ಅಥವಾ

ಒಟ್ಟು 12 ಕಡೆಗಳಲ್ಲಿ , 4 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಘ್ರಾಣದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಗಂಧವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಜಿಹ್ವೆಯ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರಸವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ನೇತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರೂಪವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ತ್ವಕ್ಕಿನ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಸ್ಪರ್ಶನವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಶ್ರೋತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಶಬ್ದವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕುರಣಿಸುವಾತನು ನೀನೆ ಅಯ್ಯಾ. ಎನ್ನ ಹೃದಯದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧ ತೃಪ್ತಿಯೆಂಬ ಭಕ್ತಿಪದಾರ್ಥವ ಕೈಕೊಂಡು, ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ ಎಂಬುದನರಿಯರು. ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುವೇ ಪರಶಿವಲಿಂಗ, ಪರಶಿವಲಿಂಗವೇ ಜಂಗಮ, ಜಂಗಮವೇ ಪರಶಿವಲಿಂಗ. ಗುರು ಲಿಂಗ ಜಂಗಮ ತ್ರಿವಿಧವೂ ಪರಶಿವಲಿಂಗವೆಂದರಿದು ಮನೋವಾಕ್ಕಾಯವನೊಂದು ಮಾಡಿ ತನು ಮನ ಧನವನೊಂದು ಮಾಡಿ ಆ ಒಂದುಮಾಡಿದ ಮನವನೂ, ಆ ತ್ರಿವಿಧವನೊಂದುಮಾಡಿದ ಪರಶಿವಲಿಂಗದಲ್ಲಿ ಅರ್ಪಿಸಲು ಆ ಲಿಂಗಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಪರಶಿವಲಿಂಗ. ಇಂತು ಬೀಜ-ವೃಕ್ಷ, ಪುಷ್ಪ-ಫಲ ಒಂದೇ. ಪರಶಿವನು ಭಕ್ತಜನಂಗಳ ರಕ್ಷಿಸಲೋಸುಗ[ರ] ದೇವದಾನವ ಮಾನವರಿಗೆ ಕೃಪೆಮಾಡಿ ದೀಕ್ಷೆಯ ಮಾಡಲೋಸುಗರ, ಬಹುವಿಧದಲ್ಲಿ ಶ್ರೀಗುರುರೂಪಾದನು. ಆದರೆ ಶ್ರೀಗುರು ಒಂದೇ ವಸ್ತು, ಪರಶಿವನು. `ಸ್ಥಾವರಂ ಜಂಗಮಾಧಾರಂ' ಎಂದುದಾಗಿ, ಪರಶಿವನು ಶಕ್ತಿವಿನೋದಕಾರಣ ಸದ್ಭಕ್ತಜನಂಗಳಿಗೆ ಪ್ರಸನ್ನವಾಗಲೋಸುಗರ, ದೇವ ದಾನವ ಮಾನವರಲ್ಲಿ ವಿನೋದಿಸಿ ಉತ್ಪತ್ತಿಸ್ಥಿತಿಲಯವ ಮಾಡಲೋಸುಗರ, ಅನೇಕತತ್ತ್ವರೂಪಾದನು ಸರ್ವತತ್ತ್ವರೂಪು ಪರಶಿವನೊಂದೇ ವಸ್ತು, `ತತ್ತ್ವಂ ವಸ್ತುಕಂ' ಎಂದುದಾಗಿ, `ನಾನಾರೂಪಧರಂ ದೇವಂ' ಎಂದುದಾಗಿ, ಪರಶಿವನೊಂದೇ ವಸ್ತು. ಸರ್ವಲೋಕವ ರಕ್ಷಿಸಲೋಸುಗರ, ತನು ಮನ ಧನವನೂ ತನ್ನಲ್ಲಿಗೆ ತೆಗೆದುಕೊಂಡು ಪಾದೋದಕ ಪ್ರಸಾದವನಿತ್ತು ರಕ್ಷಿಸಲೋಸುಗರ, ನಾನಾರೂಪು ಬಹುವಿಧಶೀಲದಿಂ ಜಂಗಮರೂಪಾದನು. `ದಂಡಕ್ಷೀರದ್ವಯಂ ಹಸ್ತೇ' ಎಂದುದಾಗಿ, ಪರಶಿವನೊಂದೇ ವಸ್ತು. `ಯೇ ರುದ್ರಲೋಕಾದವತೀರ್ಯ ರುದ್ರಾ ಎಂದುದಾಗಿ, ಜಂಗಮ ಪರಶಿವನೂ ಒಂದೇ ವಸ್ತು. ಪರಶಿವನ ಪ್ರಸನ್ನವೇ ಪ್ರಸಾದ, ಗುರುಲಿಂಗಜಂಗಮ ತ್ರಿವಿಧಲಿಂಗದಲ್ಲಿ ತನು ಮನ ಧನವನೂ ಸರ್ವಪದಾರ್ಥ ಸರ್ವದ್ರವ್ಯವನೂ ನೇತ್ರದ ಕೈಯಲೂ ಘ್ರಾಣದ ಕೈಯಲೂ ಜಿಹ್ವೆಯ ಕೈಯಲೂ ಪರುಷಭಾವ ಮನವಾಕ್ಕಿನ ಕೈಯಲೂ ಈ ಪ್ರಕರದಿಂದೆಲ್ಲಾ ತೆರದಲ್ಲಿ ಸಕಲನಿಷ್ಕಲವನೆಲ್ಲವನೂ ಅರ್ಪಿಸಿದಲ್ಲಿ ಆ ಪರಶಿವನು ಅನೇಕ ವಿಧದಲ್ಲಿ, ಅನೇಕ ಮುಖದಲ್ಲಿ, ಅರ್ಪಿತವ ಕೈಕೊಂಡು ಪ್ರಸನ್ನವಾಗಲು, ಸದ್ಬಕ್ತಂಗೆ ಬಹುವಿಧ: ಗುರುಮುಖದಲ್ಲಿ ಶುದ್ಧಪ್ರಸಾದ, ಲಿಂಗಮುಖದಲ್ಲಿ ಸಿದ್ಧಪ್ರಸಾದ, ಜಂಗಮಮುಖದಲ್ಲಿ ಪ್ರಸಿದ್ಧಪ್ರಸಾದ. ಗುರುಮುಖದಲ್ಲಿ ನೇತ್ರ ಪ್ರಸಾದ, ಶ್ರೋತ್ರ ಪ್ರಸಾದ, ಘ್ರಾಣ ಪ್ರಸಾದ, ಜಿಹ್ವೆ ಪ್ರಸಾದ, ಪರುಶನ ಪ್ರಸಾದ, ಭಾವ ಪ್ರಸಾದ, ಮನ ಪ್ರಸಾದ ವಾಕ್ ಪ್ರಸಾದ, ಕಾಯ ಪ್ರಸಾದ ಇವುವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಭಕ್ತ ಮಹೇಶ್ವರ ಪ್ರಸಾದಿ ಮನವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಪ್ರಾಣಲಿಂಗಿ ಶರಣನೈಕ್ಯವಾಗಿ ನಡೆದರಯ್ಯಾ ಕ್ರಿಯಾನುಭಾವವಿಡಿದು. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಈ ಭೇದವನು ಭೇದಿಸಬಲ್ಲಡೆ ಇಂದೇ ಇಹವಿಲ್ಲ ಪರವಿಲ್ಲ. ಈ ಒಂದೇ ನಾನಾವಿಧಪ್ರಸಾದ ಅನೇಕದಿನದಿಂ ಪ್ರಸನ್ನನಾಗಲು ಪ್ರಸಾದ ಒಂದೇ ವಸ್ತು ಪರಶಿವನು. ಇದು ಕಾರಣ, ಶ್ರೀಗುರು ಪರಶಿವನು ಜಂಗಮವು ಪ್ರಸಾದವು ಒಂದೇ ಕಾಣಿರಣ್ಣಾ. ಚತುಷ್ಟವನು ವೇದ ಶಾಸ್ತ್ರ ಆಗಮ ಪುರಾಣದಿಂ ವಿಚಾರಿಸಲು ಒಂದೇ ವಸ್ತು. ಆ ವಿಚಾರವ ನಂಬದೇ ಕೆಡಬೇಡ. ಜಂಗಮವೆಯಿದು `ಸ ಭಗವಾನ್ ಯಸ್ಯ ಸರ್ವೇ' ಎಂದುದಾಗಿ `ಸರ್ವಕಾರಣಕಾರಣಾತ್' ಎಂದು ಪರಶಿವಲಿಂಗವಲ್ಲದೆ ಇಲ್ಲ. ಆತನ ಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಯದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಭಾವದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ನೇತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ ಶ್ರೀತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಘ್ರಾಣದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಜಿಹ್ವೆಯ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಸ್ಪರ್ಶನದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಲಿಂಗಮಧ್ಯೇ ಶರಣ, ಶರಣಮಧ್ಯೇ ಲಿಂಗ. ಅಲ್ಲಲ್ಲಿ ತಾಗಿದ ಸುಖವೆಲ್ಲ ಲಿಂಗಾರ್ಪಿತವಾಗದಿದ್ದಡೆ ಕೂಡಲಚೆನ್ನಸಂಗಯ್ಯನಲ್ಲಿ ಅವರ ಸಹಜರೆಂತೆಂಬೆ ?
--------------
ಚನ್ನಬಸವಣ್ಣ
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ* ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಟದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ಎನ್ನ ಘ್ರಾಣದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಜಿಹ್ವೆಯ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ನೇತ್ರದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ತ್ವಕ್ಕಿನ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಶ್ರೋತ್ರದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಹೃದಯದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಸರ್ವಾಂಗದ ಪರಿಣಾಮ ನಿಮಗರ್ಪಿತವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಘ್ರಾಣದ ಬಾಗಿಲಲ್ಲಿರ್ದು, ಸುವಾಸನೆಯ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ಜಿಹ್ವೆಯ ಬಾಗಿಲಲ್ಲಿರ್ದು, ಸುರುಚಿಯ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ನೇತ್ರದ ಬಾಗಿಲಲ್ಲಿರ್ದು, ಸುರೂಪ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ತ್ವಕ್ಕಿನ ಬಾಗಿಲಲ್ಲಿರ್ದು, ಸುಸ್ಪರ್ಶವ ಮಾಡಿ ಆ ಸ್ಪರ್ಶನಸುಖವ ಸುಖಿಸುವಾತ ನೀನಯ್ಯಾ. ಎನ್ನ ಶ್ರೋತ್ರದ ಬಾಗಿಲಲ್ಲಿರ್ದು ಸುಶಬ್ದ ಸುಖಂಗಳ ಭೋಗಿಸುವಾತ ನೀನಯ್ಯಾ. ಎನ್ನ ಮನದ ಬಾಗಿಲಲ್ಲಿರ್ದು ಪಂಚೇಂದ್ರಿಯಂಗಳನರಿದು ಸುಖಿಸುವ ಅರಿವಿನಮೂರ್ತಿ ನೀನಯ್ಯಾ ಅದೇನು ಕಾರಣವೆಂದಡೆ; ನೀನಾಡಿಸುವ ಜಂತ್ರದ ಬೊಂಬೆ ನಾನೆಂದರಿದ ಕಾರಣ. ನಿಮ್ಮ ಕರಣಂಗಳೆ ಎನ್ನ ಹರಣಂಗಳಾಗಿ, ಎನ್ನ ಹರಣಂಗಳೆ ನಿಮ್ಮ ಕಿ(ಕ?)ರಣಂಗಳಾಗಿ ಕೂಡಲಚೆನ್ನಸಂಗಮದೇವಾ ನೀನಾಡಿಸಿದಂತೆ ನಾನಾಡಿದೆನಯ್ಯಾ.
--------------
ಚನ್ನಬಸವಣ್ಣ
ಎನ್ನ ಘ್ರಾಣದ ಕೊನೆಯಲ್ಲಿ ನೀವು ಗಂಧಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ಘ್ರಾಣದ ಕೊನೆಯಲ್ಲಿ ನಾನು ಗಂಧಪ್ರಸಾದವ ಗ್ರಹಿಸುತಿರ್ಪೆನಯ್ಯಾ. ಎನ್ನ ಜಿಹ್ವೆಯ ಕೊನೆಯಲ್ಲಿ ನೀವು ರುಚಿಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ಜಿಹ್ವೆಯ ಕೊನೆಯಲ್ಲಿ ನಾನು ರುಚಿಪ್ರಸಾದವ ಗ್ರಹಿಸುತಿರ್ಪೆನಯ್ಯಾ. ಎನ್ನ ನೇತ್ರದ ಕೊನೆಯಲ್ಲಿ ನೀವು ರೂಪುಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ನೇತ್ರದ ಕೊನೆಯಲ್ಲಿ ನಾನು ರೂಪುಪ್ರಸಾದವ ಗ್ರಹಿಸುತಿರ್ಪೆನಯ್ಯಾ. ಎನ್ನ ತ್ವಕ್ಕಿನ ಕೊನೆಯಲ್ಲಿ ನೀವು ಸ್ಪರ್ಶನಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ತ್ವಕ್ಕಿನ ಕೊನೆಯಲ್ಲಿ ನಾನು ಸ್ಪರ್ಶನಪ್ರಸಾದವ ಗ್ರಹಿಸುತಿರ್ಪೆನಯ್ಯಾ. ಎನ್ನ ಶ್ರೋತ್ರದ ಕೊನೆಯಲ್ಲಿ ನೀವು ಶಬ್ದಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ಶ್ರೋತ್ರದ ಕೊನೆಯಲ್ಲಿ ನಾನು ಶಬ್ದಪ್ರಸಾದವ ಗ್ರಹಿಸುತಿರ್ಪೆನಯ್ಯಾ. ಎನ್ನ ಹೃದಯದ ಕೊನೆಯಲ್ಲಿ ನೀವು ತೃಪ್ತಿಪದಾರ್ಥವ ಗ್ರಹಿಸುತಿರ್ಪಿರಿ: ನಿಮ್ಮ ಹೃದಯದ ಕೊನೆಯಲ್ಲಿ ನಾನು ತೃಪ್ತಿ ಪ್ರಸಾದವ ಗ್ರಹಿಸುತಿರ್ಪೆನಯ್ಯಾ. ಇಂತೆನ್ನ ಷಡಿಂದ್ರಿಯಂಗಳ ಸುಖವು ನಿಮಗರ್ಪಿತವಾಯಿತ್ತು. ನಿಮ್ಮ ಷಡಿಂದ್ರಿಯಂಗಳು ಎನಗೆ ಪ್ರಸನ್ನಪ್ರಸಾದವಾಯಿತ್ತಾಗಿ ಎನ್ನ ಜೀವಭಾವದ ಶನಿ ಹಾಳಾಗಿ ಹೋಯಿತ್ತಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಂಗಳ ಕಾಂತಿಯನರಿಯದೆ ಅರ್ಪಿತವೆಲ್ಲಿಹದೊ? ಕಾಯದ ಕಳೆಯನರಿಯದೆ ಅರ್ಪಿತವೆಲ್ಲಿಹದೊ? ಕರ್ಣದ ಹೊಳಪನರಿಯದೆ ಅರ್ಪಿತವೆಲ್ಲಿಹದೊ? ನಾಲಿಗೆಯ ಸುಖವಕಾಣದೆ ಅರ್ಪಿತವೆಲ್ಲಿಹದೊ? ಘ್ರಾಣದ ಪ್ರಾಣವನರಿಯದೆ ಅರ್ಪಿತವೆಲ್ಲಿಹದೊ? ಹೃದಯದ ಬೆಳಗನರಿಯದೆ ಅರ್ಪಿತವೆಲ್ಲಿಹದೊ? ಅಸಮ ಗುರುನಿರಂಜನ ಚನ್ನ ಬಸವಲಿಂಗದ ಸುಳುಹಕಾಣದ ಅರ್ಪಿತವೆಲ್ಲಿಹದೊ?
--------------
ದೇಶಿಕೇಂದ್ರ ಸಂಗನಬಸವಯ್ಯ
-->