ಅಥವಾ

ಒಟ್ಟು 10 ಕಡೆಗಳಲ್ಲಿ , 9 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯಾ, ಬಸವಣ್ಣನು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯಾ, ಚನ್ನಬಸವಣ್ಣನು ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯಾ, ಘಟ್ಟಿವಾಳ ಮುದ್ದಯ್ಯನು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯಾ, ಸಿದ್ಧರಾಮಯ್ಯನು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯಾ, ಮರುಳಶಂಕರದೇವರು, ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯಾ, ಪ್ರಭುದೇವರು. ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು ಪ್ರಮಥರು. ಗವರೇಶ್ವರಲಿಂಗದಲ್ಲಿ ಸುಖಿಯಾಗಿ ಬದುಕಿದೆನು ಕಾಣಾ, ಮಡಿವಾಳ ಮಾಚಯ್ಯ.
--------------
ಮೇದರ ಕೇತಯ್ಯ
ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು. ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು. ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು. ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು. ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು. ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು. ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು. ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು. ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು. ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು. ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು. ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು. ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು. ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು. ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು. ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು. ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು. ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಹಾವಿನಹಾಳ ಕಲ್ಲಯ್ಯ
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ. ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ. ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ ಮತ್ರ್ಯಕ್ಕೆ ಬಂದವನಲ್ಲ. ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ ಮಾಯಾವಾದದಿಂದ ಮತ್ರ್ಯಕ್ಕೆ ಬಂದನೆಂದು ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು. ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ; ಅದೇನು ಕಾರಣವೆಂದಡೆ ಬಸವಣ್ಣಂಗೆ ಭಕ್ತಿಯ ತೋರಲೆಂದು, ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು, ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ. ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ
--------------
ಅಮುಗೆ ರಾಯಮ್ಮ
ಆಮಧ್ಯಾಂತವ ಭೇದಿಸಿದ ಮಹಿಮನು, ನಾದಕ್ಕ್ಕತೀತನು. ಪರಬ್ರಹ್ಮದ ಭೇದಾದಿ ಭೇದವ ಪರತತ್ತ್ವ ಮೂಲವೆಯಾದ ಆಗುರು ಘಟ್ಟಿವಾಳ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ, ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ, ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ, ಅಜಗಣ್ಣನ ಆರೂಢ, ನಿಜಗುಣನ ಬೆರಗು, ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ, ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು, ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ, ರೇವಣಸಿದ್ಧಯ್ಯದೇವರ ನಿಷೆ*, ಸಿದ್ಧರಾಮತಂದೆಗಳ ಮಹಿಮೆ, ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷೆ*, ಏಕೋರಾಮಯ್ಯಗಳ ಆಚಾರನಿಷೆ*, ಪಂಡಿತಾರಾಧ್ಯರ ಸ್ವಯಂಪಾಕ, ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ, ಕೋಳೂರ ಕೊಡಗೂಸು, ತಿರುನೀಲಕ್ಕರು, ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಯ್ಯ, ಸದ್ಗುರು ಬಸವಣ್ಣನೆ ಜಗತ್ಪಾವನ ನಿಮಿತ್ಯಾರ್ಥವಾಗಿ ಮಾದಲಾಂಬಿಕೆಯ ಹೃನ್ಮಂದಿರದಲ್ಲಿ ನೆಲಸಿರುವ ನಿಷ್ಕಲ ಕೂಡಲಸಂಗಮೇಶ್ವರಲಿಂಗದ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ದವನದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ಚೆನ್ನಬಸವರಾಜದೇವನೆ ಪ್ರಮಥಗಣನಿಮಿತ್ಯಾರ್ಥವಾಗಿ ಅಕ್ಕನಾಗಲೆದೇವಿಯ ಚಿದಾಕಾಶದ ವರಚೌಕಮಧ್ಯದಲ್ಲಿ ನೆಲಸಿರ್ಪ ನಿಶ್ಶೂನ್ಯ ಕೂಡಲಚೆನ್ನಸಂಗನ ಚಿದ್ಗರ್ಭದಿಂದ ಸ್ವಾನುಭಾವಸದ್ವಾಸನೆಯನೆ ಬೀರುತ್ತ ಮರುಗದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ಪ್ರಭುಸ್ವಾಮಿಗಳೆ ಇವರಿಬ್ಬರ ಪರಿಣಾಮಕ್ಕೋಸ್ಕರವಾಗಿ ಕರವೂರ ಸುಜ್ಞಾನಿಗಳ ಪಶ್ಚಿಮಸ್ಥಾನದಲ್ಲಿ ನೆಲಸಿರುವ ನಿರಂಜನ ಗುರುಗುಹೇಶ್ವರನ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಪಚ್ಚೇದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ನೀಲಲೋಚನೆ, ಮುಕ್ತಾಯಕ್ಕಗಳು, ಮಹಾದೇವಿಯಕ್ಕಗಳು ಮತ್ರ್ಯಲೋಕದ ಮಹಾಗಣಂಗಳಿಗೆ ಭಕ್ತಿಜ್ಞಾನವೈರಾಗ್ಯ ಸತ್ಕ್ರಿಯಾ ಸದಾಚಾರದ ಪರಿವರ್ತನೆಯ ತೋರಬೇಕೆಂದು ಪರಶಿವಲಿಂಗದ ಚಿದ್ಗರ್ಭದಿಂದ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಕಸ್ತೂರಿ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮದ ಲೀಲೆಯಿಂದ ಮತ್ರ್ಯಕ್ಕವತರಿಸಿದರು ನೋಡಾ. ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳ ಶರಣ, ಮೋಳಿಗೆಮಾರಯ್ಯ ಶರಣ ಮೊದಲಾದ ಸಮಸ್ತ ಪ್ರಮಥಗಣಂಗಳೂ ಜಗತ್ಪಾವನಾರ್ಥ ಮಹಿಮಾ ಷಟ್ಸ್ಥಲಮಾರ್ಗ ನಿಮಿತ್ಯಾರ್ಥವಾಗಿ, ಬಸವೇಶ್ವರಸ್ವಾಮಿಗಳ ಆಜ್ಞಾಮಂಟಪ ತ್ರಿಕೂಟಸಂಗಮ ಸಿಂಹಾಸನದ ಮಧ್ಯದಲ್ಲಿ ನೆಲಸಿರ್ದ ಚಿದ್ಘನಮಹಾಲಿಂಗದ ಚಿದ್ಬೆಳಗಿನೊಳಗೆ ಅನಂತಕೋಟಿ ಬರಸಿಡಿಲೊಗೆದೋಪಾದಿಯಲ್ಲಿ ಸ್ವಾನುಭಾವ ಸದ್ವಾಸನೆಯ ಪ್ರಕಾಶದಿಂದ ಸಂಪಿಗೆ, ಮೊಲ್ಲೆ, ಮಲ್ಲಿಗೆ, ಜಾಜಿ, ಬಕುಳ, ಕರವೀರ, ಸುರಹೊನ್ನೆ, ಪಾರಿಜಾತ, ತಾವರೆ, ನೈದಿಲು ಮೊದಲಾದ ಸಮಸ್ತ ಪುಷ್ಪಂಗಳುದಯದಂತೆ, ಬಳಸಿ ಬ್ರಹ್ಮವಾಗಿ ಪರಶಿವನಪ್ಪಣೆವಿಡಿದು ಮತ್ರ್ಯಲೋಕಕ್ಕವತರಿಸಿದರು ನೋಡ. ಅಯ್ಯ, ವರಕುಮಾರದೇಶಿಕೇಂದ್ರನೆ, ಗುರುಬಸವೇಶ್ವರಸ್ವಾಮಿಗಳೆ ನಿಮ್ಮ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಚೆನ್ನಬಸವಸ್ವಾಮಿಗಳೆ ನಿಮ್ಮ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಅಲ್ಲಮಪ್ರಭುವೆ ನಿಮ್ಮ ಭಾವಸ್ಥಲದಲ್ಲಿ ಭಾವಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ನೀಲಾಂಬಿಕೆ-ಮುಕ್ತಾಯಕ್ಕ-ಮಹಾದೇವಿಯಕ್ಕಗಳೆ ನಿಮ್ಮ ತ್ರಿವಿಧಚಕ್ಷುವಿನಲ್ಲಿ ಕರುಣಾಜಲ-ವಿನಯಜಲ-ಸಮತಾಜಲ ಮೊದಲಾದ ಹತ್ತುತೆರದಿಂದ ಪರಮಗಂಗಾತೀರ್ಥವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳಯ್ಯ, ಶರಣ ಮೋಳಿಗಪ್ಪ ಮೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ ನಿನ್ನ ಹೃದಯಕಮಲ ಮಧ್ಯದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ ಮೊದಲಾದ ಹನ್ನೊಂದು ತೆರದಿಂದ ಮಹಾಚಿದ್ಘನ ಪ್ರಸಾದವಾಗಿ ಚುಳಕಮಾತ್ರದಿಂದ ನೆಲಪಿರ್ಪರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಬಂದು ಗಂಧಪದಾರ್ಥವ ಕೈಕೊಂಡನಯ್ಯಾ ಬಸವಣ್ಣ. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಬಂದು ರುಚಿಪದಾರ್ಥವ ಕೈಕೊಂಡನಯ್ಯಾ ಚನ್ನಬಸವಣ್ಣ. ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಬಂದು ರೂಪಪದಾರ್ಥವ ಕೈಕೊಂಡನಯ್ಯಾ ಘಟ್ಟಿವಾಳ ಮುದ್ದಯ್ಯ. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಬಂದು ಸ್ಪರುಶನಪದಾರ್ಥ ಕೈಕೊಂಡನಯ್ಯಾ ಸಿದ್ಧರಾಮಯ್ಯ. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಬಂದು ಶಬ್ದಪದಾರ್ಥವ ಕೈಕೊಂಡನಯ್ಯಾ ಮರುಳಶಂಕರದೇವ. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಬಂದು ಸಕಲಪದಾರ್ಥವ ಕೈಕೊಂಡನಯ್ಯಾ ಪ್ರಭುದೇವ. ನೋಟದಲ್ಲಿ ಅನುಮಿಷ, ಕೂಟದಲ್ಲಿ ಅಜಗಣ್ಣ ಭಾವದಲ್ಲಿ ಬಾಚಿರಾಜಯ್ಯ, ಮನ ದೃಢವೆ ಮೋಳಿಗೆ ಮಾರಯ್ಯ. ಡೋಹರ ಕಕ್ಕಯ್ಯ ಕಿನ್ನರಿ ಬ್ರಹ್ಮಯ್ಯ ಸೊಡ್ಡಳ ಬಾಚರಸ ಹಡಪದಪ್ಪಣ್ಣ ಮಡಿವಾಳ ಮಾಚಯ್ಯ ಮುಖ್ಯವಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಶ್ರೀಪಾದವನರ್ಚಿಸಿ ಪೂಜಿಸಿ ಸುಖಿಯಾದೆನಯ್ಯಾ ಅಮರಗುಂಡದ ಮಲ್ಲಿಕಾರ್ಜುನ.
--------------
ಪುರದ ನಾಗಣ್ಣ
ಅಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ ಹಿರಿಯರ ಗಂಡ, ಕಾಲನ ಗಂಡ ಕರ್ಮದ ಗಂಡ ಲಿಂಗವಿಡಿದು ಸಾವ ಹಿರಿಯರ ಗಂಡ ಗುಹೇಶ್ವರಾ ನಿಮ್ಮ ಶರಣ ಘಟ್ಟಿವಾಳ ಅಲ್ಲಮನಂತಿಂತೆಂಬವರ ಗಂಡ.
--------------
ಅಲ್ಲಮಪ್ರಭುದೇವರು
ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು. ಎನ್ನ ಸ್ವಾದಿಷಾ*ನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು. ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಘಟ್ಟಿವಾಳ ಮದ್ದಯ್ಯನು. ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು. ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು. ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು. ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ. ಸ್ವಾಧಿಷಾ*ನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ. ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ. ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ. ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು. ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು. ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಹಡಪದ ರೇಚಣ್ಣ
-->