ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿಮಾಂ ಪರಮೇಶ್ವರ ಜಯ ಭಕ್ತಿಜಾÕನಮಾಕಾರ ನೀನೆಯಯ್ಯ ಚೆನ್ನಬಸವಣ್ಣ. ಏಕೋದೇವ ದೇವಧರ್ಮ ಧರ್ಮಗುಣ ಗುಣಪ್ರಕಾಶ ಪ್ರಕಾಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ. ನಿಮ್ಮಿಂದ ಪ್ರಾಣಂಗಸಂಬಂಧವಾಗಿ ನಿಮಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣ.
--------------
ಸಿದ್ಧರಾಮೇಶ್ವರ
ತುಂಬಿ ತುಳುಕಿ ಅಂಬರಕೆ ಗಂಬ್ಥೀರ ತೆರೆ ಹಾಯುತ್ತಿರಲು, ಸಂಭ್ರಮದ ಶರದ್ಥಿ ಹೆಚ್ಚಿತೇ ಕಾಡುತ್ತಿದ್ದೆ ನಾನೂ ಎಲೆ ಅಯ್ಯಾ, ಆಕಾರವ ಮೀರಿದ ನಿರಾಕಾರ ಭಕ್ತಿ ಏಕೋದೇವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕರುಣರಸ ಹರಿವಲ್ಲಿ ಮಹಾಕಾರುಣ್ಯ ಸುಧಾಪ್ರವಾಹವಪ್ಪಲ್ಲಿ ಆರಯ್ಯಾ ನಿನ್ನನರಿವವರು? ಲೋಕಾಲೋಕಂಗಳಿಗೆ ಏಕೋದೇವ ನೀನು ಅನಾದಿಮೂಲಕ್ಕೆ ಮೂಲಸ್ವಾಮಿ ನೀನೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಒಂದು ಎರಡಹುದೆ ? ಎರಡು ಒಂದಹುದೆ ? ಒಂದು ಒಂದೇ, ಎರಡು ಎರಡೇ. ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ, ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ, ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ, ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ, ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ, ಅವರ ಆಗು ಹೋಗು ಇರವು ಹೋಗಿನೊಳಗೆ ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ? ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ, ಆ ಗಗನ ತಾ ಮೇಘವೆ ? ತನ್ನಾದ್ಥೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು, ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ? ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು. ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ, ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು. ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು. ಸರ್ವೇಶ್ವರನು, ಸರ್ವಕರ್ತೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು. ಸರ್ವಲಯ ಗಮನ ಸ್ಥಿತಿ ತನಗುಂಟೆ ? ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ. ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ? ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ, ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ, ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ, ಎಲೆ ಭ್ರಮಿತರಿರಾ ? `ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ | ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಎನಲು, `ಈಶಾನಃ ಶಿವ ಏಕೋದೇವಃ ಶಿವಂ ಕರಃ ತತ್ಸರ್ವಮನ್ಯತ್ ಪರಿತ್ಯಜೇತ್' ಎನಲು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು' ಎನಲು, ಶಿವನೊಬ್ಬನೇ, ಇಬ್ಬರಿಲ್ಲ . `ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |' ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ. ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ ಎಲೆ ಮರುಳು ವಿಪ್ರರಿರಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ? ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ ? ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ? ಸಾಕಾರ ನಿರಾಕಾರ ಏಕೋದೇವ, ನಮ್ಮ ಕೂಡಲಚೆನ್ನಸಂಗಯ್ಯನು.
--------------
ಚನ್ನಬಸವಣ್ಣ
ಏಕೋದೇವ ಶಿವನದ್ವಿತೀಯ. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಿ ನುಡಿವುತ್ತಿ(ವೆ), ಶ್ರುತಿ ಶಾಸ್ತ್ರ ಪುರಾಣ ಆಗಮಂಗಳೆಲ್ಲವು. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಲು, ಮರಳಿ ವಿಷ್ಣು ದೇವರೆಂದು ನುಡಿವುತ್ತಿಪ್ಪರು. ದೈವಕ್ಕೆ ಉತ್ಪತ್ತಿ ಸ್ಥಿತಿ ಲಯಂಗಳೆಂಬುದುಂಟೆ. ದೃಷ್ಟಾಂತರ ಜಾಯತೆ ಅಷ್ಟಮಿ ಸಾಕ್ಷಿ. ಆ ವಿಷ್ಣುವಿಂಗೆ ಲಯವುಂಟೆಂಬುದಕ್ಕೆ ಕಾಡಬೇಡನೆಚ್ಚಂಬು ಅಂಗಾಲಲ್ಲಿ ನೆಟ್ಟು ಪ್ರಾಣವ ಬಿಟ್ಟುದೇ ಸಾಕ್ಷಿ. ಅಚ್ಯುತಂಗೆ ಅನೇಕ ಭವವುಂಟೆಂಬುದಕ್ಕೆ ಮತ್ಸ್ಯ ಕೂರ್ಮ ವರಾಹವತಾರವಾದುದೇ ಸಾಕ್ಷಿ. ಆ ಹರಿ, ಹರನ ಭೃತ್ಯನೆಂಬುದಕ್ಕೆ ರಾಮೇಶ್ವರ ಆದಿಯಾದ ಪ್ರತಿಷೆ*ಗಳೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವರು ಅಜ್ಞಾನಿಗಳು. ಆತಂಗಿಲ್ಲದ ಮಹತ್ವದ ತಾವು ನುಡಿವುತ್ತಿಹರು. ಬಲಿಯ ಮೂರಡಿ ಭೂಮಿಯ ಸ್ಥಾನವ ಬೇಡಿದಲ್ಲಿ ಪಂಚಾಶತಕೋಟಿ ಭೂಮಿ ಸಾಲದೆ ಹೋಯಿತೆಂದು ನುಡಿವುತ್ತಿಹರು. ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಬಂದಿತೊ, ಓಡುವುದಕ್ಕೆ ಭೂಮಿ. ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲಾ ಇದ್ದೀತೆಂದು ನುಡಿವುತ್ತಿಹರು. ಆ ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲವು ಇದ್ದರೆ, ಸೀತೆ ಹೋದಳೆಂದು ಅರಸಿ ಸೇತುವೆ ಕಟ್ಟಿ ದಣಿಯಲೇಕೊ. ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವೂ ಬಂದವೆಂದು ನುಡಿವುತ್ತಿಹರು. ಆ ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವು ಬಂದರೆ, ಕಪಿಗಳ ಕೂಡಿ ಸೇತುವೆ ಕಟ್ಟುವುದಕ್ಕೇನು ಕಾರಣ. ಇಂತಪ್ಪ ಹರಿಯನು ಹರಗೆ ಸರಿಯೆಂದು ನುಡಿವ ದ್ವಿಜರ ನುಡಿಯನು ಪ್ರಮಾಣಿಸಿದರೆ, ಅಘೋರ ನರಕದಲ್ಲಿ ಇಕ್ಕದೆ ಮಾಣ ನಿಜಗುರು ಶಾಂತಮಲ್ಲಿಕಾರ್ಜುನ.
--------------
ನಿಜಗುರು ಶಾಂತಮಲ್ಲಿಕಾರ್ಜುನ
`ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಭಾವದ ಸದ್ಗತಿಯನೆತ್ತಬಲ್ಲರಯ್ಯ? ಬುದ್ಭುದಾಕಾರ ಭೂಮಿಯೊಳು ಹುಟ್ಟುಹೊಂದುಯಿಲ್ಲವೆ ? ಅದ್ವೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದ್ಧಿಯಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.
--------------
ಷಣ್ಮುಖಸ್ವಾಮಿ
ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾಗಿ ಎಣಿಸಬಾರದ ಬಹಳ ಬ್ರಹ್ಮಕ್ಕೆ ಎಣೆಯಾವುದು ಹೇಳಾ? ಅಗಣಿತನಕ್ಷಯ ಸರ್ವಜೀವ ಮನಃಪ್ರೇರಕ ಸರ್ವಗತ ಸರ್ವಜ್ಞ ಏಕೋದೇವ ಸಂವಿತ್ ಪ್ರಕಾಶ ಪರಮೇಶ್ವರನು ಮನವೆಂಬ ದರ್ಪಣದೊಳಗೆ, ಬಿಂದ್ವಾಕಾಶರೂಪನಾಗಿ ಬೆಳಗಿ ತೋರುವ ಶಿವನ ಅಂದವ ತಿಳಿದು ನೋಡಿ ಕೂಡಬಲ್ಲಾತನೆ ಪರಮಶಿವಯೋಗಿ. ಆತನೇ ಜನನ ಮರಣ ರಹಿತ, ಆತನೇ ಸರ್ವಜ್ಞನು, ಆತನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ.
--------------
ಸ್ವತಂತ್ರ ಸಿದ್ಧಲಿಂಗ
-->