ಅಥವಾ

ಒಟ್ಟು 191 ಕಡೆಗಳಲ್ಲಿ , 48 ವಚನಕಾರರು , 170 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶ್ವರಮೂರ್ತಿಯ ಕರಕಮಲಕ್ಕೆ ತಂದಲ್ಲಿ, ಕಣ್ಮನ ಮೂರ್ತಿಧ್ಯಾನ ಹೆರೆಹಿಂಗದಕ್ಕರಿಂದ ಭಾವ ಭ್ರಮಿಸದೆ, ಚಿತ್ತ ಸಂಚರಿಸದೆ ಮನ ವಚನ ಕಾಯದಲ್ಲಿ ಬ್ಥಿನ್ನ ಭಾವವಿಲ್ಲದೆ ಪೂಜಿಸುವ ಕೈಯೂ ತಾನಾಗಿ, ಅರಿದ ಮನವೂ ತಾನಾಗಿ, ಹೊತ್ತಿಪ್ಪ ಅಂಗದ ನೆಲೆಯೂ ತಾನಾಗಿ ಹೆರೆಹಿಂಗದೆ ಪೂಜೆಯ ಮಾಡುತಿರ್ಪ ಆತನ ಅಂಗವೆ ಲಿಂಗ, ಆತನಿದ್ದುದೆ ಅವಿಮುಕ್ತಿ ಕ್ಷೇತ್ರ. ಇಂತಪ್ಪ ಮಹಾಮಹಿಮ ನಾರಾಯಣಪ್ರಿಯ ರಾಮನಾಥ ತಾನು ತಾನೆ.
--------------
ಗುಪ್ತ ಮಂಚಣ್ಣ
ಮರಹು ಅರಿವಿನಲ್ಲಡಗಿ, ಅರಿವು ಮರಹ ನುಂಗಿ ತೆರಹಿಲ್ಲದಿರ್ದೆನೆಂಬ ಅಹಂ ಇದೇನೊರಿ ಬ್ರಹ್ಮವನೊಳಕೊಂಡ ಬ್ರಹ್ಮವು ತಾನಾಗಿ ಮತ್ತೆ ಬ್ರಹ್ಮದ ನುಡಿ ಇದೇನೊರಿ ಆದಿಶೂನ್ಯ ಮಧ್ಯಶೂನ್ಯ ಅಂತ್ಯಶೂನ್ಯ ಉಧ್ರ್ವಶೂನ್ಯದಿಂದತ್ತತ್ತ ನಿಂದ [ಘನದ]ನಿಲವ ಕಾಬರಾರೊರಿ ಇದು ಕಾರಣ-ಕೂಡಲಚೆನ್ನಸಂಗನ [ಸಹಜದ] ನಿಲವು ಬಯಲು ಚಿತ್ರಿಸಿದ ರೂಪ, ಬಯಲರಿಯದಂತೆ!
--------------
ಚನ್ನಬಸವಣ್ಣ
ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು. ಅರಿವು ಮರವೆಯ ಮರೆಗೊಂಡು ತಲೆದೋ? ಮರಹೆಂದೆನಿಸಿತ್ತು. ಅರಿವು ಮರವೆಗಳಿಂದರಿತರಿವು ನಿಜವಪ್ಪುದೆ ? ಅದು ಹುಸಿ, ಅದೆಂತೆಂದಡೆ: `ಪ್ರಾಣನಿಲಾಚೇಷ್ಟಮನೋಗಲಿತ್ವಂ ಮನೋಗಲಿತ್ವಾತ್ಕರಣಂ ಪ್ರಕೃತ್ಯಾ' ಪ್ರಕೃತಿಯಿಂದಂ ಮರೆವರಿವು ತೋರ್ಕುಂ, ಮರೆವರಿವಿನಿಂ ಅನಿತ್ಯಂ. ಇದು ಕಾರಣ, ಅರಿವಿನ ಮರಹಿನ ಸಂಚಲದಿಂದರಿಹಿಸಿಕೊಂಡರಿವು ತಾನರಿವಲ್ಲ. ಅರಿಯದ ಮರೆಯದ ಮರವರಿವಿಂಗೆ ತೆರಹಿಲ್ಲದ ಬಚ್ಚಬರಿಯರಿವೆ ತಾನಾಗಿ. ಅರಿವೆಂಬ ಕುರುಹುಗೆಟ್ಟ ಪರಮಸ್ವಯಂಭು ನೀನೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕಲ್ಪಿಸಿ ಅರ್ಪಿಸಲಿಲ್ಲ, ಭೋಗಿಸಲಿಲ್ಲ, ಅರ್ಪಿತ ಅನರ್ಪಿತವೆಂಬೆರಡನಳಿದನಾಗಿ. ಕಾಯದ ಕೈಗಳ ಕೈಯೆ, ಭಾವದ ಕೈಗಳ ಕೈಯೆ ಅರ್ಪಿಸುವನಲ್ಲ ! ಆತ ಅರ್ಪಿತ ತಾನಾಗಿ. ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದನು. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಪ್ರಸಾದವೆ ಪ್ರಳಯವಾಯಿತ್ತು !
--------------
ಚನ್ನಬಸವಣ್ಣ
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ತನುಮುಟ್ಟಿ ಮನಮುಟ್ಟದೆ ಒಂದೊಂದನೆ ನೆನೆದು ಮುಟ್ಟಿಮುಟ್ಟಿ ಅರ್ಪಿಸಿ ಪ್ರಸಾದವಾಯಿತ್ತೆಂದು ಕೊಳ್ಳಬಹುದೆ ಅನರ್ಪಿತವ? `ಅರ್ಪಿತಾನರ್ಪಿತಂ ನಾಸ್ತಿ ಇತಿ ಭೇದಂ ಸಮರ್ಪಿತಂ' ಎಂಬ ಈ ಸಕೀಲಸಂಬಂಧವನರಿತು ಅರ್ಪಿಸಿಕೊಳ್ಳದೆ, ಅನರ್ಪಿತವ ಮುಟ್ಟದೆ, ರೂಪು ರುಚಿಯ ಹೊರದೆ, ಸಂಗುಖದ ಸೋಂಕು ತನುವ ಸೋಂಕದ ಮುನ್ನವೆ, ಷಡುರಸಾದಿಗಳು ಮನವ ಸೋಂಕದ ಮುನ್ನವೆ, ಪರಿಪೂರ್ಣಭಾವಿ ತಾನಾಗಿ ಲಿಂಗಭಾವವಂಗವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದ ದೊರಕೊಳ್ಳದು.
--------------
ಆದಯ್ಯ
ಮನವೆಂಬ ಕೋಗಿಲೆಯ ಮೇಲೆ ಘನವೆಂಬ ನಿಜವ ತೋರಿ ಅನುಕರಣವಿಲ್ಲದೆ ತಾನು ತಾನಾಗಿ ನಿಃಪ್ರಿಯವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ, ತ್ರಿವಿಧಾತ್ಮನ ಭೇದ, ಸ್ಥೂಲದ ವಿವರ, ಸೂಕ್ಷ ್ಮದ ಸುಳುಹ, ಕಾರಣದ ಚೋದ್ಯ. ಇಂತೀ ತ್ರಿವಿಧ ವಿವರಂಗಳಲ್ಲಿ ತತ್ವಮಸಿ ಎಂಬ ಭಿತ್ತಿಯ ವಿಚಾರಿಸಿ ಶ್ರುತದಲ್ಲಿ ಕೇಳದುದ ದೃಷ್ಟದಲ್ಲಿ ಕಂಡುದ ಅನುಮಾನದಲ್ಲಿ ಅರಿದುದ ಭಿನ್ನವಿಲ್ಲದೆ ಚಿನ್ಮಯಮೂರ್ತಿ ತಾನಾಗಿ ಕರ್ಮಕ್ರೀಯಲ್ಲಿಯೆ ಲೋಪ. ಶಂಭುವಿನಿಂದಿತ್ತ ಸ್ರಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 69 ||
--------------
ದಾಸೋಹದ ಸಂಗಣ್ಣ
ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ, ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ, ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು, ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು, ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ ಮಹಾಜ್ಞಾನ ಜಂಗಮವ ನೋಡಿರಯ್ಯ. ಅದೆಂತೆಂದಡೆ: ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ || ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಅಂಗದಲ್ಲಿ ಆಯತವಾಯಿತ್ತು. ಮನದಲ್ಲಿ ಸ್ವಾಯತವಾಯಿತ್ತು. ಭಾವದಲ್ಲಿ ಸನ್ನಿಹಿತವಾಯಿತ್ತು. ಆಯತವಾದುದೇ ಸ್ವಾಯತವಾಗಿ, ಸ್ವಾಯತವಾದುದೇ ಸನ್ನಿಹಿತವಾಗಿ, ಸನ್ನಿಹಿತ ಸಮಾಧಾನವಾಗಿ ನಿಂದುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಾಯದ ಮೇಲಿಹ ಲಿಂಗ ಕೈಬಿಡುವನ್ನಕ್ಕ ಕೈಗೆ ಭಿನ್ನ. ವಸ್ತ್ರವ ಬಿಟ್ಟು ನೋಡಿ ಕಾಬನ್ನಕ್ಕ ಕಂಗಳಿಗೆ ಭಿನ್ನ. ಕಂಗಳು ಕಂಡು ಮನದಲ್ಲಿ ಬೇಧಿಸುವನ್ನಕ್ಕ ರೂಪಿಂಗೆ ಭಿನ್ನ. ಉಭಯಗುಣವಳಿದು, ಎರಡರ ಅಭಿಸಂದಿಯ ಕಾಣಿಕೆ ಹಿಂಗಿ, ನಿಜವ ಕಾಣಿಸಿಕೊಂಬುದು. ತಾನಾಗಿ ಕಂಡಲ್ಲಿಯೆ ಇದಿರಿಡುವುದು, ನಾಮನಷ್ಟ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ತಾನು ತಾನೆ.
--------------
ಸಗರದ ಬೊಮ್ಮಣ್ಣ
ಎಲಾ ಶಿವಭಕ್ತನೇ ನೀ ಕೇಳು : ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವಿರಲ್ಲ ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯಾ ? ಅದು ಎಂತೆಂದರೆ : ಶಿವಭಕ್ತನಾದ ಬಳಿಕ ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು : ತನುವ ಕೊಡಬೇಕು ಗುರುವಿಗೆ ; ಮನವ ಕೊಡಬೇಕು ಲಿಂಗಕ್ಕೆ ; ಧನವ ಕೊಡಬೇಕು ಜಂಗಮಕ್ಕೆ]. ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು, ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಶಿವಭಕ್ತನೆಂದು ನಮೋ ಎಂಬುವೆನಯ್ಯಾ. ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವ, ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಫಲಪದವನತಿಗಳೆದು ಹಲವು ಸೀಮೆಯ ಮೀರಿ ಹೊಲಬುಗೆಟ್ಟಾತನ್ಕ ಬ್ರಹ್ಮವಾದ, ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ ತನುಗುಣಕೆ ತಾ ದೂರವಾಗಿ. ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->