ಅಥವಾ

ಒಟ್ಟು 283 ಕಡೆಗಳಲ್ಲಿ , 30 ವಚನಕಾರರು , 221 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಂದು ಮುಂದು ಸಂದಳಿದ ಬಳಿಕ ಆನು ನೀನೆಂಬ ಭೇದವೇತಕಯ್ಯ? ಆನಂದ ಅಪರಸ್ಥಾನದಲ್ಲಿ ಶುದ್ಧ ಸಂಯೋಗವಾದ ಬಳಿಕ ದಳ ಪ್ರತಿಷ್ಠೆಯ ಮಾಡಿನೆಂದು ಏನೆಂಬೆನಯ್ಯ? ಪೂರ್ವದಳದಲ್ಲಿ ಲಕ್ಷವು ಇಪ್ಪತ್ನಾಲ್ಕುಸಾವಿರ ಎಸಳು, ಅಪರದಳದಲ್ಲಿ ಹದಿನಾಲ್ಕುಸಾವಿರ ಎಸಳು, ನಾನಾ ವರ್ಣ ಆನಂದನೆಂಬ ಅದ್ಥಿದೇವತೆ ಮಧ್ಯಮಸ್ಥಾನದಲ್ಲಿ, ಸಿದ್ಧ ಸಂಯೋಗವೆಂಬ ಸರೋವರದಲ್ಲಿ, ವೈನೈಯೆಂಬ ಕೊಳಂಗಳು ಹನಾರೆಸಳಿನ ಕಮಳ ಬೀಜಾಕ್ಷರಂಗಳೆಂಟು, ಅದ್ಥಿದೇವತೆ ಸಚ್ಚಿದಾನಂದನೆಂಬ ಗಣೇಶ್ವರ ಆನಂದ ಬ್ರಹ್ಮಲೋಕದಲ್ಲಿ ಗುರುವೆಂಬ ಸರೋವರದಲ್ಲಿ ನಿತ್ಯವೆಂಬ ಕೊಳ. ಶುದ್ಥಶ್ವೇತನೆಂಬ ಅಮೃತ ಪ್ರವಾಹ, ದಳವೊಂದು, ಮೂಲ ಮೂರು, ಫಲವಾರು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅದ್ಥಿದೇವತೆ.
--------------
ಸಿದ್ಧರಾಮೇಶ್ವರ
ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು. ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು. ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು. ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ. ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.
--------------
ನೀಲಮ್ಮ
ಆನು ಭಕ್ತ, ಆನು ಶರಣ, ಆನು ಲಿಂಗೈಕ್ಯನೆಂದೊಡೆ ಲಿಂಗವು ನಗದೆ? ಪಂಚೇಂದ್ರಿಯಂಗಳು ನಗವೆ? ಅರಿಷಡ್ವರ್ಗಂಗಳು ನಗವೆ? ಎನ್ನ ತನುವಿನೊಳಗಣ ಸತ್ವರಜತಮೋ ಗುಣಂಗಳು ನಗವೆ? ಹೇಳಯ್ಯಾ ಉಳಿಯುಮೇಶ್ವರಾ?
--------------
ಉಳಿಯುಮೇಶ್ವರ ಚಿಕ್ಕಣ್ಣ
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ. ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾುತ್ತೆನ್ನ ಭಕ್ತಿ. ಕೂಡಲಸಂಗಮದೇವಾ, ಆನು ಮಾಡದೆನೆಂಬ ಕಿಚ್ಚು ಸಾಲದೆ 384
--------------
ಬಸವಣ್ಣ
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು. ಬಸವನ ಕಾಯವಳಿದು ನಿರಾಕುಳವಾಗಲು ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ.
--------------
ನೀಲಮ್ಮ
ಅಧಿಕ ತೇಜೋನ್ಮಯ ಬಸವಾ. ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ. ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ ಪ್ರಣವಮೂರ್ತಿಯಯ್ಯಾ ಬಸವಯ್ಯನು. ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಮೂರ್ತಿ ಮೂರರಲ್ಲಿ [ಅ]ಮೂರ್ತಿಯಲ್ಲಿ[ಲೆಂ]ದು ಬಂದೆಯಲ್ಲಾ ಮಡಿವಾಳಾ. ದೇಹ ಮೂರರಲ್ಲಿ ನಿರ್ದೇಹಿಯಾಗಿ ಬಂದಾಚರಿಸಿದೆಯಲ್ಲಾ ಮಡಿವಾಳಾ. ವಾಣಿ ನಾಲ್ಕರಲ್ಲಿ ಆನು ನಾನಲ್ಲೆಂಬ ಭಾವವಳಿದು ಶಬ್ದ ಮುಗ್ಧವಾಗಿ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಚಿದಾಕಾಶವಾಗಿ ಪೋದೆಯಲ್ಲಾ ಮಡಿವಾಳಾ.
--------------
ಸಿದ್ಧರಾಮೇಶ್ವರ
ಆಟವಳಿದು ನಿರಾಕುಳವಾಯಿತ್ತು; ನಿರಾಕುಳ ಸಂಬಂಧದಿಂದ ನಿಜವನರಿದು ಬದುಕಿದೆನಯ್ಯ. ಮುಕ್ತಿಯನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಸಯದಾನವರತ ಬಸವಾ. ಸಂಭ್ರಮಮೂರ್ತಿ ಬಸವಾ. ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ, ಏಕರೂಪ ನಿರೂಪಾದೆಯಾ ಬಸವಾ ? ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ. ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ
--------------
ನೀಲಮ್ಮ
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೆಲ್ಲ ಗಿಡುವಿನೊಳಗೆ ನಾನೊಂದು ಹುಲ್ಲಾಗಿ ಹುಟ್ಟಿದೆನಯ್ಯಾ. ಆನು ಭಕ್ತನೆಂದೆಂಬೆನೆ, ಆನು ಯುಕ್ತನೆಂದೆಂಬೆನೆ ಆನು ಕೂಡಲಸಂಗನ ಶರಣರೊಕ್ಕುದನುಂಡಡೆ, ಪಾದರಕ್ಷೆಗೆ ಸರಿಯಹೆನೆ
--------------
ಬಸವಣ್ಣ
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ಹಾಡುವೆ, ಹೊಗಳುವೆ, ಬೇಡುವೆ ಸೆರಗೊಡ್ಡಿ ಆನು. ಕಾಡುವೆ ನಿಮ್ಮವರ ಸಂಗವನೆ ಕರುಣಿಸಯ್ಯಾ; ಅಯ್ಯಾ, ನಿಮ್ಮ ಬೇಡುವ ಪದವಿಂತುಟಯ್ಯಾ; ಕರುಣಾಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಕೃಪೆಮಾಡಾ ಧರ್ಮಿ!
--------------
ಸಿದ್ಧರಾಮೇಶ್ವರ
ತಿರಿದುಕೊಂಡು ಬಂದಾದರೆಯೂ ನಿಮ್ಮ ಭಕ್ತರಿಗೆ ಆನು ಬೆಸಕೆಯ್ವ ಭಾಗ್ಯವನು, ಮಾಡು ಕಂಡಯ್ಯಾ. ಮನ ವಚನ ಕಾಯದಲ್ಲಿ ನಿಮ್ಮ ಶರಣರಿಗೆ ಆನು ತೊತ್ತಾಗಿಪ್ಪುದು, ಮಾಡು ಕಂಡಯ್ಯಾ. ಹಲವು ಮಾತೇನು ಲಿಂಗಜಂಗಮಕ್ಕೆ ಈವುದನೆ ಮಾಡು ಕಂಡಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ ಆನು ತನುಪ್ರಾಣ ಇಷ್ಟಲಿಂಗಿಯಾದೆನು. ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ. ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಆನು ನೀನೆಂಬ ಕನ್ನಡವಿನ್ನೇಕಯ್ಯ?
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->