ಅಥವಾ

ಒಟ್ಟು 173 ಕಡೆಗಳಲ್ಲಿ , 44 ವಚನಕಾರರು , 144 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ, ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ ನಿಂದಕ ದುರ್ಜನ ಭವಿಸಂಗ ಉಳ್ಳವರ ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ, ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷ ತಪ್ಪದು. ಇದಕ್ಕೆ ಹಿಂದೆ ನೆನೆಯಲಿಲ್ಲ, ಮುಂದೆ ನೋಡಲಿಲ್ಲ. ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ ಬಿಡಬೇಕು. ಅಂಗವ ಬಿಡದ ಭಂಡರ ಕಂಡಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ.
--------------
ಅಕ್ಕಮ್ಮ
ಎಂಟಕ್ಕೆ ಗಂಟಾಗಿ ನಂಟನ ತಾಯಿ ನಮ್ಮೂರಿಗೆ ಹೋದಳು. ಅರಸುಗಳೈವರು ಅರಸಿಯ ಮುದ್ದಾಡ ಹೋದರು. ರೂಪುಳ್ಳ ಹೆಂಡತಿ ಕಂಡಡೆ ಏನೆಂದೊ: ನಮ್ಮ ಕಪಿಲಸಿದ್ಧಮಲ್ಲಿನಾಥ ಉಂಬಡೆ ಓಗರವಿಲ್ಲವೆಂದನು.
--------------
ಸಿದ್ಧರಾಮೇಶ್ವರ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ? ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ? ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ, ಕಂಡು ಬಲ್ಲವರು ನೀವು ಹೇಳಿರೆ. ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ. ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ.
--------------
ಆದಯ್ಯ
ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ ಭೂಮಂಡಳಕ್ಕೆ ಅರಸಾಗಿ ಹುಟ್ಟುವನಾತನು. ಗಂಡನುಳ್ಳಮ್ಮನ ಕಂಡು ಒಡವೆರದಾತ ನರಕದಲ್ಲಿ ದಿಂಡುಗೆಡದಿಪ್ಪನೈ, ರಾಮಾನಾಥ.
--------------
ಜೇಡರ ದಾಸಿಮಯ್ಯ
ಹುತ್ತವ ಕಂಡಲ್ಲಿ ಹಾವಾಗಿ, ನೀರ ಕಂಡಲ್ಲಿ [ಒಳ್ಳೆ]ಯಾದವನ ಮಚ್ಚುವನೆ ಬಾರದ ಭವಂಗಳಲ್ಲಿ ಬರಿಸುವನಲ್ಲದೆ ಮಚ್ಚುವನೆ ಅಘೋರನರಕವನುಣಿಸುವನಲ್ಲದೆ, ಮಚ್ಚುವನೆ ಅಟಮಟದ ಭಕ್ತರ ಕಂಡಡೆ, ಕೋಟಲೆಗೊಳಿಸುವ ಕೂಡಲಸಂಗಮದೇವ.
--------------
ಬಸವಣ್ಣ
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ. ಪರಸ್ತ್ರೀಗೆ ಚಕ್ಷುದಗ್ಧವಾಗಿರಬೇಕು ಕೇಳಿರಣ್ಣಾ . ಪರಾರ್ಥಕ್ಕೆ ಹಸ್ತದಗ್ಧವಾಗಿರಬೇಕು ಕೇಳಿರಣ್ಣಾ . ಪರಾನ್ನಕ್ಕೆ ಜಿಹ್ವೆದಗ್ಧವಾಗಿರಬೇಕು ಕೇಳಿರಣ್ಣಾ . ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ . ಬಯಲಬ್ರಹ್ಮವ ನುಡಿವ ತರ್ಕಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣನು ಕೇಳಿರಣ್ಣಾ , ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬಯ್ಚಿಟ್ಟ ಬಯ್ಕೆಯ ಒಡೆಯ ಕೊಂಡುಹೋದಲ್ಲಿ ನೆಲ ಉಮ್ಮಳಿಸಿದರುಂಟೆ ಅಯ್ಯಾ? ತನ್ನ ವಿಶ್ವಾಸಕ್ಕೆ ಗುರುವೆಂದು ಕಂಡಡೆ, ನಿನ್ನಯ ಗುರುತನದ ಹರವರಿಯೆಂತಯ್ಯಾ? ಅಮೃತವ ಹೊಯಿದಿದ್ದ ಕುಡಿಕೆಯಂತಾಗಬೇಡ ಗುರುತನವಳಿದು ಸ್ವಯಗುರುವಾಗು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಇನ್ನು ಷಟ್ಸ್ಥಲದ ಭೇದವೆಂತೆಂದಡೆ : ಸದಾಚಾರದಲ್ಲಿ ನಡಹ, ಶಿವನಲ್ಲಿ ಭಕ್ತಿಯಾಗಿಹ, ಲಿಂಗಜಂಗಮ ಒಂದೆಯೆಂಬ ಬುದ್ಧಿಯಾಗಿಹ, ಲಾಂಛನಧಾರಿಗಳ ಕಂಡಡೆ ಒಂದಿಸುವುದೀಗ ಭಕ್ತಸ್ಥಲ ನೋಡಾ. ಇದಕ್ಕೆ ಈಶ್ವರ್ದೋವಾಚ : ``ಸದಾಚಾರಂ ಶಿವೇ ಭಕ್ತಿಃ ಲಿಂಗಜಂಗಮೇ ರತಿಃ | ಲಾಂಛನಂ ಚ ಶರಣ್ಯಂ ಚ ಭಕ್ತಿಸ್ಥಲಸುಬುದ್ಧಿಮಾನ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ. ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂ[ಗ]ಗೊಳಿಸಿದವನೆಂಬೆ. ತನುವ ಮರೆದು, [ಆ ತ]ನುವ ಕಂಡಡೆ, ಆತನ ಅರಿದವನೆಂಬೆನಯ್ಯಾ. ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಿವುಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ ಅಡಿಗಳಿಗೆ ನಾನೆರಗುವೆನಯ್ಯಾ. ಎಡೆದೆರಹಿಲ್ಲದೆ ಮೃಡನ ನೆನೆವವರ ಅಡಿಗಳಿಗೆ ನಾನೆರಗುವೆನಯ್ಯಾ. ಕಡುಗಲಿಗಳ ಕಂಡಡೆ ಪರಶಿವನೆಂಬೆನಯ್ಯಾ ; ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ.
--------------
ಅಮುಗೆ ರಾಯಮ್ಮ
ಹೊಳೆ ಕೆಂಜೆಡೆಯ ಮೇಲೆ ಎಳೆವೆಳದಿಂಗಳು, ಫಣಿಮಣಿ ಕರ್ಣಕುಂಡಲ ನೋಡವ್ವಾ ; ರುಂಡಮಾಲೆಯ ಕೊರಳವನ ಕಂಡಡೆ ಒಮ್ಮೆ ಬರಹೇಳವ್ವಾ ? ಗೋವಿಂದನ ನಯನ ಉಂಗುಟದ ಮೇಲಿಪ್ಪುದು, ಚೆನ್ನಮಲ್ಲಿಕಾರ್ಜುನದೇವನ ಕುರುಹವ್ವಾ.
--------------
ಅಕ್ಕಮಹಾದೇವಿ
ಮನದ್ಲಲ್ಲದ ಮಹಾಂತರು ಮನದಲ್ಲಿ ಘನಗೊಳಿಸಬಾರದ ಅಂಗನೆಯರ್ಲ! ಮನದ್ಲಲ್ಲದ ಕಾಯದ್ಲಲ್ಲದ ಮಹಾಂತರ ಕಂಡಡೆ, ಎನ್ನ ಮನ ಮನೋಹರವಾಯಿತ್ತಯ್ಯಾ, ಮಹಾದೇವ ಮದನಮರ್ದನ ಮಹಾಂತ ಮಹಿಮಾಶಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಡೆಯರ ಕಂಡಡೆ ಕಳ್ಳನಾಗದಿರಾ, ಮನವೆ. ಭವದ ಬಾರಿಯ ತಪ್ಪಿಸಿಕೊಂಬಡೆ ನೀನು ನಿಯತನಾಗಿ, ಭಯಭರಿತನಾಗಿ, ಅಹಂಕಾರಿಯಾಗದೆ ಶರಣೆನ್ನು, ಮನವೆ. ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ ಕಿಂಕಿಲನಾಗಿ ಬದುಕು, ಮನವೆ. 275
--------------
ಬಸವಣ್ಣ
ಇನ್ನಷ್ಟು ... -->