ಅಥವಾ

ಒಟ್ಟು 43 ಕಡೆಗಳಲ್ಲಿ , 13 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ. ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ. ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ. ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚುವ ಕೆಡಿಸುವವರನಾರನೂ ಕಾಣೆನಯ್ಯಾ. ಆದ್ಯರ ವೇದ್ಯರ ವಚನಂಗಳಿಂದ ಅರಿದೆವೆಂಬವರು ಅರಿಯಲಾರರು ನೋಡಾ. ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು. ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು. ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು. ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು. ಅಮುಗೇಶ್ವರಲಿಂಗವ ನಾನೆ ಅರಿಯಬೇಕು.
--------------
ಅಮುಗೆ ರಾಯಮ್ಮ
ಹೊನ್ನಬಿಟ್ಟಡೇನು, ಹೆಣ್ಣಬಿಟ್ಟಡೇನು, ಮಣ್ಣಬಿಟ್ಟಡೇನು, ವಿರಕ್ತನಾಗಬಲ್ಲನೆ ? ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು, ನಿತ್ಯರಾಗಬಲ್ಲರೆ ? ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ ಜಗಭಂಡರ ಮೆಚ್ಚುವನೆ, ಅಮುಗೇಶ್ವರಲಿಂಗವು ?
--------------
ಅಮುಗೆ ರಾಯಮ್ಮ
ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ, ನಮಗೆ ನಮ್ಮ ಆದ್ಯರ ಚಿಂತೆ, ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ?
--------------
ಅಕ್ಕಮಹಾದೇವಿ
ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ. ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ ಒಂದಾದೊಂದು ದೆಸೆಗೆ ಹೋಗುತ್ತಿಪ್ಪಾಗ ಅರಣ್ಯಮಧ್ಯದಲ್ಲಿ ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ ತೃಷೆಯೆದ್ದು ಮನವ ಮತಿಗೆಡಿಸಿ ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು ಆ ಸಮಯದಲ್ಲಿ ಖರ್ಜೂರ ಮಾವು ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು ವೃಕ್ಷಂಗಳಡಿಯಲ್ಲಿ ಬಿದ್ದಿರಲು ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ. ಅದೇನು ಕಾರಣವೆಂದೊಡೆ `ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ'ವೆಂದು ಆದ್ಯರ ವಚನ ಸಾರುತೈದಾವೆ ನೋಡಾ. ಇದು ಕಾರಣ- ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ ಮುಂದನರಿಯದೆ ನುಡಿದೆನಯ್ಯ. ಸತಿಯ ಭಾಷೆ ಪತಿಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ ? ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ? ನಿಜವನರಿದ ಲಿಂಗೈಕ್ಯರೆಂಬೆನೆ ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ?
--------------
ಅಮುಗೆ ರಾಯಮ್ಮ
ಆದ್ಯರ ವಚನವೇನು ಬಟ್ಟೆಯ ಸಂಬಳವೆ ? ಮನೆ ಮನೆಯ ಹೊಕ್ಕು ಬೋಧಿಸುವಂತಾಗಿ, ಮನೆ ಮನೆಯ ಹೊಕ್ಕು ಮೆಚ್ಚಿಸುವಂತಾಗಿ, ಇದು ಭಕ್ತಿಸ್ಥಲವೆ ? ಇದು ಜಂಗಮಸ್ಥಲವೆ ? ಭಕ್ತನಾದರೆ ಭೃತ್ಯನಾಗಿರಬೇಕು. ಈ ಎರಡೂ ಇಲ್ಲದ ಎಡೆಹಂಚರ ತೋರಿಸದಿರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು. ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ? ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ, ಇತ್ತ ಬನ್ನಿ ಎಂಬರು. ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ, ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ, ಬಸವಪ್ರಿಯ ಕೂಡಲಚೆನ್ನಬಸಣ್ಣಾ .
--------------
ಹಡಪದ ಅಪ್ಪಣ್ಣ
ನಾದದೊಳಗಿಲ್ಲ, ಸುನಾದದೊಳಗಿಲ್ಲ. ಆದಿಯೊಳಗಿಲ್ಲ, ಅನಾದಿಯೊಳಗಿಲ್ಲ. ಭೇದಾಭೇದದೊಳಗಿಲ್ಲ. ಅದು ಇದು ಎಂಬುದಿಲ್ಲ. ಇದಿರೆಂಬ ಬಯಕೆಯಿಲ್ಲ. ಆದ್ಯರ ಸಂಗವೂ ಇಲ್ಲ. ಸುರಾಳ- ನಿರಾಳವೆಂಬ ಇವೆಲ್ಲವೂ ತಾನೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ತನ್ನಿಂದ ಬಿಟ್ಟು ಗುರುವಿಲ್ಲ, ತನ್ನಿಂದ ಬಿಟ್ಟು ಲಿಂಗವಿಲ್ಲ, ತನ್ನಿಂದ ಬಿಟ್ಟು ಜಂಗಮವಿಲ್ಲ, ತನ್ನಿಂದ ಬಿಟ್ಟು ಪ್ರಸಾದವಿಲ್ಲ, ತನ್ನಿಂದ ಬಿಟ್ಟು ಪಾದೋಕವಿಲ್ಲ, ತನ್ನಿಂದ ಬಿಟ್ಟು ಪರವಿಲ್ಲ, ತನ್ನಿಂದ ಬಿಟ್ಟು ಇನ್ನೇನೂ ಇಲ್ಲ. ಅನಾದಿಯೊಳಗಿಲ್ಲ, ಭೇದಾಭೇದದೊಳಗಿಲ್ಲ, ಅದು ಇದು ಎಂಬುದಿಲ್ಲ, ಇದಿರೆಂಬ ಬಯಕೆಯಿಲ್ಲ, ಆದ್ಯರ ಸಂಗವು ಇಲ್ಲ. ಸುರಾಳ ನಿರಾಳವೆಂಬವು ತಾನೆ, ತಾನೆ ಪರವಸ್ತುವೆಂಬುದಕ್ಕೆ ಮುನ್ನವೆಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಮರೆದರೆ ಮಾಯೆ, ಅರಿದರೆ ಮಾಯೆ ಇಲ್ಲ, ಅರಿವು ಮರವೆ ಎರಡ ನೂಂಕಿ ನಿಂದರೆ, ಮುಂದೆ ಕಣ್ಣು ತೆರಪಾಗಿ ತೋರುವ ಬಯಲೆ ಲಿಂಗದ ಬೆಳಗು. ಆ ಲಿಂಗದ ಬೆಳಗೆ ನೆಮ್ಮುಗೆಯಾದರೆ ಲಿಂಗೈಕ್ಯವು. ಆ ಲಿಂಗೈಕ್ಯವು ನಿಜವಾದರೆ ನಿಶ್ಚಿಂತವು. ನಿಶ್ಚಿಂತದಲ್ಲಿ ಲೀಯವಾದರೆ, ನಿರವಯವು, ಇದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ, ಇದನರಿಯದೆ ವೇದ ಪುರಾಣ ಶಾಸ್ತ್ರ ಆಗಮ ಇವನೊಂದನು ಓದಿದರೆ ಹಾಡಿದರೆ ಕೇಳಿದರೆ ಕಾಯ ವಾಯವೆಂದರು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗರುಡಿಯಲ್ಲಿ ಸಾಮುವ ಮಾಡುವರಲ್ಲದೆ, ಕಾಳಗದಲ್ಲಿ ಸಾಮುವ ಮಾಡುವರೆ ? ಆದ್ಯರ ವಚನಂಗಳ, ಅರಿವುಸಂಬಂಧಿಗಳಲ್ಲಿ ಅರಿದಬಳಿಕ ಬಿಡಬೇಕು. ಅವರು ಕಡುಗಲಿಗಳಾಗಿ ಆಚರಿಸುವ ನಿಜವಿರಕ್ತರ ಎನಗೊಮ್ಮೆ ತೋರಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮುನ್ನಿನ ಆದ್ಯರ ವಚನ :ಆ ಲಿಂಗದ ನಡೆ, ಆ ಲಿಂಗದ ನುಡಿ, ಆ ಲಿಂಗದಂತೆ, ಮುನ್ನಿನ ಜಂಗಮದ ನಡೆ, ಜಂಗಮದ ನುಡಿ, ಆ ಜಂಗಮದಂತೆ ಮುನ್ನಿನ ಪ್ರಸಾದದ ನಡೆ, ಪ್ರಸಾದದ ನುಡಿ ಆ ಪ್ರಸಾದದಂತೆ. ಇಂತಿವಕ್ಕನುಸಾರಿ ಮಾಡಿಹೆನೆಂಬ ಕರ್ಮಿಯ ಮಾತ ಕೇಳಲಾಗದು ಹೊಂಬಿತ್ತಾಳೆಯ ಕೆಲಸದಂತೆ. ಲಿಂಗಾನುಭಾವಿಗಳು ಕೇಳಿದರೆ ಛಿಃ ಇವನ ಮುಟ್ಟಲಾಗದೆಂಬರು, ಓಡ ಹಿಡಿದಡೆ ಕೈ ಮಸಿಯಾದೂದೆಂದು. ಸಿಂಹದ ನಡುವಿಂಗೆ ನಾಯ ನಡು ಸರಿಯೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ. ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ. ಒಳ್ಳಿಹ ಮೈಲಾರನ ಸಿಂಗಾರದಂತೆ, ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ, ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ.
--------------
ಬಸವಣ್ಣ
ಆದ್ಯರ ವಚನವ ಕೇಳಿ, ವೇದಾಗಮಂಗಳ ತಿಳಿದು, ಶ್ರೀವಿಭೂತಿಯ ಧಾರಣವೆ ಮುಖ್ಯವೆಂದರಿದು ಧರಿಸಿರಣ್ಣ. ಇಂತಿದನರಿಯದೆ, ಶಿವದೀಕ್ಷೆಯ ಮಾಡಿದರೂ ದೀಕ್ಷೆಯ ಪಡೆದರೂ ಫಲವಿಲ್ಲ. ಶಿವಮಂತ್ರಸ್ಮರಣೆ ತಪಯಜ್ಞಂಗಳ ಮಾಡಿದಲ್ಲಿಯೂ ಫಲವಿಲ್ಲ. ಆತಂಗೆ ವಿದ್ಯೆಯು ದೇವತೆಗಳು ಆಗಮಜ್ಞಾನವು ಇಲ್ಲ. `ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮವರ್ಜಿತೇ' ಎಂದುದಾಗಿ: ಇದು ಕಾರಣ, ಶ್ರೀವಿಭೂತಿಯ ಮಹಾತ್ಮೆಯನರಿದು ಧರಿಸಲು, ಸರ್ವಸಿದ್ಧಿಯಪ್ಪುದು. ಬಳಿಕ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಿಪ್ಪನು.
--------------
ಸ್ವತಂತ್ರ ಸಿದ್ಧಲಿಂಗ
ನಮ್ಮ ಪುರಾತನರ ವಚನಂಗಳನೆಲ್ಲ ಓದದೆ ಇದ್ದಾರು, ಓದಿಯೂ ನಂಬಿಗೆ ಇಲ್ಲದೆ ಇದ್ದಾರು, ನೂರಕ್ಕೊಬ್ಬರಲ್ಲದೆ ನಂಬರು, ನಮ್ಮ ಆದ್ಯರ ವಚನಂಗಳ ಜರೆದಾರು, ತಮ್ಮ ಕವಿತ್ವವ ಮೆರೆದಾರು, ನಮ್ಮ ಆದ್ಯರ ವಚನಂಗಳಿಂದೊದವಿದ ಜ್ಞಾನವೆಂಬುದನರಿಯರು. ತಾಯಿಯಿಂದ ಮಕ್ಕಳಾದರೆಂಬುದನರಿಯರು. ಊರೆಲ್ಲಕ್ಕೆ ಹುಟ್ಟಿದ ಹಾಗೆ ನುಡಿದಾರು ನಮ್ಮ ಪುರಾತನರ ವಚನವೆ ತಾಯಿ ತಂದೆ ಎಂದರಿಯರು. ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು ನಮ್ಮ ಆದ್ಯರ ವಚನ ಮದ ಮಾತ್ಸರ್ಯಾದಿ ಅರಿಷಡ್ವರ್ಗ ಸಪ್ತವ್ಯಸನ ಪಂಚೇಂದ್ರಿಯ ದಶವಾಯುಗಳಿಚ್ಛೆಗೆ ಹರಿವ ಮನವ ಸ್ವಸ್ಥವಾಗಿ ನಿಲಿಸಿತ್ತು ನಮ್ಮ ಆದ್ಯರ ವಚನ ಅಂಗೇಂದ್ರಿಯಂಗಳ ಲಿಂಗೇಂದ್ರಿಯಂಗಳೆನಿಸಿತ್ತು. ನಮ್ಮ ಆದ್ಯರ ವಚನ ನೂರೊಂದುಸ್ಥಲವ ಮೀರಿದ ಮಹದಲ್ಲಿ ನೆಲಸಿತ್ತು. ನಮ್ಮ ಆದ್ಯರ ವಚನ ಇನ್ನೂರಹದಿನಾರು ಲಿಂಗಕ್ಕೆ ಸರ್ವೇಂದ್ರಿಯವ ಸನ್ಮತವ ಮಾಡಿ, ಸಾಕಾರವ ಸವೆದು ನಿರಾಕಾರವನರಿದು ನಿರವಯಲ ನಿತ್ಯಸುಖದಲ್ಲಿರಿಸಿತ್ತು. ಇಂತಪ್ಪ ಆದ್ಯರ ವಚನಭಂಡಾರವ, ನಮ್ಮ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳು ಅಂಖ್ಯಾತ ಪುರಾತನರು, ಪ್ರಮಥಗಣಂಗಳು ಕೇಳಿ ಹೇಳಿ ಕೊಂಡಾಡಿದ ಕಾರಣ ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸರ್ವಸುಖವ ಸೂರೆಗೊಂಡು ಸ್ವಯಲಿಂಗವಾದರು
--------------
ಚನ್ನಬಸವಣ್ಣ
ಇನ್ನಷ್ಟು ... -->