ಅಥವಾ

ಒಟ್ಟು 418 ಕಡೆಗಳಲ್ಲಿ , 44 ವಚನಕಾರರು , 381 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಾಳದಗ್ವಣಿಯ ನೇಣಿಲ್ಲದೆ ತೆಗೆಯಬಹುದೆ, ಸೋಪಾನದ ಬಲದಿಂದಲ್ಲದೆ ? ಶಬ್ದಸೋಪಾನವ ಕಟ್ಟಿ ನಡೆಯಿಸಿದರು ಪುರಾತರು, ದೇವಲೋಕಕ್ಕೆ ಬಟ್ಟೆ ಕಾಣಿರೋ. ಮತ್ರ್ಯರ ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು, ಕೂಡಲಚೆನ್ನಸಂಗನ ಶರಣರು.
--------------
ಚನ್ನಬಸವಣ್ಣ
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಕಂಡುವ ಹೇಳಿಹೆನೆ ? ಸಮಯಕ್ಕೆ ದೂರ, ಎನ್ನ ಇರವನರಿಯರು. ಲೆಂಡನೆಂಬರು, ಸುಮ್ಮನಿದ್ದೇನೆ. ಇವರೆನ್ನ ಆರೈದು ಕಂಡುದ ನುಡಿವರು. ಎನ್ನ ಮುಟ್ಟಿದವರ ಎನ್ನಂತೆ ಮಾಡಿಕೊಂಬೆ. ಎನ್ನ ಅರಿಯದವರ ಹಾದಿಯ ಹೋಗೆ. ಎನ್ನನರಿತ ಜಂಗಮದ ಸಂಗವ ಮಾಡುವೆ. ಜಗದ ಸಂಗವನೊಲ್ಲೆ, ನಿಗಮಾಗಮಶಾಸ್ತ್ರವನೊಲ್ಲೆ. ಅವೆಲ್ಲವು ಸ್ಥಲ ನೆಲೆ ಇಟ್ಟು ಹೇಳುವವು. ಎಮ್ಮ ಶರಣರು ನುಡಿದ ಶಾಸ್ತ್ರಕ್ಕೆ ಸ್ಥಲ ನೆಲೆ ಇಲ್ಲ. ಇಂತಿವೆಲ್ಲವ ಬಲ್ಲೆನಾಗಿ, ಎನ್ನಂಗಕ್ಕೆ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ. ಅದೇಕೆಂದರೆ:ಲಿಂಗವೆಂದ ಕಾರಣ, ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹುಸಿಯಿಂದ ಶಿವನ ಮುಕುಟವ ಕಂಡೆನೆಂದು ಹುಸಿಯಂ ನುಡಿದು ಬ್ರಹ್ಮ ಭ್ರಷ್ಟನಾದ. ಮುಳ್ಳಿನಲ್ಲಿ ತೊನಚಿಯನಿದು ಜೀವಹಿಂಸೆಯ ಮಾಡಿದ ಮಾಂಡವ್ಯ ಶೂಲಕ್ಕೆ ಗುರಿಯಾದ. ಸೋಮಸುತನ ಮಗ ಶೂದ್ರಕವೀರಂಗೆ ಕಳವು ಹೊದ್ದಿ, ಶಿರಹರಿದು ಕಾಂಚಿಯಾಲದಲ್ಲಿ ಮೆರಯಿತ್ತು. ಅಕ್ಷಿಪಾದನಸ್ತ್ರೀ ಅಹಲ್ಯಾದೇವಿಗೆ ಅಳುಪಿದ ಶಕ್ರನ ಅಂಗ ಅನಂಗಮುದ್ರೆಯಾಯಿತ್ತು. ಕಾಂಕ್ಷೆ ಮಾಡಿದ ನಾಗಾರ್ಜುನ ಚಕ್ರದಲ್ಲಿ ಹತವಾದ. ಇಂತಿವರನಂತರು ಕೆಟ್ಟರು ನೋಡಯ್ಯಾ. ಸೌರಾಷ್ಟ್ರ ಸೋಮೇಶ್ವರನ ಶರಣರು ದೋಷವಿರಹಿತರಾಗಿ ಸ್ವರ್ಗ ಅಪವರ್ಗವ ಮೀರಿ ಲಿಂಗದಲ್ಲಿ ಐಕ್ಯರಾದರು.
--------------
ಆದಯ್ಯ
ಒಬ್ಬರು ನಡೆದಾಚರಣೆಯಲ್ಲಿ ನಡೆಯರು. ಒಬ್ಬರು ಹಿಡಿದ ಶೀಲವ ಹಿಡಿಯರು. ಒಬ್ಬರು ನುಡಿದ ಭಾಷೆಯ ನುಡಿಯರು. ಅದೇನು ಕಾರಣವೆಂದೊಡೆ : ತಮ್ಮ ಲಿಂಗಮಚ್ಚಿ ನಡೆವರು. ತಮ್ಮ ಲಿಂಗಮಚ್ಚಿ ಹಿಡಿವರು. ತಮ್ಮ ಲಿಂಗಮಚ್ಚಿ ನುಡಿವರು. ಇದು ಕಾರಣ. ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು.
--------------
ಷಣ್ಮುಖಸ್ವಾಮಿ
ಹರನ ಕರುಣವ ಪಡೆದ ಸಾಮರ್ಥ್ಯವ ಬಲುಹಿಂದ, ಶಿವಶರಣರೊಡನೆ ಸೆಣಸಿದಡೆ ಲೇಸುಂಟೆ ? ಅಘಟಿತಘಟತರಿಗೆ ಅಘಟಿತರುಂಟು ನೋಡಾ ! ನೊಸಲಲೊಬ್ಬ ಕಣ್ಣ ತೆಗೆದಡೆ, ಅಂಗಾಲಲೊಬ್ಬ ಕಣ್ಣ ತೆಗೆವನು. ಗುಹೇಶ್ವರನ ಶರಣರು ಉಪಮಾತೀತರು.
--------------
ಅಲ್ಲಮಪ್ರಭುದೇವರು
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ವಾರುವ ಮುಗ್ಗಿದಡೆ ವಾಗೆದಲ್ಲಿ ಆದರಿಸಬೇಕಲ್ಲದೆ, [ಅ]ದ ಗಾರುಮಾಡಿ ಹೊಯ್ವರೆ ಮಿಡಿಯನು? ಮಾರಾರಿಯ ಶರಣರು ಮೀರಿ ಒಂದು ನುಡಿದಡೆ, ದೂರು ಮಾಡುವರೆ ? ನೀರರದ ಅಡಿಯೊಳಗಾದವನ ಸೂರೆಗೊಂಬವರುಂಟೆ? [ಲೇಸ] ತೋರುವರಯ್ಯಾ [ಐ]ದರ ಬೇಗೆಯಲಿ ಬೆಂದು ಗಾರಾದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, `ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, `ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ `ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ ರಾಜಯೋಗ ಸಮರಸವಾದಲ್ಲಿ_ ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.
--------------
ಚನ್ನಬಸವಣ್ಣ
ಪ್ರಣಮ:ಪ್ರಾಣವಾಯುವಿನ ನೆಲೆಯನರಿದು ಬಿಡಬಲ್ಲರೆ, ಪ್ರಣಮ:ಓಂಕಾರದ ಶ್ರುತಿಯ ಮೂಲಾಂಕುರವನರಿಯಬಲ್ಲರೆ ಪ್ರಣಮ:ಐವತ್ತೆರಡಕ್ಷರದ ಲಿಪಿಯ ತಿಳಿದುನೋಡಿ ಓದಬಲ್ಲರೆ, ಪ್ರಣಮ, ನಾದಬಿಂದು ಕಲಾತೀತನಾಗಬಲ್ಲರೆ_ ಇದು ಕಾರಣ, ಕೂಡಲಚೆನ್ನಸಂಗಾ, ನಿಮ್ಮ ಶರಣರು ಸಹಸ್ರವೇದಿಗಳಾದ ಕಾರಣ ಪ್ರಣಮಪ್ರತಿಷ್ಠಾಚಾರ್ಯರು. ಅವರಿಗೆ ಮಿಗೆ ಮಿಗೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
--------------
ಆದಯ್ಯ
ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಅಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ, ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ ಹೇಳಯ್ಯಾ ನಿಮ್ಮ ಧರ್ಮ.
--------------
ಬಸವಣ್ಣ
ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ, ಮರಣವಾರಿಗೂ ಮನ್ನಣೆಯಿಲ್ಲ! ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ. ಇದು ಕಾರಣ _ ಗುಹೇಶ್ವರಾ ನಿಮ್ಮ ಶರಣರು ಕಾಲನ ಬಾರಿಗೆ ಕಲ್ಪಿತರಾಗರು !
--------------
ಅಲ್ಲಮಪ್ರಭುದೇವರು
ಕುಲ ಚಲ ಮೊದಲಾದ ಅಷ್ಟಮದಂಗಳನರಿತು ದಾಸೋಹಕ್ಕೆಡೆಯಾಗಿರಬೇಕು. ಪೃಥುವ್ಯಾದಿ ಅಷ್ಟತನುಮದವೆಂಬ ಮಹಿಮೆಯೊಳಗಿರ್ದು ಲಿಂಗಾವಧಾನಿಯಾಗಿರಬೇಕು. ತೈಲಾಭ್ಯಂಜನ ವಸ್ತ್ರ ಆಭರಣ ಸುಗಂಧದ್ರವ್ಯ ಷಡುರಸಾನ್ನಾದಿ ಸತಿಸಂಗ ಸುಖ ದುಃಖಗಳ ಲಿಂಗಮುಖ ಮುಂತಾಗಿ ಪ್ರಸಾದಭೋಗಿಯಾಗಿರ್ಪುದು. ಯಮ ನಿಯಮಾದಿ ಅಷ್ಟಾಂಗ ಯೋಗದಲ್ಲಿ ನಿರತನಾದಡೇನು ? ದಾಸೋಹಕ್ಕೆ ಸ್ವಯವಾಗಿರಬೇಕು. ಗೃಹ ಅರಮನೆ ತೋಟ ಗೋಕುಲ ವಾಹನ ಪರಿಜನ ಕೀರ್ತಿಜನದೊಳಗಿರ್ದು ಶರಣರ ಮರೆದಿರಲಾಗದು. ಇಂದ್ರಾದಿ ದೇವತೆಗಳು ಅಷ್ಟದಿಕ್ಕಿನಲ್ಲಿ ಕರ್ತರಾಗಿ ನಿಮ್ಮ ನಿಜ ಭೃತ್ಯರಾಗಿರ್ದರು. ಇಂತೀ ಅಷ್ಟಸಂಪಾದನೆ ನಾಲ್ವತ್ತೆಂಟರಿಂದ ಕೂಡಲಚೆನ್ನಸಂಗಯ್ಯನ ಶರಣರು ಲೋಕಾಧಿಪತಿಗಳು
--------------
ಚನ್ನಬಸವಣ್ಣ
ಇನ್ನಷ್ಟು ... -->