆಯಾದೆ. ಅಯ್ಯಾ, ನಿನ್ನ ಒಲವು ಅನೇಕ ಪ್ರಕಾರದಲ್ಲಿ ಪಸರಿ ಪರ್ಬಿತ್ತು ಎನ್ನ ಸರ್ವಾಂಗದಲ್ಲಿ. ನಿನ್ನವರೊಲುಮೆಯ ಆನಂದವನು ಎನಗೆ ಕರುಣಿಸು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ. ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ. ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ. ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ ಸರ್ವಾಂಗಸನ್ನಿಹಿತನಾಗಿ ನಿಂದೆ. ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರದ್ಥೀರಸುಭಟರುಗಳೆಲ್ಲಾ ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?
--------------
ಭೋಗಣ್ಣ
ಗುಂಗುರಿಗೆ ಸುಂಡಿಲು ಹುಟ್ಟಿದೆಡೆ ಆನೆಯಾಗಬಲ್ಲುದೆ ? ನೊಣವಿಂಗೆ ಪಕ್ಕ ಹುಟ್ಟಿದೆಡೆ ಶರಭನಾಗಬಲ್ಲುದೆ ? ಕಾಗೆ ಕೋಗಿಲೆಯು ಒಂದೆಯಾದೆಡೆ ಕೋಗಿಲೆಯಂತೆ ಸ್ವರಗೆಯ್ಯಬಲ್ಲುದೆ ? ಶ್ವಾನನ ನಡು ಸಣ್ಣನಾದಡೆ ಸಿಂಹನಾಗಬಲ್ಲುದೆ ? ಅಂಗದ ಮೇಲೆ ವಿಭೂತಿ ರುದ್ರಾಕ್ಷಿ ಶಿವಲಿಂಗವಿದ್ದಡೇನು ನಿಮ್ಮ ನಂಬಿದ ಸತ್ಯದಾಚಾರವುಳ್ಳ ಏಕಲಿಂಗನಿಷ್ಠಾವಂತರಿಗೆ ಸರಿಯೆನ್ನಬಹುದೆ ಅಯ್ಯಾ ? ಇಂಥ ಗುರುಲಿಂಗಜಂಗಮವ ನೆರೆ ನಂಬದೆ, ಪಾದತೀರ್ಥ ಪ್ರಸಾದದಿರವನರಿಯದೆ, ಬರಿದೆ ಭಕ್ತರೆಂದು ಬೊಗಳುವ ದುರಾಚಾರಿಯ ತೋರದಿರಯ್ಯಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೆಪನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ, ನೀವೆನ್ನ ಬಲ್ಲಿರಲ್ಲದೆ ನಾ ನಿಮ್ಮ ಬಲ್ಲೆನೆ ನಿಮ್ಮ ನಿಲವ ನೋಡಿಹೆನೆಂದಡೆ ನಿಮ್ಮ ಘನವೆನ್ನ ಮನಕ್ಕೆ ಸಾಧ್ಯವಾಗದ ಕಾರಣ, ಅಂತಿಂತೆಂದುಪಮಿಸಲಮ್ಮದೆ ಇದ್ದೆ ನೋಡಯ್ಯಾ, ನಿತ್ಯತೃಪ್ತಮಹಿಮಾ, ನಿಮಗೆಂದಳವಡಿಸಿದ ಪದಾರ್ಥವ ಸುಚಿತ್ತದಿಂದವಧರಿಸಿ ಸಲಹಯ್ಯಾ ಪ್ರಭುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ ಎನಗೆ ಸಾಲೋಕ್ಯಪದವಯ್ಯಾ. ನಿಮ್ಮ ಶರಣರ ಅರ್ಚನೆ ಪೂಜೆಯೇ ಎನಗೆ ಸಾಮೀಪ್ಯಪದವಯ್ಯಾ. ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ ಎನಗೆ ಸಾರೂಪ್ಯಪದವಯ್ಯಾ. ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ ಎನಗೆ ಸಾಯುಜ್ಯಪದವಯ್ಯಾ. ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->