ಅಥವಾ

ಒಟ್ಟು 73 ಕಡೆಗಳಲ್ಲಿ , 2 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನದಾದಡೇನೋ ಕನ್ನಡಿ ಅನ್ಯರದಾದಡೇನೋ ಕನ್ನಡಿ? ತನ್ನ ರೂಪ ಕಂಡಡೆ ಸಾಲದೆ? ಸದ್ಗುರು ಆವನಾದಡೇನೋ? ತನ್ನನರುಹಿಸಿದಡೆ ಸಾಲದೆ? ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಿಜವಸ್ತುವೊಂದೆ, ಎರಡಾಗಬಲ್ಲುದದೊಂದೆ, ಬೇರೆ ತೋರಬಲ್ಲುದದೊಂದೆ, ತನ್ನ ಮರೆಯಬಲ್ಲುದದೊಂದೆ, ಆ ಮರವೆಯ ಬಲ್ಲುದದೊಂದೆ, ತಾನಲ್ಲದನ್ಯವಿಲ್ಲೆಂದರಿದರಿವು ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಾವು ತಡವಲ್ಲ, ನರಕ ದೂರವಲ್ಲ, ಕೆಮ್ಮನೆ ಕೆಡಬೇಡ. ವಿಷಯವ ಬಿಡು, ಗುರುಭಕ್ತಿಯ ನಂಬು ಸುಖಿಯಪ್ಪೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ದಿಟದಂತೆ ತನು ತನ್ನ ಹಾಂಗೆ ತೋರಿತ್ತಾಗಿ ದೃಷ್ಟ ದೋಷಭ್ರಾಂತಿ. ಎನ್ನದಿಟದಂತೆ, ತನು ತನ್ನ ಹಾಂಗೆ ಇಂದ್ರಿಯಕ್ಕೆತೋರಿಹದಾಗಿ. ದರ್ಶನದೋಷ ಭ್ರಾಂತಿಯೆಂದು ತಾನು ತಾನೆಂದು ತಾ ನೆನೆಯದಿಹುದಾಗಿ. ದೃಷ್ಟದೋಷ ಭ್ರಾಂತಿಯನೂಹಿಸಿ ಜೀವ ತನ್ನ ದಿಟವೆಂದುಬಗೆದಹನಾಗಿ. ತಾನೇನೂ ಎನ್ನ ಕನಸಿನ ಹಾಂಗೆ. ಭ್ರಾತಿಯೇನನೂ ಭೂತಸಾದೃಶ್ಯವನೂತಿಳಿದಂದು ನಿಜಗುಣ. ಈ ನಿಜದಲ್ಲಿ ಅರಿದಾಗ ಭೇದವೇನೂ ಇಲ್ಲವಾಗಿ ನಿರ್ಮಾಯ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಅರಿವುದೊಂದೆ ಎರಡಾಗಬಲ್ಲುದೊಂದೆ, ಬೇರೆ ತೋರಬಲ್ಲುದದೊಂದೆ, ತನ್ನ ಮರೆಯಬಲ್ಲುದದೊಂದೆ, ತಾನಲ್ಲದನ್ಯವಿಲ್ಲೆಂದರಿದ ಅರಿವು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಂದುವಿನ ಬೆಳಗಿಂದ ಇಂದುವ ಭಾನುವಿನ ಬೆಳಗಿಂದ ಭಾನುವ ದೀಪದ ಬೆಳಗಿಂದ ದೀಪವ ಕಾಬಂತೆ ತನ್ನ ಬೆಳಗಿಂದ ತನ್ನನೆ ಕಂಡಡೆ ನಿನ್ನ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸತ್ಯ ಜ್ಞಾನ ಪರಿಪೂರ್ಣಾನಂದ ಪರಮವಿದ್ಯೆಯದೇಕೊ? ಜಡ ದುಃಖ ದೇಶಿಕ ಕಲ್ಪಿತ ಅಕಲ್ಪಿತ ಅಲ್ಲಿ ಕಲ್ಪಿತ ಪರಮನ ಕಟ್ಟಿದ ನೋಡಾ, ಪರಮ ಕಲ್ಪಿತನ ಕಟ್ಟಿದನೊ ಹೇಳಯ್ಯಾ. ಅಲ್ಲಿ ಬಂಧವಾರಿಗೆ ಮೋಕ್ಷವಾರಿಗೆ ಹೇಳಯ್ಯಾ. ನಿನ್ನಿಂದ ನಿನ್ನ ತಿಳಿದು ನೋಡು. ತಥ್ಯಮಿಥ್ಯಗಳೊಂದನೊಂದು ಕಟ್ಟಲರಿದವೆ ಹೇಳು? ಹುಸಿ ತೋರಿಕೆ ದಿಟತಾನೆ? ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮುನ್ನವೆ ಮೂರರ ಹಂಬಲ ಹರಿದು ಗುರು ಚರ ವಿರಕ್ತನಾದ ಬಳಿಕ ಇನ್ನೂ ಮೂರರ ಜಿಹ್ವೆಯ ಹಂಬಲೇಕೆ? ಆವಾವ ಜೀವಂಗಳು ತಮ್ಮವಲ್ಲದೆ ಮುಟ್ಟವಾಗಿ ತೊಂಡ ಮಚ್ಚಿದ ಜೀವದನದಂತೆ, ಊರೂರ ತಪ್ಪದೆ ಹರಿದು ಜೋಗಿಯ ಕೈಯ ಕೋಡಗದಂತೆ. ಅನ್ಯರಿಗೆ ಹಲುಗಿರಿದು ವಿರಕ್ತನೆನಿಸಿಕೊಂಬ ಯುಕ್ತಹೀನರ ಕಂಡಡೆ ಎನ್ನ ಮನ ನಾಚಿತ್ತು ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮಣ್ಣ ಕಳೆದು ಮಡಕೆಯಿಲ್ಲ. ಹೊನ್ನ ಕಳೆದು ತೊಡಿಗೆಯಿಲ್ಲಿ. ತನ್ನ ಕಳೆದು ಜಗವಿಲ್ಲ; ತಾನೇ ತನ್ನಿಂದನ್ಯವಿಲ್ಲ. ಸುಖ ದುಃಖ ಬಂಧಮೋಕ್ಷಗಳಿಲ್ಲದ ನಾಹಂ ಎಂದೆನಲಿಲ್ಲ, ಕೋಹಂ ಎಂದೆನಲಿಲ್ಲ, ಸೋಹಂ ಎಂದೆನಲಿಲ್ಲ. ನುಡಿಗೆ ಎಡೆಯೆನಿಸಿ, ಏನೂ ಇಲ್ಲದ ಸಚ್ಚಿದಾನಂದ ನಿತ್ಯಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕೋಹಮೆಂಬುದು ಪ್ರಸನ್ನಭಾವ. ತನ್ನನರಿಸುವ ಕತದಿಂದ ನಿರಹಂಕಾರ, ಪರಮ ವಿರಹಿತ, ವಿಷರಹಿತ. ಏನೂ ಹೊರಹೊದ್ದದ ಸನ್ಮಾತ್ರ ಚಿನ್ಮಯ ಪರಮಾನಂದ ತಿಳಿದು ನೋಡುವಡೆ, ನಿಜಗುಣ ತಾನೇ, ಸಿಮ್ಮಲಿಗೆಯ ಚೆನ್ನರಾಮಾ
--------------
ಚಂದಿಮರಸ
ಜಾಣನಯ್ಯಾ ಸದ್ಗುರುವ ನಂಬುವಲ್ಲಿ. ಜಾಣನಯ್ಯಾ ವಿಷಯಂಗಳ ಬಿಡುವಲ್ಲಿ. ಜಾಣನಯ್ಯಾ ಅವಿದ್ಯವ ಗೆಲ್ಲುವಲ್ಲಿ. ಜಾಣನಯ್ಯಾ ತನ್ನ ತಾನರಿವಲ್ಲಿ ಜಾಣನಯ್ಯಾ ನಿಜಗುಣನ ಶ್ರೀಪಾದವ ಪಿಡಿವಲ್ಲಿ ಜಾಣನಯ್ಯಾ ನಮ್ಮ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತನ್ನ ಮರೆವಂದವ ಶ್ರೀ ಗುರುವಿನ ವಚನದಿಂ ತಿಳಿದು ನೋಡಯ್ಯಾ, ಪರಬ್ರಹ್ಮತಾನಾದಂದು ತನ್ನ ತಾ ಮರೆವೆ ನೋಡಯ್ಯಾ. ಇದನರಿದು ಸುಖಿಯಾದಾತ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ವಿಧಿ ನಿಷೇಧ ಜನನಿ ಜನಕ ಕುಲಗೋತ್ರ ಜಾತಿ ಭೇದಾಭೇದ ಸ್ವರ್ಗನರಕಾದಿ ಭಯವೇನೂ ಇಲ್ಲ, ಜಗವೇನೂ ಇಲ್ಲ. ``ಅತ್ರ ಪಿತಾ ಪಿತಾ ಭವತಿ ಮಾತಾ ಮಾತಾ ಲೋಕಾ ಲೋಕಾ ದೇವೋದೇವ ವೇದೋವೇದ ಬ್ರಾಹ್ಮಣೋ ಬ್ರಾಹ್ಮಣಶ್ಚಾಂಡಾಲೋ ಚಾಂಡಾಲಃ||' ಎಂದುದು ವೇದ. ಅದು ತಾನೆ ತನ್ನಿಂದನ್ಯವಿಲ್ಲ. ತೋರುವ ತೋರಿಕೆಯೆಲ್ಲ ಮಾಯೆಯೆಂದರಿದು ಜ್ಞಾನಾನಂದ ಪರಿಪೂರ್ಣ ತಾನೆಂದರಿದು ನೀನಾಗಿ ನಿಂದ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಅಂಗದೊಳಗೆ ಲಿಂಗನಾಗಿ ಬಂದ ಲಿಂಗವನೆಂತು ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ ಲಿಂಗವನೆಂತು ಮುಟ್ಟಿ ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ? ಈ ಕಷ್ಟವ ಕಂಡು ಮುಟ್ಟಲಂಜಿ ನಿಮ್ಮಲ್ಲಿಯೇ ನಿಂದೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು ಪಂಚ ಮಹಾಭೂತಂಗಳು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬಿವು ಪಂಚಪ್ರಾಣವಾಯುಗಳು. ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬಿವು ಪಂಚಕರ್ಮೇಂದ್ರಿಯಂಗಳು. ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬಿವು ಪಂಚಜ್ಞಾನೇಂದ್ರಿಯಂಗಳು. ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ಅಂತಃಕರಣ ಚತುಷ್ಟಯಂಗಳು. ಇಂತು ಇಪ್ಪತ್ತು ನಾಲ್ಕು ತತ್ವಂಗಳು ಕೂಡಿ ದೇಹವಾಯಿತ್ತು. ಭೂತೈಶ್ಚ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ| ಚತುರ್ವಿಂಶತಿದೇಹಾನಿ ಸಾಂಖ್ಯಶಾಸ್ತ್ರವಿದೋ ವಿದುಃ|| ಎಂದುದಾಗಿ, ಇಂತೀ ಇಪ್ಪತ್ತನಾಲ್ಕು ತತ್ತ್ವಂಗಳು ಕೂಡಿ ಚೇಷ್ಟಿಸುವಾತನೇ ಜೀವಾತ್ಮನು. ಅದೆಂತೆಂದಡೆ: ಮನಶ್ಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ| ಆತ್ಮಾ ಷಡ್ವಿಂಶಕಶ್ಚೈವ ಪರಾತ್ಮಾ ಸಪ್ತವಿಂಶಕಃ|| ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ| ಪಂಚವಿಂಶತಿ ತತ್ತ್ವಾನಿ ಮಾಯಾಕರ್ಮ ಗುಣಾಯತೇ ವಿಷಯಾ ಇತಿ ಕಥ್ಯಂತೇ ಪಾಶಜೀವ ನಿಬಂಧನಾತ್ ಇಂತೆಂದುದಾಗಿ ಇಂತೀ ಪಂಚವಿಂಶತಿ ತತ್ತ್ವಂಗಳುತ್ಪತ್ತಿಯು ನಿಮ್ಮ ನೆನಹುಮಾತ್ರದಿಂದಾದವಾಗಿ ಇವರ ಗುಣಧರ್ಮಕರ್ಮಂಗಳು ನಿಮಗಿಲ್ಲ ನೋಡಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇನ್ನಷ್ಟು ... -->