ಅಥವಾ

ಒಟ್ಟು 113 ಕಡೆಗಳಲ್ಲಿ , 26 ವಚನಕಾರರು , 87 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು, ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ, ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ, ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಶುದ್ಧಗುರು ಬಸವಣ್ಣ, ಸಿದ್ಧಗುರು ಚೆನ್ನಬಸವಣ್ಣ, ಪ್ರಸಿದ್ಧಗುರು ಪ್ರಭುರಾಯನು. ತನುತ್ರಯ ಮಲತ್ರಯ ಆರನತಿಗಳೆದು, ಲಿಂಗತ್ರಯ ಪ್ರಸಾದ ಮೂರನು ಪರಿಭವಿಸಿ ವಶಮಾಡಿ ಎನ್ನ ರಕ್ಷಿಸಿದ ಬಸವ, ಚೆನ್ನಬಸವ, ಪ್ರಭು ಶರಣೆಂದು ಬದುಕಿದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಅಪ್ರತಿಮಭಸಿತವನು ಸುಪ್ರಭಾಚಾರ್ಯನಿಂದೆ ಅರಿದು ಅವಧರಿಸಿದ ಅನುಪಮ ಶರಣಂಗೆ ಅಜ ವಿಷ್ಣು ಇಂದ್ರಾದಿ ಮನುಮುನಿ ಷಡುದರ್ಶನ ಸಕಲ ನಿಃಕಲ ಸಂಭವಿತರೆಲ್ಲ ಶರಣು ಶರಣೆಂದು ಬದುಕುವರು ಕಾಣಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ ಪರಮಸುಖಿಯಾಗಿಪ್ಪವರಾರು ಹೇಳಾ ? ನಿಜದ ನಿರ್ಣಯವನರಿದು ಭಜನೆ ಭಾವನೆಯಳಿದು ತ್ರಿಜಗಪತಿಯಾಗಿಪ್ಪವರಾರು ಹೇಳಾ ? ಕೋಡಗದ ಮನದೊಳಗೆ ಮನವಿರಹಿತನಾಗಿ ಗಮನಗೆಡದಿಪ್ಪರಿನ್ನಾರು ಹೇಳಾ ? ಹಗೆಯಲ್ಲಿ ಹೊಕ್ಕು ಹಗೆಯಳಿದು ಸುಖಿಯಾಗಿ ತನಗೆ ತಾ ಕೆಳೆಯಾಗಿಪ್ಪರಾರು ಹೇಳಾ ? ಒಳಹೊರಗೆ ಸರ್ವಾಂಗ ಲಿಂಗವೆ ತಾನಾಗಿ ಇರಬಲ್ಲ ಪರಮಾರ್ಥರಾರು ಹೇಳಾ ? ಕಲಿದೇವಾ, ನಿಮ್ಮ ಶರಣ ಚೆನ್ನಬಸವಣ್ಣನ ನಿಲವನರಿದು, ಶರಣೆಂದು ನಾನು ಸುಖಿಯಾದೆನು.
--------------
ಮಡಿವಾಳ ಮಾಚಿದೇವ
ಲಿಂಗಜಂಗಮ ಸಂಗಸನ್ನಿಹಿತನಾದ ಶರಣಂಗೆ ಭಾವವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ, ಗುಣಶೂನ್ಯ ಪ್ರಾಣ, ಭ್ರಾಂತಿವಿರಹಿತ ಭಾವ, ಧರ್ಮವಿಲ್ಲದ ಇಂದ್ರಿಯ, ಇಂತು ಸಕಲ ವಿಷಯ ಹೊಂದಿ ಶರಣೆಂದು ನೈಷ್ಠೆವೆರೆದು ನಲಿಯುತಿರ್ದವು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಚ್ಚ ನಿಚ್ಚ ಲಿಂಗಪೂಜೆಯ ಮಾಡಿ, ನಿಚ್ಚ ನಿಚ್ಚ ಜಂಗಮಕ್ಕೆ ಶರಣೆಂದು, ಜಂಗಮಪೂಜೆಯ ಮಾಡಿ, ನಿಚ್ಚ ನಿಚ್ಚ ಪಾದೋದಕ ಪ್ರಸಾದವ ಕೊಂಡು, ಮತ್ತೆ, ಆ ಜಂಗಮವ ದ್ಥಿಕ್ಕರಿಸಿ ನುಡಿದು, ಹುಸಿಯಟಮಟವನಾರೋಪಿಸಿ, ಜಂಗಮದ ಕೈಗೆ, ನಾಲಗೆಗೆ ಶಿಕ್ಷೆಯ ಮಾಡಬೇಕೆಂಬವರಿಗೆ ಗುರುವುಂಟೆ? ಲಿಂಗವುಂಟೆ? ಜಂಗಮವುಂಟೆ? ಪಾದೋದಕ ಪ್ರಸಾದವುಂಟೆ? ಇಲ್ಲವಾಗಿ. ಅವರಿಗೆ ಪೂಜಾಫಲ ಮುನ್ನವೆಯಿಲ್ಲವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತನ್ನ ತಂದುಕೊಟ್ಟ ಚನ್ನಗುರುಲಿಂಗವ ಬ್ಥಿನ್ನವಿರಹಿತನಾಗಿ ಮುನ್ನ ಕರದಲ್ಲಿಟ್ಟು ಹೃದಯಕಾಸಾರದುದಕ ಮಜ್ಜನಗೈದು, ಅಷ್ಟದಳಕುಸುಮವನಿಟ್ಟು ಶರಣೆಂದು ಮಾಡುವೆನು. ಕರಸ್ಥಲದ ಲಿಂಗವ ಮನಸ್ಥಲದಲ್ಲಿ ಧರಿಸಿ, ಉನ್ಮನಸೋದಕದಿ ಮಜ್ಜನಕ್ಕೆರೆದು ತ್ರಿದಳಕುಸುಮವನಿಟ್ಟು ಶರಣೆಂದು ಮಾಡುವೆನು. ಮನಸ್ಥಲದ ಲಿಂಗವನು ಭಾವಸ್ಥಲದಲ್ಲಿ ಧರಿಸಿ, ಚಿಜ್ಜಲದಿಂ ಮಜ್ಜನಕ್ಕೆರೆದು ಸಾಸಿರದಳಕುಸುಮವನಿಟ್ಟು ಶರಣೆಂದು ಮಾಡುವೆನು. ಭಾವಸ್ಥಲದ ಲಿಂಗವನು ಸರ್ವಾಂಗದಲ್ಲಿರಿಸಿ ಸತ್ಯೋದಕದಿಂ ಮಜ್ಜನಕ್ಕೆರೆದು, ಪಶ್ಚಿಮಕೋಣೆಯಲ್ಲಿಪ್ಪ ನಿಶ್ಚಿಲಕುಸುಮವನಿಟ್ಟು ಶರಣು ಶರಣೆಂದು ಬದುಕಿದೆನು ನಿರಂಜನ ಚನ್ನಬಸವಲಿಂಗವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು ಪರಮಗುರುಮುಖದಿಂದೆ ಸಾದ್ಥಿಸಿ, ಕರಕಂಜದೊಳಗಿರಿಸಿ, ಉರವಣಿ ಬಟ್ಟೆಗಳ ಸವರಿ, ಕಳೆವ ಕರಡವಿಯೊಳೆಸೆವುತ, ಪರಿಪರಿಯಿಂದೆ ಅಣುಮಾತ್ರ ಮೂರು ವಿದ್ಯೆಕೆ ಮರವೆಯ ತಾರದೆ, ಎಡಬಲದ ನಡೆನುಡಿ ಜಾಣರನೊಳಕೊಳ್ಳದೆ ಹಿಡಿತ ಬಿಡಿತಗಳರಿದು, ಜರೆದು ನೂಂಕುತ ಹಿಡಿದುಕೊಂಬುತ ಶರಣು ಶರಣೆಂದು ಬೆರೆದು ಬೆರಗಾಗಿರ್ಪ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ ಭೃಂಗ ಕೀಡಿಯೋಪಾದಿಯಲ್ಲಿ ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಬ್ಥಿನ್ನಭೇದವನಳಿದು ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ, ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು, ಶರಣೆಂದು ಮನ್ನಣೆಯ ಕೊಡದೆ, ಭೂತಸೋಂಕಿದ ಮನುಜನೋಪಾದಿಯಲ್ಲಿ ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ, ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠದೀಕ್ಷೆ. ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ? ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?
--------------
ಅಕ್ಕಮಹಾದೇವಿ
ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ ಭ್ರಮಿತರು ನೀವು ಕೇಳಿರೆ! ಮುಕ್ಕುಳಿಸಿದ ನೀರ ಮಜ್ಜನಕ್ಕೆರವುದಿದಾವಾಗಮಾಚಾರ? ಸರವ ಕಟ್ಟಿ, ಪತ್ರೆಯ ಹರಿದು ಹಾಕೂದಿದಾವ ಮಂತ್ರದೊಳಗು? ಸರ್ರನೆ ಹರಿತಂದು ಸುರ್ರನೆ ಕಲ್ಲಲಿಡುವುದಿದಾವ ಪೂಜೆ? ಬಹುಬುದ್ಧಿಗಲಿತು, ಬಹಳ ನುಡಿ ಶಿವಭಕ್ತರ ಕೂಡೆ ಸಲ್ಲದು, ಶರಣೆಂದು ಶುದ್ಧರಪ್ಪುದು. ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರ ನಿಲುವನು ತಾನೆ ಬಲ್ಲನು.
--------------
ಹಾವಿನಹಾಳ ಕಲ್ಲಯ್ಯ
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು, ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು, ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ. ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ, ಗುರುವೆ, ಎನ್ನ ಪರಮಗುರುವೆ ಬಾರಯ್ಯಾ, ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ
--------------
ಬಸವಣ್ಣ
ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ. ಆಡಬಹುದು ಪಾಡಬಹುದಲ್ಲದೆ, ನುಡಿದಂತೆ ನಡೆಯಲು ಬಾರದು ಎಲೆ ತಂದೆ. ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.
--------------
ಅಕ್ಕಮಹಾದೇವಿ
ಇನ್ನಷ್ಟು ... -->