ಅಥವಾ

ಒಟ್ಟು 380 ಕಡೆಗಳಲ್ಲಿ , 32 ವಚನಕಾರರು , 287 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರಂಜನಸ್ಥಲದಲ್ಲಿ ನಿರಾವರಣವಾದ ಶರಣನು ನಿರಾಕುಳ ನಿರಾಮಯ ನಿಃಶೂನ್ಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು. ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು. ಅದೇ ಭಾವದಲ್ಲಿ ತೋರಿತ್ತು ; ಅದೇ ಪ್ರಾಣವಾಯಿತ್ತು ; ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು. ಅದಕ್ಕೆ ವಾಯುವೇ ಅಂಗವಾಗಿ ಕರ್ಮಾದ್ಥೀನಮೆನಿಸಿ, ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು, ಅನೇಕಜನ್ಮ ಸಂಚಿತಕರ್ಮ ಸಮೆದು, ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ, ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ, ತಾನೇ ಪ್ರಸನ್ನಮಾಗಿರ್ದ ಮಹಾಜಾÕನಶಕ್ತಿಯಂ ಕಂಡದರೊಳಗೆ ಕೂಡಿ, ಸಾಧಕಕ್ಕೊಳಗಾದ ಮನವೇ ಘನವಾಯಿತ್ತು. ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು, ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಬೆಟ್ಟದ ತುದಿಯ ಮೇಲೆ ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ. ಆ ಕೋಗಿಲೆಯ ಇರುವೆ ನುಂಗಿ, ಆ ಇರುವೆಯ ನಿರ್ವಯಲು ನುಂಗಿ, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣುವಿನಲ್ಲಿ ಎಯ್ದಿ, ವಿಷ್ಣು ರುದ್ರನಲ್ಲಿ ಎಯ್ದಿ, ರುದ್ರ ಈಶ್ವರನಲ್ಲಿ ಎಯ್ದಿ, ಈಶ್ವರ ಸದಾಶಿವನಲ್ಲಿ ಎಯ್ದಿ, ಸದಾಶಿವ ಪರಶಿವನಲ್ಲಿ ಎಯ್ದಿ, ಪರಶಿವ ನಿತ್ಯನಿಜದಲ್ಲಿ ಎಯ್ದಿ, ಅತ್ತತ್ತಲೆ, ನಿರಾಕುಳ ನಿರಂಜನ ನಿಷ್ಪತಿ ನಿರವಯ ತಾನೇ ನೋಡಾ. ಮನೋಲಯವಾಯಿತ್ತು, ಭಾವ ನಿಃಶೂನ್ಯವಾಯಿತ್ತು ನೆನಹು ನಿಷ್ಪತಿಯಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊದ್ರ್ವಮುಖವಾದ, ಅನಂತೇಶನೆಂಬ ವಾಸುಕಿಯ ಶಿರದ ಮೇಲಿಹ ಅಷ್ಟದಳಾಬ್ಜಮಧ್ಯದಲ್ಲಿ, ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ ಲಿಂಗದೇಹವು. ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ ತಾನೇ ಇಷ್ಟಲಿಂಗವು. ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೇಹಿ, ನಿಜಗುರು ಸ್ವತಂತ್ರಲಿಂಗೇಶ್ವರನ ಶರಣನುಪಮಾತೀತನು.
--------------
ಸ್ವತಂತ್ರ ಸಿದ್ಧಲಿಂಗ
ಓಂಕಾರವೆಂಬ ಉಲುಹಿನಲ್ಲಿ ಪ್ರಣವಸೋಹಂಕಾರವಿಡಿದು ಆಚರಿಸುತಿದ್ದನಯ್ಯ ಆ ಶರಣನು. ಆ ಶರಣಂಗೆ ಇಹಲೋಕವೆಂದಡೇನು? ಪರಲೋಕವೆಂದಡೇನು? ಇಹಪರವನೊಳಕೊಂಡು ತಾನು ತಾನಾದ ಭೇದವ ತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ, ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ, ಬೇರೆ ಜ್ಞಾನವುಂಟೇ? ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ ನಿತ್ಯ ತೃಪ್ತ ನಿಜಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು, ಆಕಾಶ ಆತ್ಮವಿಲ್ಲದಂದು, ರವಿ ಶಶಿಗಳಿಲ್ಲದಂದು, ಸಪ್ತೇಳುಸಾಗರವಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿಶ್ಚಿಂತ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ ಅನೇಕ ವ್ಯವಹಾರವಾದಂತೆ ಜೀವನೆ ಜಗ, ಜಗವೆ ಜೀವನಾದ. ಆದಿ ಅನಾದಿ ವಿಚಿತ್ರತರವಾದ ಮಾಯೆ. ಈ ಮಾಯೆಯಿಂದ ತನಗೆ ತಾನೇ ಪ್ರತಿಬಿಂಬ. ಆ ಮಾಯಾ ಪ್ರತಿಬಿಂಬವೆ ತನಗೆ ಸಂಸಾರ. ಆ ಸಂಸಾರವನು ಆ ಪರಮಾತ್ಮನು ಕೂಡಿಯೂ ಕೂಡದೆ ಆ ಘಟ ಜಲ ಚಂದ್ರಮನ ಹಾಂಗೆ ವರ್ತಿಸುತ್ತಿಹನು. ಅದೆಂತೆಂದಡೆ: ``ಏಕ ಏವ ಹಿ ಭೂತಾತ್ಮಾಭೂತೇ ಭೂತೇ ವ್ಯವಸ್ಥಿತಃ| ಏಕಧಾ ಬಹುಧಾಚೈವ ದೃಶ್ಯತೇ ಜಲಚಂದ್ರವತ್||' ಎಂದುದಾಗಿ, ಸಟೆಯ ಮಾಯೆಯ ಸಟೆಯೆಂದು ಕಳೆದುಳಿದ ದ್ಥೀರ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮಹಾಘನ ಅಪರಂಪರ ಅಗಮ್ಯ ಅಗೋಚರ ಅಪ್ರಮಾಣ ನಿಶ್ಚಿಂತ ನಿರಾಕುಳ ನಿರ್ಭರಿತ ನಿರಂಜನ ನಿರಪೇಕ್ಷ ನಿರಾಮಯ ನಿಃಶೂನ್ಯ ನಿರಾಧಾರ ನಿಷ್ಪತಿ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಣವಸ್ವರೂಪಮಾದ ಪರಬ್ರಹ್ಮವೇ ತಾನು ತನ್ನ ನಿಜಲೀಲಾನಿಮಿತ್ತ ತ್ರಿವರ್ಣರೂಪಕಮಾಗಿ, ಅದೇ ಹರಿಹರಬ್ರಹ್ಮಸ್ವರೂಪಮಾಗಿ, ಹರಿಯೇ ಶರೀರಮಾಗಿ, ಹರನೇ ಜೀವಮಾಗಿ, ಬ್ರಹ್ಮನೇ ಮನಸ್ಸಾಗಿ, ಆ ಬ್ರಹ್ಮಸ್ವರೂಪಮಾದ ಕಲೆಯೇ ಶರೀರಕ್ಕೆ ಶಕ್ತಿಯಾಗಿ, ಆ ಶರೀರಸ್ವರೂಪಮಾದ ಬಿಂದುವೇ ಪ್ರಾಣಕ್ಕೆ ಶಕ್ತಿಯಾಗಿ, ಆ ಪ್ರಾಣಸ್ವರೂಪಮಾದ ನಾದವೇ ಮನಶ್ಶಕ್ತಿಯಾಗಿ, ಆ ಪ್ರಾಣಕ್ಕೆ ನಾಸಿಕವೇ ಸ್ಥಾನಮಾಗಿ, ಮನಸ್ಸಿಗೆ ಜಿಹ್ವೆಯೇ ಸ್ಥಾನಮಾಗಿ, ಶರೀರಕ್ಕೆ ನೇತ್ರವೇ ಸ್ಥಾನಮಾಗಿ, ತನು ಸ್ಪರುಶನಸ್ವರೂಪು, ಮನಸ್ಸು ಶಬ್ದಸ್ವರೂಪು, ಪ್ರಾಣ ಆತ್ಮಸ್ವರೂಪು. ಈ ತನು ಮನಃಪ್ರಾಣಂಗಳಿಂದೊಗೆದ ಆತ್ಮಾದಿ ಷಡ್ಭೂತಂಗಳಿಗೆ ಆತ್ಮಾದಿ ಷಡ್ಭೂತವೇ ಕಾರಣಮಾಗಿ, ಜೀವನದಲ್ಲಿ ಹುಟ್ಟಿದ ಸತ್ವಗುಣವು ಶರೀರವನಾವರಿಸಿ, ಆ ಜೀವನಿಗೆ ತಾನೇ ಸ್ಥಿತಿಕರ್ತೃವಾಯಿತ್ತು. ಶರೀರದಲ್ಲಿ ಹುಟ್ಟಿದ ತಮೋಗುಣವು ಜೀವನನಾವರಿಸಿ, ಆ ಶರೀರಕ್ಕೆ ತಾನೇ ಸಂಹಾರಕರ್ತೃವಾಯಿತ್ತು. ಆ ಶರೀರ ಜೀವಸಂಗದಿಂದೊಗೆದ ಅಹಂಕಾರಸ್ವರೂಪಮಾದ ರಜೋಗುಣವು ಮನಮನಾವರಿಸಿ, ಈ ಎರಡಕ್ಕೂ ತಾನೇ ಸೃಷ್ಟಿಕರ್ತೃವಾಯಿತ್ತು. ಆ ನಾದವೇ ವಾಗ್ದೇವಿಯಾಗಿ, ಬಿಂದುವೇ ಮಹಾದೇವಿಯಾಗಿ, ಕಳೆಯೇ ಮಹಾಲಕ್ಷ್ಮಿಯಾಗಿ, ಈ ತನು ಮನಃಪ್ರಾಣಂಗಳನು ಮರುಳುಮಾಡಿತ್ತು. ಜಾಗ್ರತ್ಸ್ವಪ್ನಸುಷುಪ್ತ್ಯಾದ್ಯವಸ್ಥೆಗಳೊಳಗೆ ಹೊಂದಿಸಿ, ಮುಂದುಗಾಣಲೀಯದೆ, ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ತೊಳಲಿಬಳಲಿಸುತ್ತಿರಲು, ಆ ಕಳೆಯಲ್ಲಿ ಕೂಡಿ ಶರೀರವು ಉಬ್ಬುತ್ತಾ, ಆ ನಾದದಲ್ಲಿ ಕೂಡಿ ಮನಸ್ಸು ಕೊಬ್ಬುತ್ತಾ, ಆ ಶಕ್ತಿಯಲ್ಲಿ ಕೂಡಿ ಪ್ರಾಣ ಬೆಬ್ಬನೆ ಬೆರೆವುತ್ತಾ, ಭವಭವದೊಳು ತೊಳಲುತ್ತಿರಲು, ಗುರುಕಟಾಕ್ಷದಿಂ ಕರ್ಮವು ಸಮೆದು ಧರ್ಮವು ನೆಲೆಗೊಳ್ಳಲು, ಆ ಮೇಲೆ ಮಹಾಜ್ಞಾನಶಕ್ತಿಯಾಯಿತ್ತು ಆ ಬಿಂದುವೇ ಆನಂದಶಕ್ತಿಯಾಯಿತ್ತು ಆ ಕಳೆಯೇ ನಿಜಶಕ್ತಿಯಾಯಿತ್ತು ಇಂತು ಸತ್ಯಜ್ಞಾನಾನಂದಸ್ವರೂಪಮಾದ ಶಕ್ತಿಮಹಿಮೆಯಿಂದ ಶರೀರವೇ ವಿಷ್ಣುವಾಗಲು, ಅಲ್ಲಿ ಶ್ರೀಗುರುಸ್ವರೂಪಮಾದ ಇಷ್ಟಲಿಂಗವು ಸಾಧ್ಯಮಾಯಿತ್ತು. ಆ ಪ್ರಾಣವೇ ರುದ್ರಸ್ವರೂಪವಾಗಲು, ಜಂಗಮಮೂರ್ತಿಯಾದ ಪ್ರಾಣಲಿಂಗವು ಸಾಧ್ಯವಾಯಿತ್ತು. ಮನಸ್ಸೇ ಬ್ರಹ್ಮಸ್ವರೂಪವಾಗಲು, ಲಿಂಗಾಕಾರಮಾದ ಭಾವಲಿಂಗವು ಸಾಧ್ಯಮಾಯಿತ್ತು. ಆ ಲಿಂಗಗಳೇ ಆತ್ಮಾದಿ ಷಡ್ಭೂತಂಗಳಲ್ಲಿ ಆಚಾರಾದಿ ಮಹಾಲಿಂಗಂಗಳಾದವು. ಆ ಶಕ್ತಿಗಳೇ ಕ್ರಿಯಾದಿ ಶಕ್ತಿಯರಾದರು. ಆ ಶಕ್ತಿಮುಖದಲ್ಲಿ ತಮ್ಮಲ್ಲಿ ಹುಟ್ಟಿದ ನಾನಾವಿಷಯ ಪದಾರ್ಥಂಗಳನ್ನು ಆಯಾ ಲಿಂಗಂಗಳಿಗರ್ಪಿಸಿ, ತತ್ಸುಖಾನುಭವದೊಳೋಲಾಡುತ್ತಿರಲು, ಆ ಶಕ್ತಿಗಳೇ ಲಿಂಗಶಕ್ತಿಗಳಾಗಿ, ತಾವೇ ಆಯಾ ಲಿಂಗಸ್ವರೂಪ ಶರೀರ ಪ್ರಾಣ ಮನೋಭಾವಂಗಳಳಿದು, ಲಿಂಗಭಾವ ನೆಲೆಗೊಂಡಲ್ಲಿ, ಸತ್ವರಜಸ್ತಮೋಗುಣಗಳು ಜ್ಯೋತಿಯೊಳಗಡಗಿದ ಕತ್ತಲೆಯಂತೆ, ತಮ್ಮ ನಿಜದಲ್ಲಿ ತಾವೇ ಲೀನವಾದವು. ಬಿಂದು, ಶರೀರದೊಳಗೆ ನಿಂದು ಆನಂದರೂಪಮಾಯಿತ್ತು. ನಾದವು ಪ್ರಾಣದೊಳಗೆ ಬೆರೆದು ನಿಶ್ಶಬ್ದನಿರೂಪಮಾದ ಜ್ಞಾನಮಾಯಿತ್ತು. ಕಳೆ ಮನದೊಳಗೆ ಬೆರದು, ಪರಬ್ರಹ್ಮ ಸ್ವರೂಪಮಾಗಿ ನಿಜಮಾಯಿತ್ತು . ಆ ಆನಂದವೇ ಇಷ್ಟಲಿಂಗರೂಪಮಾಗಿ, ಜ್ಞಾನವೇ ಪ್ರಾಣಲಿಂಗಸ್ವರೂಪಮಾಗಿ, ಆ ನಿಜವೇ ಭಾವಲಿಂಗಮೂರ್ತಿಯಾಗಲು, ಆ ಕರ್ಮ ಧರ್ಮ ವರ್ಮಂಗಳಡಗಿದವು. ಆತ್ಮಾದಿ ಷಡ್ಭೂತಂಗಳು ಆಚಾರಾದಿ ಮಹಾಲಿಂಗಂಗಳೊಳಗೆ ಲೀನಮಾಗಲು, ಆ ಆರುಲಿಂಗಂಗಳೇ ಈ ಮೂರುಲಿಂಗಂಗಳೊಳಗೆ ಬೆರೆದು, ಇಷ್ಟವೇ ಪ್ರಾಣಮಾಗಿ, ಭಾವಸಂಗದೊಳಗೆ ಪರವಶಮಾಗಿ, ತಾನುತಾನೆಯಾಗಿ, ತನ್ನಿಂದನ್ಯವೇನೂ ಇಲ್ಲದೆ ನಿಬ್ಬೆರಗಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಎನ್ನಂತರಂಗದೊಳಗಣ ಆತ್ಮಲಿಂಗ, ಅನಂತ ಜ್ಯೋತಿಯಂತಿಪ್ಪುದು ನೋಡಾ. ಬಹಿರಂಗದಲ್ಲಿ ನವರತ್ನದಂತಿಪ್ಪುದಯ್ಯ. ತಿಂಗಳ ಸೂಡಿದಭವನು ಭವಭಂಗಿತರಿಗಾರಿಗೂ ಗೋಚರಿಸನು ಕಾಣ. ಲಿಂಗನಿಷ್ಠಾಂಗಿಗಳಿಗೆ ಮಂಗಳಮಯನಾಗಿ ತೋರ್ಪನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೊಟ್ಟೆ ಮೊಟ್ಟೆ ಪತ್ರೆಯ ತಂದು ಒಟ್ಟಿ, ಪೂಜಿಸಿದ[ಡೇ]ನು ಮನಶುದ್ಧವಿಲ್ಲದನ್ನಕ್ಕರ ? ಮನಮಗ್ನವಾಗಿ ಶಿವಧ್ಯಾನದಲ್ಲಿ ಕೂಡಿ, ಒಂದೇ ದಳವ ಧರಿಸಿದರೆ ಶಿವನು ಒಲಿಯನೆ? ಇಂತು ಪೂಜೆಯ ಮಾಡುವುದಕ್ಕಿಂತಲು ಅದೇ ತೊಪ್ಪಲನು ಕುದಿಸಿ ಪಾಕವ ಮಾಡಿದಲ್ಲಿ ಆ ಲಿಂಗವು ತೃಪ್ತಿಯಾಯಿತ್ತು. ಬರಿದೆ ಲಿಂಗವ ಪೂಜಿಸಿ ಜಂಗಮಕ್ಕೆ ಅನ್ನವ ಕೊಡದೆ, ಲಿಂಗದ ಮುಖವು ಜಂಗಮವು ಎಂದು ತಿಳಿಯದೆ, ತನು-ಮನ-ಧನವನು ಗುರು-ಲಿಂಗ-ಜಂಗಮಕ್ಕೆ ಸವೆಸದೆ, ಬಾಗಿಲಿಗೆ ಕಾವಲಿಕ್ಕಿ, ಹೆಂಡಿರು ಮಕ್ಕಳು ಕೂಡಿಕೊಂಡು, ತನ್ನ ತಾನೇ ತಿಂಬುವಂಥ ನೀಚ ಹೊಲೆಯರ ಮೂಗ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ , ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತತ್ತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ ಗುರುವಿನ ಅಂಗ ತಾನೆ ಸಕಲ ನಿಃಕಲರೂಪಾದ ಲಿಂಗವು. ಅದು ತಾನೆ ಮತ್ತೆ ಸಕಲಾಂಗವೆನಿಸುವ ಜಂಗಮವು. ಆ ಜಂಗಮವು ತಾನೆ ಗುರುವಿನ ನಿಃಕಲಾಂಗವು. ಆ ಶ್ರೀಗುರುವಿನ ಕಳೆಯಿಂದ ಹುಟ್ಟಿದ ನಿಜಸುಖವೇ ಪ್ರಸಾದಲಿಂಗವು, ಇಂತು ಗುರು ಲಿಂಗ ಜಂಗಮವೆನಿಸುವ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಕಳೆಗಳಿಂದತಿಶಯವಾಗಿ ಬೆಳಗುವ ಶರಣ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->