ಅಥವಾ

ಒಟ್ಟು 29 ಕಡೆಗಳಲ್ಲಿ , 17 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ, ಸಕಲಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ, ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂದ್ಥಿಯಲ್ಲಿ ನೆನಹುಗೊಳ್ಳಿ, ಇವರಿಂದ ರುಜೆದರ್ಪಂಗಡಗು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ, ಬಂಧುಗಳು ಬಂದಾಗಳಿಲ್ಲೆನ್ನ. ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ, ಬಂದ ಪುರಾತರಿಗೆ ಇಲ್ಲೆಂಬ, ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ, ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ 222
--------------
ಬಸವಣ್ಣ
ದೇಹವ ಮರೆಗೊಂಡಿಪ್ಪ ಆತ್ಮನಂತೆ, ಶಕ್ತಿಯ ಮರೆಗೊಂಡಿಪ್ಪ ಶಿವನಂತೆ, ಕ್ಷೀರವ ಮರೆಗೊಂಡಿಪ್ಪ ತುಪ್ಪದಂತೆ, ವಾಚ್ಯವ ಮರೆಗೊಂಡಿಪ್ಪ ಅನಿರ್ವಾಚ್ಯದಂತೆ, ಲೋಕಾರ್ಥದೊಳಡಗಿಪ್ಪ ಪರಮಾರ್ಥದಂತೆ, ಎನ್ನ ಆತ್ಮನೊಳಡಗಿಪ್ಪ ಪರಮಾರ್ಥ ತತ್ವವು, ಬೀಜದೊಳಡಗಿದ ವೃಕ್ಷದಂತೆ ಇದ್ದಿತಯ್ಯ. ನಾನರಿಯದ ಮುನ್ನ ಎನ್ನೊಳಡಗಿದ್ದಿತಯ್ಯ ಶರಣ ಲಿಂಗ ಸಂಬಂಧ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಶ್ವೇತವರ್ಣ ಗೌರವರ್ಣವೆಂಬ ಸಪ್ತಧಾತುಗಳು. ಇವಕ್ಕೆ ವಿವರ : ಕಪಿಲವರ್ಣದ ಧಾತು ಪೃಥ್ವಿ ಅಂಶ, ದೇಹವ ಅಳುುಕುತ್ತಿಹುದು. ನೀಲವರ್ಣದ ಧಾತು ಅಪ್ಪುವಿನ ಅಂಶ, ದೇಹವ [ನಡುಗುತ್ತಿಹುದು]. ಮಾಂಜಿಷ್ಟವರ್ಣದ ಧಾತು ಅಗ್ನಿ ಅಂಶ, ದೇಹ ಕನಸ ಕಾಣುತಿಹುದು. ಪೀತವರ್ಣದ ಧಾತು ವಾಯು ಅಂಶ, ದೇಹವತ್ತರ ಒತ್ತುತ್ತಿಹುದು. ಕಪ್ಪವರ್ಣದ ಧಾತು ಆಕಾಶದ ಅಂಶ, ಎತ್ತರ ತತ್ತರಗೆಡಹುತಿಹುದು. ಶ್ವೇತವರ್ಣದ ಧಾತು ಚಂದ್ರನ ಅಂಶ, ದೇಹ ಕಳವಳಿಸುತಿಹುದು. ಗೌರವರ್ಣದ ಧಾತು ಸೂರ್ಯನ ಅಂಶ, ಶರೀರ ಸಂಚಲಿಸುತಿಹುದು. ಇಂತೀ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ ಲಿಂಗಾರ್ಚನೆಯ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುತಿಹನು
--------------
ಚನ್ನಬಸವಣ್ಣ
ಎನ್ನ ದೇಹವ ದಗ್ಧವ ಮಾಡಯ್ಯಾ. ಎನ್ನ ಕಾಯದಲಿಪ್ಪ ಕರ್ಮವ ತೊಡೆಯಯ್ಯಾ. ಎನ್ನ ಭಾವದಲಿಪ್ಪ ಭ್ರಮೆಯ ಜರಿಯಯ್ಯಾ. ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಉದಯಕ್ಕೆ ಉತ್ಪತ್ಯವಾಗಿ, ಮಧ್ಯಾಹ್ನಕ್ಕೆ ಸ್ಥಿತಿಯಾಗಿ, ಅಸ್ತಮಾನಕ್ಕೆ ಲಯವಹ ದೇಹವ ಹೊತ್ತು ಮತ್ತೆ, ನಿಶ್ಚಿಂತದಲ್ಲಿ ನಿಂದು, ಕಷ್ಟವ ಬಿಡಿಸುವ ಠಾವ ತೋರಾ. ಹಗಲಿಂಗೆ ಹಸಿವು ತೃಷೆ, ಇರುಳಿಂಗೆ ವಿಷಯ ವ್ಯಸನ ವ್ಯಾಪಾರ, ಇಂತೀ ಘಟವ ಹೊಕ್ಕು, ಐದಕ್ಕೆ ಒಡಲಾದೆಯಲ್ಲಾ ಐಘಂಟೇಶ್ವರಲಿಂಗಾ.
--------------
ಸತ್ತಿಗೆ ಕಾಯಕದ ಮಾರಯ್ಯ
ಮಡಿವಾಳಯ್ಯ ತನ್ನ ದೇಹವ ಕೊಟ್ಟು, ಗಣಾಚಾರದ ಶಕ್ತಿ ಪ್ರಸಾದವ ಪಡೆದ. ಘಟ್ಟಿವಾಳಯ್ಯ ತನ್ನ ಮಾಯೆಯ ಕೊಟ್ಟು, ಮೂಲಪ್ರಸಾದವ ಪಡೆದ. ಮರುಳಸಿದ್ಧಯ್ಯ ತನ್ನ ಮನವ ಕೊಟ್ಟು, ಗಣಪ್ರಸಾದವ ಪಡೆದ. ನಾನು ಕರಣಾದಿಗಳ ಕೊಟ್ಟು, ಚೆನ್ನಬಸವಣ್ಣನ ಪ್ರಸಾದವ ಪಡೆದು, ಭವವಿರಹಿತನಾದೆ ನೋಡಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ ದೇಹವ ; ಒಡಲುವಿಡಿದು ಕೆಡದಿರು, ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ.
--------------
ಅಕ್ಕಮಹಾದೇವಿ
ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ, ಲೋಕದೊಳಗೆ ಗಂಜಳದೊಳಗಣ ಹಂದಿಯ ದೇಹವನಾರೂ ತೊಳೆಯರು. ಗುರುಕಾರುಣ್ಯವುಳ್ಳ ಭಕ್ತರ ನಡೆವ ಗುಣದಲ್ಲಿ ಎಡಹಿದ ಶಬ್ದಕ್ಕೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡು ನಡೆಸುವದೆ ಸದಾಚಾರ. ಗುರುಚರಲಿಂಗವನರಿಯದ ದುರಾಚಾರಿಗಳಿಗೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡ ತೆರನೆಂತೆಂದಡೆ, ಶೂಕರನ ದೇಹವ ತೊಳೆದಡೆ, ಕೂಡೆ ಪಾಕುಳದೊಳಗೆ ಹೊರಳಿದ ತೆರನಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದೇಹವ ನಿರ್ದೇಹಿಗೊಪ್ಪಿಸಿದಲ್ಲಿ ದೇಹ ನಿರ್ದೇಹವಾಗಿತ್ತು. ಮನವ ಲಿಂಗಕ್ಕರ್ಪಿಸಿದಲ್ಲಿ ಮನಲಿಂಗವಾಗಿ ಮನ ಲೀಯವಾಯಿತ್ತು. ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತಯ್ಯಾ. ದೇಹ ಮನ ಭಾವವಳಿದಲ್ಲಿ ಕಾರಣಕಾಯ ಅಕಾಯವಾಯಿತ್ತು. ಎನ್ನ ದೇಹದ ಸುಖವ ಲಿಂಗ ಭೋಗಿಸುವುದಾಗಿ, ಶರಣಸತಿ ಲಿಂಗಪತಿ ಎಂಬ ಭಾವ ಅಳವಟ್ಟಿತ್ತಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವಾಯದ ದೇಹವ ಮನೆಯ ಮಾಡಿ ಮಾಯದಲ್ಲಿಪ್ಪೆ ಕಂಡಾ. ನೇತ್ರದ ಬಾಗಿಲ ತೆರೆದು ನೋಡುತ್ತಿಪ್ಪೆ ಕಂಡಾ. ನಿನ್ನ ಇರವೊಂದು ವಿಪರೀತ ಮಠವೊಂದಘಟಿತದೊಳಗೆ ಎನ್ನ ಮರೆದಿಪ್ಪೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶಿವಶಿವಾ, ತಾವಾರೆಂಬುದನರಿಯದೆ ತಮ್ಮ ನಿಜವನು ಮರೆದು ಈ ಮರುಳ ಮಾನವರು ಕೆಟ್ಟ ಕೇಡ ಪೇಳ್ವೆ, ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆನೆ ಮೊದಲು ಇರುವೆ ಕಡೆ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ, ತೊಡದ ದೇಹವ ತೊಟ್ಟು, ಮೆಟ್ಟದ ಭೂಮಿಯ ಮೆಟ್ಟಿ, ಉಣ್ಣದ ಆಹಾರವನುಂಡು, ಭವಭವದಲ್ಲಿ ಘಾಸಿಯಾಗಿ, ಕಡೆಯಲ್ಲಿ ಮನುಷ್ಯದೇಹವ ತಾಳಿದಲ್ಲಿ ವಾತ ಪಿತ್ಥ ಶ್ಲೇಷ್ಮ ಮೊದಲಾದ ಮುನ್ನೂರರುವತ್ತು ರೋಗಾದಿ ಬಾಧೆಗಳಿಂದ ಕಂದಿ ಕುಂದಿ ನೊಂದು ಬೆಂದು ತಾಪತ್ರಯಾಗ್ನಿಯಿಂದ ದಗ್ಭವಾದ ದುಃಖವ ಪೇಳಲಿಕ್ಕೆ ಸಹಸ್ರಹೆಡೆಯ ಶೇಷಂಗೆ ಎರಡು ಸಹಸ್ರಜಿಹ್ವೆಯಿಂದ ಅಳವಲ್ಲ, ಸಹಸ್ರನೇತ್ರವುಳ್ಳ ದೇವೇಂದ್ರಂಗೆ ನೋಡೆನೆಂದರೆ ಅಸಾಧ್ಯ. ಚತುರ್ಮುಖಬ್ರಹ್ಮಂಗೆ ಪೇಳಲಿಕ್ಕೆ ಅಗಮ್ಯ ಅಗೋಚರ. ಇಂತಿದನು ಕಂಡು, ಕೇಳಿ ಮೈಮರೆದು, ಹೇಸಿಕಿ ಸಂಸಾರದಲ್ಲಿ ಸಿಲ್ಕಿ ಸತ್ತುಹೋಗುವ ಹೇಸಿಮೂಳ ಹೊಲೆಮಾದಿಗರಿಗೆ ಶಿವಪಥವು ಎಂದೆಂದಿಗೂ ಸಾಧ್ಯವಿಲ್ಲ, ಅಸಾಧ್ಯವೆಂದಾತ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಧ್ಯಾತ್ಮಿಕದಿಂದಾವ ದೇಹವ, ವ್ಯಾಧಿ ಬಾಧಿಸುವದಕ್ಕೆ ಮುನ್ನವೆ ಬೇಗ ಬೇಗ ಶಿವನ ಭಜಿಸಿರೊ. ದೇಹಧರ್ಮವು ಆರ ವಶವಲ್ಲ. ದೇವ ದಾನವ ಮಾನವಾದಿಗಳಾದಡೂ ಆವುದಾನೊಂದು ವ್ಯಾಧಿ ಬಿಡವು. 'ತೇನ ವಿನಾ ತೃಣಾಗ್ರಮಪಿ ನ ಚಲತಿ' ಎಂದುದಾಗಿ, ಅಂದಂದಿಗೆ ದಿನ ತುಂಬಿದಂತೆ ನಿಶ್ಚೈಸಿ, ಕಾಮಧೂಮ ಧೂಳೇಶ್ವರನನೊಲಿಸಲೋಸುಗ ಬಂದ ಬಳಿಕ ಮರೆಯದಿರಿರೊ.
--------------
ಮಾದಾರ ಧೂಳಯ್ಯ
ಇನ್ನಷ್ಟು ... -->