ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಕ್ರಿಯೆಯನರಿವಲ್ಲಿ ಸ್ಥಾಣುವಿನ ಬಾಯ ತಿಲದಂತೆ, ಆತ್ಮನ ಕಳೆಯ ತಿಳಿವಲ್ಲಿ ಶಿಲೆಯಲ್ಲಿರ್ದ ಬಿಂದು ಒಲವರದಿಂದ ಜಾರುವಂತೆ, ಆ ಅರಿವು ಮಹದಲ್ಲಿ ಬೆರಸುವಾಗ, ವಾರಿಶಿಲೆ ನೋಡ ನೋಡಲಿಕೆ ನೀರಾದಂತೆ ಇರಬೇಕು. ಕಾಯವಶದಿಂದ ಕರ್ಮವ ಮೀರಿ, ಕರ್ಮವಶದಿಂದ ವರ್ಮವಶಗತನಾದಲ್ಲಿ, ಅದೆ ಕಾಯವೆರಸಿ ಎಯ್ದಿದ ಕೈಲಾಸ. ಆ ಭಾವವ ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
--------------
ಮೋಳಿಗೆ ಮಹಾದೇವಿ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ ಎನ್ನಂಗದ ಭಂಗ ಹಿಂಗಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಲಿಂಗದ ಸಂಯೋಗವಾಯಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಪ್ರಸಾದದ ಪರುಷವ ಕಂಡೆ, ಆ ಪರುಷದ ಮೇಲೆ ಮೂರು ಜ್ಯೋತಿಯ ಕಂಡೆ, ಆ ಜ್ಯೋತಿಯ ಬೆಳಗಿನಲ್ಲಿ ಒಂಬತ್ತು ರತ್ನವ ಕಂಡೆ, ಆ ರತ್ನಂಗಳ ಮೇಲೆ ಒಂದು ಅಮೃತದ ಕೊಡನ ಕಂಡೆ. ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ, ಕರದವನೆ ನೆರದ, ನೆರದವನೆ ಕುರುಹನರಿದ, ಅರಿದವನೆ ನಿಮ್ಮನರಿದವ ಕಾಣಾ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಅಂಗದ ಲಿಂಗ ಆತ್ಮನಲ್ಲಿ ವೇಧಿಸಬೇಕೆಂಬುದಕ್ಕೆ ವಿವರ; ತಿಲರಾಶಿಯಲ್ಲಿ ಸುಗಂಧದ ಕುಸುಮವ ದ್ವಂದ್ವವಮಾಡಿ ಕೂಡಿ ಇರಿಸಲಿಕ್ಕಾಗಿ, ಆ ಗಂಧ ತಿಲದಂಗವ ವೇಧಿಸಿ ಆ ತಿಲರಸವ ಭೇದಿಸಿದಂತೆ ಆಗಬಲ್ಲಡೆ, ಆ ಲಿಂಗ ಆತ್ಮನಲ್ಲಿ ವೇಧಿಸಿಹುದು. ಕುಸುಮದ ಗಂಧ ಒಳಗಾದುದನು, ತಿಲದ ಹಿಪ್ಪೆ ಹೊರಗಾದುದನು ಅರಿದು ನಿಶ್ಚಯವ ಕಂಡಲ್ಲಿ, ಹೊರಗಣ ಪೂಜೆ, ಒಳಗಣ ದಿವ್ಯಪ್ರಕಾಶ, ವಸ್ತುವಿನ ಭಾವದ ಕೂಟ ಇಷ್ಟಲ್ಲದಿಲ್ಲ. ಇದ ಮೀರಿ ಕಾಬ ನಿಜಲಿಂಗೈಕ್ಯರು ನೀವೆ ಬಲ್ಲಿರಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಮುಳುಗಿದುದೆ ಸಮುದ್ರ.
--------------
ಮೋಳಿಗೆ ಮಹಾದೇವಿ
ಅಂಗದಲ್ಲಿ ಲಿಂಗ ವೇಧಿಸಿ ಪ್ರಾಣಕ್ಕೆ ಸಂಬಂಧವ ಮಾಡಬೇಕೆಂಬಲ್ಲಿ, ಅಂಗಕ್ಕೂ ಪ್ರಾಣಕ್ಕೂ ಲಿಂಗ ವೇಧಿಸುವುದಕ್ಕೆ ಹಾದಿಯ ಹೊಲಬು ಅದಾವ ಠಾವಿನಲ್ಲಿ ವೇಧಿಸುವುದು ಹೇಳಯ್ಯಾ ? ಆ ಅಂಗ ನೀರಬಾಗಿಲ ನೆಲನೆ ? ಮೆಳೆಯ ಸವರಿನ ಹಾದಿಯೆ ? ಹೋಹ ಹೊಲಬಿನ ಪಥವೆ ? ಈ ಅಪ್ರಮಾಣವಪ್ಪ ಲಿಂಗವ ಚಿತ್ತದ ಭೇದದಿಂದರಿತು ಆತ್ಮನ ದೃಷ್ಟದಲ್ಲಿ ಲಕ್ಷಿಸಿ, ಇದಿರಿಟ್ಟು, ಕರದ ಇಷ್ಟದಲ್ಲಿ ನಿರೀಕ್ಷಣೆಯಿಂದ ನಿಜವಸ್ತುವ ನಿಕ್ಷೇಪಿಸಿ ಬೈಚಿಟ್ಟಲ್ಲಿ ಅಂಗಕ್ಕೂ ಪ್ರಾಣಕ್ಕೂ ಬೇರೆಡೆ ಲಿಂಗವಿಪ್ಪುದೆರಡಿಲ್ಲ. ಇದು ಕ್ರಿಯಾಲೇಪಸ್ಥಲ ಇದು ಸದ್ಭಾವ ಸಂಬಂಧ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಅನಾಚಾರ ಅಳವಟ್ಟು ಗುರುವನರಿಯಬೇಕು. ಅನಾಮಿಕನಾಗಿ ಲಿಂಗವ ಗ್ರಹಿಸಬೇಕು. ಸರ್ವಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು. ಇಂತೀ ತ್ರಿವಿಧ ಪಾತಕಂಗಳಲ್ಲಿ ಪವಿತ್ರಂಗಳನರಿದು ಇರವಿನಲ್ಲಿ ಇರವನಿಂಬಿಟ್ಟು ಉರಿ ಎಣ್ಣೆಯ ವೇಧಿಸಿ ಉರಿದು ಯೋಗ ನಿಂದಲ್ಲಿ, ಮಾಡುವ ಕ್ರೀ ಮಾಡಿಸಿಕೊಂಬ ವಸ್ತು ಉಭಯ ನಷ್ಟವಹನ್ನಕ್ಕ ನೀ ಎನ್ನಲ್ಲಿ ನಾ ನಿಮ್ಮಲ್ಲಿ ಎಂಬನ್ನಕ್ಕ ಅದು ಭಿನ್ನಭಾವ. ಈ ಉಭಯದ ಗನ್ನ ಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ಎನ್ನಲ್ಲಿ ತಲ್ಲೀಯವಾಗಿರು.
--------------
ಮೋಳಿಗೆ ಮಹಾದೇವಿ
ಅದೇತಕೆ ಅಯ್ಯಾ, ಶಿವನೊಳಗೆ ಕೂಟಸ್ಥನಾದೆಹೆನೆಂಬ ಹಲುಬಾಟ ? ಇದು ನಿತ್ಯ ಸತ್ಯದ ಆಟವಲ್ಲ; ಇನ್ನಾರಿಗೆ ಕೇಳಿ, ಮತ್ತಿನ್ನಾರಿಗೆ ಹೇಳುವೆ ನೀ ಮಾಡುವ ಮಾಟ ? ಮುನ್ನ ನೀನಾರೆಂದಿದ್ದೆ ಹೇಳಾ ? ಆ ಭಾವವನರಿದು ನಿನ್ನ ನೀನೆ ತಿಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ