ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಕ್ಕಿನ ತಲೆಯ ಗಿಳಿ ತಿಂದಿತ್ತು. ಕತ್ತೆ ಕುದುರೆಯ ರೂಪಾಯಿತ್ತು. ಮತ್ಸ್ಯ ಸಮುದ್ರವ ಕುಡಿದು, ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ. ಈ ಬಚ್ಚಬಯಲ ಇನ್ನಾರಿಗೆ ಹೇಳುವೆ, ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ, ವಿಷ್ಣುವಿಂಗೆ ಕ್ರಿಯಾಶಕ್ತಿಯಾಗಿದ್ದಲ್ಲಿ, ರುದ್ರಂಗೆ ಜ್ಞಾನಶಕ್ತಿಯಾಗಿದ್ದಲ್ಲಿ, ಇಂತಿವರು ದಂಪತಿ ಸಹಜವಾಗಿ ಯುಗಜುಗಂಗಳ ಜೋಗೈಸುತ್ತಿದ್ದರು. ಬ್ರಹ್ಮಂಗೆ ಸರಸ್ವತಿಯೆಂದಾರು ! ವಿಷ್ಣುವಿಗೆ ಲಕ್ಷ್ಮೀದೇವಿಯೆಂದಾರು ! ರುದ್ರಂಗೆ ಉಮಾದೇವಿಯೆಂದಾರು ! ಬ್ರಹ್ಮ ಅಂಗವಾಗಿ, ವಿಷ್ಣು ಪ್ರಾಣವಾಗಿ, ರುದ್ರ ಉಭಯಜ್ಞಾನವಾಗಿ, ಅಂದು ತಾಳಿದ ಸಾಕಾರದ ಗುಡಿಯ ಐಕ್ಯನಾದ ಕಾರಣ, ಗುಮ್ಮಟನೆಂಬ ನಾಮವ ತಾಳಿ, ಅಗಮ್ಯೇಶ್ವರಲಿಂಗ ಗುಹೇಶ್ವರನಾದ.
--------------
ಮನುಮುನಿ ಗುಮ್ಮಟದೇವ
ಬಂದವನಿವನಾರು, ಕಂಬಳಿಯ ಕಂಥೆಯ ತೊಟ್ಟು, ಆಪ್ಯಾಯನ ಹಿಂಗದ ಕರಕರ್ಪರವ ಹಿಡಿದು, ದೆಸೆವರಿವ ದಶದಂಡವ ಹಿಡಿದು, ಮನೆ ಮನ ಮಂದಿರದ ಬಾಗಿಲಲ್ಲಿ ನಿಂದು, ಇಂದ್ರಿಯಂಗಳೆಂಬ ತೃಷ್ಣೆ ಭಿಕ್ಷವಂ ಬೇಡಿ, ಬೇಡಿದ ದನಿಯ ಕೇಳಿ ಎದ್ದವೈದು ನಾಯಿ. ಹಮ್ಮಿ ಕಚ್ಚಿತ್ತು ಕಾಲ, ಮತ್ತೊಂದಡರಿ ಅಂಗವ ಹಿಡಿಯಿತ್ತು. ಮತ್ತೊಂದು ಒಡಗೂಡಿ ಕೈಯ ಕಚ್ಚಿತ್ತು. ಮತ್ತೊಂದು ಬೆರಸಿ, ನಾಸಿಕವ ಓಸರವಿಲ್ಲದೆ ಹಿಡಿಯಿತ್ತು. ಮತ್ತೊಂದು ಭಿಕ್ಷೆಗೆ ತಪ್ಪದೆ ಬಾಯ ಹಿಡಿಯಿತ್ತು. ಭಿಕ್ಷದಾಟ ತಪ್ಪಿತ್ತು, ಕಂಬಳಿಯಣ್ಣ ಕಂಬಳಿಯಲ್ಲಿ ಅಳಿದ. ಇದಕಿನ್ನು ಬೆಂಬಳಿಯ ಹೇಳಾ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಬೀಜವ ಮೀರಿದ ವೃಕ್ಷವುಂಟೆ ಅಯ್ಯಾ ? ಶಿರ ಹೊರಗಾದ ಚಕ್ಷುವುಂಟೆ ಅಯ್ಯಾ ? ಕಾಯ ಹೊರಗಾದ ಭೋಗವುಂಟೆ ಅಯ್ಯಾ ? ಇಷ್ಟ ಹೊರಗಾದ ಅರ್ಪಿತ ಅದೆತ್ತಣ ಬಾಯಿ ? ಕಷ್ಟದ ಮಾತು ದೃಷ್ಟವಲ್ಲ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ ಅರಿತವರ ಅರಿವಲ್ಲ.
--------------
ಮನುಮುನಿ ಗುಮ್ಮಟದೇವ
ಬಿಗಿ[ದಾ] ಜಿನಘಟಕ್ಕೆ ಗು[ಡು]ಗಿಸಲಾಗಿ ಉಡುಗುವುದೆ ನಾದ? ಬಯಲ ಒಡಗೂಡವುದಲ್ಲದೆ. ಅಲ್ಲಿ ಬಿಡುಮುಡಿಯಿಲ್ಲ. ಅದರೊಲು ಅಂಗಲಿಂಗ ಲಿಂಗಾಂಗಸಂಯೋಗ ಸನ್ಮತ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಬುದ್ಧಿಯಿಂದ ಬದುಕಿಹೆನೆಂಬುದ ನಿರ್ಧರವೆ ? ನಿಬದ್ಧಿಸಿ ನಿಶ್ಚಯದಿಂದ ತೊಲಗಿರೆ, ಮತ್ತೆ ಸಕಲಸುಖಭೋಗಂಗಳು ಹೊದ್ದುವುದುಂಟೆ ? ಇವರೊಳಗೆ ನಿಲ್ಲದು ಮನ, ಸಂಸಾರವ ಗೆಲ್ಲದು ಚಿತ್ತ. ಕೊಠಾರವನೆಲ್ಲವ ಸುತ್ತಿ ಬಳಸಿ ಬಹೆನ್ನಕ್ಕ ಯಾಚಕಂಗೆ ಗ್ರಾಸವಿಲ್ಲದ ವಿಧಿಯೆನಗಾಯಿತ್ತು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಬಲ್ಲವನ ಭಾವ ಶರೀರದ ಹಂಗನರಿಯಬೇಕು. ಸಂಚಿತದಲ್ಲಿ ತೋರುವ ಸಂಕಲ್ಪ, ಆಗಾಮಿಯಲ್ಲಿ ತೋರುವ ಸುಖಭೋಗ, ಪ್ರಾರಬ್ಧದಲ್ಲಿ ತೋರುವ ಆಸುರ ಕರ್ಮ ಪ್ರಾಪ್ತಿ. ಇಂತಿವ ನೇತಿಗಳೆದು ನಿರ್ಲೇಪನಾಗಿರು. ಯೋಗ ಭೋಗ ತ್ಯಾಗ ಇಂತೀ ತ್ರಿಗುಣದಲ್ಲಿ ಲೇಪವಾಗದೆ ಅರಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ.
--------------
ಮನುಮುನಿ ಗುಮ್ಮಟದೇವ
ಬಯಲು ಬ್ರಹ್ಮಾಂಡಂಗಳಿಲ್ಲದಲ್ಲಿ, ಯುಗಜುಗಂಗಳು ತಲೆದೋರದಲ್ಲಿ, ಅಲ್ಲಿಂದಾಚೆ ಹುಟ್ಟಿತ್ತು. ಕರಚರಣಾದಿ ಅವಯವಂಗಳಿಲ್ಲದ ಶಿಶು. ಬಲಿವುದಕ್ಕೆ ಬಸಿರಿಲ್ಲ, ಬಹುದಕ್ಕೆ ಯೋನಿಯಿಲ್ಲ, ಮಲಗುವುದಕ್ಕೆ ತೊಟ್ಟಿಲಿಲ್ಲ. ಹಿಂದು ಮುಂದೆ ಇಲ್ಲದ, ತಂದೆ ತಾಯಿಯಿಲ್ಲದ ತಬ್ಬಲಿ. ನಿರ್ಬುದ್ಧಿ ಶಿಶುವಿಂಗೆ ಒಸೆದು ಮಾಡಿಹೆನೆಂಬವರು ವಸುಧೆಯೊಳಗೆ ಇದು ಹುಸಿಯೆಂದೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ ಭರಿತನಾದವಂಗಲ್ಲದಿಲ್ಲ.
--------------
ಮನುಮುನಿ ಗುಮ್ಮಟದೇವ
ಬಾಯಲ್ಲಿ ಬಸುರು ಹುಟ್ಟಿ, ಕಿವಿ ಬೆಸನಾಯಿತ್ತು. ಕಣ್ಣಿನಲ್ಲಿ ಮೊಲೆ ಹುಟ್ಟಿ, ನಾಸಿಕದಲ್ಲಿ ಹಾಲು ಬಂದಿತ್ತು. ತಲೆಯ ಹಣೆಯ ಮೇಲೆ ಕುಳಿತು ಕೂಸು ಉಣ್ಣುತ್ತಿರಲಾಗಿ ಆಕಾಶದ ಬಿಜ್ಜ ಹೊಯಿದೆತ್ತಿತ್ತು. ಆ ಶಿಶುವನೆತ್ತಿ ಕೊಕ್ಕಿನಲ್ಲಿ ತಿವಿಯಲಾಗಿ, ತಪ್ಪದೆ ನುಂಗಿತ್ತು. ಆ ಬಿಜ್ಜು ಹೊಟ್ಟೆಗೆಯ್ದದೆ ಅಪ್ಪ ಅವ್ವೆ ಎನ್ನುತ್ತಿದ್ದಿತ್ತು. ಇದು ದೃಷ್ಟ, ಸೋಜಿಗ. ಗೂಡಿನೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ ಅಪ್ರಮಾಣು.
--------------
ಮನುಮುನಿ ಗುಮ್ಮಟದೇವ