ಅಥವಾ

ಒಟ್ಟು 31 ಕಡೆಗಳಲ್ಲಿ , 18 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ, ತೇಜಸ್ತತ್ವ ಅರಿವುಭೇದವಾಗಿ, ಇಂತೀ ತ್ರಿವಿಧಭೇದ ವರ್ತುಳ ಗೋಮುಖ ಗೋಳಕಾಕಾರ ಕೂಡಿ ಲಿಂಗವಾದಲ್ಲಿ, ಈಶ್ವರತತ್ವ ವಾಯುಭೇದವಾಗಿ, ಸದಾಶಿವತತ್ವ ಆಕಾಶಭೇದವಾಗಿ, ಉಭಯ ಏಕವಾಗಿ, ಅಗ್ನಿತತ್ವ ಕೂಡಲಿಕ್ಕೆ ಆ ತ್ರಿವಿಧ ಏಕವಾಗಿ, ಅಪ್ಪುತತ್ವವ ಕೂಡಲಿಕ್ಕೆ ಆ ಚತುರ್ಭಾವ ಏಕವಾಗಿ, ಪೃಥ್ವಿತತ್ವ ಕೂಡಲಾಗಿ, ಉತ್ಪತ್ಯವೆಲ್ಲಿ ಅಡಗಿತ್ತು ? ಸ್ಥಿತಿಯೆಲ್ಲಿ ನಡೆಯಿತ್ತು ? ಲಯವೆಲ್ಲಿ ಸತ್ತಿತ್ತು ? ಲಿಂಗ ಮಧ್ಯ ಸಚರಾಚರವೆಂದಲ್ಲಿ, ಕಂಡು ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
`ದೇಹೇ ಪ್ರಾಣಂ ಸಮಾಯೋಜ್ಯ ಪ್ರಾಣಲಿಂಗೇ ಪ್ರಕಲ್ಪಯೇತ್ | ಅವಿನಾಭಾವ ಸಂಯೋಗಾತ್ತಸ್ಮಾದೈಕ್ಯಂ ಪ್ರಕಲ್ಪಯೇತ್' | ಎಂದುದಾಗಿ, ಈ ಪ್ರಕಾರದಿಂ ವೀರಶೈವ ದೀಕ್ಷಿತನಾದ ವೀರಮಾಹೇಶ್ವರನು ದೇಹಪ್ರಾಣಂಗಳ ವರ್ತನೆ ಬೇರಾಗದ ಹಾಂಗೆ, ಏಕವಾಗಿ ಕೂಡಿ ತನ್ನ ಪ್ರಾಣಲಿಂಗದಲ್ಲಿ ಕಲ್ಪಿಸೂದ. ಆ ಅಗಲಿಕೆಯಿಂದ ಭಾವದ ಕೂಟದ ದೆಸೆಯಿಂದ ಪ್ರಾಣ ಲಿಂಗವೆಂಬೆರಡನೂ ಏಕವನು ಮಾಡುವುದಯ್ಯಾ ಶಾಂತ ವೀರೇಶ್ವರಾ.
--------------
ಶಾಂತವೀರೇಶ್ವರ
ಯೋಗವನರಿದೆನೆಂಬೆ, ಯೋಗವನರಿದೆನೆಂಬೆ ; ಯೋಗದ ನೆಲೆಯನಾರು ಬಲ್ಲರು? ಯೋಗದ ನೆಲೆಯ ಹೇಳಿಹೆ ಕೇಳಾ- ತಾತ್ಪರ್ಯಕರ್ಣಿಕೆಯ ಮಸ್ತಕದಲ್ಲಿದ್ದ ಕುಂಭದೊಳಗೆ ತೋರುತ್ತದ್ಞೆ; ಹಲವು ಬಿಂಬ ಹೋಗುತ್ತಿದೆ, ಹಲವು ರೂಪ ಒಪುತ್ತಿದೆ ; ಏಕ ಏಕವಾಗಿ ಆನಂದಸ್ಥಾನದಲ್ಲಿ ಅನಿಮಿಷವಾಗುತ್ತಿದೆ ; ಪೂರ್ವಾಪರ ಮಧ್ಯ ಶುದ್ಧ ಪಂಚಮವೆಂಬ ಸ್ಥಾನಂಗಳಲ್ಲಿ ಪ್ರವೇಶಿಸುತ್ತಿದೆ ತಾನು ತಾನೆಯಾಗಿ. ಅರಿಯಾ ಭೇದಂಗಳ- ಬಿಂದು ಶ್ವೇತ ಪೂರ್ವಶುದ್ಧ ಆನಂದ ಧವಳ ಅನಿಮಿಷ ಸಂಗಮ ಶುದ್ಧ ಸಿದ್ಧ ಪ್ರಸಿದ್ಧ ತತ್ವವೆಂಬ ಪರಮಸೀಮೆ ಮುಖಂಗಳಾಗಿ, ಅಜಲೋಕದಲ್ಲಿ ಅದ್ವಯ, ನೆನಹಿನ ಕೊನೆಯ ಮೊನೆಯಲ್ಲಿ ಒಪ್ಪಿ ತೋರುವ ಧವಳತೆಯ ಬೆಳಗಿನ ರಂಜನ ಪ್ರವಾಹ ಮಿಗಿಲಾಗಿ, `ತ್ವಂ' ಪದವಾಯಿತ್ತು, ಮೀರಿ `ತ್ವಮಸಿ'ಯಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮವ ನುಂಗಿಲೀಯವಾಯಿತ್ತು.
--------------
ಸಿದ್ಧರಾಮೇಶ್ವರ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಭಕ್ತಸ್ಥಲ ಘಟರೂಪು, ಮಾಹೇಶ್ವರಸ್ಥಲ ಆತ್ಮರೂಪು, ಪ್ರಸಾದಿಸ್ಥಲ ಜ್ಞಾನರೂಪು, ಇಂತೀ ತ್ರಿವಿಧಸ್ಥಲ ಭಕ್ತಿರೂಪು. ಪ್ರಾಣಲಿಂಗಿಸ್ಥಲ ಜ್ಞಾತೃರೂಪು, ಶರಣಸ್ಥಲ ಜ್ಞೇಯರೂಪು, ಐಕ್ಯಸ್ಥಲ ಸರ್ವಮಯಜ್ಞಾನರೂಪು. ಇಂತೀ ತ್ರಿವಿಧಸ್ಥಲ ಏಕವಾಗಿ ನಿಂದುದು ಕರ್ತೃಸ್ವರೂಪು. ಇಂತೀ ಷಟ್ಸ್ಥಲ ಉಭಯವಾಗಿ ಕಾಯದಲ್ಲಿ ಆತ್ಮ ಘಟಿಸಿಪ್ಪಂತೆ, ಆತ್ಮನ ಚೇತನದಿಂದ ಘಟ ಅನುಭವಿಸುವಂತೆ, ಇಂತೀ ದ್ವಂದ್ವವೊಂದಾಗಿ ನಿಂದರಿದಲ್ಲಿ ಷಟ್ಸ್ಥಲ ಆರೋಪ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನ ಬರವ ಹಾರುತಿದ್ದೆನಯ್ಯಾ. ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು, ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು. ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ ಬಂದು ನೆಲೆಗೊಂಡರು. ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು. ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆದಿ ಅಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಉಕಾರದಲ್ಲಿ ಕುಂಡಲಾಕಾರ ಅರ್ಧಚಂದ್ರಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಅಕಾರ ಉಕಾರ ಮಕಾರ-ಈ ಮೂರು ಏಕವಾಗಿ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ ಉತ್ಪತ್ಯವಾಗದ ಮುನ್ನ ಮುನ್ನವೆ ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಕಾಯ ಮಮಕಾಯ ಕಂಡಾ ಲಿಂಗವು, ಲಿಂಗವಂತಂಗೆ ಏಕಿನ್ನು ಬೇರೆ ಚಿಂತೆ ? ಲಿಂಗವಂತಂಗೆ ಗುರು ಲಿಂಗ ಪ್ರಾಣ ಏಕವಾಗಿ, ಪ್ರಾಣಲಿಂಗವಾಗಿ ಅಂತರಂಗ ಬಹಿರಂಗಭರಿತನಾಗಿ, ಪ್ರಾಣಲಿಂಗವಾಗಿ ಅಂಗದ ಮೇಲೆ ಲಿಂಗಸ್ವಾಯತವಾಗಿ ನಿರಂತರ ಇಪ್ಪ ಕಂಡಾ. ಏಕಿನ್ನು ಬೇರೆ ಅನ್ಯರಾಸೆ ! ಲಿಂಗವಂತರು ಲಿಂಗವನೇ ಚಿಂತಿಸುವುದು ಲಿಂಗವನೇ ಆಸಗೈವುದು ಲಿಂಗವನೇ ಕೊಂಬುದು, ಲಿಂಗವಂತರಿಗೆ ಕೊಡುವುದು. ಲಿಂಗವಂತಂಗೆ ಅನುವಿದು, ಆಯತವಿದು ಬುದ್ಧಿಯಿದು, ಸಿದ್ಧಿಯಿದು, ಮುಕ್ತಿಯಿದು, ಯುಕ್ತಿಯಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ, ಹೇಮವಳಿದು ಪರುಷ ತಾನಾಗಬಲ್ಲಡೆ ಅದು ಪರುಷರಸಿದ್ಧಿ. ಗುರು ಮುಟ್ಟಿದ ಶಿಷ್ಯ ಗುರುವಾಗಬಲ್ಲಡೆ, ಲಿಂಗ ಮುಟ್ಟಿದ ಆತ್ಮ ಲಿಂಗವಾಗಬಲ್ಲಡೆ, ಆ ಅರಿವು ಅರಿವ ಭೇದಿಸಿದಂತೆ, ದೃಗ್ದೈಶ್ಯಕ್ಕೆ ಒಡಲು ಏಕವಾಗಿ ಕಾಬಂತೆ. ಆ ಗುಣ ಸದ್ಯೋಜಾತಲಿಂಗವ ಕೂಡಿದ ಭೇದ.
--------------
ಅವಸರದ ರೇಕಣ್ಣ
ನಾನಾ ಭಾವದ ವ್ರತಂಗಳನರಿವಲ್ಲಿ ಎಚ್ಚರಿಕೆ ವ್ಯವಧಾನ ಮುಂತಾಗಿ ತಟ್ಟು-ಮುಟ್ಟು ತಾಗು-ಸೋಂಕುಗಳಲ್ಲಿ ಎಚ್ಚರಿಕೆ ಗುಂದದೆ, ನಡೆವಲ್ಲಿ, ಒಂದ ಕುರಿತು ನುಡಿವಲ್ಲಿ, ಲಕ್ಷಿಸಿ ಅರಿವಲ್ಲಿ ಧರೆ ಜಲ ಅನಲ ಅನಿಲಂಗಳಲ್ಲಿ ದೃಕ್ಕು ದೃಶ್ಯ ಏಕವಾಗಿ ವರ್ತಿಸಿ ನಡೆವುದು ಖಂಡಿತನ ವ್ರತ. ಆತ ಸಂದೇಹವಿಲ್ಲದ ನಿರಂಗ ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ನಾನಾ ಭೇದದ ವ್ರತವ ಸಾಧಿಸಿ ಭೇದಿಸಿ ವೇಧಿಸುವಲ್ಲಿ, ಬಾಹ್ಯ ಅಂತರಂಗದಲ್ಲಿ ಉಭಯ ಏಕವಾಗಿ, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಕೊಂಡ ವ್ರತಕ್ಕೆ ಭಿನ್ನಭಾವವಿಲ್ಲವೆ, ಎಲ್ಲಾ ಎಚ್ಚರಿಕೆಯಲ್ಲಿ ಬಲ್ಲವನಾಗಿ, ಅರಿದುದ ಬಿಟ್ಟು ಮರದೆನೆಂದು ಮತ್ತೆ ಅರಿದು ನಡೆದೆಹೆನೆಂಬುದು ಆ ವ್ರತಕ್ಕೆ ಅದೆ ಮರವೆಯಲ್ಲವೆ? ಜೇಡನ ಮುಂದಣ ನೇಯಿಗೆಯ ನೂಲೆ? ಸಂಪುಟದ ಲೇಖನವೆ? ಲೋಹದ ಭಾವವೆ? ಅದು ಕುಂಭದ ಭಿನ್ನದಂತೆ, ಮೌಕ್ತಿಕದ ಸಂದಿನಂತೆ. ವ್ರತ ತಪ್ಪಿದಲ್ಲಿಯೆ ತಪ್ಪನೊಪ್ಪಲಿಲ್ಲ, ಏಲೇಶ್ವರಲಿಂಗವಾದಡೂ ಧಿಕ್ಕರಿಸಿ ಬಿಡುವೆನು.
--------------
ಏಲೇಶ್ವರ ಕೇತಯ್ಯ
ತನುವಿನಿಚ್ಛೆಗೆ ಶೀಲವ ಕಟ್ಟಿಕೊಂಬವರು ಲಕ್ಷೋಪಲಕ್ಷ ಉಂಟು. ಮನದಿಚ್ಛೆಗೆ ಶೀಲವ ಕಟ್ಟಿಕೊಂಬವರು ಅಪೂರ್ವ ನೋಡಾ. ತನುಮನವೆರಡು ಏಕವಾಗಿ, ಧನದಾಸೆಯಂ ಬಿಟ್ಟು, ಮನ ಮಹದಲ್ಲಿ ನಿಂದುದೆ ಶೀಲಸಂಬಂಧ. ಇನಿತಲ್ಲದ ದುಶ್ಶೀಲರ ಎನಗೊಮ್ಮೆ ತೋರದಿರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಲವು ಗುಳಿಯ ಬೆಟ್ಟದ ಗುಂಟಿಗೆಯಂತೆ ಸುಮುದ್ರೆ ಏಕವಾಗಿ ಹಲವು ಗುಣದಲ್ಲಿ ಸಲುವಂತೆ ಆ ಗುಣ ನೆಲೆ ಆಚಾರ್ಯನಂಗ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಉಮಾಪತಿಯಾದ ಸಂಗ.
--------------
ಪ್ರಸಾದಿ ಭೋಗಣ್ಣ
ನಾನಾ ಶಬ್ದಸೂತ್ರ ಲಕ್ಷಣಂಗಳಲ್ಲಿ ನ್ಯೂನಾಧಿಕವಿಲ್ಲದಂತೆ ವಚನಂಗಳ ರಚನೆಗಳಲ್ಲಿ ನಿರ್ವಚನ ಕಾರಣನಾಗಿ ಸರ್ವಗುಣಸಂಪನ್ನನಾರ್ಗಿದಲ್ಲಿ ಭೂತಹಿತವನರಿತು ಆತ್ಮಚಿತ್ತವ ಮರೆದು ಶರಣ ಸಂಭಾಷಣೆಯಲ್ಲಿ ಶಿವಮೂರ್ತಿಧ್ಯಾನಂಗಳಲ್ಲಿ ಶಿವಕಥನ [ಯಥಾ ಕಥನ] ಪ್ರಸಂಗಳಲ್ಲಿ ಶಿವಪೂಜಾ ಮೂರ್ತಿಧ್ಯಾನಂಗಳಲ್ಲಿ ಉಭಯವಳಿದು ಏಕವಾಗಿ ಸ್ವೀಕರಿಸಿದಲ್ಲಿ ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗವ ಅವಧರಿಸಿದ ಅಂಗ
--------------
ಪ್ರಸಾದಿ ಭೋಗಣ್ಣ
ಇನ್ನಷ್ಟು ... -->