ಅಥವಾ

ಒಟ್ಟು 65 ಕಡೆಗಳಲ್ಲಿ , 26 ವಚನಕಾರರು , 59 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಗಂಧ ದುರ್ಗಂಧವೆಂಬುಭಯವ ನಾಸಿಕವರಿದು, ಹೆರೆಹಿಂಗುವ ಪರಿಯಿನ್ನೆಂತೊ ? ಸುಳಿವ ವಾಸನೆಗೆ ಮೊದಲೆ, ಅಲ್ಲ ಅಹುದೆಂಬುದನರಿತು, ಅರ್ಪಿತವ ಮಾಡಬಲ್ಲಡೆ ಬಲ್ಲರೆಂಬೆ. ಇಂತಿವರಲ್ಲಿ ಪ್ರಾಣಲಿಂಗಾರ್ಪಿತವುಳಿಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ, ಆ ಜಂಗಮದರಿವು ಅಪ್ಪುವಾಗಿ, ಆ ಸುಭೂಮಿಯ ಬೀಜದ ಮೇಲೆ ಸುರಿಯೆ, ಆ ಭೂಮಿ ಶೈತ್ಯವಾಗಿ, ಆ ಬೀಜದ ಒಳಗು ಒಡೆದು ಅಂಕುರ ತಲೆದೋರಿ, ಭಕ್ತಿ ಜ್ಞಾನ ವೈರಾಗ್ಯವೆಂಬ ಮರ ಶಾಖೆ ಫಲ ಬಲಿದು ತುರೀಯ ನಿಂದು ಹಣ್ಣಾಯಿತ್ತು. ಆ ಹಣ್ಣ ಮೇಲಣ ಜಡವ ಕಳೆದು ಒಳಗಳ ಬಿತ್ತ ಮುಂದಕ್ಕೆ ಹುಟ್ಟದಂತೆ ಹಾಕಿ ಉಭಯದ ಮಧ್ಯದಲ್ಲಿ ನಿಂದ ಸವಿಸಾರವ ಸದಾಶಿವಮೂರ್ತಿಲಿಂಗಕ್ಕೆ ಅರ್ಪಿತವ ಮಾಡು.
--------------
ಅರಿವಿನ ಮಾರಿತಂದೆ
ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ ಸಂದ್ಥಿಸಿಕೊಂಡು ಉಂ[ಬು]ದೆಂಬ ತ್ರಿಭಂಗಿ ಗ್ರಹಿತವ ನೋಡಾ. ಇಂದ್ರಿಯಂಗಳ ಮುಖದಲ್ಲಿ ಲಿಂಗವು ಬಂದು ಉಂಬಾಗ ಇಂದ್ರಿಯವೆ ಲಿಂಗಕ್ಕೆ ಬೀಜವೆ? ಅದು ಗರಿಗೋಲಿನ ಮೊನೆಯಂತೆ, ಲಿಂಗದಿಂದ ಸರ್ವೇಂದ್ರಿಯ ನಿಶ್ಚಯ. ಇದು ಲಿಂಗವ್ಯವಧಾನಿಯ ಅಂಗ, ಸದ್ಯೋಜಾತಲಿಂಗದ ಸಂಗ.
--------------
ಅವಸರದ ರೇಕಣ್ಣ
ಅಂಗದಾಪ್ಯಾಯನಕ್ಕೆ ಅರ್ಪಿತವ ಮಾಡುವನಲ್ಲ, ಆತ ಲಿಂಗದಾಪ್ಯಾಯನಿಯಾದ ಕಾರಣ. ಅಂಗಗುಣಂಗಳಳಿದು ಲಿಂಗದಲ್ಲಿ ನಿರ್ಲೇಪವಾದ ಶರಣ, ಅರ್ಪಿತವನರಿಯ, ಅನರ್ಪಿತವನರಿಯ, ಓಗರವನರಿಯ, ಪ್ರಸಾದವನರಿಯ, ಇದು ಕಾರಣ ಕೂಡಲಚೆನ್ನಸಂಗಯ್ಯ, ತಾನರುಹಿಸಿ ಕೊಟ್ಟು, ತನ್ನ ಕಾರುಣ್ಯ ಪ್ರಸಾದವನಿಕ್ಕಿ ಸಲಹಿದನಾಗಿ, ಆನೇನೆಂದರಿಯೆನಯ್ಯಾ.
--------------
ಚನ್ನಬಸವಣ್ಣ
ಸಾರಾಯ ಪದಾರ್ಥವನಾರಯ್ಯಬೇಕೆಂದು ಶರಣ ಮತ್ರ್ಯಕ್ಕೆ ಬಂದು, ತನ್ನ ಇಪ್ಪತ್ತೈದಿಂದ್ರಿಯಂಗಳ ಭಕ್ತರ ಮಾಡಿ, ಮೆಲ್ಲಮೆಲ್ಲನೆ ಅವರ ಪೂರ್ವಾಶ್ರಯವ ಕಳೆದು ಕಲ್ಪಿತವಿಲ್ಲದೆ ಅರ್ಪಿತವ ಮಾಡಲು, ಇಂದ್ರಿಯಂಗಳು ತಮ್ಮ ತಮ್ಮ ಮುಖದಲ್ಲಿ ಗ್ರಹಿಸಲಮ್ಮದೆ ಕೂಡಲಚೆನ್ನಸಂಗಂಗೆ ಬೇಕೆಂದು ಹಿಡಿದು ಕೊಂಡೈದವೆ !
--------------
ಚನ್ನಬಸವಣ್ಣ
ವೇದ್ಥಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು. ಸಾದ್ಥಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು. ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ. ಅರ್ಧನಾರೀಶ್ವರನ ರೂಪು ಇಂತೆಂದು ಶುದ್ಧವಾಯಿತ್ತೀ ಲೋಕದೊಳಗೆ. ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ. ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ. ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು. ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು ಅರ್ಪಿತವ ಮಾಡಿ ; ನಡೆಸಿ ತೋರಿದ ಭಕ್ತರ ತನುವಿನೊಳಗೆ ಕಡೆಯಿಲ್ಲದ ಲಿಂಗವ ಖಂಡಿತವ ಮಾಡಿ ತೋರಿದ ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಅಂಬುದ್ಥಿs ಉರಿಯಿತ್ತು ಅವನಿಯ ಮೇಲನರಿಯಲು. ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ, ಆ ಪ್ರಸಾದದಿಂದ ಸುಖಿಯಾದೆನಯ್ಯಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಲಿಂಗಾರ್ಚನೆಯಂ ಮಾಡಿ, ಅಂಗಭಾಜನ, ಲಿಂಗಭಾಜನ, ಪತ್ರಭಾಜನದಲ್ಲಿ ಸಹಭೋಜನವ ಮಾಡುವ ಸಮಯದಲ್ಲಿ ಗುರು ಲಿಂಗ ಜಂಗಮ[ಪ್ರಸಾದ]ವೆಂದೆ ಪ್ರಸಾದವ ಪಡೆವುದು. ಪ್ರಸಾದವೆಂದು ಪಡೆದ ಬಳಿಕ ಪದಾರ್ಥವೆಂದು ಭೋಗಿಸಿದಡೆ, ಪ್ರಸಾದ ದ್ರೋಹ. ಪ್ರಸಾದವೆಂದು ಅರ್ಪಿತವ ಭೋಗಿಸಿ, ಉಳಿಯದ ಹಾಂಗೆ ತೆಗೆದುಕೊಂಬುದಯ್ಯಾ. ಮೀರಿದಂದು ಅನಿಲಬ್ರಹ್ಮವಂಗಸಂಬಂಧವಾದ ಉಳುಮೆಯಲಿ ಉಳಿದ ತಾರಕಬ್ರಹ್ಮವಯ್ಯಾ. [ಅದೇನು ಕಾರಣವೆಂದಡೆ:] ಶೈವಕ್ಕೂ ವೀರಶೈವಕ್ಕೂ ಭೇದವಿಲ್ಲ ! ಆದಿಗೂ ಅನಾದಿಗೂ ನೀನೆ ! ಪದಾರ್ಥಕ್ಕೂ ಪ್ರಸಾದಕ್ಕೂ ನೀನೆ, ಭೂ ಗಗನಕ್ಕೂ ನೀನೇ ! ಕ್ರೀ ನಿಃ [ಕ್ರೀ ಗೂ ನೀನೇ]. ಪ್ರಸಾದದ ಆದಿಕುಳವ ನಾನೆತ್ತ ಬಲ್ಲೆನಯ್ಯಾ ! ದೇವ, ಕ್ರೀ ಮೀರಿದುದಾಗಿ ಸಗುಣ ನಿರ್ಗುಣವಾದ, ಸಾಕಾರ ನಿರಾಕಾರವಾದ. ಏಕ ಬ್ರ[ಹ್ಮ ಸಂ]ಗನ ಬಸವಣ್ಣ ಬಿಬ್ಬಿ ಬಾಚಯ್ಯ ಮರುಳಶಂಕರದೇವರೆಂಬ ಪರಂಜ್ಯೋತಿ ಮಹಾಲಿಂಗದಲ್ಲಿ ಏಕತೆಯಾದೆನು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನು ನಾಗವತ್ತಿಗೆಯಾದಡೆ ಅರ್ಪಿತವ ಮಾಡಬೇಕು, ತನು ಸೆಜ್ಜೆಯಾದಡೆ ಅರ್ಪಿಸಲಿಲ್ಲ ಕಂಡಯ್ಯಾ. ತನು ಸಿಂಹಾಸನವಾದಡೆ ಸುಳಿವುದೆ ಭಂಗ. ಪ್ರಾಣಲಿಂಗ ಸಂಬಂಧಿಯಾದಡೆ, ಅದನು ಎರಡು ಮಾಡಿಕೊಂಡು ನುಡಿಯಲೇಕಯ್ಯಾ ? ಒಂದೆಯೆಂದು ನುಡಿವ ಸೋಹದವನಲ್ಲ, ಬಹ ಪದಾರ್ಥದ ಲಾಭದವನಲ್ಲ, ಹೋಹ ಪದಾರ್ಥದ ಚೇಗೆಯವನಲ್ಲ, ಪ್ರಪಂಚವ ಹೊತ್ತುಕೊಂಬ ಭಾರದವ ತಾನಲ್ಲ. ಕೂಡಲಚೆನ್ನಸಂಗನ ಶರಣನುಪಮಾತೀತನು.
--------------
ಚನ್ನಬಸವಣ್ಣ
ಶುದ್ಧವಾಯಿತ್ತೆಂಬೆನೆ ಸುಯಿಧಾನಿ ನಾನಲ್ಲ, ಅನುವಾಯಿತ್ತೆಂಬೆನೆ ಅವಧಾನಿ ನಾನಲ್ಲ, ಸುಯಿಧಾನ ಅವಧಾನ ಅರ್ಪಿತವ ನಾನರಿಯೆ. ಇದ್ದ ಪರಿಯಲಿ ನೀಡಿದಡೆ, ಬಂದ ಪರಿಯಲಿ ಕೈಕೋ ಕೂಡಲಸಂಗಮದೇವಾ.
--------------
ಬಸವಣ್ಣ
ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ, ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ ಹೊರಳಿ ಹೋಗಬಾರದು! ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ, ಅರ್ಪಿತವ ಮಾಡಬಲ್ಲಡೆ; ಭಿನ್ನಭಾವವೆಲ್ಲಿಯದೊ_ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗ, ಲಿಂಗಪ್ರಾಣ `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ಎಂದುದಾಗಿ ಪಂಚಭೂತಕಾಯವಳಿದು ಪ್ರಸಾದಕಾಯವ ಮಾಡಿ ಭಕ್ತದೇಹಿಕನೆನಿಸಿದನು. ಈ ಸತ್ಕ್ರೀಯನು ಶ್ರೀಗುರು ಕರುಣಿಸಿ ಮಾಡಿದನಾಗಿ ಪ್ರಾಣಲಿಂಗ, ಕಾಯಭಕ್ತನು ಇದೂ ಸ್ವಭಾವ. ದಾಸೋಹಿಯಾಗಿ ಅರ್ಚನೆ ಪೂಜನೆ ಸರ್ವದ್ರವ್ಯ ಸಕಲಭೋಗವನೂ ಅರ್ಪಿತವ ಮಾಡುತ್ತಿಹನು, ಪ್ರಸಾದವ ಭೋಗಿಸುತ್ತಿಹನು. ಸತ್ಕ್ರೀಯಲ್ಲಿ ಲಿಂಗಕ್ಕೆ ಕಾಯಶೂನ್ಯನಾಗಿ ಭಕ್ತಕಾಯ ಮಮಕಾಯನೆಂದು ಅವಗ್ರಹಿಸಿಕೊಂಡ ಭಕ್ತಂಗೆ ಬೇರೆ ಪ್ರಾಣವಿಲ್ಲಾಗಿ ಪ್ರಾಣವೆಂದು ಅವಗ್ರಹಿಸಿಕೊಂಡ. ಇಂತಹ ಪ್ರಾಣಲಿಂಗವು, ಕಾಯಭಕ್ತನು ತನ್ನೊಳಗೆ ತಾನೇ ಐಕ್ಯವಾಯಿತ್ತು. ಭಕ್ತನೇ ಲಿಂಗ, ಲಿಂಗವೇ ಭಕ್ತನು, ದಾಸೋಹಕ್ರೀಯೆ ಸೋಹಕ್ರೀ, ಸೋಹಕ್ರೀಯೆ ದಾಸೋಹಕ್ರೀ. ಈ ಕ್ರೀಯನು ಅದ್ವೈತವೆನ್ನಿ, ಸೋಹವೆನ್ನಿ, ದಾಸೋಹವೆನ್ನಿ ಬಲ್ಲವರುಗಳು ಬಲ್ಲಂತೆ ನಿಮ್ಮ ನಿಮ್ಮ ಅರಿವಿನ ಹವಣಿಂಗೆ ನುಡಿಯಿರಿ. ಆ ಲಿಂಗಾಯತವ, ಆ ಲಿಂಗದ ಮರ್ಮವ ಅರ್ಪಿತದ ಮರ್ಮವ, ಪ್ರಸಾದದ ಮಹಿಮೆಯ ಮಹಾಪರಿಣಾಮದ ಕ್ರೀಯು ಸಾಮಾನ್ಯರಿಗೆ ಅರಿಯಬಾರದು. ಈ ಮಹಾ ಕ್ರೀ ವಾಙ್ಮನೋತೀತ. ಈ ಮಹಾಕುಳವ ಮಹಾನುಭಾವರೇ ಬಲ್ಲರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುವೇ ಪರಶಿವಲಿಂಗ, ಪರಶಿವಲಿಂಗವೇ ಜಂಗಮ, ಜಂಗಮವೇ ಪರಶಿವಲಿಂಗ. ಗುರು ಲಿಂಗ ಜಂಗಮ ತ್ರಿವಿಧವೂ ಪರಶಿವಲಿಂಗವೆಂದರಿದು ಮನೋವಾಕ್ಕಾಯವನೊಂದು ಮಾಡಿ ತನು ಮನ ಧನವನೊಂದು ಮಾಡಿ ಆ ಒಂದುಮಾಡಿದ ಮನವನೂ, ಆ ತ್ರಿವಿಧವನೊಂದುಮಾಡಿದ ಪರಶಿವಲಿಂಗದಲ್ಲಿ ಅರ್ಪಿಸಲು ಆ ಲಿಂಗಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಪರಶಿವಲಿಂಗ. ಇಂತು ಬೀಜ-ವೃಕ್ಷ, ಪುಷ್ಪ-ಫಲ ಒಂದೇ. ಪರಶಿವನು ಭಕ್ತಜನಂಗಳ ರಕ್ಷಿಸಲೋಸುಗ[ರ] ದೇವದಾನವ ಮಾನವರಿಗೆ ಕೃಪೆಮಾಡಿ ದೀಕ್ಷೆಯ ಮಾಡಲೋಸುಗರ, ಬಹುವಿಧದಲ್ಲಿ ಶ್ರೀಗುರುರೂಪಾದನು. ಆದರೆ ಶ್ರೀಗುರು ಒಂದೇ ವಸ್ತು, ಪರಶಿವನು. `ಸ್ಥಾವರಂ ಜಂಗಮಾಧಾರಂ' ಎಂದುದಾಗಿ, ಪರಶಿವನು ಶಕ್ತಿವಿನೋದಕಾರಣ ಸದ್ಭಕ್ತಜನಂಗಳಿಗೆ ಪ್ರಸನ್ನವಾಗಲೋಸುಗರ, ದೇವ ದಾನವ ಮಾನವರಲ್ಲಿ ವಿನೋದಿಸಿ ಉತ್ಪತ್ತಿಸ್ಥಿತಿಲಯವ ಮಾಡಲೋಸುಗರ, ಅನೇಕತತ್ತ್ವರೂಪಾದನು ಸರ್ವತತ್ತ್ವರೂಪು ಪರಶಿವನೊಂದೇ ವಸ್ತು, `ತತ್ತ್ವಂ ವಸ್ತುಕಂ' ಎಂದುದಾಗಿ, `ನಾನಾರೂಪಧರಂ ದೇವಂ' ಎಂದುದಾಗಿ, ಪರಶಿವನೊಂದೇ ವಸ್ತು. ಸರ್ವಲೋಕವ ರಕ್ಷಿಸಲೋಸುಗರ, ತನು ಮನ ಧನವನೂ ತನ್ನಲ್ಲಿಗೆ ತೆಗೆದುಕೊಂಡು ಪಾದೋದಕ ಪ್ರಸಾದವನಿತ್ತು ರಕ್ಷಿಸಲೋಸುಗರ, ನಾನಾರೂಪು ಬಹುವಿಧಶೀಲದಿಂ ಜಂಗಮರೂಪಾದನು. `ದಂಡಕ್ಷೀರದ್ವಯಂ ಹಸ್ತೇ' ಎಂದುದಾಗಿ, ಪರಶಿವನೊಂದೇ ವಸ್ತು. `ಯೇ ರುದ್ರಲೋಕಾದವತೀರ್ಯ ರುದ್ರಾ ಎಂದುದಾಗಿ, ಜಂಗಮ ಪರಶಿವನೂ ಒಂದೇ ವಸ್ತು. ಪರಶಿವನ ಪ್ರಸನ್ನವೇ ಪ್ರಸಾದ, ಗುರುಲಿಂಗಜಂಗಮ ತ್ರಿವಿಧಲಿಂಗದಲ್ಲಿ ತನು ಮನ ಧನವನೂ ಸರ್ವಪದಾರ್ಥ ಸರ್ವದ್ರವ್ಯವನೂ ನೇತ್ರದ ಕೈಯಲೂ ಘ್ರಾಣದ ಕೈಯಲೂ ಜಿಹ್ವೆಯ ಕೈಯಲೂ ಪರುಷಭಾವ ಮನವಾಕ್ಕಿನ ಕೈಯಲೂ ಈ ಪ್ರಕರದಿಂದೆಲ್ಲಾ ತೆರದಲ್ಲಿ ಸಕಲನಿಷ್ಕಲವನೆಲ್ಲವನೂ ಅರ್ಪಿಸಿದಲ್ಲಿ ಆ ಪರಶಿವನು ಅನೇಕ ವಿಧದಲ್ಲಿ, ಅನೇಕ ಮುಖದಲ್ಲಿ, ಅರ್ಪಿತವ ಕೈಕೊಂಡು ಪ್ರಸನ್ನವಾಗಲು, ಸದ್ಬಕ್ತಂಗೆ ಬಹುವಿಧ: ಗುರುಮುಖದಲ್ಲಿ ಶುದ್ಧಪ್ರಸಾದ, ಲಿಂಗಮುಖದಲ್ಲಿ ಸಿದ್ಧಪ್ರಸಾದ, ಜಂಗಮಮುಖದಲ್ಲಿ ಪ್ರಸಿದ್ಧಪ್ರಸಾದ. ಗುರುಮುಖದಲ್ಲಿ ನೇತ್ರ ಪ್ರಸಾದ, ಶ್ರೋತ್ರ ಪ್ರಸಾದ, ಘ್ರಾಣ ಪ್ರಸಾದ, ಜಿಹ್ವೆ ಪ್ರಸಾದ, ಪರುಶನ ಪ್ರಸಾದ, ಭಾವ ಪ್ರಸಾದ, ಮನ ಪ್ರಸಾದ ವಾಕ್ ಪ್ರಸಾದ, ಕಾಯ ಪ್ರಸಾದ ಇವುವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಭಕ್ತ ಮಹೇಶ್ವರ ಪ್ರಸಾದಿ ಮನವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಪ್ರಾಣಲಿಂಗಿ ಶರಣನೈಕ್ಯವಾಗಿ ನಡೆದರಯ್ಯಾ ಕ್ರಿಯಾನುಭಾವವಿಡಿದು. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಈ ಭೇದವನು ಭೇದಿಸಬಲ್ಲಡೆ ಇಂದೇ ಇಹವಿಲ್ಲ ಪರವಿಲ್ಲ. ಈ ಒಂದೇ ನಾನಾವಿಧಪ್ರಸಾದ ಅನೇಕದಿನದಿಂ ಪ್ರಸನ್ನನಾಗಲು ಪ್ರಸಾದ ಒಂದೇ ವಸ್ತು ಪರಶಿವನು. ಇದು ಕಾರಣ, ಶ್ರೀಗುರು ಪರಶಿವನು ಜಂಗಮವು ಪ್ರಸಾದವು ಒಂದೇ ಕಾಣಿರಣ್ಣಾ. ಚತುಷ್ಟವನು ವೇದ ಶಾಸ್ತ್ರ ಆಗಮ ಪುರಾಣದಿಂ ವಿಚಾರಿಸಲು ಒಂದೇ ವಸ್ತು. ಆ ವಿಚಾರವ ನಂಬದೇ ಕೆಡಬೇಡ. ಜಂಗಮವೆಯಿದು `ಸ ಭಗವಾನ್ ಯಸ್ಯ ಸರ್ವೇ' ಎಂದುದಾಗಿ `ಸರ್ವಕಾರಣಕಾರಣಾತ್' ಎಂದು ಪರಶಿವಲಿಂಗವಲ್ಲದೆ ಇಲ್ಲ. ಆತನ ಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸರ್ವಾರ್ಪಿತವ ಮಾಡಬೇಕೆಂಬರು, ಸರ್ವೇಂದ್ರಿಯ ನುಮತವಾದುದನರಿಯರು. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ [ತ್ವಕ್ಕು] ಸಹಿತ ಅರ್ಪಿತವ ಮಾಡಬೇಕು. ಪ್ರಾಣಪ್ರಯಾಣಕಾಲ್ಯೇಪಿ ಸರ್ವಭೋಗೇಷು ಯಸ್ಸದಾ ಅರ್ಪಣೇ ಚಾವಧಾನೀ ಚ ಸ ಲಿಂಗೀ ಪ್ರಾಣನಾಯಕಃ[ಎಂದುದಾಗಿ] ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ.
--------------
ಚನ್ನಬಸವಣ್ಣ
ಇನ್ನಷ್ಟು ... -->