ಅಥವಾ

ಒಟ್ಟು 100 ಕಡೆಗಳಲ್ಲಿ , 41 ವಚನಕಾರರು , 94 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಯ್ಯನವರು ನಿತ್ಯದಲ್ಲಿ ಹಾದರವನಾಡಿ ಹಾಗದ ಕಾಯಕದ ಹಣವ ತಂದು, ಜಂಗಮಾರ್ಚನೆಯ ಮಾಡುವರು. ಅದರೊಳಗೆ ಒಂದು ದಿವಸ ಬ್ರಹ್ಮಯ್ಯನವರು ಹಾದರಕಾಯಕವ ತಡೆಯಲು, ಆತನ ಸತಿಯಳು ಪುರುಷನ ಅಪ್ಪಣೆಯಕೊಂಡು ಪೋಗಿ ಹಾದರವನಾಡಿ ಹಾಗದ ಕಾಯಕವ ತಂದು, ಜಂಗಮಾರ್ಚನೆ ಮಾಡುವರೆಂದು ವೇದ ಶ್ರುತಿ ಪುರಾಣ ವಾಕ್ಯದಲ್ಲಿ ಪೇಳುವರು. ಇದರ ಅನುಭಾವವನು ಬಲ್ಲಿದರೆ ಪೇಳಿ, ಅರಿಯದಿದ್ದರೆ ಕೇಳಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿಷ್ಣು ಬಲ್ಲಿದನೆಂಬೆನೆ ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ. ಬ್ರಹ್ಮ ಬಲ್ಲಿದನೆಂಬೆನೆ ಶಿರ ಹೋಗಿ ನಾನಾ ವಿಧಿಯಾದ. ವೇದ ಬಲ್ಲಿತ್ತೆಂಬೆನೆ ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ ಲಿಂಗದ ನಿಲುಕಡೆಯ ಕಾಣದು. ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ. ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ. ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು. ಇದು ಕಾರಣ ಕೂಡಲಸಂಗಯ್ಯನೆ ನಿತ್ಯ, ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
--------------
ಬಸವಣ್ಣ
ವೇದಂಗಳ ನಾಲ್ಕು ಭೇದಿಸಲರಿಯದೆ, ಹದಿನಾರು ಶಾಸ್ತ್ರ ನಿಮ್ಮ ಶಾಂತಿಯನರಿಯದೆ, ಇಪ್ಪತ್ತೆಂಟು ಪುರಾಣ ನಿಮ್ಮ ಪುಣ್ಯದ ಪುಂಗವನರಿಯದೆ, ತೊಳಲಿ ಬಲುಳವುದಕ್ಕೆ [ಚ]ರ್ಚೆಯ ಮಾಡಿದೆ. ನಾ ಕೆಟ್ಟೆ, ಹುಚ್ಚುಗೊಂಡ ನಾಯಿ ಒಡೆಯನ ಕಚ್ಚಿದಂತೆ, ಕೆಟ್ಟೆ. ಆಗಮಗಳಲ್ಲಿ ಹೋರಿ, ದೃಷ್ಟವ ಕಾಣದೆ ಹೊತ್ತುಹೋರಿದೆನಯ್ಯಾ. ತಿರುಗುವ ಮೃಗವ ಎಚ್ಚಂತೆ, ಎನೆಗದು ಕುರುಹಾಯಿತ್ತು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ. ಆತನ ನುಡಿಯೆ ವೇದ, ಆತನ ನಡೆಯೆ ಶಾಸ್ತ್ರ ಪುರಾಣ ಆಗಮ ಚರಿತ್ರವು. ಆ ಮಹಾಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು. ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ. ಲಿಂಗವನರಿದ ಮಹಾಮಹಿಮಂಗೆ ನಮೋ ನಮೋ ಎಂಬೆನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ ಅಮೃತದೇಹಿಗೆ ಹಸಿವು ತೃಷೆಯೆ ? ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ, ಬೇರೊಂದು ವಸ್ತುವುಂಟೆ ? ಇಲ್ಲ. ಅಮೃತವೇ ಸರ್ವಪ್ರಯೋಗಕ್ಕೆ. ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ? ಆಜ್ಞೆ ಉಂಟೆ ? ಬೇರೆ ಕರ್ತರುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಶ್ರೀಗುರುಲಿಂಗದಲ್ಲಿ ಜನಿಸಿ, ಶಿವಲಿಂಗದಲ್ಲಿ ಬೆಳೆದು ಜಂಗಮಲಿಂಗದಲ್ಲಿ ವರ್ತಿಸಿ, ಪ್ರಸಾದಲಿಂಗದಲ್ಲಿ ಪರಿಣಾಮಿಸಿ, ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಲಿಂಗವೇ ಅಂಗ, ಅಂಗವೆ ಲಿಂಗವಾದ ಲಿಂಗಸ್ವಾಯತವಾದ ಲಿಂಗೈಕ್ಯಂಗೆ ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ? ಕಲ್ಪಿತವುಂಟೆ ? ಇಲ್ಲ. ಸರ್ವವೂ ಲಿಂಗಮಯ. ಆ ಲಿಂಗವಂತಂಗೆ ನಡೆದುದೇ ಆಗಮ, ಪೂಜಿಸಿದುದೇ ಕಾಲ ಮಾಡಿದುದೇ ಕ್ರಿಯೆ, ನುಡಿದುದೇ ಜಪ, ನೆನೆದುದೇ ಧ್ಯಾನ ವರ್ತಿಸಿದುದೇ ತಪಸ್ಸು. ಇದಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು ಮೊದಲಾದ ಸರ್ವಪದಾರ್ಥವನರ್ಪಿಸಿ, ಗುರು ಲಿಂಗ ಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ. ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ ? ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ ? ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ? ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ. ಆ ಭೋಗಕ್ಕೆ ಮೇರೆ ಉಂಟೆ ? ಅವಧಿಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ. ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ ಮಹಾಬೆಳಗಿನ ಸುಖಸ್ವರೂಪಂಗೆ ಮತ್ರ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ. ನಿರಂತರ ತೇಜೋಮಯ ಸುಖಸ್ವರೂಪನು ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು. ಆ ಮಹಾಮಹಿಮನ ಮಹಾಸುಖಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--------------
ಉರಿಲಿಂಗಪೆದ್ದಿ
ಸತ್ಯಸಹಜ ನಿತ್ಯ ಉತ್ತಮ ವಸ್ತು, ನಿಜತತ್ವವೆನಿಸುವ ಶಿವನು ಒಂದೇ ವಸ್ತು. ವೇದ, ಶಾಸ್ತ್ರ, ಪುರಾಣ, ಆಗಮ, ಅಷ್ಟಾದಶ ವಿದ್ಯೆಂಗಳು ವಾದಿಸಲು, ಅಂದೂ ಇಂದೂ ಶಿವತತ್ವ ಒಂದೇ ವಸ್ತುವೆಂದು ನಿರ್ಧರಿಸುವವು. ಸಕಲ ನಿಃಕಲದೊಳಗೆ ಉತ್ತಮೋತ್ತಮ ವಸ್ತುವೊಂದೇ. ಇದನರಿದು ನಿಶ್ಚೈಸುವ ವಿವೇಕವುಳ್ಳ ಮನ ಅಂದೂ ಇಂದೂ ಒಂದೇ. ಇದನೆಂತೂ ನೀವೇ ಬಲ್ಲರಿ. ಈ ಒಂದೊಂದರಲ್ಲೆ ಒಂದೊಂದ ಮಾಡಲು ಒಂದಲ್ಲದೆ ಮತ್ತೊಂದಿಲ್ಲ. ಇದಲ್ಲದೆ ಇನ್ನೊಂದುಂಟೆಂಬವಂಗೆ ಎರಡಲ್ಲದೆ ಒಂದಿಲ್ಲ. ಅವಂಗೆ ಅಧೋಗತಿ, ಅವನಜ್ಞಾನಿ. ಒಂದೆಂದರಿದವಂಗೆ ಜ್ಞಾನವಿದೆ, ಭಕ್ತಿಯಿದೆ, ಮುಕ್ತಿಯಿದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವೇದ ದೊಡ್ಡದೆಂದು ನುಡಿವ ವಾದಿಯ ಮಾತ ಹೇಳಲಾಗದು ಕೇಳಲಾಗದು. ಶಾಸ್ತ್ರ ದೊಡ್ಡದೆಂದು ನುಡಿವ ಪಾತಕನ ಮಾತ ಹೇಳಲಾಗದು ಕೇಳಲಾಗದು. ಪುರಾಣ ದೊಡ್ಡದೆಂದು ನುಡಿವ ಪುಂಡರ ಮಾತ ಹೇಳಲಾಗದು ಕೇಳಲಾಗದು. ಆಗಮ ದೊಡ್ಡದೆಂದು ನುಡಿವ ಅಹಂಕಾರಿಯ ಮಾತ ಹೇಳಲಾಗದು ಕೇಳಲಾಗದು. ಜ್ಯೋತಿಷ್ಯ ದೊಡ್ಡದೆಂದು ನುಡಿವ ಘಾತುಕನ ಮಾತ ಹೇಳಲಾಗದು, ಕೇಳಲಾಗದು. ಅದೇನು ಕಾರಣವೆಂದಡೆ, ತನ್ನ ಅಂತರಂಗದಲ್ಲಿ ಪರಬ್ರಹ್ಮದ ನಿಲವ ಅರಿತ ಮಹಾತ್ಮಂಗೆ ಇನ್ನೆಲ್ಲಿಯ ವೇದವೋ ? ಇನ್ನೆಲ್ಲಿಯ ಶಾಸ್ತ್ರವೋ ? ಇನ್ನೆಲ್ಲಿಯ ಪುರಾಣವೋ? ಇನ್ನೆಲ್ಲಿಯ ಆಗಮವೋ ? ಇನ್ನೆಲ್ಲಿಯ ಜ್ಯೋತಿಷ್ಯವೋ ? ಇಂತೀ ಇವಕ್ಕೆ ಸಿಲ್ಕದೆ ಅತ್ತತ್ತಲೆಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು. ಆ ಗಡಹವ ನೋಡ ಹೋಗಲು, ಆ ಗಡಹದ ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ ಮೊದಲಾದ ಅನಂತ ಪರಿವಾರ ಆರೈಸಿರುವದು. ಅಲ್ಲಿ ವೇದ ಆಗಮ ಪುರಾಣ ಮೊದಲಾದ ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು. ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ ಮೊದಲಾದ ಅನಂತ ಪ್ರಕಾಶವಿರ್ಪುದು. ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕರ್ಣಿ ಮೊದಲಾದ ಅನಂತ ನಾದವಿರ್ಪುದು. ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ ಚಿತ್ರವಿಚಿತ್ರವಾದ ಮಂಟಪವಿರ್ಪುದು. ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು. ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು. ಅದರೊಳಗೆ ನೋಡಬೇಕೆಂದು ಹೋಗಲು ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು. ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ ಎಂಥಾತ ಆತನ ಆತುರದಿ ನೋಡಬೇಕೆಂದು ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ. ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ. ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ ಅಲ್ಲೇ ಇರ್ದಂತೆ ಇರುತಿರ್ದೆನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆದಿ ಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ, ರಾಮಪುರಾಣ ರಕ್ಕಸರಿಗೆ ಮಾರಿ, ಭಾರತಪುರಾಣ ಗೋತ್ರಕ್ಕೆ ಮಾರಿ. ಎಲ್ಲಾ ಪುರಾಣ ಕರ್ಮಕ್ಕೆ ಮೊದಲು, ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ.
--------------
ಬಸವಣ್ಣ
ಮರೆದರೆ ಮಾಯೆ, ಅರಿದರೆ ಮಾಯೆ ಇಲ್ಲ, ಅರಿವು ಮರವೆ ಎರಡ ನೂಂಕಿ ನಿಂದರೆ, ಮುಂದೆ ಕಣ್ಣು ತೆರಪಾಗಿ ತೋರುವ ಬಯಲೆ ಲಿಂಗದ ಬೆಳಗು. ಆ ಲಿಂಗದ ಬೆಳಗೆ ನೆಮ್ಮುಗೆಯಾದರೆ ಲಿಂಗೈಕ್ಯವು. ಆ ಲಿಂಗೈಕ್ಯವು ನಿಜವಾದರೆ ನಿಶ್ಚಿಂತವು. ನಿಶ್ಚಿಂತದಲ್ಲಿ ಲೀಯವಾದರೆ, ನಿರವಯವು, ಇದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ, ಇದನರಿಯದೆ ವೇದ ಪುರಾಣ ಶಾಸ್ತ್ರ ಆಗಮ ಇವನೊಂದನು ಓದಿದರೆ ಹಾಡಿದರೆ ಕೇಳಿದರೆ ಕಾಯ ವಾಯವೆಂದರು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಓಂಕಾರವೆಂಬಾಕಾರದಲ್ಲಿ ನಾಲ್ಕು ವೇದ, ನಾಲ್ಕು ವೇದದಲ್ಲಿ ಇಪ್ಪತ್ತೆಂಟಾಗಮ, ಇಪ್ಪತ್ತೆಂಟಾಗಮದಲ್ಲಿ ಹದಿನೆಂಟು ಪುರಾಣ, ಹದಿನೆಂಟು ಪುರಾಣದಲ್ಲಿ ಹದಿನಾರು ಶಾಸ್ತ್ರವಡಗಿದವು. ಆ ಶಾಸ್ತ್ರದ ಕೊನೆಯ ಮೊನೆಯ ಮೇಲಿಪ್ಪ ಷಡ್ದರ್ಶನದ ಕಹಿಯ ಬೇರ ಹಿಡಿದು, ವೀರಶೈವನೆಂಬ ಸಿದ್ಧನು ಕೀಳುವಾಗ, ಕಾಯಯ್ಯ ಎಂದು ಬಾಯ ಬಿಟ್ಟವು. ಅವಕ್ಕೆ ಕರುಣಿಸಿ ಬಿಟ್ಟಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಲ್ಕೈದು ಹದಿನೆಂಟು ಪುರಾಣ ಇಪ್ಪತ್ತೆಂಟು ದೇವತಾಗಮಂಗಳು Zõ್ಞಷಷ್ಟಿ ಅಖಿಳ ವಿದ್ಯಂಗಳ ಸಾಧಿಸಿ ನನಗಾರು ಸರಿ ಎಂಬ ಹೊಲೆಮಾದಿಗರ ಎನಗೊಮ್ಮೆ ತೋರದಿರಯ್ಯಾ. ಅದೇನು ಕಾರಣವೆಂದಡೆ: ಸಕಲಶಾಸ್ತ್ರಂಗಳಿಗೆ Zõ್ಞಷಷ್ಟಿ ಕಳಾವಿದ್ಯಕ್ಕೆ ನಿಲುಕದ ಪರಶಿವನ ಕಾಯ ಜೀವ ಪ್ರಸಾದದಲ್ಲಿ ನೆಲೆಗೊಳಿಸಲರಿಯದೆ ಒಡಲ ಹೊರೆವ ಹೊಲೆ ಮಾದಿಗರಾದಂತಾಯಿತ್ತೆಂದಡೆ ಶುಕನುಡಿದಂತಾಯಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಿಭೂತಿಯಿಂದೆ ಮಾಡಬಹುದು ಅರ್ಬುದಕೋಟಿ ಭಕ್ತರನಾದಡೆಯೂ, ವಿಭೂತಿಯಿಲ್ಲದೆ ಮಾಡಿ ತೋರಿರೆ ಓರ್ವ ದ್ವಿಜನ ? ವಿಭೂತಿಯಿಂದೆ ವಿಪ್ರನಾಗನೆ ಕಬ್ಬಿಲಿತಿಯ ಮಗ ವ್ಯಾಸನು ? ವಿಭೂತಿಯಿಂದಗ್ರಜನಾಗನೆ ಕುಂಭಸಂಭವನು ? ವಿಭೂತಿಯಿಂದೆ ಹಾರುವನಾಗನೆ ಊರ್ವಶಿಗೆ ಹುಟ್ಟಿದ ವಶಿಷ*ನು ? ವಿಭೂತಿಯಿಂದೆ ವಿಶ್ವಾಮಿತ್ರ ಸದ್ಬ್ರಾಹ್ಮಣನಾಗನೆ ? ಉರ್ವಿಯೊಳಗೆ ಮುಂಗಯ್ಯ ಕಂಕಣಕ್ಕೆ ಶುಭ್ರದರ್ಪಣವೇಕೆ ? ವಿಭೂತಿಯನೊಲ್ಲದ ನಿರ್ಭಾಗ್ಯದ್ವಿಜರು, ಸರ್ವಶಾಸ್ತ್ರ ಶ್ರುತಿ ಸ್ಮೃತಿ ಪುರಾಣ ಶಾಪಹತರೆಂದು ಶ್ರುತಿಗಳು ಬೊಬ್ಬಿಡುತ್ತಿವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅನಂತ ವೇದಶಾಸ್ತ್ರಾಗಮ ಪುರಾಣ ತರ್ಕ ತಂತ್ರಗಳನು ಆತ್ಮ ಮಾಡಿದನಲ್ಲದೆ, ಆತ್ಮನನವು ಮಾಡಿದುದಿಲ್ಲ. ಎನ್ನ ಅಂತರಂಗದ ಅರಿವಿನ ಮೂರ್ತಿ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು.
--------------
ಉರಿಲಿಂಗದೇವ
ಹಾದಿಯ ತೋರಿದವರೆಲ್ಲರು ಭಯಕ್ಕೆ ನಿರ್ಭಯವಂತರಾಗಬಲ್ಲರೆ ? ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು ವೇದಿಸಬಲ್ಲರೆ ನಿಜತತ್ವವ ? ಹಂದಿಯ ಶೃಂಗಾರ, ಪೂಷನ ಕಠಿಣದಂದ, ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ, ಎಡೆಬಿಡುವಿಲ್ಲದೆ ಒಡಗೂಡು.
--------------
ಮನುಮುನಿ ಗುಮ್ಮಟದೇವ
ಇನ್ನಷ್ಟು ... -->