ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನಿಂದ ತಾನುದಿಸಿದ ಬಿಂದುವಿನಿಂದಾಗಿ ನಿಂದುದೊಂದು ಬಿಂದು. ಬಿಂದು ಬೇರಾಗಿ ಬೆರಸಿಕೊಂಡಲ್ಲಿ ಬಿಂದು ಬಿಚ್ಚಿ ಹಿಂದು ಮುಂದು ನಿಲಿಸಿದರೆ ಬಂಧ ಆಗ ಬಯಲಾಯಿತ್ತು. ತಂದೆಯು ನೋಡಿ ಕಂದನ ಕೈವಿಡಿದಲ್ಲಿ ಮುಂದುಗಂಡೆನು ಮೂದೇವರರಿಯದ ಬೇಹಾರವನು. ಕೊಡಲಿಲ್ಲ ಕೊಳಲಿಲ್ಲದ ಸಡಗರ ಸ್ವಯವಾದಲ್ಲಿ ಸತಿಭಾವತಪ್ಪಿ ಗುರುನಿರಂಜನ ಚನ್ನಬಸವಲಿಂಗಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನನರಿದು ಹಿಡಿದು ಬಂದ ಶರಣ ಎಂಟರಲ್ಲಿ ನಿಂದು, ಏಳರಲ್ಲಿ ನಡೆದು, ಒಂದರಲ್ಲಿ ನಿಂದು, ಎಂಟರಲ್ಲಿ ನಡೆದು, ಒಂದರಲ್ಲಿ ನಿಂದು, ಆರರಲ್ಲಿ ನಡೆದು, ಒಂದರಲ್ಲಿ ನಿಂದು, ನಾಲ್ಕರಲ್ಲಿ ನಡೆದು, ಒಂದರಲ್ಲಿ ನಿಂದು ಮೂರರಲ್ಲಿ ನಡೆದು ಒಂದರಲ್ಲಿ ನಿಂದು, ಮೂರರಲ್ಲಿ ನಡೆದುಡುಗಿದ ಮತ್ತೆ ಒಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೆ ಮೂರರಲ್ಲಿ ತನುಮನಭಾವವೆರೆದು ನಿಂದ ಮಹಿಮಂಗೆ ಗುರುನಿರಂಜನ ಚನ್ನಬಸವಲಿಂಗ ಕರತಳಾಮಳಕ ಕಡೆಗಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವಿಡಿದು ಮಾಡಿದ ಪದಾರ್ಥವು ಘನಲಿಂಗಕ್ಕೆ ಸಲ್ಲದು. ಮನವಿಡಿದು ಮಾಡಿದ ಪದಾರ್ಥವು ಅನುವಿಂಗೆ ಸೊಗಸದು. ಧನವಿಡಿದು ಮಾಡಿದ ಪದಾರ್ಥವು ಪರಮಲಿಂಗಕ್ಕೆ ಸಮನಿಸದು. ಅದು ಕಾರಣ ತನು ಮನ ಧನವಿಡಿದ ಸುಖಿಗಳು ಗುರುನಿರಂಜನ ಚನ್ನಬಸವಲಿಂಗಕ್ಕತ್ತತ್ತ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಪ್ಪಿಸಿ ಒಪ್ಪಿಸಿ ಒಲಿಸಿಕೊಂಡು ಬಂದು ನಡೆವ ಮಡದಿಯ ಸಡಗರವ ನೋಡಾ! ಕಡುಲೋಬ್ಥಿ ಮನೆಯಗಂಡನೊಂದಿಗೆ ಬಾಳಿ ಅರಳುಪ್ಪರಿಗೆಯಲ್ಲಿ ಸುಪ್ಪತ್ತಿಗೆಯ ಮೇಲೆ ಸುಳಿದಾಡುವ, ಶುದ್ಧನ ಕಳೆಯ ನೆರೆದಪ್ಪಿ ಕಾಣುವಳು ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನು ಇಂಪುಗೊಂಡು ಮನ ಭಾವ ಬೆಚ್ಚಿ ಮುಂದುವರಿದು ಮಾಡಲು ಭಕ್ತಿರಸ ಮನ ಸೊಂಪುಗೊಂಡು ಭಾವ ತನು ಕರಗಿ ಮಚ್ಚುಗೊಂಡು ಮಾಡಲು ಭಕ್ತಿಯ ಮಧುರಭಾವ ತರಹರಗೊಂಡು ತನು ಮನ ತುಂಬಿ ಕಂಗಳರತಿ ಕಡೆಗುಕ್ಕಿಮಾಡಲು ಭಕ್ತಿಯ ಸೌಖ್ಯ. ಇಂತು ಶ್ರದ್ಧೆ ಸಾವಧಾನಾನಂದವೆಂತೆಂಬ ಭಕ್ತಿತ್ರಯದ ಬೆಳೆಯೊಳಗೊಪ್ಪುತಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನ ನೇಮಿಸಿ ಕಳಿವಿದಖಂಡಪರಶಿವನು ತನ್ನಿಂದೆ ತಾ ಬಂದು ನಿಂದಲ್ಲಿ, ತನತನಗೆ ಬಂದ ಬಂಧವನರಿದು ಹಿಂದುಮುಂದರಿಯದೆ ಚಂದಚಂದದಲಿ ಅರ್ಪಿಸಿಕೊಂಡು ಸುಖಿಸುವನಲ್ಲದೆ, ಒಂದನರಿಯದೆ ಸಂದವರೆಂದು, ಬಂದ ಬಂದ ಪದಾರ್ಥವನು, ಸಂದ್ಥಿ ಸಂದ್ಥಿಸಿ ಕೊಟ್ಟು ಕೊಂಡು, ಬೆಂದುಹೋಗುವ ಮಂದಮತಿಯಂತಲ್ಲ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನ ತಂದುಕೊಟ್ಟ ಚನ್ನಗುರುಲಿಂಗವ ಬ್ಥಿನ್ನವಿರಹಿತನಾಗಿ ಮುನ್ನ ಕರದಲ್ಲಿಟ್ಟು ಹೃದಯಕಾಸಾರದುದಕ ಮಜ್ಜನಗೈದು, ಅಷ್ಟದಳಕುಸುಮವನಿಟ್ಟು ಶರಣೆಂದು ಮಾಡುವೆನು. ಕರಸ್ಥಲದ ಲಿಂಗವ ಮನಸ್ಥಲದಲ್ಲಿ ಧರಿಸಿ, ಉನ್ಮನಸೋದಕದಿ ಮಜ್ಜನಕ್ಕೆರೆದು ತ್ರಿದಳಕುಸುಮವನಿಟ್ಟು ಶರಣೆಂದು ಮಾಡುವೆನು. ಮನಸ್ಥಲದ ಲಿಂಗವನು ಭಾವಸ್ಥಲದಲ್ಲಿ ಧರಿಸಿ, ಚಿಜ್ಜಲದಿಂ ಮಜ್ಜನಕ್ಕೆರೆದು ಸಾಸಿರದಳಕುಸುಮವನಿಟ್ಟು ಶರಣೆಂದು ಮಾಡುವೆನು. ಭಾವಸ್ಥಲದ ಲಿಂಗವನು ಸರ್ವಾಂಗದಲ್ಲಿರಿಸಿ ಸತ್ಯೋದಕದಿಂ ಮಜ್ಜನಕ್ಕೆರೆದು, ಪಶ್ಚಿಮಕೋಣೆಯಲ್ಲಿಪ್ಪ ನಿಶ್ಚಿಲಕುಸುಮವನಿಟ್ಟು ಶರಣು ಶರಣೆಂದು ಬದುಕಿದೆನು ನಿರಂಜನ ಚನ್ನಬಸವಲಿಂಗವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಮಸವ ತರಿದು ಕಲ್ಪನೆಯ ಕಳೆದು, ಸಂಶಯಗುಣವಳಿದು, ಭ್ರಾಂತಿವಿರಹಿತವಾಗಿ, ಕಾಯಮನಪ್ರಾಣಭಾವಕ್ಕೆ ಪ್ರಭೆಯನೂಡಿ, ಮತ್ಸ್ಯ ಕೂರ್ಮ ವಿಹಂಗ ಗತಿಯರಿದು ಕಂಡು ಮರೆದು ಪರಿಣಾಮಮುಖಿ ತಾನೆ ಪ್ರಾಣಲಿಂಗಿ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ
--------------
ದೇಶಿಕೇಂದ್ರ ಸಂಗನಬಸವಯ್ಯ
ತಾನೇ ತನ್ನ ಲೀಲೆಯಿಂದೆ ಒಂದು ಎರಡಾಗಿ, ಮೂರು ಮೂರಾಗಿ, ಆರು ಆರಾಗಿ, ಮೂವತ್ತಾರು ಮೂವತ್ತಾರಾಗಿ, ಇನ್ನೂರ ಹದಿನಾರು ಇನ್ನೂರ ಹದಿನಾರಾಗಿ, ವಿಶ್ವಪರಿಪೂರ್ಣವಾಗಿ ತನ್ನ ತಾನೇ ಇನ್ನೂರಹದಿನಾರು ಇನ್ನೂರಹದಿನಾರಾಗಿ ಮತ್ತೆ ಮೂವತ್ತಾರು ಮೂವತ್ತಾರಾಗಿ, ಮತ್ತೆ ಆರು ಆರಾಗಿ, ಮತ್ತೆ ಮೂರು ಮೂರಾಗಿ, ಮತ್ತೆ ಒಂದೊಂದಾಗಿ, ಮತ್ತೆ ಗುರುನಿರಂಜನ ಚನ್ನಬಸವಲಿಂಗವಾಗಿ ನಿರ್ವಯಲಾದುದು, ಇದೇ ಒಂದಾಶ್ಚರ್ಯ. ಇದನುಳಿದು ಆಶ್ಚರ್ಯವೆಂಬುದು ಅಶುದ್ಭವಾಕು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಸೂತ್ರಚೈತನ್ಯಕ್ಕಿದ್ದನೊಬ್ಬ, ಮನಸೂತ್ರಚೈತನ್ಯಕ್ಕಿದ್ದನೊಬ್ಬ, ಆತ್ಮಸೂತ್ರಚೈತನ್ಯಕ್ಕಿದ್ದನೊಬ್ಬ, ಈ ಮೂವರ ಮುಂಭಾರವ ಹೊತ್ತು ನಡೆಯದೆ, ಮರೆದು ಬಳಸಿದರ್ಥದ ಬಡ್ಡಿಯನರಿದು ಕೊಟ್ಟು ಮೂಲದ್ರವ್ಯದಲ್ಲಡಗಿ ಅಮರಿಸಬಲ್ಲರೆ ಆದಿಯ ಭಕ್ತನಹುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನ ನೆವದಿಂದೆ ತಾ ಬಂದು ತಾನು ತಾನಾಗಿ ಆಡಬಾರದುದನಾಡಿ ಉಣಬಾರದುದನುಂಡು, ಕೂಡಬಾರದುದ ಕೂಡಿ ಕುರುಹಳಿದ ಗುರುನಿರಂಜನ ಚನ್ನಬಸವಲಿಂಗ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಯಿ ಮಗಳ ಸಂಗವ ಮಾಡಿ ತಂದೆಗೆ ಹುಟ್ಟಿದ ಮಗನ ಕೈಯೊಳೆತ್ತಿ ಊರಬಿಟ್ಟು ಕಡೆಗೆ ಬರುವಲ್ಲಿ, ಕಾಡಬಂದವರಾರು ಕೂಡಬಂದರು ನೋಡಾ. ಕೆಡಿಸಬಂದವರಾರು ನುಡಿಸಬಂದರು ಕಾಣಾ. ಸುಖಿಸಬಂದವರಾರು ಸುಳಿದುನಿಂದರು ಕೇಳಾ. ಗೋಮಕ್ಕಳೆಲ್ಲರು ಗುಲಾಮರಾದಲ್ಲಿ ಗಸಣಿಯಡಗಿತ್ತು. ಗುರುನಿರಂಜನ ಚನ್ನಬಸವಲಿಂಗಕ್ಕೆ ಶರಗ ಹಾಸಿದರೆ ಮರಳಿ ಹೇಳದ ಸುಖವೆನಗೆ ಸ್ವಯವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ತೋರಿಕೆಯ ಕೊಂಬನೆ ಸಾಧಕದಾಟದ ಸವಿರೂಪದಂತೆ. ತೋರಿಕೆಯ ಕೊಂಬನು ಕಾಲವರುಷ ಬರುವಿಂಗೆ ಹಲಾಯುಧನ ಭಾವದಂತೆ. ತೋರಿಕೆಯ ಕೊಳ್ಳಲರಿಯ ಇಹಪರವಿಡಿದು. ತೋರಿಕೆಯ ಕೊಳ್ಳಬಲ್ಲ ಗುರುನಿರಂಜನ ಚನ್ನಬಸವಲಿಂಗವೆಂಬ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಮಸಗುಣದಲ್ಲಿ ತಲ್ಲೀಯವಾದ ನಾಮದೇಹಿಗಳ ನಡೆ ಲಿಂಗದೊಳಡಗದು, ನುಡಿ ಲಿಂಗದೊಳಡಗದು, ನೋಟವು ಲಿಂಗದೊಳು ನಾಟದು, ಮಾಟ ಮಾಣದು. ಮಂಜಿನ ಮರೆಯಲ್ಲಿ ಮುಳುಗಿ, ಗಂಜಿಯ ಕಳೆದು ನಿರಂಜನದ ನಿಲುವೆಂದಡೆ ಅಂಜಿ ಅಲಸಿದನು ಅಪ್ಪಿಕೊಳ್ಳದೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಮಸಗೊಂಡು ತಾಪತ್ರಯದಲ್ಲಿ ಬೆಂದು ಹುಸಿರೂಹಿನಲ್ಲಿ ಹೊಡೆದಾಡುತಿರ್ದ ಪ್ರಾಣಿಗಳು ಮೃಡನಂಗಗೊಂಡಮಹಿಮರ ಘನತೆಯ ನೋಡಿ ಕೇಳಿ ತಾವಾದೆವೆಂಬ ತರಳನುಡಿ ಮನಗೊಂಡು ಗುರುವೆಂದು ಲಿಂಗವೆಂದು ಜಂಗಮವೆಂದು ಪಾದೋದಕಪ್ರಸಾದವೆಂದು ಪಂಚಾಚಾರ ಪ್ರಮಾಣವಿಡಿದು ವಂಚನೆವೈದಿ ಸಂಚಿತಪ್ರಾಪ್ತಿಯನರಿದು ಆಗಾಮಿಯಿಂದೆ ಅಂತಕನಾಳಿನ ಕೈವಶ ಕಡೆಗಾಣದಿಪ್ಪರಿಗೆ ಜಾಣಪದವೆಲ್ಲಿಹದೊ ಗುರುನಿರಂಜನ ಚನ್ನಬಸವಲಿಂಗಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಶುದ್ಧಿಯನರಿಯದೆ ಜೀವಭಾವಿಯಾಗಿ ಕೆಟ್ಟನು ವೇದಾಂತಿ. ಪ್ರಾಣಶುದ್ಧಿಯನರಿಯದೆ ಭಿನ್ನಭಾವಿಯಾಗಿ ಕೆಟ್ಟನು ಸಿದ್ಧಾಂತಿ. ಆತ್ಮಶುದ್ಧಿಯನರಿಯದೆ ಹುಸಿಕಲಾಭಾವಿಯಾಗಿ ಕೆಟ್ಟನು ಭಿನ್ನಯೋಗಿ. ಈ ವಿಚಾರವಂತಿರಲಿ, ತ್ರಿವಿಧ ಶುದ್ಧಿಯನರಿದು, ತ್ರಿವಿಧ ಭಕ್ತಿಪ್ರಭೆಯೊಳು ನಿಂದು, ತ್ರಿವಿಧಲಿಂಗಕೃಪಾಂಬುವಿನಭಿಷೇಕಪರಿಣಾಮಿಯಾಗಿ ವರ್ತಿಸುವುದೇ ಘನಗಂಭೀರ ವರ್ತನವಹುದೆಂಬೆ; ಆ ವರ್ತನದೊಳಗೆ ಕರ್ತು ಚನ್ನವೃಷಭೇಂದ್ರಲಿಂಗವು ಸುಖಮುಖಿಯಾಗಿಪ್ಪನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಮನಭಾವವನಿತ್ತು ತ್ರಿವಿಧಲಿಂಗಸನ್ನಿಹಿತನಾದ ಶರಣಂಗೆ ತನುಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ ? ಮನಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ ? ಭಾವಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ ? ತನುಮನಭಾವ ಪ್ರಕೃತಿಯಲ್ಲಿ ವರ್ತಿಸಿ ಲಿಂಗಾಂಗಸಂಬಂಧಿಗಳೆಂಬ ಮಂಗ ಹೊಲೆಯ ಭಂಗರುಗಳನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾಯಿಯಲ್ಲಿ ಬಯಸಿ ತಂದ ತಲೆಯ ಕೈಯೊಳಿಟ್ಟು ಕಾಣದಿರ್ದೊಡೆ ಸವಿಸುಖ ತಪ್ಪಿತ್ತು. ಮಣ್ಣೊಳಗೆ ಮುಚ್ಚಿದರೆ ಒಂದನೆಯ ಸುಖ ತಪ್ಪಿತ್ತು. ಜಲದೊಳಗೆ ಮುಚ್ಚಿದರೆ ಎರಡನೆಯ ಸುಖ ತಪ್ಪಿತ್ತು. ಕಿಚ್ಚಿನೊಳಗೆ ಮುಚ್ಚಿದರೆ ಮೂರನೆಯ ಸುಖ ತಪ್ಪಿತ್ತು. ಗಾಳಿಯೊಳಗೆ ಮುಸುಕಲಿಟ್ಟರೆ ನಾಲ್ಕನೆಯ ಸುಖ ತಪ್ಪಿತ್ತು. ಅಂಬರದೊಳಗಡಗಿಸಿದರೆ ಐದನೆಯ ಸುಖ ತಪ್ಪತ್ತು. ಕರ್ತಾರನಲ್ಲಿಟ್ಟು ಕಾಣಿಸದಿರ್ದಡೆ ಆರನೆಯ ಸುಖ ತಪ್ಪಿತ್ತು. ಈ ಸುಖವನರಿಯದೆ ಮತ್ತೆ ಮತ್ತೆ ಮಾಡಿಕೊಂಡರೇನು ಅತ್ತತ್ತಲರಿಯದೆ ವ್ಯರ್ಥವಾಯಿತ್ತು ಗುರುನಿರಂಜನ ಚನ್ನಬಸವಲಿಂಗವು ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾ ದೇವರೆನಿಸಿ ಪೂಜೆಗೊಂಬ ವೀರಮಹೇಶ್ವರಗೆ, ತನಗೊಂದು ಹಿರಿದುಂಟೆ ? ತಾನಾಗಿಹನು ಎಲ್ಲಕ್ಕೂ ಗುರುನಿರಂಜನ ಚನ್ನಬಸವಲಿಂಗ ಶರಣರು ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಶೂನ್ಯಶರಣಂಗೆ ಕುಲವೆಂಬುದೇನು ಹೇಳಾ. ಮನಶೂನ್ಯಶರಣಂಗೆ ಛಲವೆಂಬುದೇನು ಹೇಳಾ. ಪ್ರಾಣಶೂನ್ಯಶರಣಂಗೆ ಧನವೆಂಬುದೇನು ಹೇಳಾ. ಭಾವಶೂನ್ಯಶರಣಂಗೆ ತಪವೆಂಬುದೇನು ಹೇಳಾ. ತ್ರಿಪುಟಿಶೂನ್ಯಶರಣಂಗೆ ಭಿನ್ನವೆಂಬುದೇನು ಹೇಳಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನು ಸರ್ವಶೂನ್ಯ ಲಿಂಗೈಕ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಲೋಭಿಯ ಭಕ್ತಿ ಗುರುದ್ರೋಹ; ಮನಲೋಭಿಯ ಪೂಜೆ ಲಿಂಗದ್ರೋಹ. ಧನಲೋಭಿಯ ದಾಸೋಹ ಜಂಗಮದ್ರೋಹ. ಈ ತ್ರಿವಿಧಲೋಭಿಯ ಸಂಗಸಂಭಾಷಣೆಯಿಂದೆ, ಭವದ ಬಲೆ ಹರಿಯದು ನೋಡಾ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಥ್ಯಮಿಥ್ಯ ನಿರಂಜನ ಶರಣನ ಭಾವ ಕರ್ತು ಭೃತ್ಯತ್ವವ ನುಂಗಿ ಕಡೆಗಾಯಿತ್ತು. ಮರಳಿ ಬರಲೆಡೆಯಿಲ್ಲದೆ ಬಯಲಾದುದನು ಬಸವ ಚನ್ನಬಸವ ಪ್ರಭು ಸಮರಸಾನುಭಾವ ಗುರುನಿರಂಜನ ಚನ್ನಬಸವಲಿಂಗ ತಾನೆ ಬಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಶೂನ್ಯನಾಗಿ ಆಚಾರಲಿಂಗ ಶೂನ್ಯ, ಮನಶೂನ್ಯನಾಗಿ ಗುರುಲಿಂಗ ಶೂನ್ಯ, ಪ್ರಾಣಶೂನ್ಯನಾಗಿ ಶಿವಲಿಂಗ ಶೂನ್ಯ, ಭಾವಶೂನ್ಯನಾಗಿ ಜಂಗಮಲಿಂಗ ಶೂನ್ಯ, ಜ್ಞಾನಶೂನ್ಯನಾಗಿ ಪ್ರಸಾದಲಿಂಗ ಶೂನ್ಯ, ಆತ್ಮಶೂನ್ಯನಾಗಿ ಮಹಾಲಿಂಗಶೂನ್ಯ. ಸರ್ವಶೂನ್ಯನಾಗಿ ಸತಿಪತಿಭಾವದ ಸಲೀಲೆಗೊಮ್ಮೆ ಸಾಕಾರ ಸಂಯೋಗಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ತ್ರಿವಿಧಾನುಗ್ರಹಸಂಬಂಧವಾದ ದೇಹ ಲಿಂಗಕ್ಕೆ ಕ್ಷೇತ್ರವೆಂದು ಸದ್ಗುರುನಾಥ ಕರಸ್ಥಲಕ್ಕೆ ಕೊಟ್ಟ ಲಿಂಗವ ಕಿರಿದು ಮಾಡಿ, ಭೂಕ್ಷೇತ್ರದೊಳಗಿಪ್ಪ ಸ್ಥಾವರವ ಹಿರಿದೆಂದು, ತೊಳಲಿ ಬಳಲಿ ಹೋಗಿ ಅರ್ಚನೆಯಾರಾಧನೆಯ ಮಾಡಿ ಕರ್ಮವ ಕಳೆದು ನಿರ್ಮಲವಾದೆವೆಂಬ ಚರ್ಮಗೇಡಿಗಳಿಗೆ ಎತ್ತಣನುಗ್ರಹ ಎತ್ತಣಭಕ್ತಿಯೈ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಂದೆ ತಾಯಿ ಬಂಧುಬಳಗ ದಂದುಗದ ಸಂದುಬಿಚ್ಚಿ ಗುರುವಿಂಗೆ ಕಂದನಾಗಿ ಲಿಂಗಸತಿಯಾಗಿ ಕೈಕೊಟ್ಟಮೇಲೆ ಅಂದಿನಂತೆ ಅರಿಯಬೇಕಲ್ಲದೆ, ಅರಿವುಗೆಟ್ಟು ಮರವೆಯೊಳ್ನಿಂದು ಸರಿದು ಸಂಸಾರದೊಳು ಕೂಡಿ ಬೆರೆದು ಬೆಟ್ಟವನೇರಿ, ಬರಿಯ ವಾಗದ್ವೈತದೊಳಗಿಪ್ಪ ಕುರಿಮಾನವರು ತೆರವಕಾಣರು ನಮ್ಮ ಗುರುನಿರಂಜನ ಚನ್ನಬಸವಲಿಂಗಪ್ರಸಾದದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...