ಅಥವಾ

ಒಟ್ಟು 231 ಕಡೆಗಳಲ್ಲಿ , 56 ವಚನಕಾರರು , 205 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು, ನಿಂದಲ್ಲಿ ನಿಲಲೀಯದೆನ್ನ ಮನವು, ಹೊಂದಿದಲ್ಲಿ ಹೊಂದಲೀಯದೆನ್ನ ಮನವು ಕೂಡಲಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ. 32
--------------
ಬಸವಣ್ಣ
ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ ವೀರಶೈವ ಭಕ್ತ ಮಹೇಶ್ವರರೆನಿಸಿಕೊಂಡ ಬಳಿಕ ತಮ್ಮಂಗದ ಮೇಲಣ ಲಿಂಗವು ಷಟ್‍ಸ್ಥಾನಂಗಳಲ್ಲಿ ಬ್ಥಿನ್ನವಾದಡೆ ಆ ಲಿಂಗದಲ್ಲಿ ತಮ್ಮ ಪ್ರಾಣವ ಬಿಡಬೇಕಲ್ಲದೆ, ಮರಳಿ ಆ ಬ್ಥಿನ್ನವಾದ ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ತಾನು ಸಾಯಲಾರದೆ ಜೀವದಾಸೆಯಿಂದೆ ಆ ಬ್ಥಿನ್ನವಾದ ಲಿಂಗವ ಧರಿಸಿದಡೆ ಮುಂದೆ ಸೂರ್ಯಚಂದ್ರರುಳ್ಳನ್ನಕ್ಕರ ನರಕಸಮುದ್ರದಲ್ಲಿ ಬಿದ್ದು ಮುಳುಗಾಡುವ ಪ್ರಾಪ್ತಿಯುಂಟಾದ ಕಾರಣ, ಇದಕ್ಕೆ ಸಾಕ್ಷಿ : ``ಶಿರೋ ಯೋನಿರ್ಗೋಮುಖಂ ಚ ಮಧ್ಯಂ ವೃತ್ತಂ ಚ ಪೀಠಕಂ | ಷಟ್‍ಸ್ಥಾನೇ ಛಿದ್ರಯೋಗೇ ತು ತಲ್ಲಿಂಗಂ ನೈವ ಧಾರಯೇತ್ | ತಥಾಪಿ ಧಾರಣಾತ್ ಯೋಗೀ ರೌರವಂ ನರಕಂ ವ್ರಜೇತ್ ||'' -ಸೂP್ಷ್ಞ್ಮ ಗಮ. ಇಂತಪ್ಪ ನರಕಜೀವಿಗಳ ಎನ್ನತ್ತ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೊಯಿದಡೆ ಅಂಗದ ಮೇಲಣ ನೋವ, ಮನವರಿವಂತೆ, ಬಾಹ್ಯ ಉಪಚರಣೆಯ ಪೂಜೆ, ನಿನಗೆ ಹೊರಗಾದುದುಂಟೆ ? ಆ ತೆರನನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಒಳಗೂ ತಾನೆ, ಹೊರಗೂ ತಾನೆ.
--------------
ಸಗರದ ಬೊಮ್ಮಣ್ಣ
ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು. ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_ ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ ? ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
--------------
ಅಲ್ಲಮಪ್ರಭುದೇವರು
ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ, ಈ ಮೂರರ ಮೇಲಣ ಮೋಹವೆರಸಿದ ಮನವು ಸಂಸಾರ ನೋಡಾ ! ಆ ಮನವನು ಸಂಸಾರ ಮೋಹವನು ಬೇರ್ಪಡಿಸಿ, ತನ್ನ ಕೂಡಿ ನಡೆವ ಗತಿಮತಿಗಳನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನು ನಿರಾಳ ಷಡುಚಕ್ರಂಗಳ ಮೇಲಣ ನಾಲ್ಕು ಚಕ್ರಂಗಳ ಕ್ರಮವೆಂತೆಂದಡೆ : ನಿರ್ವಾಣಲಿಂಗಚಕ್ರವೆಂದು, ಮಹಾನಿರ್ವಾಣಲಿಂಗಚಕ್ರವೆಂದು, ಅತಿಮಹಾನಿರ್ವಾಣಘನಲಿಂಗಚಕ್ರವೆಂದು, ಅತಿಮಹಾತೀತ ಮಹಾನಿರ್ವಾಣ ಘನಲಿಂಗಚಕ್ರವೆಂದು. ನಾಲ್ಕು ಚಕ್ರಕ್ಕೂ ಪದ್ಮವಿಲ್ಲ ವರ್ಣವಿಲ್ಲ, ಅಕ್ಷರಂಗಳಿಲ್ಲ, ಶಕ್ತಿಯಿಲ್ಲ, ಅದ್ಥಿದೇವತೆ ಇಲ್ಲ, ನಾದವಿಲ್ಲ, ಬೀಜಾಕ್ಷರವಿಲ್ಲದೆ ಬೆಳಗುತ್ತಿಹುದು. ಆ ಚಕ್ರಂಗಳು ವರ್ಣಕ್ಕೂ ವರ್ಣಾತೀತವಾಗಿಹುದು, ಉಪಮೆಗೆ ಉಪಮಾತೀತವಾಗಿಹುದು ಚಕ್ರಕ್ಕೂ ಚಕ್ರಾತೀತವಾಗಿಹುದೆಂದು ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಪ್ಪತ್ತೈದು ಕಂಬದ ಶಿವಾಲಯದೊಳಗೆ ಒಬ್ಬ ಅಂಗನೆ, ಹದಿನೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ, ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಅಂಗನೆಯ ಕೈಹಿಡಿದು ಹದಿನೆಂಟು ಕೇರಿಗಳ ಕೆಡಿಸಿ ಇಪ್ಪತ್ತೈದು ಕಂಬದ ಶಿವಾಲಯವ ಮೀರಿ ನಿಶ್ಚಿಂತ ನಿರಾಳಲಿಂಗದಲ್ಲಿ ಬೆರೆದಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಿಲ್ಲು ಕೋಲವಿಡಿದು ಮನ ಬಂದ ಪರಿಯಲ್ಲಿ ಎಚ್ಚಾಡುವಾತ ಅರ್ತಿಕಾರನಲ್ಲದೆ ಬಿಲ್ಲುಗಾರನಲ್ಲವಯ್ಯ. ಹೊನ್ನು ಹೆಣ್ಣು ಮಣ್ಣ ಬಿಟ್ಟು ಚೆನ್ನಾಗಿ ಮಂಡೆಯ ಬೋಳಿಸಿಕೊಂಡು ಹಾಡಿದ ವಚನಂಗಳೇ ಹಾಡಿಕೊಂಡು ಮುಂದೆ ವಸ್ತುವ ಸಾದ್ಥಿಸಿಕೊಳ್ಳಲರಿಯದೆ ಹಸಿದರೆ ತಿರಿದುಂಡು ಮಾತಿನಮಾಲೆಯ ಕಲಿತಾತ ವಿರಕ್ತನೆಂಬ ನಾಮಕ್ಕರುಹನಲ್ಲದೆ ಸಂಧಾನಕ್ಕರುಹನಲ್ಲ. ಅದೇನು ಕಾರಣವೆಂದೊಡೆ ಭಕ್ತಿಯೆಂಬ ಬಿಲ್ಲ ಹಿಡಿದು ಸಮ್ಯಜ್ಞಾನವೆಂಬ ಹೆದೆಯನೇರಿಸಿ ಲಿಂಗನಿಷ್ಠೆಯೆಂಬ ಬಾಣವ ತೊಟ್ಟು ಆಕಾಶದ ಮೇಲಣ ಮುಪ್ಪುರದ ಮಧ್ಯದ ಮಾಣಿಕ್ಯದ ಕಂಭವ ಮುಳುಗಲೆಚ್ಚು ಮಾಯೆಯ ಬಲುಹ ಗೆಲಿದ ಶರಣನೀಗ ಲಿಂಗಸಂಧಾನಿಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ, ಆ ಜಂಗಮದರಿವು ಅಪ್ಪುವಾಗಿ, ಆ ಸುಭೂಮಿಯ ಬೀಜದ ಮೇಲೆ ಸುರಿಯೆ, ಆ ಭೂಮಿ ಶೈತ್ಯವಾಗಿ, ಆ ಬೀಜದ ಒಳಗು ಒಡೆದು ಅಂಕುರ ತಲೆದೋರಿ, ಭಕ್ತಿ ಜ್ಞಾನ ವೈರಾಗ್ಯವೆಂಬ ಮರ ಶಾಖೆ ಫಲ ಬಲಿದು ತುರೀಯ ನಿಂದು ಹಣ್ಣಾಯಿತ್ತು. ಆ ಹಣ್ಣ ಮೇಲಣ ಜಡವ ಕಳೆದು ಒಳಗಳ ಬಿತ್ತ ಮುಂದಕ್ಕೆ ಹುಟ್ಟದಂತೆ ಹಾಕಿ ಉಭಯದ ಮಧ್ಯದಲ್ಲಿ ನಿಂದ ಸವಿಸಾರವ ಸದಾಶಿವಮೂರ್ತಿಲಿಂಗಕ್ಕೆ ಅರ್ಪಿತವ ಮಾಡು.
--------------
ಅರಿವಿನ ಮಾರಿತಂದೆ
ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗುವ ಈ ನರಕಿನಾಯಿಗಳನೇನೆಂಬೆನಯ್ಯಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸ್ವಸ್ಥಿರವೆಂಬ ಭೂಮಿಯಲ್ಲಿ ಸ್ತಂಭಂಗಳು ಮೂರಾಗಿ, ಫಲಂಗಳಾರಾದವು. ಆ ಫಲ ಮೀರಿತ್ತು, ಮೇಲಣ ಮೂವತ್ತಾರ ಮೀರಿ, ಅವ್ವೆಗೆ ಯೋಗ್ಯವಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತತ್ವವಿದೆಂದರಿತು ತತ್ವಮಸಿಯಾದಳವ್ವೆ.
--------------
ಸಿದ್ಧರಾಮೇಶ್ವರ
ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ, ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ! ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ! ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ! ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು, ದರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು. ಕೂಡಲಸಂಗಮದೇವಯ್ಯಾ, ಶಂಕಿತಂಗೆ ಪ್ರಸಾದ ಸಿಂಗಿ, ಕಾಳಕೂಟವಿಷವು.
--------------
ಬಸವಣ್ಣ
ಇನ್ನಷ್ಟು ... -->