ಅಥವಾ

ಒಟ್ಟು 246 ಕಡೆಗಳಲ್ಲಿ , 38 ವಚನಕಾರರು , 198 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಅಕ್ಷರವನು ಆರೈದು ತೋರಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಕಳೆಗಳನೆನ್ನ ಆಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
--------------
ಅಲ್ಲಮಪ್ರಭುದೇವರು
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ ಷಡುವರ್ಣವೆಂದೆನ್ನ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ. ಲಿಂಗವಿಂತುಟೆನ್ನ, ಲಿಂಗೈಕ್ಯವ ನುಡಿಯ. ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ. ಪರರ ಬೋಧಿಸಿಕೊಂಡುಂಬಾತ ಜಂಗಮವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ. ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ, ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ. ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ. ಆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಿಡಿದು ಮಾಡುವಾತ ಭಕ್ತ_ ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
--------------
ಅಲ್ಲಮಪ್ರಭುದೇವರು
ಮುನ್ನೂರು ಮುನ್ನೂರು ಮುನ್ನೂರು ವಾಸನೆಯನಳಿದುಳಿದ ವಾಸನೆಯ ಲತೆಗಳೊಳ್ಬೆಳೆದ ಅತಿಶಯಾನಂದರೂಪವನರಿಯಲಾರಳವಲ್ಲ ನೋಡಾ. ಭೂಚರರರಿಯರು ಖೇಚರರರಿಯರು ಪೆರ್ಚಲದಾಶ್ರಯವಗೊಂಡಾಯಸವನುಂಬ ಅರೆಮರುಳರಂತಿರಲಿ ಧರೆಯೊಳಿಪ್ಪ ನರರೆತ್ತ ಬಲ್ಲರು ಹೇಳಾ ! ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ. ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾಗಿ, ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ. ಇಂತಪ್ಪ ನಿರೂಪದ ಮಹಾಘನವು ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ, ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಲಲಾಟದೊಳಗಣ ಅಸ್ಥಿಯ ಬೆಳ್ಪು ವಿಭೂತಿ. ಚರ್ಮದೊಳಗಣ ಕೆಂಪು ಕಿಸುಕಾಶಾಂಬರ. ವ್ಯಾಕುಳವಿಲ್ಲದುದೆ ಲಾಕುಳ, ಮಹಾದೇವರ ನೆನೆವುದೆ ಆಧಾರ. ನಿರ್ಮೋಹತ್ವಂ ಚ ಕೌಪೀನಂ ನಿಸ್ಸಂಗತ್ವಂ ಚ ಮೇಖಳಂ | ಶಾಂತಿ ಯಜ್ಞೋಪವೀತಂ ಚ ಆಭರಣಂ ದಯಾಪರಂ | ಪಂಚೇಂದ್ರಿಯ ವೀಣಾದಂಡಂ ಪಂಚಮುದ್ರಾಃ ಪ್ರಕೀರ್ತಿತಂ | ಮಹಾಲಿಂಗ ಧ್ಯಾನಾಧಾರಂ ಶಿವಯೋಗಿ ಚ ಲಕ್ಷಣಂ | [ಎಂಬುದಾಗಿ], ತುರುಬಿನ ತಪಸಿಯ ಪೆರರೆತ್ತ ಬಲ್ಲರು ? ಸಕಳೇಶ್ವರದೇವಾ, ನೀನೆ ಬಲ್ಲೆ.
--------------
ಸಕಳೇಶ ಮಾದರಸ
ಬ್ರಹ್ಮ ತಲೆದೋರದಂದು, ವಿಷ್ಣು ಉದಯಿಸದಂದು ರುದ್ರನವತರಿಸದಂದು, ಈರೇಳುಭುವನ ನೆಲೆಗೊಳ್ಳದಂದು ಸಪ್ತಸಾಗರಂಗಳುಕ್ಕಿ ಹರಿಯದಂದು, ಅಮೃತಮಥನವಿಲ್ಲದಂದು, ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು ಮುನ್ನಾರು ಬಲ್ಲರು ? ಮುನ್ನಾರು ಬಲ್ಲರು ? ಆದಿಮೂಲಸ್ವಾಮಿ ಕೂಡಲಚೆನ್ನಸಂಗಯ್ಯ ಹಮ್ಮಿಲ್ಲದಿರ್ದನಂದು !
--------------
ಚನ್ನಬಸವಣ್ಣ
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಉಣ್ಣದೆ ತೃಪ್ತನಾದ ಗುರು. ಆ ಗುರುವು ಪೆಸರ್ಗೊಳ್ಳದೆ ಮುನ್ನವಾದ ಶಿಷ್ಯ. ಇದು ಅನ್ಯರಿಗೆ ಕಾಣಬಾರದು. ತನ್ನೊಳಗಿರ್ದ ಲಿಂಗೈಕ್ಯದ ಭಕ್ತಿಯನು, ಪಸಾರಕಿಕ್ಕುವ ಅಜ್ಞಾನಿಗಳೆತ್ತ ಬಲ್ಲರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಜ್ಞಾನದುದಯವೇ ಭಕ್ತ, ಜ್ಞಾನದ ಶೂನ್ಯವೇ ಐಕ್ಯ. ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ. ಅದೆಂತೆಂದಡೆ: ``ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ'' (?) ಎಂದುದಾಗಿ ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
``ನೇತ್ರಂ ದೇವೋ ನ ಚಾಪರಃ'' ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವಲಿಂಗ ಪರಬ್ರಹ್ಮವು. ``ನೇತ್ರಂ ಸರ್ವಜ್ಞ ಮೇ ವಪುಃ'' ಎಂಬ ಶ್ರುತಿಯುಂಟಾಗಿ, ನೇತ್ರವು ಶಿವಲಿಂಗಕ್ಕೆ ದೇಹವು. ``ನೇತ್ರಮಧ್ಯೋದ್ಭವಂ ಲಿಂಗಂ'' ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಮೂರ್ತಿಯ ಹೆತ್ತ ತಾಯಿ. ``ನೇತ್ರಮಧ್ಯಜಚಿತ್ಸುಖಂ'' ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವೇಷ್ಟಲಿಂಗದ ಗುಹ್ಯಕ್ಕೆ ರಾಣಿವಾಸಮಕ್ಕುಂ. ``ದ್ವಿನೇತ್ರಕುಚಯೋರ್ಲಿಂಗಂ'' ಎಂಬ ಶ್ರುತಿಯುಂಟಾಗಿ ನೇತ್ರವು ಪ್ರಾಣಲಿಂಗದ ಹಸ್ತಂಗಳಿಗೆ ಪಿಡಿವ ಕುಚಂಗಳಕ್ಕುಂ. ``ಚಕ್ಷುಶ್ಚ ಶಿವ ಪುಷ್ಪಂ ಚ'' ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಕ್ಕೆ ಅವಿರಳ ಪುಷ್ಪಮಕ್ಕುಂ. ``ಲಿಂಗಜ್ಯೋತಿಶ್ಚ ನೇತ್ರಯೋಃ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ, ಅಖಂಡ ಜ್ಯೋತಿಯಕ್ಕುಂ. ``ಲಿಂಗಾಭಿಷೇಕಂ ಚಕ್ಷುಶ್ಚ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ ಅಭಿಷೇಕವ ಮಾಡುವ ಕಳಸಂಗಳಕ್ಕುಂ ``ಲಿಂಗಸ್ಯ ಸಾಯಕಂ ನೇತ್ರಂ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗವನೊಳಗುಮಾಡಿಕೊಂಬುದಕ್ಕೆ ಹಾಕುವ ಬಾಣಂಗಳಕ್ಕುಂ. ``ಚಕ್ಷುರ್ಲಿಂಗಸ್ಯ ಚಾಕ್ಷುಷಿ'' ಎಂಬ ಶ್ರುತಿಯುಂಟಾಗಿ, ನೇತ್ರಂಗಳು ಲಿಂಗಮೂರ್ತಿಯ ನೇತ್ರಂಗಳಲ್ಲದೇ ಸ್ವಯಕ್ಕೆ ನೇತ್ರವಿಲ್ಲ. ಈ ನೇತ್ರಂಗಳು ಲಿಂಗಮೂರ್ತಿಯ ನೋಟ ಬೇಟ ಕೂಟದಿಂ, ಭಾವ ಮನ ದೃಕ್ಕೀಲೈಸಿ ನಟ್ಟ ದೃಷ್ಟಿಯಿಂ ನೋಳ್ವ (ನೋಟ) ಲಿಂಗೈಕ್ಯ ಶರಣಂಗಲ್ಲದೆ ಲೋಗರಿಗೆಲ್ಲಿಯದೊ ? ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ ಈ ನೇತ್ರದ ಮಹಿಮೆಯ ಗುಹೇಶ್ವರನೇ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳಿವರೆತ್ತ ಬಲ್ಲರು ನೋಡಾ.
--------------
ಅಲ್ಲಮಪ್ರಭುದೇವರು
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಡಲು, ಅಷ್ಟತನು ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ_ ಕೆಟ್ಟನಲ್ಲಾ, ಅನಾಚಾರಿಯೆಂದು ಮುಟ್ಟರು ನೋಡಾ, ಮುಟ್ಟದ ಭೇದವನು, ವಿಖಂಡಿಸಿದ ಭಾವವನು; ಭಾವವ್ರತಗೇಡಿಗಳು ತಾವೆತ್ತ ಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ವಾರಾಸಿಯಿಂದತ್ತಲಾರು ಬಲ್ಲರು ದೇವಾ? ಈರೇಳನತಿಗಳೆದ ನಿತ್ಯ ನಿತ್ಯ ಕಾರುಣ್ಯಭಾವದಲಿ ಆ ಮರುಳುಗೊಂಡಡೆ ಆರು ಏವಿದ್ಥಿಯಾದಡೇನಯ್ಯ? ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರಾ ಓರಂತೆಯಾದ ಬಳಿಕಾನಂದನು.
--------------
ಸಿದ್ಧರಾಮೇಶ್ವರ
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ? ವಿಷ್ಣು ನಿಮ್ಮ ಬಲ್ಲಡೆ ಗೋಪಾಲನಹನೆ? ರುದ್ರ ನಿಮ್ಮ ಬಲ್ಲಡೆ ಜಡೆಯ ಕಟ್ಟುವನೆ? ಪಶುಪತಿ ನಿಮ್ಮ ಬಲ್ಲಡೆ ವೇಷವ ಹೊತ್ತು ತೊಳಲುವನೆ? ಗಂಗೆವಾಳುಕರು ನಿಮ್ಮ ಬಲ್ಲಡೆ ಲಿಂಗವ ಪೂಜಿಸುವರೆ? ತಮ್ಮ ಬಲ್ಲಡೆ, ನಿಮ್ಮ ಬಲ್ಲರು. ಅನ್ನಕ ತಡವೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->