ಅಥವಾ

ಒಟ್ಟು 88 ಕಡೆಗಳಲ್ಲಿ , 30 ವಚನಕಾರರು , 88 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಾರ್ಚನೆಯಿಂದ ಜಂಗಮಾರ್ಚನೆಯದ್ಥಿಕ ನೋಡಾ. ಅದೆಂತೆಂದೊಡೆ : ಆದಿಯಲ್ಲಿ ಲಿಂಗಾರ್ಚನೆಯಮಾಡಿದ ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು. ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು, ಜಂಗಮಾರ್ಚನೆ ಪ್ರಳಯಾತೀತವೆಂದರಿದು ಜಂಗಮವೇ ಪ್ರಾಣವೆಂದು ನಂಬಿ, ಅನಂತಕೋಟಿ ಪ್ರಳಯಂಗಳ ಮೀರಿ, ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ : ವಿಷಯವಿಕಾರವ ಸುಟ್ಟಿರಬೇಕು. ಬಯಕೆ ನಿರ್ಬಯಕೆಯಾಗಿರಬೇಕು. ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು. ಅದೆಂತೆಂದೊಡೆ : ``ವಿಕಾರಂ ವಿಷಯಾತ್‍ದೂರಂ ರಕಾರಂ ರಾಗವರ್ಜಿತಂ | ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||'' ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಏನು ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹುಮಾತ್ರದಲ್ಲಿಯೆ ನವಪದ್ಮ ನವಶಕ್ತಿಗಳುತ್ಪತ್ಯ ಲಯವು. ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿಯೆ ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರ ಅಷ್ಟನಾದ ಉತ್ಪತ್ಯ ಲಯವು. ದಶಚಕ್ರ ಮೊದಲಾಗಿ, ಚತುರ್ವೇದ ಗಾಯತ್ರಿ ಅಜಪೆ ಕಡೆಯಾಗಿ, ಸಮಸ್ತವು ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದಲ್ಲಿ ಉತ್ಪತ್ಯ ಲಯವೆಂದು ಬೋದ್ಥಿಸಿ ಕೃತಾರ್ಥನ ಮಾಡಿದ ಮಹಾಗುರುವಿನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ? ಅದು ಉಪಮಾತೀತ ! ಭಕ್ತನೊಳಗೆ ಜಂಗಮವಡಗಿದಡೆ ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು
--------------
ಚನ್ನಬಸವಣ್ಣ
ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ಬಸವ. ಶತಕೋಟಿಬ್ರಹ್ಮಾಂಡಂಗಳು ನಿನ್ನ ರೋಮದ ತುದಿಯಲ್ಲಿಪ್ಪವು ಬಸವ. ಎನ್ನ ಭವವೆಂಬ ವಾರಿದ್ಥಿಯ ದಾಂಟುವುದಕ್ಕೆ ನಿನ್ನ ಬಾಲತುದಿಯ ಎಯ್ದಿದೆನು ಬಸವ. ಆರಾಧ್ಯಪ್ರಿಯ ಸಕಳೇಶ್ವರಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಸಕಳೇಶ ಮಾದರಸ
ನಿರಂಜನಜಾಗ್ರದಲ್ಲಿನಿಂದಡೆ ಭಕ್ತನೆಂಬೆ. ನಿರಂಜನಸ್ವಪ್ನದಲ್ಲಿನಿಂದಡೆ ಮಹೇಶ್ವರನೆಂಬೆ ನಿರಂಜನಸುಷುಪ್ತಿಯಲ್ಲಿ ನಿಂದಡೆ ಪ್ರಸಾದಿಯೆಂಬೆ. ನಿರಂಜನತೂರ್ಯದಲ್ಲಿ ನಿಂದಡೆ ಪ್ರಾಣಲಿಂಗಿಯೆಂಬೆ. ನಿರಂಜನವ್ಯೋಮದಲ್ಲಿ ನಿಂದಡೆ ಶರಣನೆಂಬೆ. ನಿರಂಜನವ್ಯೋಮಾತೀತದಲ್ಲಿ ನಿಂದಡೆ ಐಕ್ಯನೆಂಬೆ. ನಿರಂಜನವ್ಯೋಮಾತೀತಕತ್ತತ್ತವಾಗಿಹ ಮಹಾಘನ ನಿರ್ವಾಣಾತೀತವೆ ಅಂಗವಾದ ಮಹಾಶರಣಂಗೆ ಭವಹಿಂಗಿತ್ತಾಗಿ, ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ ಸ್ವತಂತ್ರ ಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ. ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ. ಅಂಗಲಿಂಗಗಳ ಸಂಯೋಗವ ತೋರಿ, ಅಖಂಡ ಪರಶಿಲಿಂಗೈಕ್ಯವನುಂಟುಮಾಡಿ ಕೊಡುವ ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ. ಇದಕ್ಕೆ ಶಿವರಹಸ್ಯೇ ; 'ಯದ್ಭಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ ೀ ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ || ಯತ್ಪ್ರಸಾದಾಭಿದಂ ಸ್ಥಾನಂ ತದ್ಬೋಧೋ ನಿರಂಕುಶಃ ೀ ಯತ್ಪ್ರಣಲಿಂಗಕಂ ನಾಮ ತತ್ಸ್ವಾತಂತ್ರೈಮುದಾಹೃತಂ || ಯದಸ್ತಿ ಶರಣಂ ನಾಮ ಹ್ಯಲುಪ್ತಾ ಶಕ್ತಿರುಚ್ಯತೇ ೀ ಯದೈಕ್ಯಸ್ಥಾನಮೂರ್ಧಸ್ಥಾ ಹ್ಯನಂತಾಶಕ್ತಿರುಚ್ಯತೇ ||ú ಎಂದುದಾಗಿ, ಇಂತಪ್ಪ ಷಟ್‍ಸ್ಥಲಗಳಲ್ಲಿ ಷಡ್ವಿಧ ಶಕ್ತಿಗಳ ಸ್ಥಳಕುಳಂಗಳ ತಿಳಿದು, ಷಡ್ವಿಧ ಲಿಂಗಗಳಲ್ಲಿ ಧ್ಯಾನ ಪೂಜಾದಿಗಳಿಂದ ಅಂಗಗೊಂಡು ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‍ಸ್ಥಲಬ್ರಹ್ಮಿಗಳಾಗರು. ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆ ಕಣ್ಗಾಣದೆ ಹೊರಿಸುತ್ತ ಪರದಾರ ದಾಶಿ ವೇಶಿ ಸೂಳೆಯರ ಕೂಡಿ ಭುಂಜಿಸಿ ತೊಂಬಲತಿಂಬ ಹೇಸಿ ಮೂಳರು ಪೋತರಾಜ, ಜೋಗಿ, ಕ್ಷಪಣರಂತೆ ಜಟಾ, ತುರುಬು, ಬೋಳುಮುಂಡೆಗೊಂಡು ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ ವಿರಕ್ತ ಷಟ್‍ಸ್ಥಲಬ್ರಹ್ಮಿಗಳೆನಬಹುದೇನಯ್ಯ ? ಅಂತಪ್ಪ ಅನಾದಿ ಷಟ್‍ಸ್ಥಲಬ್ರಹ್ಮದ ಷಡ್ವಿಧಶಕ್ತಿಯನರಿದು ವಿರಕ್ತ ಜಂಗಮ ಷಟ್‍ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎನ್ನಾಕಾರವೆ ನೀನಯ್ಯ ಬಸವಣ್ಣ. ನಿ [ನ್ನಾಕಾರವೆ] ಕೋಲ ಶಾಂತ. ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋಯೆಂಬೆ. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ. ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ. ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕೆಳಗೇಳು ಲೋಕಂಗಳಿಲ್ಲದ ಮುನ್ನ, ಮೇಲೇಳು ಲೋಕಂಗಳಿಲ್ಲದ ಮುನ್ನ ಸಹಸ್ರ (ಸಮಸ್ತ ?) ಬ್ರಹ್ಮಾಂಡಗಳಿಲ್ಲದ ಮುನ್ನ, ಅಲ್ಲಿಂದತ್ತತ್ತ; ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ ! ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ, ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು ನಾನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ, ಜಂಗಮಪ್ರೇಮಿಗಳಾರನೂ ಕಾಣೆನಯ್ಯ. ಲಿಂಗಪೂಜಕರನಂತರುಂಟು ಜಗದೊಳಗೆ, ಜಂಗಮಪೂಜಕರಾರನೂ ಕಾಣೆನಯ್ಯ. ಲಿಂಗಪ್ರಾಣಿಗಳನಂತರುಂಟು ಜಗದೊಳಗೆ, ಜಂಗಮಪ್ರಾಣಿಗಳಾರನೂ ಕಾಣೆನಯ್ಯ. ಲಿಂಗದ ಬಾಯಿ ಜಂಗಮವೆಂದರಿದು ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು. ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ? ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಹಿತವಾಗಿಹುದು. ಇಂತಿವರ ಭೇದವ ಬಸವಣ್ಣ ಬಲ್ಲನು. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು, ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ, ಗುರುವೆಂದಲ್ಲಿಯೆ ನೀನೆಂದು ನಡೆದವನ, ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ, ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು. ಎನ್ನ ಮನವ ನಿರ್ಮಲ ಮಾಡಿದನಯ್ಯಾ, ಚೆನ್ನಬಸವಣ್ಣನು. ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ, ಪ್ರಭುದೇವರು. ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ, ತಮ್ಮೊಳಿಂಬಿಟ್ಟುಕೊಂಡ ಕಾರಣ, ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಇನ್ನಷ್ಟು ... -->