ಅಥವಾ

ಒಟ್ಟು 6 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗಜಂಗಮಾರ್ಚನೆಯ ಕ್ರಮವ ದಯೆಯಿಂದ ಕರುಣಿಪುದು ಸ್ವಾಮಿ. ಕೇಳೈ ಮಗನೆ : ತಾನಿದ್ದ ಊರಲ್ಲಿ ಗುರುವು ಇದ್ದಡೆ ನಿತ್ಯ ತಪ್ಪದೆ ದರುಶನವ ಮಾಡುವುದು. ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ ಲಿಂಗ-ಜಂಗಮವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಗುರುಪೂಜೆ. ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ ಜಂಗಮ-ಗುರುವುಂಟೆಂದುಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಲಿಂಗಪೂಜೆ. ಇನ್ನು ಜಂಗಮದ ಪೂಜೆ ಮಾಡುವಾಗ ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಜಂಗಮಪೂಜೆ. ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ. ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ. ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ. ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ. ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ. ಸಾಕ್ಷಿ : 'ಏಕಮೂರ್ತಿಸ್ತ್ರಯೋ ಭಾಗಾಃ ಗುರುರ್ಲಿಂಗಂತು ಜಂಗಮಃ | ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ||' ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ? ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು. ಒಂದೂರಭಾಷೆಯೊಂದೂರಲಿಲ್ಲ. ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ. ಇಂತೀ ಊರ ಹೊಕ್ಕ ತಪ್ಪಿಂಗೆ ಕಾಯವ ಭೂಮಿಗೆ ಸುಂಕವ ತೆತ್ತು ಜೀವವನುಳುಹಿಕೊಂಡು ಬರಬೇಕಾಯಿತ್ತು. ಇಂತೀ ಮಹಾಘನದ ಬೆಳಕಿನೊಳಗೆ ಕಳೆದುಳಿದು ಸುಳಿದಾಡಿ ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ
--------------
ಅಕ್ಕಮಹಾದೇವಿ
ಆದಿಯಲ್ಲಿ ಒಬ್ಬ ಶರಣನು ಮನೆಯ ಮಾಡಿ, ಒಂದುದಿನ ಊರ ಮಾಡಿ, ಮೂರುದಿನ ಕೇರಿಯ ಮಾಡಿ, ಆರು ದಿನ ಹೊಲವ ಮಾಡಿ, ಮೂವತ್ತಾರು ದಿನ ಹೊಲದಲ್ಲಿ ಬೆಳೆಯಿಲ್ಲ, ಕೇರಿಯಲ್ಲಿ ಮಾನವರು ಇಲ್ಲ, ಊರಲ್ಲಿ ತಂದೆ ತಾಯಿ ಇಲ್ಲ, ಮನೆಯಲ್ಲಿ ಆರೂ ಇಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವಶಿವಾ, ಈ ಲೋಕದ ಮಾನವರು ಸಂಸಾರಸುಖವ ಬಹುಸವಿಯೆಂದು ಹರುಷದಿಂದ ಉಬ್ಬಿ ಕೊಬ್ಬಿ ಹೊನ್ನು, ಹೆಣ್ಣು, ಮಣ್ಣಿನ ಹೋರಾಟವ ಮಾಡುವ ಪರಿಯ- ಪೇಳ್ವೆ ಕೇಳಿರಯ್ಯಾ. ಹೊನ್ನಿಗಾಸೆಯ ಮಾಡಿ ನಾನಾದೇಶವ ತಿರುಗಿ ತಿರುಗಿ, ನಾನಾವ್ಯಾಪಾರವ ಮಾಡಿ ದುಡಿದು ದುಃಖಮಂಬಟ್ಟು ಹಗಲು ಹಸುವಿನ ಚಿಂತೆ ಇಲ್ಲ, ಇರುಳು ನಿದ್ರೆಯ ಚಿಂತೆ ಇಲ್ಲ. ಈ ಪರಿಯಲ್ಲಿ ಸರ್ವರನು ಠಕ್ಕುಠವಳಿಯಿಂದ ಸಿಂತರಿಸಬೇಕೆಂಬ ಚಿಂತೆಯುಂಟಲ್ಲದೆ ಇವರಿಗೆ ಜಂಗಮದ ನೆನವು ಎಲ್ಲಿಹುದೋ? ಹೀಗೆ ನಾನಾ ಧಾವತಿಯಿಂದ ಆ ಹೊನ್ನ ಗಳಿಸಿ ತಂದು ಆ ಹೆಣ್ಣು ತರಬೇಕು, ಈ ಹೆಣ್ಣು ಬಿಡಬೇಕು, ಆ ಹೆಣ್ಣು ನೋಡಬೇಕು, ಈ ಹೆಣ್ಣು ಮಾಡಬೇಕು ಎಂಬೀ ಉಲ್ಲಾಸದಿಂದ ಮದವೇರಿದ ಆನೆಯ ಹಾಗೆ ಮಸ್ತಿಗೆ ಬಂದ ಕೋಣನ ಹಾಗೆ, ಮಚ್ಚರಕ್ಕೆ ಬಂದ ಟಗರಿನ ಹಾಗೆ, ಇಂತೀ ಪರಿಯಲ್ಲಿ ತಿರುಗುವ ಕತ್ತಿಮೂಳರಿಗೆ ಲಿಂಗದ ನೆನಹು ಎಲ್ಲಿಹುದೊ? ಹೀಗೆ ಆ ಹೊನ್ನಿನಿಂದ ಆ ಊರಲ್ಲಿ ಹೊಲವ ಮಾಡಬೇಕು, ಈ ಊರಲ್ಲಿ ಹೊಲವ ಮಾಡಬೇಕು, ಅಲ್ಲಿ ಮನೆಯ ಮಾಡಬೇಕು, ಇಲ್ಲಿ ಮನೆಯ ಮಾಡಬೇಕು. ಈ ಉಲ್ಲಾಸ ಚಿಂತೆಯಿಂದ ಹಗಲು ಹಸಿವಿನ ಚಿಂತೆ ಇಲ್ಲ. ಇರುಳು ನಿದ್ರೆಯ ಖಬರಿಲ್ಲ. ಇಂತೀ ಪರಿಯಲ್ಲಿ ಬೆಕ್ಕು ನಾಯಿಗಳು ತಮ್ಮ ಒಡಲ ವಿಷಯದ ಚಿಂತೆಯಿಂದ ಹಗಲು ಇರುಳು ಚರಿಸುವಂತೆ ಈ ಮಾಯಾ ಪ್ರಪಂಚದಲ್ಲಿ ತಿರುಗುವ ಮಂಗಮನುಜರಿಗೆ ಗುರುವಿನ ನೆನಹು ಎಲ್ಲಿಹುದೋ? ಇಂತೀ ಪ್ರಕಾರದಲ್ಲಿ ತ್ರಿವಿಧ ಹೋರಾಟದಲ್ಲಿ ಸಿಲ್ಕಿದ ಜಡಜೀವರುಗಳಿಗೆ ಪರಬ್ರಹ್ಮದ ಎಚ್ಚರವಿಲ್ಲದೆ ಮುಂದೆ ಮೋಕ್ಷವ ಹರಿಯಬೇಕೆಂಬ ಚಿಂತೆಯಿಲ್ಲ. ಇಂತೀ ವಿಚಾರವನು ತಿಳಿಯದೆ ಹೊನ್ನು, ಹೆಣ್ಣು, ಮಣ್ಣೆಂಬ ತ್ರಿವಿಧಮಲವ ಕಚ್ಚಿ ಹಂದಿ ನಾಯಿಗಳ ಹಾಗೆ ಈ ಸಂಸಾರವೆಂಬ ಹಾಳಕೇರಿಯಲ್ಲಿ ಹೊಡದಾಡಿ ಹೊತ್ತುಗಳೆದು ವ್ಯರ್ಥ ಸತ್ತು ಹೋಗುವ ಕತ್ತೆಮೂಳ ಹೊಲೆಮಾದಿಗರಿಗೆ ಇನ್ನೆತ್ತಣ ಮುಕ್ತಿ ಹೇಳಾ! ಇಂತಪ್ಪ ಮೂಢಾತ್ಮರಿಗೆ ಕಲ್ಪಕಲ್ಪಾಂತರ ಎಂಬತ್ತುನಾಲ್ಕುಲಕ್ಷ ಯೋನಿಚಕ್ರದಲ್ಲಿ ತಿರುಗುವುದೇ ಪ್ರಾಪ್ತಿಯುಂಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->