ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿಯಾಗಿ ಪಶು ಪಾಶ ಮಲ ಮಯಾಕರ್ಮಗಳುಂಟಾದರೆ, ಈ ಜಗವನೊಬ್ಬರೂ ಸೃಷ್ಟಿಮಾಡಿದ ಕರ್ತುವಲ್ಲ. ಎಂದೆಂದೂ ಜಗವಿದ್ದಿತ್ತು ನಿತ್ಯವೆನ್ನು. ಎಂದೆಂದೂ ಜಗವಿದ್ದಿತ್ತೆಂಬೆಯಾದರೆ, ಶಿವನ ಸೃಷ್ಟಿ, ಸ್ಥಿತಿ, ಸಂಹಾರ, ಸ್ಥಿರೋಭಾವ, ಅನುಗ್ರಹವೆಂಬ ಪಂಚಕೃತ್ಯಗಳು ಹುಸಿಯೆಂದೆನ್ನು. ಶಿವನಿಗೆ ಸೃಷ್ಟಿ ಸ್ಥಿತಿ ಸಂಹಾರಾರ್ಥವುಂಟಾದರೆ, ಈ ಜಗತ್ತೆಲ್ಲವೂ ಶಿವನ ನೆನಹು ಮಾತ್ರದಿಂದ ಹುಟ್ಟಿತ್ತಲ್ಲದೆ, ಎಂದೆಂದೂ ಉಂಟೆಂಬುದು ಶೈವ ಪಶುಮತವಲ್ಲದೆ, ವೀರಶೈವರ ಮತವಲ್ಲ. ವೀರಶೈವರ ಮತವೆಂತೆಂದಡೆ: ಘನ ಗಂಬ್ಥೀರ ವಾರಿದ್ಥಿಯೊಳಗೆ ಫೇನತರಂಗ ಬುದ್ಬುದ ಶೀಕರಾದಿಗಳು ತೋರಿದಡೆ, ಆ ಸಾಗರ ಹೊರಗಾಗಿ ತೋರಬಲ್ಲವೇ? ಆ ಪರಶಿವಸಾಗರದಲ್ಲಿ ತೃಣಾದಿ ಬ್ರಹ್ಮಾಂತವಾದ ದೇಹಿಗಳು ಉತ್ಪತ್ತಿಯಾಗಿ ಮತ್ತಲ್ಲಿಯೇ ಅಡಗುತ್ತಿಪ್ಪರು ನೋಡಾ. ಇದು ಕಾರಣ, ಲಿಂಗನಿರ್ಮಿತದಿಂದ ಜಗತ್ತಾಯಿತೆಂದೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಷ್ಟದಳಕಮಲವ ಮೆಟ್ಟಿ ಚರಿಸುವ ಹಂಸನ ಭೇದವ ಹೇಳಿಹೆನು: ಪೂರ್ವದಳಕೇರಲು ಗುಣಿಯಾಗಿಹನು. ಅಗ್ನಿದಳಕೇರಲು ಕ್ಷುಧೆಯಾಗಿಹನು. ದಕ್ಷಿಣದಳಕೇರಲು ಕ್ರೋದ್ಥಿಯಾಗಿಹನು. ನೈಋತ್ಯದಳಕೇರಲು ಅಸತ್ಯನಾಗಿಹನು. ವರುಣದಳಕೇರಲು ನಿದ್ರೆಗೆಯ್ವುತಿಹನು. ವಾಯುದಳಕೇರಲು ಸಂಚಲನಾಗಿಹನು. ಉತ್ತರದಳಕೇರಲು ಧರ್ಮಿಯಾಗಿಹನು. ಈಶಾನ್ಯದಳಕೇರಲು ಕಾಮಾತುರನಾಗಿಹನು. ಈ ಅಷ್ಟದಳಮಂಟಪದ ಮೇಲೆ ಹರಿದಾಡುವ ಹಂಸನ ಕುಳನ ತೊಲಗಿಸುವ ಕ್ರಮವೆಂತುಟಯ್ಯಾಯೆಂದೊಡೆ: ಅಷ್ಟದಳಮಂಟಪದ ಅಷ್ಟಕೋಣೆಗಳೊಳಗೆ ಅಷ್ಟ ಲಿಂಗಕಳೆಯ ಪ್ರತಿಷ್ಠಿಸಿ ಹಂಸನ ನಟ್ಟ ನಡುಮಧ್ಯದಲ್ಲಿ ತಂದು ನಿಲಿಸಲು ಮುಕ್ತಿಮೋಕ್ಷವನೆಯ್ದಿ ಪರವಶನಾಗಿಪ್ಪನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗಭಾವದಿಂದ ಲಿಂಗಮುಖವನು ಅಂಗಮುಖವನು ಅರಿದು ಜಂಗಮ ಮುಖವನು ಅರಿದಡೆ ಸಂಸಾರವೆಂಬ ಬಂಧನವಿಲ್ಲವಯ್ಯ. ಜಂಗಮವೆಂದರೆ ಸಾಕ್ಷಾತ್ ಪರವಸ್ತು ತಾನೆ ನೋಡಾ. ಅದೇನು ಕಾರಣವೆಂದಡೆ: ಅಂಗವಾರಕ್ಕೆ ಲಿಂಗವಾರಕ್ಕೆ ಮೇಲಾಗಿ ಆ ಅಂಗವನು ಲಿಂಗವನು ತನ್ನಲ್ಲಿ ಏಕೀಕರಿಸಿಕೊಂಡು ತಾನು ಪರಮ ಚೈತನ್ಯನಾದ ಕಾರಣ. ಆ ಪರವಸ್ತುವಿನ ಪ್ರಸನ್ನ ಪ್ರಸಾದಮುಖವನರಿದು ಇಹ ಪರವ ನಿಶ್ಚೆ ೈಸೂದಿಲ್ಲ ನೋಡಾ. ಅದೇನು ಕಾರಣವೆಂದಡೆ: ಇಹ ಪರಕ್ಕೆ ಹೊರಗಾಗಿ ಪರಮ ಪದದಲ್ಲಿ ಪರಿಣಾಮಿಯಾದನಾಗಿ ಈ ತ್ರಿವಿಧವು ಒಂದೆಯೆಂದರಿದಾತನೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಪ್ರಶಿಖಾಮಂಡಲದಲ್ಲಿ ಅಮೃತತೃಪ್ತಿಯೆಂಬ ಅಂಗನೆಯ ಉದರದಲ್ಲಿ ಚಿತ್‍ಶಿಖಿಯೆಂಬ ಕಿಚ್ಚು ಹುಟ್ಟಿ ಮೃತ್ಯುಗಳ ಮೊತ್ತವ ಸಂಹರಿಸಿ ತತ್ ತ್ವಂ ಅಸಿಯೆಂಬ ಪದವ ನುಂಗಿ ಪರಾಪರವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ. ಆವರಿಸಿತ್ತಯ್ಯ ಪರಮ ಅನುಪಮ ಭಕ್ತಿಸುಖ. ಲಿಂಗಾಂಗವೆಂಬ ಎರಡನರಿಯೆನಯ್ಯ. ಶುದ್ಧ ಸುಜ್ಞಾನ ಜಂಗಮಲಿಂಗ ಗ್ರಾಹಕನಾಗಿ ಪ್ರಾಣಲಿಂಗವೆಂಬ ಎರಡನರಿಯೆನಯ್ಯ. ಎರಡೆರಡೆಂದು ಈ ಹುಸಿಯನೇಕೆ ನುಡಿವರಯ್ಯ. ಇನ್ನೆರಡು ಒಂದಾಯಿತ್ತಾಗಿ ಲೋಕಚಾತುರ್ಯ, ಲೋಕವ್ಯವಹರಣೆ. ಲೋಕಭ್ರಾಂತಿಯ ಮರೆದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮಲ್ಲಿ ನಿಬ್ಬೆರಗಾದೆನಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗುಷ್ಠದಲ್ಲಿ ಸರ್ಪದಷ್ಟವಾಗಲು ಸರ್ವಾಂಗವೆಲ್ಲವು ವಿಷಮಯವಾಗಿಪ್ಪುದು ನೋಡಾ. ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು ಆ ಶರಣನ ಸರ್ವಾಂಗವೆಲ್ಲವು ಲಿಂಗವಪ್ಪುದು ತಪ್ಪದು ನೋಡಾ. ಲಿಂಗವನಪ್ಪಿ ಲಿಂಗಸಂಗಿಯಾದ ಅಭಂಗ ಶರಣಂಗೆ ಅನಂಗಸಂಗವುಂಟೆ? ಬಿಡಾ ಮರುಳೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಜ ಹರಿ ಸುರರಿಗೆ ಶರೀರವ ತೊಡಿಸಿ ಕರಣದೋಕುಳಿಯಾಡಿ ವಿಷಯದ ಮಳೆಯ ಕರೆವುತ್ತಿದ್ದಾಳೆ ನೋಡಾ. ಹರಣದ ಮಧ್ಯದಲ್ಲಿ ನಿಂದು, ಹೆಣ್ಣು ಹೊನ್ನು ಮಣ್ಣು ತೋರಿ, ಕಣ್ಣ ಕಟ್ಟಿದಳು ನೋಡಾ, ನಿಮ್ಮ ಕಾಣಲೀಯದೆ. ತಾನು ತಲೆಕೆಳಗಾಗಿ ಕಾಲುಮೇಲಾಗಿ ನಡೆವಳು. ಕರಿಯಾಗಿ ನಿಂದು, ಹರಿಯಾಗಿ ಹರಿದು, ಉರಿಯಾಗಿ ಸುಡುತಿಪ್ಪಳು ನೋಡಾ. ಕರಿಯ ಶಿರದಲ್ಲಿ ಉರಿ ಹುಟ್ಟಲು ಕರಿ ಬೆಂದಿತ್ತು, ಹರಿ ನಿಂದಿತ್ತು, ಉರಿ ಕೆಟ್ಟಿತ್ತು. ಶರೀರಗುಣವಳಿದು ಸದ್ಭಕ್ತಿಸಾಮ್ರಾಜ್ಯವನಾಳುತ್ತಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಾರು, ಲಿಂಗವಾರು ಶಕ್ತಿಯಾರು, ಭಕ್ತಿಯಾರು, ಇಂತಿವೆಲ್ಲವ ನಿನ್ನಲ್ಲಿ ಗಬ್ರ್ಥೀಕರಿಸಿಕೊಂಡು ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ ನಿನ್ನ, ನಿಃಕಲಶಿವತತ್ವವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಕ್ಷರವೆಂಬುದು ಲೆಕ್ಕದೊಳಗು; ಲೆಕ್ಕವೆಂಬುದು ನೆನಹಿನೊಳಗು; ಇವೆಲ್ಲಾ ಕಲ್ಪಿತದೊಳಗು. ಕಲ್ಪಿತವೆಂಬುದು ಖಂಡಿತ ನೋಡ ಅಖಂಡ ಪರಿಪೂರ್ಣ, ನಿರ್ವಿಕಲ್ಪ, ನಿತ್ಯಾತ್ಮಕನಾದ ಲಿಂಗೈಕ್ಯನ ಕಲ್ಪಿತಕ್ಕೆ ತಂದು ನುಡಿವ ಕರ್ಮಕಾಂಡಿಗಳನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅದ್ಭುತದಾಕಾಶದಲ್ಲಿ ಶುಭ್ರವರ್ಣದ ಅಂಗನೆ ವಿದ್ಯುರ್ಲತೆಯ ಹಡೆದಳು ನೋಡಾ. ವಿದ್ಯುರ್ಲತೆಯ ಬೆಳಗಿನಿಂದ ಶುದ್ಧಪ್ರಸಾದವ ಕಂಡು ಶುದ್ಧಾಶುದ್ಧವನಳಿದು, ನಾ ನೀನೆಂಬುದ ಹೊದ್ದದೆ ಎರಡಳಿದ ನಿರಾಳ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ, ಅದು ಕಾಮಾರಿ ನೋಡಾ. ಆ ಲಿಂಗ ಸಂಗದಿಂದ ಅನಂಗ ಸಂಗವ ಕೊಡಹಿ ಅವಿರಳ ಪರಬ್ರಹ್ಮನಾಗಿ ಅರಿಷಡುವರ್ಗಂಗಳ ಗರ್ವವ ಮುರಿದನು ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು, ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ. ಅಗ್ನಿಯಂಗದ ಉದರದೊಳಗೆ ಪರಿಪರಿಯ ರಸದ ಭಾವಿ. ಆ ರಸದ ಭಾವಿಯ ತುಳಕ ಹೋದವರೆಲ್ಲ ಅಗ್ನಿಯನುಣ್ಣದೆ, ಆ ರಸವನೆ ಉಂಡು, ಅಗ್ನಿಯ ಸ್ವರೂಪವಾದರು ನೋಡ. ಅಗ್ನಿಯ ಸ್ವರೂಪವಾದುದ ಕಂಡು ಕುರುಹಳಿದು ಅರುಹಡಗಿ ನಿರವಯಲಸಮಾದ್ಥಿಯಲ್ಲಿ ನಿಂದ ನಿಬ್ಬೆರಗು ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಗ್ನಿಯೆ ಅಂಗವಾದ ಪ್ರಸಾದಿಯಲ್ಲಿ ಪ್ರಾಣಲಿಂಗ ಶರಣ ಐಕ್ಯ ಭಕ್ತ ಮಾಹೇಶ್ವರನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಪ್ರಸಾದಿಯಲ್ಲಿ ಶಿವಲಿಂಗ ಸಂಬಂಧವಾಗಿ ಆ ಶಿವಲಿಂಗದಲ್ಲಿಯೆ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಶಿವಲಿಂಗವೆ ಸರ್ವಾಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಪ್ರಸಾದಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅದ್ವೆ ೈತವ ನುಡಿವ ಬದ್ಧಭವಿಗಳಿರಾ ಮನದ ಕ್ಷುದ್ರವಡಗದು ಕಾಣಿ ಭೋ. ತತ್ತ್ವಾರ್ಥವ ನುಡಿವ ವ್ಯರ್ಥಕಾಯರುಗಳಿರಾ ವಿಕಾರದ ಕತ್ತಲೆ ಹರಿಯದು ಕಾಣಿ ಭೋ. ಶಿವಾನುಭಾವ ನಿಮಗೇಕೆ? ಸತ್ತ ಹಾಂಗಿರಿ ಭೋ. ತತ್ತ್ವವತ್ತಲೆಯಾಗಿ ನೀವಿತ್ತಲೆಯಾಗಿ ಮೃತ್ಯುವಿನ ಬಾಯ ತುತ್ತಾದಿರಲ್ಲಾ. ತತ್ತ್ವವಿತ್ತುಗಳು ವೃಥಾ ಸತ್ತುದ ಕಂಡು ಮೃತ್ಯುಂಜಯನ ಶರಣರು ನಗುತಿಪ್ಪರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಹಂಕಾರಭಾವ, ಅವಿದ್ಯಾಭಾವ, ಜ್ಞಾನಾಜ್ಞಾನಭಾವ, ಜ್ಞಾನವಿಕೃತಿಭಾವ ವರ್ತನವಿಕೃತಿಭಾವ, ಮೋಹನವಿಕೃತಿಭಾವ ಎಂಬ ಭ್ರಾಂತಿಭಾವವ ಮಾಣಿಸಯ್ಯ. ಇಂದ್ರಿಯಭಾವ, ವಿಷಯಭಾವ ಭೂತಭಾವ, ಕರಣಭಾವ ವಿಶ್ವ ತೈಜಸ ಪ್ರಾಜ್ಞ್ಲವ್ವೆಂಬ ಜೀವಭಾವದ ಭ್ರಮೆಯ ಕಳೆಯಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರುಹಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು, ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು, ವಿಷಯಂಗಳ ಶಿವನರಿಯಿತ್ತು. ದಶವಿಧೇಂದ್ರಿಯಂಗಳ ದಾಳಿಯ ನಿಲಿಸಿತ್ತು. ಪಂಚಮಹಾಭೂತಂಗಳಂಗಳ ಪ್ರಪಂಚುವ ಪರಿಹರಿಸಿತ್ತು. ಬ್ರಹ್ಮವೇ ತಾನೆಂಬ ಕುರುಹ ಮೈಗಾಣಿಸಿತ್ತು. ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ, ಮಹಾಲಿಂಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಟ್ಟುದನು ಅಡಲುಂಟೆ? ಸುಟ್ಟುದ ಸುಡಲುಂಟೇ ಅಯ್ಯ? ಬೆಂದ ಮಡಕೆ ಮರಳಿ ಧರೆಯ ಕೂಡಬಲ್ಲುದೇ ಅಯ್ಯ? ಕರ್ಪೂರವ ಅಗ್ನಿ ನುಂಗಿದ ಬಳಿಕ ಕರಿಯುಂಟೇ ಅಯ್ಯ? ಶರಣನ ಲಿಂಗ ನುಂಗಿ, ಲಿಂಗವ ಶರಣ ನುಂಗಿ, ನದಿಯೊಳಗೆ ನದಿ ಬೆರೆಸಿದಂತೆ ಬೆರೆದು, ಶುದ್ಧ ನಿರ್ಮಲನಾದ ಲಿಂಗೈಕ್ಯಂಗೆ, ಭಿನ್ನಾಭಿನ್ನವ ಕಲ್ಪಿಸುವ ಅಜ್ಞಾನಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದಮೇಲೊಂದು ಲಿಂಗವ ಕಂಡೆ; ಲಿಂಗದಮೇಲೊಂದಂಗವ ಕಂಡೆನು ನೋಡಾ. ಅಂಗವೆಂದರೆ ಆತ್ಮನು; ಲಿಂಗವೆಂದರೆ ಪರಮನು. ಶಿವಜೀವರೊಂದಾದಲ್ಲಿ, ಪ್ರಾಣಾಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ[ವೆ]ಂಬ ದಶವಾಯುಗಳ ಗಮನಾಗಮನದ ವಿಷಯವ್ಯಾಪ್ತಿಯಡಗಿ ಆತ್ಮಲಿಂಗಸಂಬಂಧಿಯಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವುಳ್ಳನ್ನಕ್ಕರ ಲಿಂಗ ಲಿಂಗವೆನುತಿರ್ದೆ. ಲಿಂಗವುಳ್ಳನ್ನಕ್ಕರ ಅಂಗ ಅಂಗವೆನುತಿರ್ದೆ. ಅಂಗ ಲಿಂಗವುಳ್ಳನ್ನಕ್ಕರ ಅರುಹು ಅರುಹುಯೆನುತಿರ್ದೆನು. ಅರುಹು ಅರುಹುಯೆಂಬನ್ನಕ್ಕರ ಭಾವ ನಿರ್ಭಾವಯೆನುತಿರ್ದೆನು. ಅಂಗ ಲಿಂಗದಲ್ಲಡಗಿ, ಲಿಂಗ ಅಂಗದಲ್ಲಡಗಿ, ಅಂಗ ಲಿಂಗವೆಂಬುಭಯ ಭಾವವರತಲ್ಲಿ ಅರುಹು ಅರುಹೆಂಬುವುದು ಬರಿದಾಯಿತ್ತು ನೋಡಾ. ಅರುಹು ಅರುಹೆಂಬುವದು ಅರಿದಾದಲ್ಲಿ, ಭಾವ ನಿರ್ಭಾವ ಬಯಲಾಗಿ ಬಚ್ಚಬರಿಯ ಬಯಲೆಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕೊನೆಯ ಮೊನೆಯಲ್ಲಿ ಸಂಗಿಸುವುದು ಲಿಂಗ ತಾನೆಯಯ್ಯ. ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು ಲಿಂಗ ತಾನೆಯಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವುದು ಲಿಂಗ ತಾನೆಯಯ್ಯ. ಜಿಹ್ವೆಯ ಕೊನೆಯ ಮೊನೆಯಲ್ಲಿ ರುಚಿಸುವುದು ಲಿಂಗ ತಾನೆಯಯ್ಯ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವುದು ಲಿಂಗ ತಾನೆಯಯ್ಯ. ಶ್ರೋತ್ರದ ಕೊನೆಯ ಮೊನೆಯಲ್ಲಿ ಕೇಳುವುದು ಲಿಂಗ ತಾನೆಯಯ್ಯ. ಭಾವದ ಕೊನೆಯ ಮೊನೆಯಲ್ಲಿ ತೃಪ್ತಿಯಿಂದ ಪರಿಣಾಮಿಸುವುದು ಲಿಂಗ ತಾನೆಯಯ್ಯ. ಇದುಕಾರಣ, ಲಿಂಗ ಮುಂತಲ್ಲದೆ ಸಂಗವ ಮಾಡೆ. ಲಿಂಗ ಮುಂತಲ್ಲದೆ ಅನ್ಯವ ನೋಡೆ. ಲಿಂಗ ಮುಂತಲ್ಲದೆ ಅನ್ಯವ ವಾಸಿಸೆ. ಲಿಂಗ ಮುಂತಲ್ಲದೆ ಅನ್ಯವ ರುಚಿಸೆ. ಲಿಂಗ ಮುಂತಲ್ಲದೆ ಅನ್ಯವ ಸೋಂಕೆ. ಲಿಂಗ ಮುಂತಲ್ಲದೆ ಅನ್ಯವ ಕೇಳೆನು. ಲಿಂಗ ಮುಂತಲ್ಲದೆ ಅನ್ಯವ ಪರಿಣಾಮಿಸೆನು. ಹೀಂಗೆಂಬ ನೆನಹು ನಿತ್ಯಾನಿತ್ಯ ವಿವೇಕವ್ರತವಯ್ಯಾ ಎನಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಮೇಧ್ಯವ ಭುಂಜಿಸುವ ಸೂಕರ ಅಮೃತದ ಸವಿಯನೆತ್ತಬಲ್ಲುದಯ್ಯ? ಗೆಜ್ಜಲ ತಿಂಬ ಕರಡಿ ಖರ್ಜೂರದ ಹಣ್ಣಿನ ಸವಿಯನೆತ್ತಬಲ್ಲುದಯ್ಯ? ಬೇವ ತಿಂಬ ಕಾಗೆ ಬೆಲ್ಲದ ಸವಿಯನೆತ್ತ ಬಲ್ಲುದಯ್ಯ? ಅಂಗನೆಯರ ಸಮ್ಮೇಳನದ ವಿಕಾರದ ಭಂಗಿಯ ಕೊಂಡು ಮೈಮರೆದ ಮನುಜರು ಲಿಂಗಪ್ರೇಮದ ಸುಖವನಿವರೆತ್ತಬಲ್ಲರಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಡಿಗಡಿಗೆ ಭವಹರನ ನೆನೆವುತ್ತ, ಭಸಿತವ ಧರಿಸುತ್ತ ಭವವ ತಪ್ಪಿಸಿಕೊಂಬ ಸುಖಕ್ಕೆ ಇನ್ನು ಸರಿಯುಂಟೇ? ಪ್ರತಿಯಿಲ್ಲದ ಅಪ್ರತಿಮ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಡಜ ಪಿಂಡಜ ಬಿಂದುಜ ಉದಯವಾಗದಂದು, ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ ತತ್ವತ್ರಯಂಗಳ ನಾಮಸೀಮೆಗಳೇನುಯೇನೂಯಿಲ್ಲದಂದು, ಆಚಾರ ಅನಾಚಾರವಿಲ್ಲದಂದು, ಸೀಮೆ ನಿಸ್ಸೀಮೆಯಿಲ್ಲದಂದು,
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿಯಾಗಿ ಶಿವನುಂಟು, ಮಾಯೆಯುಂಟು, ಆತ್ಮನುಂಟೆಂಬುದನಾವರಿಯೆವಯ್ಯ. ಆದಿ ಅನಾದಿ ಸುರಾಳ ನಿರಾಳವಿಲ್ಲದಂದು, ಮಾಯೆಯನು ಕಾಣೆ, ಆತ್ಮನನು ಕಾಣೆ. ಮಹಾದೇವ ತಾನೊಬ್ಬನೇ ಇದ್ದೆನೆಂಬುದು ಕಾಣಬಂದಿತ್ತು ನೋಡ ಶಿವಜ್ಞಾನದೃಷ್ಟಿಗೆ. ಆ ಲಿಂಗನಿರ್ಮಿತದಿಂದ ಮಾಯೆ ಹುಟ್ಟಿತ್ತು ನೋಡಾ. ಆ ಮಾಯೆಯಿಂದ ತತ್ವಬ್ರಹ್ಮಾಂಡಾದಿ ಲೋಕಾದಿಲೋಕಂಗಳು ಹುಟ್ಟಿದವು ನೋಡಾ. ಹೀಂಗೆ ನಿನ್ನ ನೆನಹು ಮಾತ್ರದಿಂದ ತ್ರೆ ೈಜಗ ಹುಟ್ಟಿತ್ತು ನೋಡಾ. ಆ ತ್ರೈಜಗಂಗಳ ಉತ್ಪತ್ತಿ ಸ್ಥಿತಿ ಲಯಂಗಳಿಗೆ ನೀನೆ ಕಾರಣನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಇನ್ನಷ್ಟು ...