ಅಥವಾ

ಒಟ್ಟು 202 ಕಡೆಗಳಲ್ಲಿ , 52 ವಚನಕಾರರು , 164 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಕರಸ್ಥಲ ಪ್ರಾಣಲಿಂಗಿಯ ಸೋಂಕು. ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ ! ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು. ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ ಉರಿಯ ಬಾಣದಲೆಚ್ಚು ತೆಗೆದೆ ನೋಡಾ ! ಒಂದೆ ಬಾಣದಲ್ಲಿ ಸತ್ತ ಮೃಗವು, ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ ! ಅಂಗೈಯೊಳಗೊಂದು ಕಂಗಳು ಮೂಡಿ, ಸಂಗದ ಸುಖವು ದಿಟವಾಯಿತ್ತು ! ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು ಉಪದೇಶವ ಮಾಡುವ ಕ್ರಮವೆಂತೆಂದಡೆ: ಬ್ರಾಹ್ಮಣನ ಮೂರು ವರುಷ ನೋಡಬೇಕು, ಕ್ಷತ್ರಿಯನ ಆರು ವರುಷ ನೋಡಬೇಕು, ವೈಶ್ಯನ ಒಂಬತ್ತು ವರುಷ ನೋಡಬೇಕು, ಶೂದ್ರನ ಹನ್ನೆರಡು ವರುಷ ನೋಡಬೇಕು, ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ. ``ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ಈ ಕ್ರಮವನರಿಯದೆ, ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ, ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ. ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಒಂದೆ ಕಂಬದ ನಡುವೆ ಹಲವು ಬಿದಿರುಗೂಡಿ, ಅಗಲಕ್ಕೆ ಹೊಲಬಾಯಿತ್ತು ನೋಡಾ. ಬಿಸಿಲ ಕಾಯದು, ಗಾಳಿಯ ತಡೆಯದು, ಮಳೆಗೆ ನೆನೆವುತ್ತಿದೆ ನೋಡಾ. ಈ ಸತ್ತಿಗೆಯ ಹರಕು ನಿಜಸತ್ಯವಾಗಿ, ಐಘಂಟೇಶ್ವರಲಿಂಗವನರಿದಲ್ಲದೆ ಸತ್ತಿಗೆಯ ಕಾವಿನ ಹಂಗು ಹರಿಯದು ನೋಡಾ.
--------------
ಸತ್ತಿಗೆ ಕಾಯಕದ ಮಾರಯ್ಯ
ಸಕ್ಕರೆಯು ಆಕಾರ, ರುಚಿಯು ನಿರಾಕಾರ; ಲಿಂಗವಾಕಾರ, ಜಂಗಮ ನಿರಾಕಾರ; ಬೆಣ್ಣೆ ಆಕಾರ, ಘೃತ ನಿರಾಕಾರ. ಆಕಾರ ಬಿಟ್ಟು ನಿರಾಕಾರವಿಲ್ಲ, ನಿರಾಕಾರ ಬಿಟ್ಟು ಆಕಾರವಿಲ್ಲ. ಲಿಂಗ ಜಂಗಮವೆಂಬುಭಯ ಶಬ್ದ ಒಂದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು. ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ. ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ. ಅದು ಕೂಗುವಾಗ ಜಾವವಳಿದು, ದಿನ ಸತ್ತು, ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ. ಕೂಗಿನ ದನಿಯ ಕೇಳಿ ಬೆಳಗಾಯಿತ್ತು, ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಭವಿಬೀಜವೃಕ್ಷದ ಫಲದೊಳಗೆ, ಭಕ್ತಿಬೀಜವೃಕ್ಷ ಪಲ್ಲವಿಸಿತ್ತು ! ಭಕ್ತಿಬೀಜವೃಕ್ಷದ ಫಲದೊಳಗೆ, ಶರಣಬೀಜವೃಕ್ಷ ಪಲ್ಲವಿಸಿತ್ತು ! ಶರಣಬೀಜವೃಕ್ಷದ ಫಲದೊಳಗೆ; ಕುಲನಾಶಕನಾದ ಶರಣ ಒಂದೆ ಬಸುರಲ್ಲಿ ಬಂದ_ ಬಂದು, ಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ. ಭವಿಭಕ್ತ ಭವಿಬೀಜವೃಕ್ಷದ ತಂಪು ನೆಳಲ ಬಿಟ್ಟು, ಕುಳ್ಳಿರ್ದಲ್ಲಿಯೆ; ಬಳಿ ಬಳಿಯೆ ಬಯಲಾದ ಶರಣ ! [ನಾದ]ಬಿಂದು ಬೀಜವಟ್ಟ ಹಾಳಾಗಿ ಹಾರಿಹೋದಲ್ಲಿ; ಇನ್ನೇನ ಹೇಳಲುಂಟು ? ಗುಹೇಶ್ವರನೆಂಬ ಲಿಂಗವನರಿದು ಭವಿಗೆ ಭವಿಯಾದಾತಂಗೆ ಇನ್ನೇನು ಪಥ (ಪದ?)ವುಂಟಯ್ಯಾ ?
--------------
ಅಲ್ಲಮಪ್ರಭುದೇವರು
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು, ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು. ಆರರ ತಿರುಳ ತೆಗೆದು ಒದೂರೊಳಗೆ ನಿಲಿಸಬೇಕು. ಐದರ ಮುಸುಕನುಗಿದು, ಐದರ ಕೆಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು, ನಾಲ್ಕರೊಳಗೆ ನಿಲ್ಲದೆ ಮೂರು ಮುಖವು ಒಂದೆ ಭಾವವಾಗಿರಬೇಕು. ಈ ಭೇದವನರಿಯದೆ ಸುಳಿವವರ ಕಂಡು ಬೆರಗಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನ್ನ ತಾನರಿವುದೇನೋ, ತನ್ನ ತಾ ಮರೆವುದು ಮತ್ತದೇನೋ? ಅರಿವುದು ಒಂದೆ, ತನ್ನನರಿಯಲುಂಟೆ? ಅರಿವು ತಾನೆ ತನ್ನ ಮರೆಯಲುಂಟೆ? ಆ ಅರಿವು ತಾನೆಂದರಿತಂಗೆ ಮೂರಿಲ್ಲ ಆರಿಲ್ಲ, ಎಂಟಿಲ್ಲ ಹದಿನೆಂಟಿಲ್ಲ. ಪುಸಿ ತನ್ನ ಭ್ರಾಮಕದಿಂದ ತೋರಿತ್ತು ನೋಡಾ. ಸೌರಾಷ್ಟ್ರ ಸೋಮೇಶ್ವರಲಿಂಗವಿಪ್ಪುದಕ್ಕೆ ಇದು ಚಿಹ್ನ.
--------------
ಆದಯ್ಯ
ಕೈಲಾಸ ಮರ್ತ್ಯಲೋಕ ಎಂಬರು. ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ? ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ. ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು. ಕೈಲಾಸದವರೆ ದೇವರ್ಕಳೆಂಬರು; ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು. ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು. ಇದ ಕಂಡು ನಮ್ಮ ಶರಣರು ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ, ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು, ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ, ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ. ಕೂಡಲಸಂಗಮದೇವ ಕೇಳಯ್ಯಾ, ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ.
--------------
ಬಸವಣ್ಣ
ಮಾಡುವ ಮಾಡಿಸಿಕೊಂಬ ಎರಡರ ಉಭಯ ಒಂದೆ. ಲಿಂಗವೊಂದೆ, ಜಂಗಮವೊಂದೆ, ಪ್ರಸಾದವೊಂದೆ. ಒಂದಾದಲ್ಲಿ ಎರಡಾಗಿ ಮಾಡುವ ಭಕ್ತ ನೀನೇ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->