ಅಥವಾ

ಒಟ್ಟು 96 ಕಡೆಗಳಲ್ಲಿ , 36 ವಚನಕಾರರು , 67 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿತ್ತು ಅಂಕುರವ ನುಂಗಿಪ್ಪಾಗ ಅಂಕುರ ಆ ಬಿತ್ತ ತನ್ನಯ ಸಂಕೇತದಲ್ಲಿ ಇರಿಸಿಕೊಂಡು ಇಹಾಗೆ ಉಭಯದ ಭೇದ ಎಲ್ಲಿ ಅಡಗಿತ್ತು ಹೇಳಿರಣ್ಣಾ. ಅರುಹಿಸಿಕೊಂಬ ಕುರುಹು; ಆ ಅರುಹಿನಲ್ಲಿ ಕುರುಹಿನ ಕಳೆ ನಿಂದ ತೆರಪಾವುದು? ಅರುಹಿಸಿಕೊಂಬ ಅರಿವು ತೋರಿಸಿಕೊಂಬ ಕುರುಹಿನ ಕಳೆ ಬೇರೊಂದೆಡೆ ತೆರಪಿಲ್ಲ, ಅದು ತಾನೆ ನಿಶ್ಚಯ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಎಲೆ ಮನವೆ, ಎಲ್ಲಿ ಹವಣಿಸಬಾರದ ಅಖಂಡ ಬೆಳಗು ತೋರುತ್ತಿಹುದು ಅದೀಗ ನಿನ್ನ ನಿಜ. ಎಲೆ ಮನವೆ, ಆವಲ್ಲಿ ನೀನೆಂಬ ಶಂಕೆ ಹಿಂಗಿ ತಾನೆ ತೋರುತ್ತಿಹುದು ಅದೀಗ ನಿನ್ನ ನಿಜ. ಎಲೆ ಮನವೆ, ನಿನ್ನ ನಿಜವನರಿಯಬಲ್ಲಡೆ ಅದೇ ಬ್ರಹ್ಮಜ್ಞಾನ, ಅದೇ ಕೇವಲಮುಕ್ತಿ, ಅದೇ ನಮ್ಮ ಗುಹೇಶ್ವರಲಿಂಗವನರಿವ ಸಹಜಭಕ್ತಿಯ ಕುಳ ಕಾಣಾ. ಎಲೆ ಮನವೆ-ನೀನಿದ ನಿಶ್ಚಯಿಸಿಕೊ ಮರೆಯದೆ.
--------------
ಅಲ್ಲಮಪ್ರಭುದೇವರು
ಮಹಾಮಲೆಯಲ್ಲಿ ಕೊಲುವ ವ್ಯಾಘ್ರನ ನಾಲಗೆಯ ತುದಿಯಲ್ಲಿ, ಒಂದು ಮೊಲ ಹುಟ್ಟಿತ್ತು. ಆ ಮೊಲಕ್ಕೆ ಮೂರು ಕಾಲು, ತಲೆಯಾರು, ಬಾಯಿ ಐದು. ಒಂದು ಬಾಯಿ ಎಲ್ಲಿ ಅಡಗಿತ್ತೆಂದರಿಯೆ. ಆರು ತಲೆಗೆ ಒಂದು ಕಣ್ಣು, ಅರೆ ನಾಲಗೆ, ಕಿತ್ತಿ ಹತ್ತಾಗಿ ಹರಿದಾಡುತ್ತದೆ. ಎಸುವರ ಕಾಣೆ, ಬಲೆಗೊಳಗಾಗದು. ಆ ಶವಕವ ಹೊಸ ಕೋಳಿ ನುಂಗಿತ್ತು, ನುಂಗಿದ ಕೋಳಿಯ ಶರಣ ನುಂಗಿದ. ಆ ಶರಣಸನ್ಮತವಾಗಿ ಪ್ರಣವ ನುಂಗಿತ್ತು. ಆ ನುಂಗಿದ ಪ್ರಣವವ ಅದರಂಗವನರಿದಡೆ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಲ್ಲಿ ನೋಡಿದಡಲ್ಲಿ ನೀನೇ ದೇವ. ಎಲ್ಲಿ ಮುಟ್ಟಿದಡಲ್ಲಿ ನೀನೇ ದೇವ. ಎಲ್ಲಿ ನೆನೆದಡಲ್ಲಿ ನೀನೇ ದೇವ. ಎಲ್ಲಿ ಭಾವಿಸಿದಡಲ್ಲಿ ನೀನೇ ದೇವ. ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಭೆ ಮುಸುಕಿತ್ತಾಗಿ ಅಖಂಡೇಶ್ವರಾ, ನಾನು ನೀನೆಂಬುದಕ್ಕೆ ತೆರಹಿಲ್ಲ ದೇವಾ.
--------------
ಷಣ್ಮುಖಸ್ವಾಮಿ
ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ ಎಲ್ಲಿ ನೋಡಿದಡೂ ವಿಚಾರವೊಂದೆ ಭೇದ. ಅರಿದಲ್ಲಿ ಮಲಕ್ಕೆ ಹೊರಗು, ಮರೆದಲ್ಲಿ ಮಲಕ್ಕೆ ಒಳಗು. ಅರಿವು ಮರವೆ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಬೆಳಗು.
--------------
ಅರಿವಿನ ಮಾರಿತಂದೆ
ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ ಇದಿರಿಟ್ಟ ಪದಾರ್ಥಂಗಳ ಲಿಂಗಕ್ಕೆ ತೋರಿ, ತಾ ಕೊಂಬಲ್ಲಿ ದೃಷ್ಟವಾಯಿತ್ತು. ಸ್ವಪ್ನ ಸುಷುಪ್ತಿಗಳಲ್ಲಿ, ಮಿಕ್ಕಾದ ಏಕಾಂತ ಸತಿ ಕೂಟಂಗಳಲ್ಲಿ ಅದಕ್ಕೆ ದೃಷ್ಟವಹ ಸಹಭೋಜನವಾವುದಯ್ಯಾ ? ಯೋನಿ ಸ್ವಪ್ನ ಸುಷುಪ್ತಿ ಮುಂತಾದ ಭಾವದ ಸಹಭೋಜನ ಎಲ್ಲಿ ಇದ್ದಿತ್ತು ? ಆ ಭಾಜನದ ಸಹಭೋಜನದ ಸಂಬಂಧ ಎಲ್ಲಿದ್ದಿತು ? ಅದು ಕಲ್ಲಿನೊಳಗಣ ನೀರು, ನೀರೊಳಗಣ ಶಿಲೆ, ಇದಾರಿಗೂ ಅಸಾಧ್ಯ ನೋಡಾ. ಅದು ಕಾಯದ ಹೊರಗಾದ ಸುಖ, ಸುಖದ ಹೊರಗಾದ ಅರ್ಪಿತ. ಇಂತೀ ಗೊತ್ತಮುಟ್ಟಿ ಸಹಭೋಜನದಲ್ಲಿ ಅರ್ಪಿಸಬಲ್ಲವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಸಹಭಾಜನ ಭೋಜನವಾಗಿಪ್ಪನು.
--------------
ಅಕ್ಕಮ್ಮ
ಎಲ್ಲಿ ನೋಡಲು ತಾಯ ಕೊಂದವರೂಟ ಘನವಾಗಿದೆ. ಈ ಗುಣ ಹರಿವ ಹಕ್ಕೆಗೆ ಸಂಬಂಧವಿಲ್ಲ. ನಿಮ್ಮೂಟವಂ ಕಂಡವರೊಳರೆ ಚೆನ್ನಬಸವಣ್ಣನಲ್ಲದೆ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಿಡಿದ ಚೆನ್ನಬಸವಣ್ಣನಿಂದ ಸುಖವ ಕಂಡೆನು.
--------------
ಸಿದ್ಧರಾಮೇಶ್ವರ
ಕಾಲಿಲ್ಲದೆ ನಡೆವನು, ಕೈಯಿಲ್ಲದೆ ಹಿಡಿವನು, ಕಣ್ಣಿಲ್ಲದೆ ನೋಡುವನು ಸಹಜವಾಗಿ. ಮೈಯಿಲ್ಲದ ಬಣ್ಣ, ಮಥನವಿಲ್ಲದ ಕೂಟ. ಸೈವೆರಗಾಗಿ, ಸಿಡಿಯ ಮೇಲೆ ಒಡಲು ತನ್ನನರಿಯದು, ಒಡಲ ತಾನರಿಯನು ಬಿಡದೆ ಎನ್ನ ಬೆಂಬತ್ತಿ ಬಂದ ಪರಿಯ ನೋಡಾ. ಜಡವಿಡಿದ ಎನ್ನ ಕಾಯದ ಕಳವಳವ ತಿಳುಹಲೆಂದು, ಅಡಿಗಡಿಗೆ ಅನುಭಾವವ ತೋರುತ್ತಲಿದ್ದಾನೆ. ಕುಳ್ಳಿತ್ತೆಡೆಯಲ್ಲಿ ಕುಂಟ, ನಿಂದಿದ್ದೆಡೆಯಲ್ಲಿ ಹೆಳವ. ಎಲ್ಲಿ ನೋಡಿದಡಲ್ಲಿ ಪರಿಪೂರ್ಣನು. ಮೆಲ್ಲಮೆಲ್ಲನೆ ಒಳಗ[ನ]ರಿದು ತೋರುತ್ತೈದಾನೆ. ಬಲ್ಲವರೆಲ್ಲಾ ಬದುಕಿಯೆಂದು ಝಲ್ಲರಿಯ ಮೇಲೊಂದು ಬೆಳುಗೊಡೆಯ ಹಿಡಿದು ಬಲ್ಲಿದನಾನೆಯ ತಡೆದು ನಿಲ್ಲಿಸಬಲ್ಲನು. ಕೂಡಲಸಂಗಮದೇವರ ಮಹಾಮನೆಯಲ್ಲಿ ಪ್ರಭುದೇವರ ಮೊರೆಯ ಹೊಕ್ಕು ಬದುಕಿದೆನು.
--------------
ಬಸವಣ್ಣ
ಸೀತೆ ಸೆರೆಹೋಹಾಗ, ವಾಣಿಯ ನಾಸಿಕ ಅರಿವಾಗ, ಉಮಾದೇವಿಯ ಅಸುರನರಸುವಾಗ, ಉತ್ಪತ್ಯದಾತ, ಸ್ಥಿತಿಗೆ ಕರ್ತ, ಲಯಕ್ಕೊಡೆಯ ಎಲ್ಲಿ ಹೋದ[ರೆ]ಂದರಿ[ಯೆ] ಇಂತಿವ ಬಲ್ಲವ ಕಲ್ಲಿಗೆ ಹೊರಗಾದ ಸದಾಶಿವಮೂರ್ತಿಲಿಂಗವಲ್ಲದಿಲ್ಲ.
--------------
ಅರಿವಿನ ಮಾರಿತಂದೆ
ಎನ್ನ ನಲ್ಲನೆನ್ನನೊಲ್ಲದಿರ್ದಡೆ ನಾ ಎಲ್ಲಿ ಅರಸುವೆನವ್ವಾ ? ಗಂಗೆಯ ನೋನೆನು, ಗೌರಿಯ ನೋನೆನು. ಎಲ್ಲಿ ಅರಸುವೆನವ್ವಾ, ಎನ್ನ ಅಂತರಂಗದ ಆತ್ಮಜ್ಯೋತಿ ಉರಿಲಿಂಗದೇವಾ ಎಂದು ಇಲ್ಲಿಯೇ ಅರಸುವೆನವ್ವಾ.
--------------
ಉರಿಲಿಂಗದೇವ
ಭೂಪುಡಿ ಅಪ್ಪುವ ಕೂಡಿದಲ್ಲಿ ಮೃತ್ಪಿಂಡವಾದಂತೆ, ಅಪ್ಪು ಆರಲಿಕ್ಕೆ ಮೃತ್ಪಿಂಡವ ಒಡೆದಲ್ಲಿ ಅಪ್ಪು ಎಲ್ಲಿ ಅಡಗಿತ್ತೆಂಬುದನರಿದಲ್ಲಿ ಪಿಂಡಜ್ಞಾನಸಂಬಂಧಿ. ಈ ಸಂಪುಟದಿಂದ ಆತ್ಮಘಟದ ಸಂಜ್ಞೆ. ಈ ಸಂಚದಿಂದ ಸದ್ಯೋಜಾತಲಿಂಗದಲ್ಲಿ ಮುಂಚಬೇಕು.
--------------
ಅವಸರದ ರೇಕಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು ತಲೆದೋರುವುದಕ್ಕೆ ಮುನ್ನವೆ, ಯುಗಜುಗಂಗಳು ಪ್ರಮಾಣಿಸುವುದಕ್ಕೆ ಮುನ್ನವೆ, ನಾಲ್ಕು ವೇದ ಹದಿನಾರುಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳು ಕುರುಹುಗೊಳ್ಳುವುದಕ್ಕೆ ಮುನ್ನವೆ, ನಿರಾಳ ಸುರಾಳವೆಂಬ ಬಯಲು ಅವಗವಿಸುವುದಕ್ಕೆ ಮುನ್ನವೆ, ಬ್ರಹ್ಮಾಂಡವೆಲ್ಲಿ ಆಯಿತ್ತು ? ವಿಷ್ಣುವಿನ ಚೇತನ ಎಲ್ಲಿ ಹುಟ್ಟಿತ್ತು ? ಮಹಾರುದ್ರನ ದ್ವೇಷ ಎಲ್ಲಿ ಹುಟ್ಟಿ, ಎಲ್ಲಿ ಅಡಗಿತ್ತು ಹೇಳಾ ? ನಾದಬಿಂದುಕಳೆಗೆ ಅತೀತವಪ್ಪ ಲಿಂಗವ ಭೇದಿಸಿ ವೇಧಿಸಲರಿಯದೆ, ಭಾವಭ್ರಮೆಯಿಂದ ನಾನಾ ಸಂದೇಹಕ್ಕೆ ಒಳಗಾಗಿ, ಜೀವ ಪರಮನ ನೆಲೆಯ ಕಂಡೆಹೆನೆಂದು ಆವಾವ ಠಾವಿನಲ್ಲಿ ಕರ್ಕಶಗೊಂಬವಂಗೆ, ಪ್ರಾಣಲಿಂಗಿಯೆಂಬ ಭಾವ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಸ್ಥಲ ಘನವೆಂಬೆನೆ ? ಗುರುವಿಂಗೆ ಲಿಂಗವುಂಟು. ಲಿಂಗಸ್ಥಲ ಘನವೆಂಬೆನೆ ? ಲಿಂಗಕ್ಕೆ ಜಂಗಮವುಂಟು. ಆ ಜಂಗಮ ಎಲ್ಲಿ ಇದ್ದಡೆ ಅಲ್ಲಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಭಕ್ತಿ ಅನುಭಾವ ಸನ್ನಿಹಿತ ಕಾಣಾ_ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಘಟ ಪೃಥ್ವಿಯಲ್ಲಿ ಸಿಕ್ಕಿ, ಆತ್ಮ ಭವದುಃಖಕ್ಕೊಳಗಾಗಿ ತಾನರಿವ ಲಿಂಗಕ್ಕೆ ಎಲ್ಲಿ ಆಶ್ರಯವಾಯಿತ್ತು ? ಉಭಯಗೂಡಿ ಪ್ರಾಣಲಿಂಗಯೋಗ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ನಾನಾ ವೇಷವ ತೊಟ್ಟು ಆಡುವನಂತೆ ಬಹುರೂಪು ಬೇರಲ್ಲದೆ ಆಡುವ ತಾನೊಬ್ಬನೆ, ಎಲ್ಲಿ ಅರ್ಪಿತ ಮುಖ, ಅಲ್ಲಿಯೂ ನೀನೇ ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->