ಅಥವಾ

ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?
--------------
ಆದಯ್ಯ
ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ, ಚಿಕ್ಕದಂಡನಾಯಕ ಮುಖವಚನದಿಂದೆ ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ, ನವರತ್ನ ಖಚಿತ ಮಂಟಪವ ರಚಿಸಿ, ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ, ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ ಬೋದ್ಥಿಸಿದ ನಿಲುಕಡೆಯ ಸೂತ್ರವದೆಂತೆಂದಡೆ : ಅಯ್ಯ, ಮೂವತ್ತಾರು ತತ್ವಂಗಳಲ್ಲಿ ಸಂಬಂಧವಾದ ಅಷ್ಟಾವರಣಂಗಳ ಕೂಡಿ ನಾಲ್ವತ್ತುನಾಲ್ಕು ಚಿದಂಗತತ್ವಂಗಳೆಂದೆನಿಸಿ, ಅಯ್ಯ, ಇಷ್ಟಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಪ್ರಾಣಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಭಾವಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು ಕೂಡಲಾಗಿ ಐವತ್ತೇಳು ಮಹಾಪ್ರಣಮಂಗಳೆ ಚಿದ್ಛನಲಿಂಗಸ್ಥಲಂಗಳಾಗಿ ಶೋಬ್ಥಿಸುವಂಥ ಚಿದಂಗ-ಚಿದ್ಘನಲಿಂಗವ ಉಭಯಭಾವವಳಿದು ನೂರೊಂದುಸ್ಥಲವ ಸಂಬಂಧವಮಾಡಿ, ಮಾರ್ಗಾಚರಣೆಯ ಕುರುಹ ತೋರಿ, ಅಂತರಂಗದಲ್ಲಿ ಶೋಬ್ಥಿಸುವ ಲೋಮವಿಲೋಮದಳಂಗಳೆ ನೂರೆಂಟು ತೆರದ ಚಿದಂಗಂಗಳಾಗಿ, ಆ ದಳಂಗಳಲ್ಲಿ ಝಗಝಗಾಯಮಾನವಾಗಿ ಪ್ರಕಾಶಿಸುವ ಪ್ರಣಮಂಗಳೆ ನೂರೆಂಟು ತೆರದ ಚಿದ್ಘನಲಿಂಗಂಗಳಾಗಿ, ಒಳಗು-ಹೊರಗು ಎಂಬ ಉಭಯ ನಾಮ ರೂಪು ಕ್ರಿಯವನಳಿದು ಇನ್ನೂರ ಹದಿನಾರು ಸ್ಥಲವ ಸಂಬಂಧವ ಮಾಡಿ ಮೀರಿದ ಕ್ರಿಯಾಚರಣೆಯ ಕುರುಹ ತೋರಿ ಅನಾದ್ಥಿಗುರು ಬಸವರಾಜೇಂದ್ರನ ಪ್ರಸಿದ್ಧಪ್ರಸಾದನೆ ಮಾರ್ಗಕ್ರಿಯಾರೂಪವಾದ ನೂರೊಂದು ಸ್ಥಲಂಗಳಾಗಿ, ಅನಾದಿಜಂಗಮ ಪ್ರಭುರಾಜೇಂದ್ರನ ಶುದ್ಧಪ್ರಸಾದವೆ ಮೀರಿದ ಕ್ರಿಯಾರೂಪವಾದ ಇನ್ನೂರ ಹದಿನಾರುಸ್ಥಲಂಗಳಾಗಿ, ಇವರಿಬ್ಬರ ಮಹಾಪ್ರಸಾದವೆ ಘಟ್ಟಿಗೊಂಡು ಅನಾದಿಶರಣರೂಪವ ತಾಳಿ ಚೆನ್ನಬಸವಣ್ಣನೆಂಬಬ್ಥಿಧಾನದಿಂದ ಮಾರ್ಗಕ್ರಿಯಾಸ್ವರೂಪ ನೂರೊಂದುಸ್ಥಲವೆ ಆಚರಣೆಯಾಗಿ ಮೀರಿದ ಕ್ರಿಯಾಸ್ವರೂಪ ಇನ್ನೂರ ಹದಿನಾರುಸ್ಥಲವೆ ಸಂಬಂಧವಾಗಿ ಅನಾದಿಪರಶಿವರೂಪ ಶಿವಯೋಗಿಸಿದ್ಧರಾಮನ ಕರ-ಮನ-ಭಾವಂಗಳಲ್ಲಿ ಮಿಶ್ರಾಮಿಶ್ರಂಗಳೊಡನೆ ಅಗಣಿತ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ತ್ಯಾಗ-ಭೋಗ-ಯೋಗಾನುಸಂಧಾನದಿಂದ ಸಿದ್ಧರಾಮನ ಕರಸ್ಥಲದಲ್ಲಿ ಶುದ್ಧಪ್ರಸಾದ-ಇಷ್ಟಲಿಂಗವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಮನಸ್ಥಲದಲ್ಲಿ ಸಿದ್ಧಪ್ರಸಾದ-ಪ್ರಾಣಲಿಂಗವಾಗಿ ಮಂತ್ರ-ಧ್ಯಾನ-ಜಪ-ಸ್ತೋತ್ರಂಗಳ ಕೈಕೊಂಡು ಒಪ್ಪುತ್ತಿರ್ಪರು ನೋಡ. ಭಾವಸ್ಥಲದಲ್ಲಿ ಪ್ರಸಿದ್ಧಪ್ರಸಾದ-ಭಾವಲಿಂಗವಾಗಿ ಮನೋರ್ಲಯ ನಿರಂಜನ ಪೂಜಾಕ್ರಿಯಾನಂದ ಕೂಟವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಇಂತು ಸಂಬಂಧಾಚರಣೆಯ ಸ್ಥಲಕುಳಂಗಳ ಚಿದ್ಬೆಳಗಿನಲ್ಲಿ ಶೋಬ್ಥಿಸುವ ಬಸವಣ್ಣ, ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ ಪ್ರಮಥಗಣಂಗಳ ಮಹಾಪ್ರಸಾದ ಬೆಳಗಿಗೆ ಯೋಗ್ಯರಾಗಿ ದಗ್ಧಪಟನ್ಯಾಯ, ಉರಿವುಂಡ ಕರ್ಪೂರದಂತಾದೆವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ. ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸøಷ್ಟಿ ನಿಮಿತ್ತವಾಗಿ, ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗದಿಂದ ಆತ್ಮ ಜನನ ; ಆತ್ಮದಿಂದ ಭಾವ ಪುಟ್ಟಿತ್ತು. ಆ ಭಾವದಿಂದ ಮೋಹ ಪುಟ್ಟಿತ್ತು. ಆ ಮೋಹವೆಂದಡೆ, ಮಾಯವೆಂದಡೆ, ಆಶೆಯೆಂದಡೆ, ಮನವೆಂದಡೆ ಏಕಪರ್ಯಾಯಾರ್ಥ. ಇಂತಪ್ಪ ಮೋಹದಿಂದ ತ್ರೈಲೋಕ ಮೊದಲಾಗಿ ಚತುರ್ದಶಭುವನಂಗಳು ಪುಟ್ಟಿದವು. ಆ ಚತುರ್ದಶಭುವನದ ಮಧ್ಯದಲ್ಲಿ ಇರುವೆ ಮೊದಲು ಆನೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವರಾಶಿಯೊಳಗೆ ದೇವ-ದಾನವ-ಮಾನವರು ಮೊದಲಾದ ಹೆಣ್ಣು-ಗಂಡು, ಸಚರಾಚರಂಗಳೆಲ್ಲವು ಉತ್ಪತ್ತಿಯಾದವು. ಇಂತೀ ಎಲ್ಲವು ಪರಶಿವನ ನೆನವುಮಾತ್ರದಿಂದ ಮರೀಚಿಕಾಜಲದಂತೆ, ಸುರಚಾಪದಂತೆ, ತೋರಿ ತೋರಿ ಅಡಗುವವಲ್ಲದೆ ನಿಜವಲ್ಲ ಮಿಥ್ಯವೆಂದು ತಿಳಿದು ವಿಸರ್ಜಿಸಿ ಬಿಡುವಾತ ತಾನೇ ಪರಶಿವನೆಂದು ತಿಳಿವುದಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯ ! ಜ್ಞಾನೇಂದ್ರಿಯ, ಕರ್ಮೇಂದ್ರಿಯ, ವಿಷಯಂಗಳು, ಕರಣ ಮುಂತಾದವರ ಆಶಾಪಾಶಂಗಳನುಳಿದು ನುಡಿಯಂತೆ ನಡೆ, ನಡೆಯಂತೆ ನುಡಿ_ದೃಢಚಿತ್ತದಿಂದ ಘಟ್ಟಿಗೊಂಡು, ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರ_ಪ್ರಸಾದಿ_ಪ್ರಾಣಲಿಂಗಿ ಸ್ಥಲಂಗಳ ನೊಳಗುಮಾಡಿಕೊಂಡು, ಪರಮಪರಿಣಾಮಿ ಅಚಲಾನಂದಮೂರ್ತಿಯಾಗಿ, ಝಗಝಗಿಸಿ ನೆಲಸಿರ್ಪ ಶಿವಶರಣನಂತರಂಗದಲ್ಲಿ, ಚಿನ್ಮಯಪರನಾದ ಸ್ವಯಂಭು ಲೀಲೆಯಿಂ, ಮಿಶ್ರಾಮಿಶ್ರಂಗಳೊಡನೆ ಕೂಡಿದ, ಸಕಲ ತತ್ತ್ವಂಗಳನೊಳಕೊಂಡು, ಹದಿಮೂರುಸ್ಥಲಂಗಳ ಗರ್ಭೀಕರಿಸಿಕೊಂಡು, ಆರುಸಾವಿರದ ಒಂಬೈನೂರ ಹನ್ನೆರಡು ಮಂತ್ರ ಮಾಲೆಗಳ ಪಿಡಿದುಕೊಂಡು, ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಕ್ಷೀರಕ್ಷೀರ ಬೆರದು ಭಿನ್ನದೋರದ ಹಾಂಗೆ, ಏಕರೂಪಿನಿಂದೆ ಈಳನಸ್ವರೂಪ ಪ್ರಸಾದಲಿಂಗಮೂರ್ತಿಯಾಗಿ [ನೆಲಸಿರ್ಪುದು] ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಯ್ಯ ! ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು: ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ ತ್ರಿವಿಧ ಲಿಂಗಗಳು: ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು. ಕ್ರಿಯಾಗಮ, ಭಾವಾಗಮ, ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು, ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು: ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು. ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ ತ್ರಿವಿಧ ಗುರುಗಳು ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು: ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು. ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪು. ಜೀವಾತ್ಮ, ಅಂತರಾತ್ಮ, ಪರಮಾತ್ಮವೆಂಬ ತ್ರಿವಿಧಲಿಂಗಗಳು: ನಿರ್ದೇಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ ತ್ರಿವಿಧ ಗುರುಗಳು; ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು_ ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕವೆಂಬ ತ್ರಿವಿಧ ಲಿಂಗಂಗಳು, ಕ್ರಿಯಾನಿಷ್ಪ, ಭಾವನಿಷ್ಪ, ಜ್ಞಾನನಿಷ್ಪಯೆಂಬ ತ್ರಿವಿಧ ಗುರುಗಳು; ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು. ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು ಕೊಂಡದ್ದು ಪ್ರಸಾದ, ನಿಂದದ್ದು ಓಗರ, ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು; ಬಾಂಢಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು. ಈ ಮೂರು ಸ್ಥಲವು ಅನಾದಿ ಜಂಗಮದ ಮೀರಿದ ಕ್ರಿಯಾ ಸ್ವರೂಪವು. ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು. ಮುಂದುಳಿದ ಮೂರು ಸ್ಥಲಂಗಳಲ್ಲಿ ಭಾವಾಭಾವನಷ್ಟಸ್ಥಲವೆ ಮೂಲ ಗುರುಸ್ವರೂಪವಾಗಿ ಹದಿನೆಂಟು ಗುರುಸ್ಥಲಂಗಳನೊಳಕೊಂಡು ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ ಸ್ಪರ್ಶನೋದಕ, ಅವಧಾನೋದಕ, ಗುರುಪಾದೋದಕ, ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ ಆದಿ ಪ್ರಸಾದ, ನಿಚ್ಚಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ ! ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ ಹದಿನೆಂಟು ಚರಸ್ಥಲಂಗಳನೊಳಕೊಂಡು ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ ಪರಿಣಾಮೋದಕ, ನಿರ್ನಾಮೋದಕ, ಜಂಗಮಪಾದೋದಕ, ನಿತ್ಯೋದಕ, ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ, ಸದ್ಭಾವ ಪ್ರಸಾದ, ಜ್ಞಾನಪ್ರಸಾದ, ಸೇವ್ಯ ಪ್ರಸಾದ, ಅಚ್ಚ ಪ್ರಸಾದವಾಗಿ ತೆರಹಿಲ್ಲದೆ ಒಪ್ಪುತಿರ್ಪುದು ನೋಡ ! ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ ಅಪ್ಯಾಯನೋದಕ, ಹಸ್ತೋದಕ, ಲಿಂಗಪಾದೋದಕ, ಪಂಚೇಂದ್ರಿ[ಯ] ವಿರಹಿತಪ್ರಸಾದ, ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ ಅಂತ್ಯಪ್ರಸಾದ ಸಮಯಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ ! ಇಂತಪ್ಪ ಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸಿದಂಥ ಜಂಗಮಭಕ್ತರಾದ ಸಹಜಭಕ್ತರೆ ಪ್ರಸಾದಪಾದೋದಕ ಸಂಬಂಧಿಗಳು. ಇವರು ಸ್ವೀಕರಿಸಿದಂಥ ಪಾದೋದಕವೆ ನೇತ್ರದಲ್ಲಿ ಕರುಣಜಲ; ವಾಕಿನಲ್ಲಿ ವಿನಯಜಲ; ಅಂತರಂಗದಲ್ಲಿ ಸಮತಾಜಲ_ ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ, ತಿಳಿದುಪ್ಪ ಹೆರೆದುಪ್ಪವಾದಂತೆ ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ ಶುದ್ಧ ಪ್ರಸಾದವಾಗಿರ್ಪುದಯ್ಯ; ಪ್ರಾಣಲಿಂಗಕ್ಕೆ ಭೋಗಾಂಗವಾದ ಸಿದ್ಧ ಪ್ರಸಾದವಾಗಿರ್ಪುದಯ್ಯ. ಭಾವಲಿಂಗಕ್ಕೆ ಯೋಗಾಂಗವಾದ ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ. ಇಂತೀ ತ್ರಿವಿಧಪ್ರಸಾದಪಾದೋದಕವೆ ಶರಣನ ಶುದ್ಧ ಪ್ರಸಾದವೆ ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ ಸಿದ್ಧಪ್ರಸಾದವೆ ಪಾದದಲ್ಲಿ ಸಮಯ ಪ್ರಸಾದವಾಗಿರ್ಪುದಯ್ಯ ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ, ಕ್ರಿಯಾ `ಜಂಗಮಲಿಂಗ'ದ ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು. ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು ತೆಗೆದುಕೊಳ್ಳಲಾಗದು ಎಂಬ ಅಜ್ಞಾನಿಗಳ ಎನಗೆ ತೋರದಿರ ! ಗುಹೇಶ್ವರ !
--------------
ಅಲ್ಲಮಪ್ರಭುದೇವರು
ಅಯ್ಯ ! ಶ್ವೇತ, ಪೀತ, ಹರಿತ, ಮಾಂಜಿಷ*, ಕಪೋತ, ಮಾಣಿಕ್ಯ, ಹಂಡಬಂಡ, ಚಿತ್ರ ವಿಚಿತ್ರ, ಮೊದಲಾದ ಪಶುಗಳ ಮಧ್ಯದಲ್ಲಿ ಕ್ಷೀರ !; ಕ್ಷೀರ ಮಧ್ಯದಲ್ಲಿ ದಧಿ, ತಕ್ರ, ನವನೀತ, ಘೃತ, ರುಚಿ, ಚೇತನವಡಗಿರ್ಪಂತೆ, ಸಿಂಪಿಯ ಮಧ್ಯದಲ್ಲಿ ಚಿಜ್ಜಲ ಸ್ವಾತಿಮಿಂಚಿನ ಪ್ರಕಾಶಕ್ಕೆ ಘಟ್ಟಿಗೊಂಡು ಜಲರೂಪವಳಿದು ನಿರಾಕಾರವಾಗಿರ್ಪಂತೆ ಸಮಸ್ತ ಬೀಜಮಧ್ಯದಲ್ಲಿ ವೃಕ್ಷಂಗಳಡಗಿರ್ಪಂತೆ ವೃಕ್ಷಂಗಳ ಮಧ್ಯದಲ್ಲಿ ಬೀಜಂಗಳಡಗಿರ್ಪಂತೆ ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಗೋಪ್ಯವಾಗಿರ್ದು ಸಮಸ್ತ ಕುಲ_ಛಲ_ಮತಭ್ರಮಿತಂಗಳಿಂದ ತೊಳಲುವ ವೇದಾಂತಿ_ಸಿದ್ಧಾಂತಿ_ಭಿನ್ನಯೋಗಿ ಮೊದಲಾದ ಅದ್ವೈತಜಡಾತ್ಮರ ಕಣ್ಣಿಂಗೆ ಅಗೋಚರವಾಗಿರ್ಪುದು ನೋಡ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಆ ಪರಶಿವನೊಳಗಿರ್ದ ಜಗದಾತ್ಮನಲ್ಲಿ ತೋರುವ ಸತ್ಕರ್ಮ ದುಷ್ಕರ್ಮಕ್ಕೆ ಅಂಜಿ ಶಿವಧೋ ಶಿವಧೋ ಎಂದು ಮೊರೆಯಿಡಲು, ಶಿವ ಸಾಧುರಮುಖದಿಂದಲ್ಲಿ ಬಂದು ಗುರುವಿನ ಪಿಡಿಯೆಂದು ಹೇಳಲು, ಗುರುವೇ ಗುರುವೇ ಎಂದು ಮೊರೆಯಿಟ್ಟು ಗುರುವಿನ ಬಯಸುವ ಚಿದ್ಭ್ರಮೆ ಘಟ್ಟಿಗೊಂಡು ಮುಂದೆ ನಿಂದಿರಲು, ಆ ಮುಂದೆ ನಿಂತ ಗುರುವಿನ ಪ್ರಾರ್ಥಿಸಲು, ಆ ಶ್ರೀಗುರು ಆ ಶಿಷ್ಯನ ತನ್ನ ಕರುಣಜಲದಿಂದ ಮೈದೊಳೆದು, ವಿಭೂತಿಪಟ್ಟವ ಕಟ್ಟಿ, ರುದ್ರಾಕ್ಷಿಯ ಅಲಂಕರಿಸಿ, ಪಂಚಾಚಾರ್ಯರ ಸಾಕ್ಷಿಯಮಾಡಿ, ಶಿಕ್ಷಿಸಿ, ದೀಕ್ಷೆಯನೆಸಗಿ, ಮೋಕ್ಷದ ಹಣ್ಣಿನ ಬಯಕೆಗೆ ಬೀಜವಿದೆಯೆಂದು ಲಿಂಗವ ಕೊಟ್ಟು, ಜಂಗಮವ ಬೆರೆಸಿ, ಪಾದೋದಕವ ತರಳಿಸಿ, ಶಿವಪ್ರಸಾದವರಳಿಸಿ, ಮಂತ್ರಕಾಯವ ಮಾಡಿ, ಮುಕ್ತಿಪಕ್ವಗೈ ಎಂದು ಹೇಳಿ ಶಬ್ದಮುಗ್ಧವಾಗಲು, ಆ ಶಬ್ದಮುಗ್ಧವಾದ ಗುರುವಿನ ಹೃದಯವ ತಿಳಿಯದೇ, ತಾನ್ಯಾರೆಂಬುದನ್ನು ಅರಿಯದೆ, ಗುರುವಿನ ಹಾಡಿ ಹಾಡಿ, ವಿಭೂತಿಯ ಪೂಸಿ ಪೂಸಿ, ರುದ್ರಾಕ್ಷಿಯ ಧರಿಸಿ ಧರಿಸಿ, ಲಿಂಗವ ನೋಡಿ ನೋಡಿ, ಜಂಗಮದ ಆರಾಧನೆಯ ಮಾಡಿ ಮಾಡಿ, ಪಾದೋದಕವ ಕುಡಿದು ಕುಡಿದು, ಪ್ರಸಾದವನುಂಡುಂಡು, ಮಂತ್ರವನ್ನೋದೋದಿ, ಮಹತ್ವವ ಭ್ರಮಿಸಿ, ಮುಕ್ತಿಯ ಬಯಸಿ ಬಯಸಿ, ಕಿಸಬಾಯಿ ಆಗಿ ಆಗಿ ಹಸಗೆಟ್ಟು ಮುನ್ನಿಗಿಂ ಮಿಗಿಲಾಗಿ, ಭವಭವದಲ್ಲಿ ಮಸಿಮಣ್ಣಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
-->