ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅನುಭಾವ ಅನುಭಾವವೆಂದು, ನುಡಿದಾಡುತ್ತಿಪ್ಪಿರಿ. ನಿಮ್ಮ ತನುವಿನಿಚ್ಛೆಗೆ ಅನುವಿಗೆ ಬಂದಂತೆ, ಬಿನುಗರ ಮುಂದೆ ಬೊಗುಳಿಯಾಡುವ ನಿನಗಂದೆ ದೂರ. ಅನುಭಾವವೆಂತೆಂದರೆ, ನಮ್ಮ ಹಿಂದನರಿದು, ಮುಂದೆ ಲಿಂಗದಲ್ಲಿ ನೋಡುವ ಶರಣರ ಅಂಗವ ಸೋಂಕಿ ನಾ ಬದುಕಿದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ. ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ, ಲಿಂಗ ಜಂಗಮಕ್ಕೆ ದೂರ, ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ ನಾನು ದಿಟ್ಟಿಸಿ ನೋಡಿ ನಿಂದು ಬಟ್ಟಬಯಲ ಕಂಡೆ. ಬಟ್ಟಬಯಲೊಳಗೊಂದು [ಮುಟ್ಟಬಾರದ] ಮೃಗವ ಕಂಡೆ. ಆ ಮೃಗ ಹೋದ ಹೆಜ್ಜೆಯ ಕಾಣಬಾರದು, ಮೇದ ಮೋಟನರಿಯಬಾರದು. ಈ ಭೇದವ ನೋಡಿ ಸಾದ್ಥಿಸಿಕೊಂಡು ಬರುವನ್ನಕ್ಕ ಆ ಮೃಗವೆನ್ನ ಬಲೆಗೊಳಗಾಯಿತ್ತು. ಆ ಬಲೆಯೊಳಗಣ ಮೃಗದ ತಲೆಯ ಹಿಡಿದು, ನೆಲೆಗೆಟ್ಟು ಹೋದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದರನುವ ಬಲ್ಲ ಶರಣರೆಲ್ಲರೂ ತಲೆಹೊಲನ ಹತ್ತಿ ಬಯಲಾದರು. ಇದಕ್ಕೆ ನೀವೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಅಯ್ಯಾ ನೀನಿಲ್ಲದಿದ್ದರೆ ಎನಗೆ ಮುನ್ನ ನಾಮ ರೂಪುಂಟೆ ? ನೀ ಮಾಡಲಾನಾದೆನಯ್ಯಾ. ಅದು ಕಾರಣವಾಗಿ ನಾ ಬಂದ ಬಂದ ಭವಾಂತರದಲ್ಲಿ ನೀವು ಬರುತ್ತಿದಿರಾಗಿ, ಇನ್ನೆನ್ನ ಗುರುತಂದೆಗೆ ಬಳಲಿಕೆ ಆಗುತಿದೆ ಎಂದು ನಾ ನೋಡಲಾಗಿ, ನೀವೆನ್ನ ಭವವ ಕೊಂಡಿರಾಗಿ. ಇದು ಕಾರಣ, ಅಂದಂದಿಗೆ ನೂರು ತುಂಬಿತ್ತೆಂಬ ಭೇದವನು ನೀವೆ ತೋರಿದಿರಿ. ಇದನರಿದರಿದು ನಾನು ಹಿಂದಣ ಭವವ ಹರಿದು, ಮುಂದಣ ಭಾವ ಬಯಕೆಯ ಮುಗ್ಧವ ಮಾಡಿ, ಹೊಂದದ ಬಟ್ಟೆಯನೆ ಹೊಂದಿ, ಸದಮಳಾನಂದ ಚೆನ್ನಮಲ್ಲೇಶ್ವರನ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂಗವದಾರದು? ಲಿಂಗವದಾರದು? ಸಂಗವದಾರದು ? ಸಮರಸವ ದಾರದು? ಸಂದೇಹದಿಂದ ಮುಂದುಗಾಣದೆ ಒಂದೊಂದ ಕಲ್ಪಿಸಿಕೊಂಡು ಬಂದಿರಲ್ಲಾ ಭವ ಭವದಲ್ಲಿ. ಅಂಗವೆ ಗುರು, ಲಿಂಗವೆ ಪ್ರಾಣ, ಸಂಗವೆ ಜಂಗಮ, ಸಮರಸವೆ ಪ್ರಸಾದ. ಈ ಚತುರ್ವಿಧವು ಒಂದಂಗ. ಈ ಚತುರ್ವಿಧವ ಶ್ರುತಿ ಸ್ಮೃತಿಗಳರಿಯವು, ನಿಮ್ಮ ಶರಣಬಲ್ಲ. ಆ ಶರಣನೆ ಶಿವನವಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿನ್ನ ನೀನೆ ಬಲ್ಲೆ.
--------------
ಹಡಪದ ಅಪ್ಪಣ್ಣ
ಅಖಂಡ ಗೋಳಾಕಾಕಾರವಾಗಿರ್ದ ಮಹಾಲಿಂಗವೆ ಅಂಗವಿಡಿದಲ್ಲಿ, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು, ಇವೆರಡರ ಸಂಘಟ್ಟ ಭಾವಲಿಂಗವೆಂದು ಅಂಗವ ಕುರಿತು ಮೂರು ತೆರನಾಯಿತ್ತು. ಆಚಾರಾದಿ ಮಹಾಲಿಂಗವೆಂದು ಇಂದ್ರಿಯವ ಕುರಿತು ಆರು ತೆರನಾಯಿತ್ತು. ತತ್ತ್ವವ ಕುರಿತು ಮೂವತ್ತಾರು ತೆರನಾಯಿತ್ತು. ಸ್ಥಲವ ಕುರಿತು ನೂರೊಂದು ತೆರನಾಯಿತ್ತು. ಕರಣವ ಕುರಿತು ಇನ್ನೂರ ಹದಿನಾರಾಯಿತ್ತು. ಇಂತೀ ಪಸರಿಸಿದ ಪರಬ್ರಹ್ಮವೇ ಏಕಮಯವಾಗಿ ನಿಂದುದಕ್ಕೆ ದೃಷ್ಟ : ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ || ಇಂತಪ್ಪ ಲಿಂಗವೆ ನೀನಲಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ, ಮೂರುವಟ್ಟೆಯನೆ ಕಾದಿರ್ದೆನಯ್ಯಾ. ಹೊಟ್ಟೆಯ ಒಡೆಯರು ಹೊಟ್ಟೆಯ ಹೊಡೆದುಹೋದರೆ, ಎನ್ನ ಹೊಟ್ಟೆ ಏಕೆ ತುಂಬಿತ್ತೆಂದು ನೋಡಿದರೆ, ಅಲ್ಲಿ ಬಟ್ಟಬಯಲಾಗಿರ್ದಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾಎನ್ನ ಗುರು ಎನಗೆ ಉಪದೇಶವ ಮಾಡಿದ ಭೇದವ ಎಲ್ಲ ಗಣಂಗಳು ಕೇಳಿ. ಮಲತ್ರಯಂಗಳ ಹರಿದು, ಕರ್ಮೇಂದ್ರಿಯಂಗಳ ಜ್ಞಾನೇಂದ್ರಿಯ ಮಾಡಿ, ಕಾಯ ಜೀವ ಪ್ರಾಣ ಈ ತ್ರಿವಿಧವರತು ಭೇದವನರುಹಿಸಿದ. ಉರಸ್ಥಲದ ಪರಂಜ್ಯೋತಿಲಿಂಗವ ಎನ್ನ ಕರಸ್ಥಲಕ್ಕೆ ಕೊಟ್ಟರು. ಆ ಗುರು ಕೊಟ್ಟ ಲಿಂಗವೆಂಬ ದರ್ಪಣವ ನೋಡಿ, ಎನ್ನ ಮನೆವೆಂಬ ಸರ್ಪ ಆ ದರ್ಪಣದಲ್ಲಿ ಲೀಯವಾಯಿತ್ತು. ಇದು ಕಾರಣ, ಎನ್ನ ರೂಪೆಲ್ಲ ಉರಿಯುಂಡ ಕರ್ಪುರದಂತಾಯಿತ್ತು, ಆಲಿ ನುಂಗಿದ ನೋಟದಂತಾಯಿತ್ತು. ಪುಷ್ಪ ನುಂಗಿದ ಪರಿಮಳದಂತೆ ಬಯಲು ನುಂಗಿದ ಬ್ರಹ್ಮಾಂಡದಂತೆ, ಅಂಗಲಿಂಗ ಸಂಗಸಂಯೋಗವಾದ ಭೇದ. ಇದ ಹಿಂಗದೆ ಶರಣ ಸಂಗವ ಮಾಡಿದವರಂಘ್ರಿಯಲ್ಲಿ ಐಕ್ಯವಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದನು ಕಂಗಳ ಪಟಲ ಹರಿದ ಲಿಂಗೈಕ್ಯರೇ ಬಲ್ಲರು.
--------------
ಹಡಪದ ಅಪ್ಪಣ್ಣ
ಅಯ್ಯಾ ಎನ್ನಂಗದಲ್ಲಿಪ್ಪ ಅರುವೆಯ ಕಂಡು, ತೆಗೆದೆನ್ನ ಲಿಂಗಕ್ಕೆ ಹೊದ್ದಿಸಿ, ಆ ಲಿಂಗದಲ್ಲಿಪ್ಪ ಅರುವೆಯ ಕಂಡೆನ್ನ ಕಂಗಳು ನುಂಗಿತ್ತು. ಕಂಗಳೊಳಗಣ ತಿಂಗಳ ತಿರುಳ ಮಂಗಳದ ಮಹಾಬೆಳಗಿನ ಶೃಂಗಾರದೊಳು ನಾನೋಲಾಡುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ, ಶಿವಭಕ್ತರು ನುಡಿವಲ್ಲಿ ಜಾಣತನದಿಂದ ನುಡಿವರು. ನೀಡುವಲ್ಲಿ ಭೇದದಿಂದ ನೀಡುವರು. ಕೊಡುವಲ್ಲಿ ಸತ್ಪಾತ್ರಕ್ಕೆ ಕೊಡುವರು. ಬಿಡುವಲ್ಲಿ ಶರಣಗೋಷಿ*ಯ ಬಿಡುವರು. ಪೊಡವಿಯೊಳಿವರ ಭಕ್ತರೆನ್ನಬಹುದೆ ? ಅದಂತಿರಲಿ, ಎನ್ನೊಡೆಯ ಬಸವಪ್ರಿಯನಡಿಗಳ ನೆನೆವ ಶರಣ ಲಿಂಗೈಕ್ಯರು ಮೆಡುವ ಪಡುಗ ಪಾದರಕ್ಷೆಯ ಕಾಯಿರಿಸಯ್ಯ, ಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ ಎನೆಗೆ ಬಸವಪ್ರಿಯನೆಂದರೂ ನೀನೆ, ಕೂಡಲ ಚೆನ್ನಬಸವಣ್ಣನೆಂದರೂ ನೀನೆ, ಗುರುವೆಂದರೂ ನೀನೆ, ಲಿಂಗವೆಂದರೂ ನೀನೆ, ಜಂಗಮವೆಂದರೂ ನೀನೆ, ಪ್ರಸಾದವೆಂದರೂ ನೀನೆ. ಅದೇನು ಕಾರಣವೆಂದರೆ, ನೀ ಮಾಡಲಾಗಿ ಅವೆಲ್ಲವು ನಾಮರೂಪಿಗೆ ಬಂದವು. ಅದು ಕಾರಣ, ನಾನೆಂದರೆ ಅಂಗ, ನೀನೆಂದರೆ ಪ್ರಾಣ. ಈ ಉಭಯವನು ನೀವೆ ಅರುಹಿದಿರಾಗಿ, ಇನ್ನು ಭಿನ್ನವಿಟ್ಟು ನೋಡಿದೆನಾದರೆ, ಚನ್ನಮಲ್ಲೇಶ್ವರ ನೀವೆ ಬಲ್ಲಿರಿ. ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಏಕವಾದ ಕಾರಣ, ಎನಗೆ ಭವವಿಲ್ಲ, ಬಂಧನವಿಲ್ಲ, ಅದಕ್ಕೆ ನೀವೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಅಯ್ಯಾ ಲಿಂಗವ ಪೂಜಿಸಿಹೆನೆಂದು ಅಂಗದ ಕುರುಹ ಮರೆದೆ. ಜಂಗಮವ ಪೂಜಿಸಿಹೆನೆಂದು ಪ್ರಾಣದ ಕುರುಹ ಮರೆದೆ. ಪ್ರಸಾದವ ಕೊಂಡಿಹೆನೆಂದು ಪರವ ಮರೆದೆ. ಈ ತ್ರಿವಿಧದ ಭೇದವನು ಶ್ರುತಿ ಸ್ಮೃತಿಗಳರಿಯವು. ಹರಿ ಹರ ಬ್ರಹ್ಮದೇವ ದಾನವ ಮಾನವರು ಅರಿಯರು. ನಮ್ಮ ಶರಣರೆ ಬಲ್ಲರು. ಇವ ಬಲ್ಲ ಶರಣ ಚೆನ್ನಮಲ್ಲೇಶ್ವರ ಹೋದ ಹಾದಿಯಲ್ಲದೆ ಎನಗೆ ಬೇರೊಂದು ಹಾದಿ ಇಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ. ಇದಕ್ಕೆ ಮತ್ರ್ಯಲೋಕದ ಮಹಾಗಣಂಗಳೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಅಂಗ ಲಿಂಗವೆಂದರಿದ ಬಳಿಕ, ಲಿಂಗ ಅಂಗವೆಂದರಿದ ಬಳಿಕ, ಇನ್ನೊಂದು ಸಂಗ ಉಂಟೆಂದು ಏಕೆ ಅರಸುವಿರಯ್ಯ? ಸಂಗ ಉಂಟೆಂಬನ್ನಕ್ಕ ಕಂಗಳ ಪಟಲ ಹರಿದುದಿಲ್ಲ. ಅದು ಮರವೆಗೆ ಬೀಜ. ಈ ಮರಹಿಂದಲೆ ನೆರೆ ಮೂರುಲೋಕವೆಲ್ಲ ಬರುಸೂರೆಹೋಯಿತು. ಅರಿದ ಶರಣಂಗೆ ಅಂಗಲಿಂಗಸಂಬಂಧವಿಲ್ಲ. ಅಂಗಲಿಂಗಸಂಬಂಧವಳಿದ ಬಳಿಕ ಪ್ರಾಣಲಿಂಗಸಂಬಂಧ. ಲಿಂಗಪ್ರಾಣಿ ಇವನರಿದರೆ ಲಿಂಗಸಂಬಂಧಿ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ. ಕಬ್ಬಿಣಕ್ಕೆ ಇದ್ದಲಿಯ ಹಾಕಿ ಅಗ್ನಿಯನಿಕ್ಕಿ, ಕಾವುಗೊಳಲಾಗಿ, ಕರಗಿ ನೀರಾಗುತ್ತಿದೆ. ಹಾಲಿಗೆ ನೀರ ಹೊಯ್ದರೆ ಅದು ಏರುವ ಭೇದವನಾರೂ ಅರಿಯರು. ಶರಣರು ತನುವಿಡಿದಿದ್ದರೂ ಇದ್ದವರಲ್ಲ. ಅದು ಹೇಗೆಂದರೆ, ಹಿಂದಣ ದೃಷ್ಟದ ಪರಿಯಲ್ಲಿ ಲಿಂಗವ ಹಿಡಿದಂಗಕ್ಕೆ ಬೇರೊಂದು ಸಂಗಸುಖ ಉಂಟೆ ? ಅದು ಕಾರಣ, ಸರ್ವಾಂಗಲಿಂಗಿಯಾ ಶರಣನು ಮುಟ್ಟಿದ, ತಟ್ಟಿದ, ಕೇಳಿದ, ನೋಡಿದ, ನುಡಿದ, ಸೋಂಕಿದನೆನ್ನಬೇಡ. ಅದು ಕಾರಣ, ಕಬ್ಬಿಣ ನೀರುಂಡಂತೆ ಅರ್ಪಿತವ ಬಲ್ಲ ಐಕ್ಯಂಗೆ ಮೈಯೆಲ್ಲ ಬಾಯಿ. ಇದರ ಬೇದವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ.
--------------
ಹಡಪದ ಅಪ್ಪಣ್ಣ
ಅಂಗವ ಮರೆದು ಲಿಂಗವ ಕೂಡಿ, ಸಂಗವ ಮರೆದು ಜಂಗಮವ ಕೂಡಿ, ಗುಣವ ಮರೆದು ಗುರುವ ಕೂಡಿ, ಪರವ ಮರೆದು ಪ್ರಸಾದವ ಕೂಡಿ, ಹರುಷವ ಮರೆದು ಹರನ ಕೂಡಿ, ಬೆರಸಿ ಬೇರಿಲ್ಲದಿಹ ನಿಜಶರಣಂಗೆ ನಮೋ ನಮೋ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅರಿವೆಂಬುದೆ ಆಚಾರ, ಆಚಾರವೆಂಬುದೆ ಅರಿವು. ಅರಿವು ಆಚಾರದ ಸಂಗಷ್ಟದ ಕೂಟದ ಸ್ಥಲದಲ್ಲಿ ವಿಭೇದವೇ ಕ್ರೀ. ಆ ಕ್ರೀಯೆ ವರ್ಮ, ಧರ್ಮ, ಅದೇ ಮುಕ್ತಿಗೆ ಸಾಧನ. ಆ ಭಕ್ತಿಯೇ ಮುಕ್ತಿಸಾಧನ, ಆ ಮುಕ್ತಿಯೆ ಗುರುಪದಸಾಧನ. ಗುರುಪದವೆ ಲಿಂಗಸಾಧನ, ಆ ಲಿಂಗಸಾಧನವೆ ಜಂಗಮಸಾಧ್ಯ. ಆ ಜಂಗಮಸಾಧ್ಯವೆ ಪ್ರಸಾದಸಾಧ್ಯ. ಆ ಪ್ರಸಾದಸಾಧ್ಯವೆ ಪರಸಾಧ್ಯ, ಆ ಪರಸಾಧ್ಯವಾದ ಬಳಿಕ, ಕ್ರಿಯಾ ಕರ್ಮ ಧರ್ಮ ಭಕ್ತಿ ಯುಕ್ತಿ ಮುಕ್ತಿ, ಗುರು ಲಿಂಗ ಜಂಗಮ ಪ್ರಸಾದ ಗಣತ್ವವೆಲ್ಲವು ಉಂಟು. ಇಂತೀ ಸರ್ವಾಂಗವೇದ್ಯವಾದ ಮಹಾಮಹಿಮನ ಹಿಡಿದನೆನ್ನಬಾರದು, ಬಿಟ್ಟನೆನ್ನಬಾರದು, ಮುಟ್ಟಿದನೆನ್ನಬಾರದು, ತಟ್ಟಿದನೆನ್ನಬಾರದು. ಸರ್ವಭೋಗ ಮುಕ್ತಿ ಸುಖದುಃಖಗಳೊಳಗೆ ಉಂಟೆನಬಾರದು, ಇಲ್ಲೆನಬಾರದು. ಅದೆಂತೆಂದಡೆ: ಸರ್ವವೂ ಶಿವನಿಂದಲಾದವೆಂಬುದ ಕೇಳಿ ಬಲ್ಲಿರಿ. ತನ್ನಿಂದಾದವರೊಳಗೆ ತಾನುಂಟಾಗಿ, ಇಲ್ಲವಾಗಿರ್ಪ ಭೇದವ ತಾನೆ ಬಲ್ಲ. ಇದು ಕಾರಣ, ಶಿವನಾದ ಶರಣನ ಅಂತಿಂತೆಂದಡೆ, ನಮ್ಮ ಬಸವಪ್ರಿಯ ಕೂಡಲಸಂಗಮದೇವ ಸಾಕ್ಷಿಯಾಗಿ ನಾಯಕ ನರಕದಲ್ಲಿಕ್ಕುವ.
--------------
ಹಡಪದ ಅಪ್ಪಣ್ಣ
ಅಂತರಂಗದಲ್ಲಿ ಆಸೆ, ಬಹಿರಂಗದಲ್ಲಿ ಕ್ರೋಧ, ಭಾವಕ್ಕೆ ವೇಷ. ಪ್ರಾಣಕ್ಕೆ ರೋಷ, ಕಾಮಕ್ಕೆ ಮದ. ಇಂತಿವನಿಂಬಿಟ್ಟುಕೊಂಡು ನಾವು ಜಂಗಮವೆಂದು ಸುಳಿದರೆ, ಹೇಯವಿಲ್ಲದ ಭಕ್ತರು ವೇಷವ ಕಂಡು ಪೂಜೆಯ ಮಾಡಿದರೆ, ಅಶನಕ್ಕೆ ಅನ್ನವನಿಕ್ಕಿದರೆ, ಶೀತಕ್ಕೆ ರಗಟೆಯ ಕೊಟ್ಟರೆ, ಅವರಿಗದು ಸಹಜ. ನಿಮ್ಮ ನೀವು ನೋಡಲಿಲ್ಲವೆ ? ನಾವು ದೇವರಾದೆವೆಂದು ವಿಚಾರಿಸಿ ನೋಡಿ, ಉಭಯವ ಮೆಟ್ಟಿನಿಂದು, ಅಭವನೆಂಬ ಹೆಸರಿಗೆ ಸಂದವರಿಗೆ ಸುಲಭದಿಂದ ಜಗವೆಲ್ಲವು ನಮೋ ನಮೋ ಎಂಬುದು. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಈ ಉಭಯದ ಭೇದವ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಅಯ್ಯಾ ಎನ್ನ ತಂದೆ ತಾಯಿಗಳು ತಮ್ಮ ಕಂದನಪ್ಪ ಶಕ್ತಿಯ ಕೈಲೆಡೆಗೊಟ್ಟು ಕಳುಹಿದಡೆ, ಎನ್ನ ಇಲ್ಲಿಗೆ ತಂದು ಮದುವೆಯಂ ಮಾಡಿ, ಮುಗ್ಧನಪ್ಪ ಗಂಡನ ಕೊರಳಲ್ಲಿ ಕಟ್ಟಿ, ಎನ್ನ ಅತ್ತೆ ಮಾವಂದಿರ ವಶಕ್ಕೆ ಕೊಟ್ಟರು. ಎಮ್ಮತ್ತೆ ಮಾವಂದಿರ ಊರ ಹೊಕ್ಕರೆ, ಕತ್ತಲೆಯಲ್ಲದೆ ಬೆಳಗಿಲ್ಲ. ಎಮ್ಮತ್ತೆ ಮಾವಂದಿರ ಮನೆಯ ಹೊಕ್ಕರೆ, ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎನ್ನ ಗಂಡನ ತಲೆಯೆತ್ತಿ ನೋಡಲೀಸರು. ಹಟ್ಟಿಯಲಿಪ್ಪ ಶುನಕ ಅಡಿಯಿಟ್ಟು ನಡೆಯಲೀಸವು. ಸುತ್ತಲಿಹ ಆನೆ ಕುದುರೆ ತೊತ್ತಳದುಳಿವುತಿಪ್ಪವು. ಒತ್ತೊತ್ತಿನ ಬಾಗಿಲವರು ಎನ್ನ ಇತ್ತಿತ್ತ ಹೊರಡಲೀಸರು. ಸುತ್ತಲಿಹ ಕಾಲಾಳ ಪ್ರಹರಿ, ಮೊತ್ತದ ಸರವರ ಈ ಮುತ್ತಿಗೆಗೊಳಗಾಗಿ ನಾ ಸತ್ತು ಹುಟ್ಟುತಿರ್ದೆನಯ್ಯಾ, ಆಗ ಎನ್ನ ಹೆತ್ತತಾಯಿ ಬಂದು ತತ್ವವೆಂಬ ತವರುಮನೆಯ ಹಾದಿ ತೋರಿದಡೆ, ಇತ್ತ ತಾ ನೋಡಿ ಎಚ್ಚತ್ತು, ಎನ್ನ ಚಿಕ್ಕಂದಿನ ಗಂಡನ ನೋಡಿದೆ. ಎಮ್ಮಿಬ್ಬರ ನೋಟದಿಂದ ಒಂದು ಶಿಶು ಹುಟ್ಟಿತ್ತು. ಆ ಶಿಶು ಹುಟ್ಟಿದಾಕ್ಷಣವೆ ಎಮ್ಮಿಬ್ಬರ ನುಂಗಿತ್ತು. ನುಂಗಿದ ಶಿಶು ತಲೆಯೆತ್ತಿ ನೋಡಲು, ಎಮ್ಮತ್ತೆ ಮಾವಂದಿರಿಬ್ಬರು ಹೆದರಿ ಬಿದ್ದರು. ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎತ್ತಲೋ ಓಡಿಹೋದರು. ಈ ಹಟ್ಟಿಯಲ್ಲಿಪ್ಪ ಶುನಕ ಸುತ್ತಲಿಹ ಆನೆ ಕುದುರೆ ಒತ್ತೊತ್ತಿನ ಬಾಗಿಲವರು, ಸುತ್ತಲಿಹ ಕಾಲಾಳ ಪ್ರಹರಿ ಮೊತ್ತದ ಸರವರ ಹೊತ್ತಿ ನಿಂದುರಿದು, ನಾ ಸುತ್ತಿ ನೋಡಿದರೆ ಎಲ್ಲಿಯೂ ಬಟ್ಟಬಯಲಾಗಿರ್ದಿತ್ತು ಕಾಣಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಅಯ್ಯಾ ಅರಗಿನ ಮರದ ಮೇಲೆ ಗಿರಿ ಹುಟ್ಟಿತ್ತಯ್ಯಾ. ಆ ಗಿರಿಯ ತಪ್ಪಲಲ್ಲಿ ಸಪ್ತಶರಧಿಗಳಿಪ್ಪವು. ಆ ಶರಧಿಯ ನಡುವೆ, ತರು ಮರ ಗಿರಿ ಗಹ್ವರ ಖಗ ಮೃಗಂಗಳಿಪ್ಪವು. ಈ ಭಾರವ ತಾಳಲಾರದೆ, ಅರಗಿನ ಮರದಡಿಯಲಿರ್ದ ಪರಮಜ್ಞಾನವೆಂಬ ಉರಿಯೆದ್ದು, ಅರಗಿನ ಮರ ಕರಗಿ ಕುಸಿಯಿತ್ತು, ಗಿರಿ ನೆಲಕ್ಕೆ ಬಿದ್ದಿತ್ತು, ಸಪ್ತಶರಧಿಗಳು ಬತ್ತಿದವು. ಅಲ್ಲಿರ್ದ ತರು ಮರ ಖಗ ಮೃಗಾದಿಗಳು ಗಿರಿಗಹ್ವರವೆಲ್ಲ ದಹನವಾದವು. ಇದ ಕಂಡು, ನಾ ನಿಮ್ಮೊಳು ಬೆರಗಾಗಿ ನೋಡುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂಗಗುಣಂಗಳನೆಲ್ಲ ಅನಲಂಗಿಕ್ಕಿ, ಲಿಂಗಗುಣವನೆ ಗಟ್ಟಿಮಾಡಿ, ಕಂಗಳು ಲಿಂಗ ಕರಸ್ಥಲ, ಜಂಗಮದ ಇಂಗಿತವನರಿದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಅಯ್ಯಾ ನಾ ಉತ್ತರವನೇರಿ ನೋಡಲಾಗಿ, ಊರೊಳಗಣ ಉಲುಹೆಲ್ಲ ನಿಂದಿತ್ತು. ಪಶ್ಚಿಮಕ್ಕಿಳಿದು ನೋಡಲಾಗಿ, ಪ್ರಾಣ ಪವನನ ಸುಳುಹು ನಿಂದಿತ್ತು. ಪೂರ್ವವ ಮೆಟ್ಟಿ ನೋಡಲಾಗಿ, ಆರು ನೆಲೆ ಮೂರಾಗಿದ್ದವು. ಅಯ್ಯಾ ನಾ ದಕ್ಷಿಣಕ್ಕೆ ಬಂದು ನೋಡಲಾಗಿ ಈರೇಳು ಭವನವು ಕುಕ್ಷಿಯೊಳಗೆ ನಿಕ್ಷೇಪವಾಗಿದ್ದಿತು. ಅದು ಹೇಗೆಂದಡೆ : ಇಹಲೋಕವು ತನ್ನೊಳಗೆ, ಪರಲೋಕವು ತನ್ನೊಳಗೆ, ಸಚರಾಚರವೆಲ್ಲ ತನ್ನೊಳಗೆ, ಶಿವಶಕ್ತಿಯು ತನ್ನೊಳಗೆ, ಭುವನಾದಿ ಭುವನಂಗಳು ತನ್ನೊಳಗೆ. ಅದು ಹೇಗೆಂದಡೆ : ಅದಕ್ಕೆ ದೃಷ್ಟವ ಹೇಳಿಹೆನು, ಬಲ್ಲವರು ತಿಳಿದುನೋಡಿ, `ಒಂ ಏಕಮೇವನದ್ವಿತೀಯ' ಎಂಬ ಶ್ರುತಿ ಕೇಳಿ ಬಲ್ಲಿರೆ. ಇಂತಪ್ಪ ಮನಕ್ಕೆ ಒಂದಲ್ಲದೆ ಎರಡುಂಟೆ ? ತಾನಲ್ಲದೆ ಅನ್ಯೋನ್ಯವಿಲ್ಲಾಯೆಂದು ಅರಿದ ಮೇಲೆ ತನಗಿಂದ ಮುನ್ನ ಇವೇನಾದರು ಉಂಟೆ ? ಇದು ಕಾರಣ, ನಮ್ಮ ದೇವನೊಬ್ಬನೆ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಆತಂಗೆ ನಮೋ ನಮೋ ಎಂಬೆ.
--------------
ಹಡಪದ ಅಪ್ಪಣ್ಣ
ಅಂಗಲಿಂಗಸಂಬಂಧವಾದ ಬಳಿಕ ಮನ ಹಿಂಗದಿಪ್ಪುದು. ತನುವನು ಬಿಟ್ಟು, ಸಂಗಸುಖದ ಶರಣರ ಗೋಷಿ*ಯೊಳು ಇಪ್ಪಾತ ಮಂಗಳಾತ್ಮಕ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಅಂಗಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ, ಕರುಣರಸಭರಿತವಾಗಿಪ್ಪುದೇ ಕುರುಹು. ಕಂಗಳು ಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ, ಕಾಮಾದಿಗಳ ಸೃಜಿಸದುದೇ ಕುರುಹು. ಕರವೇ ಲಿಂಗವೆಂದರಿದುದಕ್ಕೆ ಕುರುಹು ಎಂತಿಪ್ಪುದೆಂದರೆ, ಇಹ ಪರ ಮೋಕ್ಷವ ಬಯಸದಿಪ್ಪುದೇ ಕುರುಹು. ಈ ತ್ರಿವಿಧವು ಏಕವಾದರೆ, ಎಮ್ಮ ಬಸವಪ್ರಿಯ ಕೂಡಲಚೆನ್ನ ಬಸವಣ್ಣನಲ್ಲಿ ಮಹಾಲಿಂಗೈಕ್ಯವು.
--------------
ಹಡಪದ ಅಪ್ಪಣ್ಣ
ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕರ್ಪುರದಂತಾಯಿತ್ತು. ಎನ್ನ ಪ್ರಾಣದ ಮೇಲಿಪ್ಪ ಲಿಂಗವು ಪರಂಜ್ಯೋತಿಯಂತಾಯಿತ್ತು. ಎನ್ನ ನಿಃಪ್ರಾಣದ ಮೇಲಿಪ್ಪ ಲಿಂಗವು ನಿರಂಜನದಂತಾಯಿತ್ತು. ಈ ತ್ರಿವಿಧವು ಏಕವಾದ ಭೇದವ ಹೇಳಿಹೆನು ಕೇಳಿರಣ್ಣಾ ! ಎನ್ನ ಅಂಗದ ಮೇಲಿದ ಕರ್ಪುರದಂತಿರ್ದ ಲಿಂಗ, ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗವ ಬೆರೆಯಿತ್ತು . ಎನ್ನ ಪ್ರಾಮದ ಮೇಲಿಪ್ಪ ಪರಂಜ್ಯೋತಿ ಲಿಂಗ, ನಿಃಪ್ರಾಣದ ಮೇಲಿಪ್ಪ ನಿರಂಜನ ಲಿಂಗವ ಬೆರೆಯಿತ್ತು. ಈ ತ್ರಿವಿಧವು ಏಕವಾದ ಮೇಲೆ, ಒಂದಲ್ಲದೆ ಎರಡುಂಟೆ ? ಇದಕ್ಕೆ ಸಂದೇಹ ಬೇರಿಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ

ಇನ್ನಷ್ಟು ...