ಅಥವಾ

ಒಟ್ಟು 48 ಕಡೆಗಳಲ್ಲಿ , 25 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶ್ವರನ ದ್ರೋಣವ ಮಾಡಿ, ಪದ್ಮನಾಭನ ನಾರಿಯ ಮಾಡಿ, ಕಮಲಜನೆಂಬ ಬಾಣವ ತೊಟ್ಟು, ತ್ರಿಭುವನವನೆಚ್ಚವರಾರೊ ? ಚಂದ್ರಸೂರ್ಯರ ಬೆನ್ನ ಮೆಟ್ಟಿ, ಸುವರ್ಣದ ಮಳೆಯ ಕರಸಿದವರಾರೊ ? ದೇವದಾನವ ಮಾನವರೆಲ್ಲ, ಈ ಬಾಣಕ್ಕೆ ಗುರಿಯಾಗಿ ಬಿದ್ದರು. ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ !
--------------
ಅಲ್ಲಮಪ್ರಭುದೇವರು
ಬ್ರಹ್ಮದೇವರಾದಡೆ ಬ್ರಹ್ಮನವಾಹನ ಹಂಸ ಹಂಸನಲ್ಲಿ ಹರ[ಗಿ] ಬೆಳದುಂಡನೆ ? ವಿಷ್ಣು ದೇವರಾದಡೆ ವಿಷ್ಣುವಿನ ವಾಹನ ಗರುಡ ಗರುಡನಲ್ಲಿ ಹರ[ಗಿ] ಬೆಳದುಂಡನೆ ? ಇಂದ್ರ ದೇವರಾದಡೆ ಇಂದ್ರನ ವಾಹನ ಆನೆ ಆನೆಯಲ್ಲಿ ಬಿತ್ತಿ ಬೆಳದುಂಡನೆ ? ಮೈಲಾರ ದೇವರಾದಡೆ ಮೈಲಾರನ ವಾಹನ ಕುದುರೆ ಕುದುರೆಯಲ್ಲಿ ಬಿತ್ತಿ ಬೆಳದುಂಡನೆ ? ಜಿನ್ನ ದೇವರಾದಡೆ ಜಿನ್ನನ ವಾಹನ ಕತ್ತೆ ಕತ್ತೆಯಲ್ಲಿ ಬಿತ್ತಿ ಬೆಳದುಂಡನೆ ? ಭೈರವ ದೇವರಾದಡೆ ಭೈರವನ ವಾಹನ ಚೇಳು ಚೇಳಿನಲ್ಲಿ ಬಿತ್ತಿ ಬೆಳದುಂಡನೆ ? ಗಣೇಶ್ವರ ದೇವರಾದಡೆ ಗಣೇಶ್ವರನ ವಾಹನ ಇಲಿ ಇಲಿಯಲ್ಲಿ ಬಿತ್ತಿ ಬೆಳದುಂಡನೆ ? ದೇವರಲ್ಲವೆನಲಾರೆನು ಮತ್ತೆ ದೇವರೆಂಬುದು ಸತ್ಯ. ಅದೆಂತೆಂದಡೆ ಗಣೇಶಗೆ ಈಶ್ವರನ ಹೆಸರುಂಟು, ಅದು ಹೇಗೆ ಗಣೇಶ್ವರ ? ಮತ್ತೆ ಅದೆಲ್ಲದೆ ಪಾರ್ವತಿಗೆ ಮೋಹದ ಕುಮಾರ. ಅದಲ್ಲದೆ ಜಿತೇಂದ್ರಿ. ಸರ್ವಜಗಕೆ ವಿದ್ಯೆ ಬುದ್ಧಿಯಂ ಕೊಡುವನು, ಅದರಿಂದ ಸತ್ಯನು. ಒಂಕಾರ ವಸ್ತುವೆ ಸಾಕ್ಷಿಯಾಗಿ ಮತ್ತಂ ನಮ್ಮ ಸದಾಶಿವನ ವಾಹನ ಬಸವಣ್ಣ. ಬಸವಣ್ಣನ ಬಿರಿದೆಂತೆಂದರೆ ಸಪ್ತಸಮುದ್ರ ಜಲಪ್ರಳಯಕ್ಕೆ ಹೆಪ್ಪಕೊಟ್ಟ ಕಾರುಣ್ಯದಲ್ಲಿ ಎತ್ತೆಂಬ ಶಬ್ದಾಯಿತ್ತು. ಎತ್ತ ನೋಡಿದಡತ್ತ ತನ್ನಲಿಂದುತ್ಪತ್ಯವಾಯಿತೆಂಬ ಶಬವೆತ್ತಾಯಿತ್ತು. ತನ್ನಿಂದ ಹರಗಿ ಬಿತ್ತಿ ಬೆಳೆಯಲಿಕೆ ಪವಿತ್ರಸ್ವಾಮಿಗೆ ನೈವೇದ್ಯವಾಯಿತ್ತು . ಹಸ್ತಪರುಷವ ಮಾಡಲಿಕೆ ಘನವರುಷ ಪ್ರಸಾದವಾಯಿತ್ತು. ಇಂತಿರ್ದ ನಮ್ಮ ಬಸವನ ಪ್ರಸಾದವನುಂಡು ನನ್ನ ದೇವರು ಹೆಚ್ಚು ತನ್ನ ದೇವರು ಹೆಚ್ಚು ಎಂದು ಕಚ್ಚಾಡುವ ಕುನ್ನಿ ಮೂಕೊರೆ ಮೂಳ ಹೊಲೆಯರಿಗೆ ಏನೆಂಬೆನಯ್ಯಾ ಗುರು ವಿಶ್ವೇಶ್ವರಾ.
--------------
ವರದ ಸೋಮನಾಥ
ನಿಃಕಲ ಶಿವನ ಮಧ್ಯದಲ್ಲಿ ಚಚ್ಛಕ್ತಿ ಉದಯಿಸಿದಳು. ಆ ಚಿಚ್ಛಕ್ತಿಯ ಮಧ್ಯದಲ್ಲಿ ಶಾಂತ್ಯತೀತೋತ್ತರೆಯೆಂಬ ಕಲೆ. ಆ ಶಾಂತ್ಯತೀತೋತ್ತರೆಯೆಂಬ ಕಲೆಯ ಮಧ್ಯದಲ್ಲಿ ಮಹಾಲಿಂಗ. ಆತ ಮಹಾಲಿಂಗದ ಮಧ್ಯದಲ್ಲಿ ನಿರ್ಮುಕ್ತಸಾದಾಖ್ಯ. ಆ ನಿರ್ಮುಕ್ತಸಾದಾಖ್ಯದ ಮಧ್ಯದಲ್ಲಿ ಪಶುಪತಿಯೆಂಬ ಕಲಾಮೂರ್ತಿ. ಆ ಪಶುಪತಿಯೆಂಬ ಕಲಾಮೂರ್ತಿಯ ಮಧ್ಯದಲ್ಲಿ ಶಿವನೆಂಬ ಐಕ್ಯನು. ಆ ಶಿವನೆಂಬ ಐಕ್ಯನ ಮಧ್ಯದಲ್ಲಿ ಉಪಮಾತೀತನು. ಆ ಉಪಮಾತೀತನ ಮಧ್ಯದಲ್ಲಿ ಆತ್ಮನು. -ಇಂತು ಮಹಾಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪರಾಶಕ್ತಿ; ಆ ಪರಾಶಕ್ತಿಯ ಮಧ್ಯದಲ್ಲಿ ಶಾಂತ್ಯಾತೀತೆಯೆಂಬ ಕಲೆ. ಆ ಶಾಂತ್ಯಾತೀತೆಯೆಂಬ ಕಲೆಯ ಮಧ್ಯದಲ್ಲಿ ಪ್ರಸಾದಲಿಂಗ. ಆ ಪ್ರಸಾದಲಿಂಗದ ಮಧ್ಯದಲ್ಲಿ ಶಿವಸಾದಾಖ್ಯ. ಆ ಶಿವಸಾದಾಖ್ಯದ ಮಧ್ಯದಲ್ಲಿ ಮಹಾದೇವನೆಂಬ ಕಲಾಮೂರ್ತಿ. ಆ ಮಹಾದೇವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕ್ಷೇತ್ರಜ್ಞನೆಂಬ ಶರಣ. ಆ ಶರಣನ ಮಧ್ಯದಲ್ಲಿ ಸದಾಶಿವನು. ಆ ಸದಾಶಿವನ ಮಧ್ಯದಲ್ಲಿ ಆಕಾಶ. ಇಂತು ಶಿವಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ಮಧ್ಯದಲ್ಲಿ ಶಾಂತಿಯೆಂಬ ಕಲೆ. ಆ ಶಾಂತಿಯೆಂಬ ಕಲೆಯ ಮಧ್ಯದಲ್ಲಿ ಜಂಗಮಲಿಂಗ. ಆ ಜಂಗಮಲಿಂಗದ ಮಧ್ಯದಲ್ಲಿ ಅಮೂರ್ತಿಸಾದಾಖ್ಯ. ಆ ಅಮೂರ್ತಿಸಾದಾಖ್ಯದ ಮಧ್ಯದಲ್ಲಿ ಭೀಮೇಶ್ವರನೆಂಬ ಕಲಾಮೂರ್ತಿ. ಆ ಭೀಮೇಶ್ವರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕರ್ತಾರನೆಂಬ ಪ್ರಾಣಲಿಂಗಿ. ಆ ಕರ್ತಾರನೆಂಬ ಪ್ರಾಣಲಿಂಗಿಯ ಮಧ್ಯದಲ್ಲಿ ಈಶ್ವರ. ಆ ಈಶ್ವರನ ಮಧ್ಯದಲ್ಲಿ ವಾಯು. -ಇಂತು ಅಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ಮಧ್ಯದಲ್ಲಿ ವಿದ್ಯೆಯೆಂಬ ಕಲೆ. ಆ ವಿದ್ಯೆಯೆಂಬ ಕಲೆಯ ಮಧ್ಯದಲ್ಲಿ ಶಿವಲಿಂಗ. ಆ ಶಿವಲಿಂಗದ ಮಧ್ಯದಲ್ಲಿ ಮೂರ್ತಿಸಾದಾಖ್ಯ. ಆ ಮೂರ್ತಿಸಾದಾಖ್ಯದ ಮಧ್ಯದಲ್ಲಿ ಮಹಾರುದ್ರನೆಂಬ ಕಲಾಮೂರ್ತಿ. ಆ ಮಹಾರುದ್ರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಭಾವನೆಂಬ ಪ್ರಸಾದಿ. ಆ ಭಾವನೆಂಬ ಪ್ರಸಾದಿಯ ಮಧ್ಯದಲ್ಲಿ ರುದ್ರನು. ಆ ರುದ್ರನ ಮಧ್ಯದಲ್ಲಿ ಅಗ್ನಿ. -ಇಂತು ಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪ್ರತಿಷೆ*ಯೆಂಬ ಕಲೆ. ಆ ಪ್ರತಿಷೆ*ಯೆಂಬ ಕಲೆಯ ಮಧ್ಯದಲ್ಲಿ ಗುರುಲಿಂಗ. ಆ ಗುರುಲಿಂಗದ ಮಧ್ಯದಲ್ಲಿ ಕರ್ತುಸಾದಾಖ್ಯ. ಆ ಕರ್ತುಸಾದಾಖ್ಯದ ಮಧ್ಯದಲ್ಲಿ ಸರ್ವನೆಂಬ ಕಲಾಮೂರ್ತಿ. ಆ ಸರ್ವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಚೈತನ್ಯವೆಂಬ ಮಾಹೇಶ್ವರ. ಆ ಚೈತನ್ಯನೆಂಬ ಮಾಹೇಶ್ವರನ ಮಧ್ಯದಲ್ಲಿ ವಿಷ್ಣು. ಆ ವಿಷ್ಣುವಿನ ಮಧ್ಯದಲ್ಲಿ ಅಪ್ಪು. -ಇಂತು ಕರ್ತುಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಮಧ್ಯದಲ್ಲಿ ನಿವೃತ್ತಿಯೆಂಬ ಕಲೆ. ಆ ನಿವೃತ್ತಿಯೆಂಬ ಕಲೆಯ ಮಧ್ಯದಲ್ಲಿ ಆಚಾರಲಿಂಗ. ಆ ಆಚಾರಲಿಂಗದ ಮಧ್ಯದಲ್ಲಿ ಕರ್ಮಸಾದಾಖ್ಯ. ಆ ಕರ್ಮಸಾದಾಖ್ಯದ ಮಧ್ಯದಲ್ಲಿ ಭವನೆಂಬ ಕಲಾಮೂರ್ತಿ. ಆ ಭವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಅಂತರ್ಯಾಮಿಯೆಂಬ ಭಕ್ತ. ಆ ಅಂತರ್ಯಾಮಿಯೆಂಬ ಭಕ್ತನ ಮಧ್ಯದಲ್ಲಿ ಬ್ರಹ್ಮ. ಆ ಬ್ರಹ್ಮನ ಮಧ್ಯದಲ್ಲಿ ಪೃಥ್ವಿ. ಆ ಬ್ರಹ್ಮನಿಂದ ನರರು ಸುರರು ಅಸುರರು ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ ಸಕಲ ಚರಾಚರಂಗಳೆಲ್ಲವೂ ಹುಟ್ಟಿದವು. ಇಂತಿವೆಲ್ಲವು ಶಿವನ ನೆನಹುಮಾತ್ರದಿಂದಲಾದವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಗದೊಳಗೆ ಜಗ ಹುಟ್ಟಿ ಜಗಮಯವಾಗಿದ್ದುದ ಕಂಡೆನು. ಜಗವನಾಳುವ ದೊರೆ ರಾಕ್ಷಿಗವಿಯಲ್ಲಿ ಸಿಲ್ಕಿ, ಘಾಸಿಯಾಗುತಿರ್ದನು ನೋಡಾ. ಆ ರಾಕ್ಷಿ ಬ್ರಹ್ಮನ ಚರ್ಮವ ಹೊತ್ತು, ವಿಷ್ಣುವಿನ ರಕ್ತವ ಕುಡಿದು, ರುದ್ರನ ಭಸ್ಮವ ಮಾಡಿ, ಈಶ್ವರನ ಗಾಳಿಯಾಗಿ ಹಾರಿಸಿ, ಸದಾಶಿವನ ಆಕಾಶದ ಗುರಿಯನೆ[ಚ್ಚಿ] ಆಡುತಾಡುತ ಬಂದವಳು. ಅರಸಿನ ಪ್ರಜೆ-ಪರಿವಾರ, ಆನೆ-ಸೇನೆ ಎಲ್ಲವ ನುಂಗಿ ತೇಗಿ, ಜಗದೊಳಗಣ ಜಗ ಹಿರಿದಪ್ಪ ಜಗವಾಗಿ ಜಲದ ಕೊಣದಲ್ಲಿ ಹೊರಟು ದೃಷ್ಟವಾಗಿ ನಿಂದುದ ಕಂಡು ರಕ್ಷಿ ನಗುತಿದೆ. ಈ ಭೇದವ ಹಳೆಯ ಮನೆಯ ಸುಟ್ಟು ಹೊಸ ಮನೆಯಾದಲ್ಲಿ ಕಂಡೆ, ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರನಿಪ್ಪ ನೋಡಾ. ಆ ಈಶ್ವರನ ತನುಮನದ ಕೊನೆಯ ಮೇಲೆ ಒಬ್ಬ ಸತಿಯಳು ಅನಂತಕೋಟಿ ಬ್ರಹ್ಮಾಂಡವ ಗರ್ಭೀಕರಿಸಿಕೊಂಡು ತನ್ನ ಸುಳುವ ತಾನೇ ತೋರುತಿಪ್ಪಳು ನೋಡಾ. ಆ ಸುಳುವಿನ ಭೇದವ ಅರುಹುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉದಕವ ಬೆರೆಸಿದ ಕುಂಪಟಿಯಂತೆ, ಬಹುಗಂಧವ ಕೂಡಿದ ವಾಯುವಿನಂತೆ, ಗುಣ ದೋಷಂಗಳ ವಿಚಾರಿಸದಿಪ್ಪುದು ಸದ್ಭಕ್ತನಿರವು, ಮಾಡುವ ಭೇದ ಸ್ಥಲ; ಸರಮೃತ್ತಿಕೆಯಲ್ಲಿ ಒಸರಲಿಲ್ಲದೆ ನಿಂದಂತೆ; ಈಶ್ವರನ ಶರಣರಿಗೆ ಭಕ್ತಿಯ ಮಾಡುವ ದಾಸೋಹದ ಸದ್ಭಕ್ತನ ಇರವು. ಅದು ಸುಕ್ಷೇತ್ರವಾಸ, ಕಾಲಾಂತಕ ಭೀಮೇಶ್ವರಲಿಂಗನತೆರಪಿಲ್ಲದ ಸುಖವಾಸ.
--------------
ಡಕ್ಕೆಯ ಬೊಮ್ಮಣ್ಣ
ಶಿವನು ಸರ್ವಗತನು, ಸಕಲಬ್ರಹ್ಮಾಂಡಗಳಿಗೆಲ್ಲ ಸಕಲನೆಂದು ಹೇಳಿತ್ತು ಶ್ರುತಿ. `ವಿಶ್ವತಶ್ಚಕ್ಷುರುತ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂದು ಶ್ರುತಿ ಸಕಲಜೀವಚೈತನ್ಯ ಶಿವನೆಂದು ಹೇಳಿತ್ತು, ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಸದ್ಭಕ್ತರ ಶ್ರೀಮೂರ್ತಿಗಿನ್ನು ಸರಿ ಉಂಟೆ ? ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯಂ ತತ್ಪರಮಂ ಪದಂ ಇಂತಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿ ನುಡಿಸಿ ಏಕರಾತ್ರಿ ಸಂಭಾಷಣೆಯ ಮಾಡಿದಡೆ ಜನ್ಮಕರ್ಮನಿವೃತ್ತಿ, ಜೀವನ್ಮುಕ್ತನಹನು ಇದು ಸತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತಾನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದೀಯ ಬೋಧೆಯಲ್ಲಿ ಈಶ್ವರನು ಹೇಳಿಹನು. ಇಂತಪ್ಪ ಈಶ್ವರನ ಕಾಣವು ವೇದಂಗಳು. ಇಂತು ವೇದಕ್ಕತೀತವಹಂತಹ ಶಿವಶರಣರ ಮಹಾತ್ಮೆಯ ಹೊಗಳಲಿಕ್ಕೆ ವೇದಕ್ಕಳವಲ್ಲ, ಮಂದಮತಿ ಮಾನವರ ಮಾತದಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎನುತಿಪ್ಪೆ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಬ್ದವೇ ಸಾಹಿತ್ಯ, ಶಬ್ದವೇ ಸಾರೂಪ್ಯ, ಶಬ್ದವೇ ಸಾಲೋಕ್ಯ, ಶಬ್ದವೇ ಸಾಮೀಪ್ಯ, ಶಬ್ದವೇ ಸಾಯುಜ್ಯ ಶಬ್ದ ಸಮಾಧಾನಲಿಂಗಾಂಗಿಗೆ ಚತುರ್ವಿಧಪದ. ಶಬ್ದವ ಸೂಸುವರು, ಆಸ್ಕ[ರಿಸ]ರು ಸೂಸರು. ಈಶ್ವರನ ಭಕ್ತರು ಶಬ್ದದಲ್ಲಿಯೇ ಮೋಸಹೋದರು. ಆಶಾಕೃತದಿಂದೀ ಅಭಾಷರು ಶಬ್ದದ ಮನದ ಕೊನೆಯಲ್ಲಿ ಆಡುತಿಪ್ಪರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಒಮ್ಮೆ ಶಿವನೆಯೆಂದು ನೆನೆದರೆ, ಕಳ್ಳಸುಳ್ಳರಿಗೆಲ್ಲ ಕೈಲಾಸವಾಯಿತೆಂದು ಹೇಳುವ ಅಣ್ಣಗಳಿರಾ, ಕೈಲಾಸಪದವಿ ಆದದ್ದು ಸಹಜ, ಅದೆಂತೆಂದಡೆ : ಒಬ್ಬ ಕಳವು ಮಾಡಿ ಸತ್ತರೆ, ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಒಯ್ಯಬೇಕೆಂದು ಅವಗೆ ಬ್ರಹ್ಮ ಬರೆದ ಕಲ್ಪನೆಯಲ್ಲಿತ್ತು . ಅವರಿಗೆ ಕೈಲಾಸಪದವಿ ಆಯಿತು ಕಾಣಿರೊ. ನೀವು ಕಳ್ಳರಲ್ಲ ಸುಳ್ಳರಲ್ಲ , ಒಳ್ಳೆಯ ಜನರು. ಶಿಲ್ಪಕಾರನ ಕೈಯಲ್ಲಿ ಹುಟ್ಟೆದ ಶಿಲೆಯ ಲಿಂಗವನು ತಂದು, ಶಿರದಲ್ಲಿ ಕಟ್ಟಿಕೊಂಡು ಉಂಬುವಲ್ಲಿ ಶಿವ, ಉಡುವಲ್ಲಿ ಶಿವ, ಕೊಂಬುವಲ್ಲಿ ಶಿವ, ಕೊಡುವಲ್ಲಿ ಶಿವ, ನಡೆವಲ್ಲಿ ಶಿವ, ನುಡಿವಲ್ಲಿ ಶಿವ. ಸರ್ವಾಂಗವೆಲ್ಲ ಶಿವಮಯವಾದ ಮೇಲೆ ನಿಮಗೆ ಶಿವ ಮೆಚ್ಚಿ, ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ. ಕಾಲಚಕ್ರದ ಪ್ರಳಯಕ್ಕೆ ಒಳಗಾಗಿ, ಕಾಲ ಬಾಧೆಯೊಳಗೆ ಬಿದ್ದು ಬಳಲುತಿಪ್ಪಿರಿ. ಒಂದು ಅನಂತಕೋಟಿ. ಅದು ಎಂತೆಂದರೆ : ನೆಲುವಿನ ಮೇಲೆ ಇಟ್ಟಿದ್ದ ಹಾಲು ಬೆಣ್ಣೆಯನು ತಕ್ಕೊಂಡು ಸವಿದು ಉಣಲಾರದೆ, ಆಕಾಶವೆಂಬ ಬಯಲಿಗೆ ಬಾಯಿ ತೆರಕೊಂಡು ಕುಳಿತರೆ ಹಾಲು ಕರೆದೀತೆ ? ಕರೆಯಲರಿಯದು. ಅದು ಎಂತೆಂದರೆ :ನಿಮ್ಮ ಅಂತರಂಗವೆಂಬುದ ಅಡಿವಿಡಿದು ಅಳೆದರೆ, ಒಡನೆ ಮೂರಗೇಣಿನ ಒಳಗೆ ಹೊರಗೆ ಕೈಲಾಸವಾಗಿತ್ತು. ಆ ಕೈಲಾಸದಲ್ಲಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐದುಮಂದಿ ಮಕ್ಕಳನ್ನು ಹಡೆದ ಒಂಕಾರ ಪರಬ್ರಹ್ಮ ದೇವರಿಂದೆ ಆರುಮಂದಿ ದೇವರಾದಲ್ಲಿ ಆಕಾರಾವಂ(?) ಕೋಟಿ ರುದ್ರ ನವಕೋಟಿ ವಿಷ್ಣುಗಳು ಇಂದ್ರಸಭೆ ದೇವಸಭೆ ಶಿವಸಭೆ ನಂದಿನಾಥ ಭೃಂಗಿನಾಥ ಮೊದಲಾದ ಗರುಡ ಗಂಧರ್ವ ಸಿದ್ಧರು ವಿದ್ಯಾಧರರು ಸಮಸ್ತ ಮುನಿಜನಂಗಳೆಲ್ಲ ಇದ್ದರು ಕಾಣಿರೊ. ಇಂತೀ ತಮ್ಮ ಅಂತರಂಗದಲ್ಲಿ ತಿಳಿದು ನೋಡಬಲ್ಲಾತಗೆ ಪಿಂಡಾಂಡವೆಂಬ ಕೈಲಾಸದಲ್ಲಿ ಇದ್ದಂತೆ, ಬ್ರಹ್ಮಾಂಡವೆಂಬ ಕೈಲಾಸದಲ್ಲಿ ಇದ್ದಂತೆ, ಬ್ರಹ್ಮಾಂಡವೆಂಬ ಕೈಲಾಸವಲ್ಲಿಯಿತ್ತು , ಪಿಂಡಾಂಡವೆಂಬ ಕೈಲಾಸವಲ್ಲಿಯಿತ್ತು ಕಾಣಿರೊ. ಅದು ಎಂತೆಂದರೆ : ಕೃತಯುಗದಲ್ಲಿ , ಬ್ರಹ್ಮರಾಕ್ಷಸರು ಪೃಥ್ವಿಯ ಆಧಾರದಲ್ಲಿ ನಿಂದು, ಕೈಲಾಸಕ್ಕೆ ದಾಳಿಯನಿಕ್ಕಿ ಕೋಳು ತಕ್ಕೊಂಡು ಬರುವರು. ಅವರಿಗೆ ಕೈಲಾಸಪದವು ದೊಡ್ಡದಾಗಿತ್ತೆ ? ದೊಡ್ಡದಾಗಿ ಇದ್ದಿಲ್ಲ. ತ್ರೇತಾಯುಗದಲ್ಲಿ, ಕ್ಷತ್ರಿಯರು [ಪೃಥ್ವಿಯ ಆಧಾರದಲ್ಲಿ ನಿಂದು], [ಕೈಲಾಸಕ್ಕೆ ದಾಳಿಯನಿಕ್ಕಲು], ಕೈಲಾಸದೊಡೆಯ ಮರೆಯ ಹೊಕ್ಕ, ಕಾಮುಕ ಋಷಿಯು ಕಣ್ಣು ತೆಗೆದು, ಗರಿಯ ಅಂಬಿಗ ತಲೆಗೆ ಕಟ್ಟಿದರು. ಈಶ್ವರನ ಜಡೆಯೊಳಗಿನ ಗಂಗೆಯನು ಸುಟ್ಟುರುಹಿದ ಮೇಲೆ ಹಾಸಿತ ಮಾಂಸವನು ಹುಟ್ಟಿಸಿಯಿದ್ದರು. ಅವರಿಗೆ ಕೈಲಾಸಪದವು ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ. ದ್ವಾಪರಯುಗದಲ್ಲಿ , ಸೋಮಕ್ಷತ್ರಿಯರು ಪೃಥ್ವಿಯ ಆಧಾರದಲ್ಲಿ ನಿಂದು, ಇಂದ್ರಪದದಲ್ಲಿ ಇದ್ದಂಥ ಶ್ವೇತವರ್ಣದ ಆನೆಯನು ತಂದು, ತಾಯಿಗೆ ನೋಂಪಿಯ ನುತಿಸಿದರೆ, ಅವರಿಗೆ ಕೈಲಾಸಪದವಿ ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ. ಕಲಿಯುಗದಲ್ಲಿ ಹುಟ್ಟಿದ ಮನುಜರನು ಕೈಲಾಸಕೆ ಅಟ್ಟಿದರೇನು ಒಮ್ಮೆ ಶಿವನೆಯೆಂದು ನೆನೆದರೆ, ಕೈಲಾಸಪದವಿ ಆದೀತೆಂದು ಬಹಿರಂಗದಲ್ಲಿ ಹೇಳುವ ಮಾತುಗಳೇ ಬಹಳ. ಅಂತರಂಗವಿಡಿದು ಹೋದವರು ಒಬ್ಬರು ಇಬ್ಬರು ಕಾಣಿರೊ. ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆಯಿಂದ ಕೈಲಾಸಪದವಿಯಾಗಬೇಕೆಂದು ಇದ್ದರೆ, ಎಂದೆಂದೂ ಶಿವನೆಯೆಂದು ನೆನೆಯದೆ, ಜಟ್ಟಿಂಗ ಮೈಲಾರ ಜಿನ ಭೈರವವೆಂಬ ಕೆಟ್ಟದೇವರ ಪೂಜೆಯ ಮಾಡಿದರೇನು ಅವನೂ ಬ್ರಹ್ಮ ಬರೆದ ಕಲ್ಪನೆಯಿದ್ದು, ಸತ್ತುಹೋಗುವಾಗ, ಅವನ ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನು. ಬ್ರಹ್ಮ ಬರೆದ ಕಲ್ಪನೆಯಲ್ಲಿ ಅವಗೆ ಕೈಲಾಸಪದವು ಇಲ್ಲದಿದ್ದರೆ, ಜಟ್ಟಿಂಗ ಮೈಲಾರ ಜಿನ ಭೈರವ ದೇವರುಗಳೆಂಬ ಕೆಟ್ಟದೇವರ ಪೂಜೆಯ ಬಿಟ್ಟು, ಎಷ್ಟುದಿನ ಶಿವನೆಯೆಂದು ನೆನೆದರೇನು, ಅವನು ಬ್ರಹ್ಮ ಬರೆದ ಕಲ್ಪನೆಯಲ್ಲಿದ್ದು, ಸತ್ತುಹೋಗುವಾಗ ಅವನನು ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ. ಅದು ಎಂತೆಂದರೆ : ಕಾಲಚಕ್ರವೆಂಬ ಪ್ರಳಯಕ್ಕೊಳಗಾಗಿ, ಕಾಲನ ಬಾಧೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆ ಹೊರತಾಗಿ, ಶಿವನನು ನೆನೆದು ಕೈಲಾಸ ಕಂಡೆವೆಂದು ಕಲೆ ಕೆಳಗಾಗಿ ಕಾಲು ಮೇಲ್ಮಾಡಿ ತಪವ ಮಾಡಿದರೆ, ಕೈಲಾಸ ಪದ ಆಗದೆಂದು ಇಕ್ಕುವೆನು ಮುಂಡಿಗೆಯ. ಇದನು ಎತ್ತುವರುಂಟೆ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಚಿತ್ರದ ಹುಲಿ ಮನುಷ್ಯನ ಕಚ್ಚಬಲ್ಲುದೆ ? ಮತ್ರ್ಯದೊಳಗೆ ಈಶ್ವರನ ದರ್ಶನ ಹೊತ್ತವರಿಗೆಲ್ಲ ನಿತ್ಯತ್ವವುಂಟೆ ? ಇದರಚ್ಚೆಯ ಹೊರಲಾರದಿರ್ದಡೆ, ಮತ್ರ್ಯಕ್ಕೆ ಹೊರಗೆಂದ ನಿಚ್ಚಟ ಶರಣ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಾಸಿರ ಕಂಬದ ಮಂಟಪದೊಳಗೆ ಈಶ್ವರನ ಓಲಗದ ಸೋಜಿಗವನೇನ ಹೇಳುವೆನಯ್ಯಾ | ಮೂಜಗದವರೆಲ್ಲ ಮೈಮರೆದಿರ್ಪರು. ಭಾಸ್ಕರಕೋಟಿ ಬೆಳಗು ಕಂಗಳ ತುಂಬಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವಿಲ್ಲದಂದು, ರವಿ-ಶಶಿ-ಆತ್ಮರಿಲ್ಲದಂದು, ನಾದ-ಬಿಂದು-ಕಲೆಗಳಿಲ್ಲದಂದು, ಸಾಕ್ಷಿ-ಸಭೆಗಳಿಲ್ಲದಂದು, ಶೂನ್ಯ-ನಿಃಶೂನ್ಯವಿಲ್ಲದಂದು, ಏನೇನೂ ಇಲ್ಲದಂದು ಅತ್ತತ್ತಲೆ, ಅಪರಂಪರ ನಿರಾಳ ತಾನೇ ನೋಡಾ. ಆ ನಿರಾಳನ ಚಿದ್ವಿಲಾಸದಿಂದ ಪರಬ್ರಹ್ಮನಾದನಯ್ಯ. ಆ ಪರಬ್ರಹ್ಮನ ಭಾವದಿಂದ ಪರಶಿವನಾದ. ಆ ಪರಶಿವನ ಭಾವದಿಂದ ಸದಾಶಿವನಾದ. ಆ ಸದಾಶಿವನ ಭಾವದಿಂದ ಈಶ್ವರನಾದ. ಆ ಈಶ್ವರನ ಭಾವದಿಂದ ರುದ್ರನಾದ. ಆ ರುದ್ರನ ಭಾವದಿಂದ ವಿಷ್ಣುವಾದ. ಆ ವಿಷ್ಣುವಿನ ಭಾವದಿಂದ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರು. ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರು. ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಪರಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಪರಬ್ರಹ್ಮಕೆ ಚಿತ್‍ಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಇಂತೀ ಭೇದವನರಿತು ಇರಬಲ್ಲರೆ ಅವರೇ ಪ್ರಾಣಲಿಂಗಸಂಬಂಧಿಗಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಾಕಾರ ಬಯಲು ಮೂರ್ತಿಗೊಂಡು ಮಹಾಜ್ಞಾನವೇ ಚಿತ್‍ಸ್ವರೂಪವಾಯಿತ್ತು. ಆ ಚಿಚ್ಛಕ್ತಿಸ್ವರೂಪವೇ ಶರಣನಾಗಿ ಮೂರ್ತಿಗೊಂಡನು ನೋಡಾ. ಆ ಶರಣನ ಸಹಸ್ರಾಂಶದಲ್ಲಿ ಸದಾಶಿವನಾದನು. ಆ ಸದಾಶಿವನ ಸಹಸ್ರಾಂಶದಲ್ಲಿ ಈಶ್ವರ ಮೂರ್ತಿಯಾದನು. ಆ ಈಶ್ವರನ ಸಹಸ್ರಾಂಶದಲ್ಲಿ ರುದ್ರನಾದನು. ಆ ರುದ್ರನ ಕೋಟಿಯ ಅಂಶದಲ್ಲಿ ವಿಷ್ಣು ಹುಟ್ಟಿದನು. ಆ ವಿಷ್ಣುವಿನ ಕೋಟಿಯ ಅಂಶದಲ್ಲಿ ಬ್ರಹ್ಮನಾದನು. ಆ ಬ್ರಹ್ಮನ ಕೋಟಾನುಕೋಟಿಯ ಅಂಶದಿಂದ ನರರು ಸುರರು ಹೆಣ್ಣು ಗಂಡು ಮೊದಲಾದ ಸಕಲ ಚರಾಚರಂಗಳೆಲ್ಲವು ಹುಟ್ಟಿದವು ನೋಡಾ. ಇಂತಿವೆಲ್ಲವೂ ಪರಶಿವನ ನೆನಹುಮಾತ್ರದಿಂದ ತೋರಿ ಅಡಗತ್ತಿಹವು. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಇಂತೀ ಐವರನು ತನ್ನಲ್ಲಿ ಗರ್ಭೀಕರಿಸಿಕೊಂಡಿಪ್ಪನು, ಚಿತ್‍ಸ್ವರೂಪನಪ್ಪ ಶರಣನು. ಆ ಶರಣನೇ ಚೆನ್ನಬಸವಣ್ಣನು. ಆ ಚೆನ್ನಬಸವಣ್ಣನೇ ಎನ್ನಂತರಂಗದ ಸುಜ್ಞಾನ ಪ್ರಾಣಲಿಂಗವೆಂದರಿದು ಮನೋಭಾವದಿಂದ ಆರಾಧಿಸಿ ಪಾಣಲಿಂಗ ಸಂಬಂಧಿಯಾಗಿದ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತನಾದಲ್ಲಿ ಬ್ರಹ್ಮನ ಒಡಲೊಡೆಯಬೇಕು. ಮಾಹೇಶ್ವರನಾದಲ್ಲಿ ವಿಷ್ಣುವಿನ ಚೇತನಕ್ಕೆ ಸಿಕ್ಕದಿರಬೇಕು. ಪ್ರಸಾದಿಯಾದಿಯಲ್ಲಿ ರುದ್ರನ ಬಂಧಕ್ಕೆ ಹೊದ್ದದಿರಬೇಕು. ಪ್ರಾಣಲಿಂಗಿಯಾದಲ್ಲಿ ಈಶ್ವರನ ಗೊತ್ತ ಮೆಟ್ಟದಿರಬೇಕು. ಶರಣನಾದಲ್ಲಿ ಸದಾಶಿವಮೂರ್ತಿಯ ತಪ್ಪಲ ತಪ್ಪಿರಬೇಕು. ಐಕ್ಯನಾದಲ್ಲಿ ಪರಶಿವನೆಂಬ ಪ್ರಮಾಣು ನಷ್ಟವಾಗಿರಬೇಕು. ಇಂತೀ ಸ್ಥಲಂಗಳ ನೆಮ್ಮಿ ತೆಪ್ಪವ ಹತ್ತಿ ಒತ್ತುವನಂತೆ, ತೆಪ್ಪವ ತಪ್ಪಲಿಗೆ ಸೇರಿದ ಮತ್ತೆ ಒತ್ತುವುದು ಹತ್ತುವುದು. ಆ ಹೊಳೆ ಕಾಲಿಂಗೆ ಹೊಲಬಾರದ ಮತ್ತೆ ಪೂರ್ವವಿತ್ತ ಉತ್ತರವತ್ತ. ಉಭಯನಷ್ಟವಾದುದೆತ್ತ, ಅತ್ತಲೆ ತನ್ನಷ್ಟ ಮತ್ತೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬ್ರಹ್ಮ ವಿಷ್ಣು ರುದ್ರಾದಿಗಳಿಂದತ್ತತ್ತ ಈಶ್ವರನ ಪುಣ್ಯಾಂಗನೆಯ ಕಂಡೆನಯ್ಯ. ಆ ಈಶ್ವರನ ಪುಣ್ಯಾಂಗನೆಯ ಸಂಗದಿಂದ ಜ್ಞಾನಶಕ್ತಿಯ ಕಂಡೆನಯ್ಯ. ಆ ಜ್ಞಾನಶಕ್ತಿಯ ಸಂಗದಿಂದ ಮಹಾಲಿಂಗದ ಗುಡಿಗೆ ಹೋಗಿ, ಪರಮಾನಂದದ ಬೆಳಗಿನೊಳಗೆ ನಿಂದು, ಪರಿಪೂರ್ಣವನೈದಿ, ನಿಶ್ಚಿಂತ ನಿರಾಕುಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->