ಅಥವಾ

ಒಟ್ಟು 318 ಕಡೆಗಳಲ್ಲಿ , 13 ವಚನಕಾರರು , 102 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವದ ಮನ ತಾಯಿಗಳ ಬಿಡಾರವೆಂದೆನಿಸುವುದು ಬಸವಾ. ಮೂವತ್ತಾರು, ಇನ್ನೂರ ಹದಿನಾರು ಬಿಡಾರದಲ್ಲಿ ನಿಂದು, ಬಯಲೊಂದುಗೂಡಲು ಬಸವಯ್ಯಾ, ಭಕ್ತಿಸ್ಥಲ ಶುಭಸೂಚನೆಯಾಯಿತ್ತು ಬಸವನಲ್ಲಿ ಎನಗೆ. ಸಂಗಯ್ಯನಲ್ಲಿ ಬಸವನಂಗ ನಿರಂಗವಾದ ಬಳಿಕ ಆನೆಂಬುದಿಲ್ಲವಯ್ಯಾ ಬಸವಯ್ಯಾ ನಿಮ್ಮಲ್ಲಿ.
--------------
ನೀಲಮ್ಮ
ಕೈಯಲ್ಲಿ ಡಾಣೆ ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ, ಲಿಂಗದ ವಾರ್ತೆ ನಿನಗೇಕೆ ಹೇಳಾ ಬಸವಾ ? ಜಂಗಮವೆ ಲಿಂಗವೆಂಬ ಶಬ್ದಸಂದೇಹಸೂತಕಿ ನೀನು, ಸಜ್ಜನ ಸದ್ಭಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ? ಕಬ್ಬುನದ ರೂಪು ಪರುಷವ ಮುಟ್ಟಿದಡೆ ಹೊನ್ನಾಯಿತ್ತಲ್ಲದೆ ಪರುಷವಪ್ಪುದೆ ಹೇಳಾ ಬಸವಾ ? ಗುಹೇಶ್ವರನೆಂಬ ಪರುಷದ ಪುತ್ಥಳಿಯನರಿಯಬಲ್ಲಡೆ ನಿನ್ನ ನೀನೆ ತಿಳಿದು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆದಿ ನಾದದ ಬಿಂದುವನರಿದು ಭಕ್ತಿಸಂಭಾಷಣೆಯ ಮಾಡಿದ ಬಸವಾ, ಪ್ರಣವದಲ್ಲಿ ನಿಜವ ಕಂಡು ತೋರಿದ ಬಸವಾ. ಆ ಪ್ರಣವದ ಘನವ ಕಂಡ ಬಸವಾ. ಇತರ ತೃಪ್ತಿಯನನುಭವಿಸಬಲ್ಲ ಬಸವಾ ನೀನೆನ್ನಲ್ಲಿ ಅಡಗಿ, ನಾ ನಿನ್ನಲ್ಲಿ ಅಡಗಿ, ನಾ ನಿನ್ನ ಮನದ ಅರಿವನರಿದು ಉಭಯವಿಲ್ಲವೆಂದೆನೆಂದೆ ಬಸವಾ. ಸುಖದ ಸಮಯಾಚಾರವ ಕಂಡು ನಿಜದಲ್ಲಿ ನಿಂದವಳಾನು ನಾನಯ್ಯ ಬಸವಾ. ಸಂಗಯ್ಯನಲ್ಲಿ ನಿಜವಿಡಿದ ಹೆಣ್ಣು ನಾನೇ ಅಹುದೆಂದು ನುಡಿದೆನಯ್ಯಾ ಅಪ್ಪಣ್ಣಾ.
--------------
ನೀಲಮ್ಮ
ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ. ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ. ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ.
--------------
ನೀಲಮ್ಮ
ನಿನ್ನಡಕ ನೀನೆಯಾದೆ ಬಸವಲಿಂಗವೆ. ಎನ್ನ ಚಿತ್ಪಿಂಡದ ರೂಪು ನಿಮ್ಮ್ಲ ತ್ಲೀಯವಾಯಿತ್ತು ಬಸವ ಗುರುವೆ. ಭಾವಿಸಿಹೆನೆಂಬ ಭಾವ ನಷ್ಟವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥನ ಗುರು ಬಸವಾ.
--------------
ಸಿದ್ಧರಾಮೇಶ್ವರ
ಎಂದೆಂದೂ ಎನ್ನಂಗ ಮನ ಪ್ರಾಣ ನಿನ್ನದಯ್ಯಾ ಬಸವಾ. ಎಂದೆಂದೂ ಎನ್ನಂಗ ಮನ ಪ್ರಾಣ ನಿನ್ನದಯ್ಯಾ ಬಸವಾ. ಕಪಿಲಸಿದ್ಧಮಲ್ಲಿನಾಥಯ್ಯನ ಗುರುಬಸವಾ.
--------------
ಸಿದ್ಧರಾಮೇಶ್ವರ
ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ, ಕರಸ್ಥಲ ಮನಸ್ಥಲವಾಯಿತ್ತು ಬಸವಾ. ಸಂಗಯ್ಯಾ, ಬಸವ ಹೋದನತ್ತ ನಾನಡಗಿದೆನಯ್ಯಾ ನಿಮ್ಮಲಿತ್ತ.
--------------
ನೀಲಮ್ಮ
ನಾನು ನಾನೊ, ನೀನು ನೀನೊ, ಬಸವ ಬಸವಾ, ಮೌನಮುಗ್ಧ ಬಸವ ನೀನೆ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಆಡದ ಭಾಷೆಯ ನುಡಿವಳಲ್ಲ ನಾನು ಬಸವಾ, ಆ ನುಡಿಯ ಭಾಷೆಯ ಕೇಳುವಳಲ್ಲ ನಾನು ಬಸವಾ, ರೂಪಳಿದ ನಿರೂಪಿಯಾನು ಬಸವಾ, ಅಂಗವಳಿದ ನಿರಂಗಿಯಾನು ಬಸವಾ, ದ್ವಯವಳಿದ ಪ್ರಸಾದಿಯಾನು ಬಸವಾ, ಪರಿಣಾಮವರತ ಹೆಣ್ಣೆಂದು ಎಮ್ಮವರೆನ್ನ ಹೆಸರಿಡಲು, ನಾನು ಬಸವನ ಪಾದದಲ್ಲಿ ತಲ್ಲೀಯವಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಎತ್ತಳ ಸುಖ ಬಂದು ಎತ್ತಲಡಗಿತ್ತು ಎತ್ತಳ ಪ್ರಸಾದ ಬಂದು ಎತ್ತಲಡಗಿತ್ತು ಎತ್ತಳ ಮನವನತ್ತತ್ತಲಡಗಿಸಿದೆ ಬಸವಾ. ನೀನತ್ತಲಡಗಿದರೇನು, ನಾನತ್ತಲಡಗಿದಳೆಂಬ ಸಂಶಯವೆನಗಿಲ್ಲವಯ್ಯ. ಸಂಶಯ ಸಂಬಂಧವ ತಿಳಿದು ಸದಾಚಾರವನರಿದು ಬದುಕಿದೆನು. ನಿಮ್ಮರಿವಿನಲ್ಲಿ ಸಂಗಯ್ಯ.
--------------
ನೀಲಮ್ಮ
ಧ್ವನಿಯ ತೋರಲು, ಆ ಧ್ವನಿಯ ಮರೆಯಲ್ಲಿ ಹುಟ್ಟಿದ ಮದ್ಗುರು ಬಸವಣ್ಣಂಗೆ ಶಿವಸುಖವಾಯಿತ್ತು ಬಸವಾ. ಆ ಧ್ವನಿಯಡಗಿ ಅಪ್ರತಿಮಸಂಗ ನಿರ್ಮಲಾಕಾರವಾಯಿತ್ತಯ್ಯಾ ಎನಗೆ. ಪ್ರಣವಸ್ವರೂಪ ಬಸವನ ಕಂಡಬಳಿಕ ಆನು ಬಸವನ ಶಿಶುವಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಎಸಳದಳವನಳಿದು ನಿಂದ ಬಸವಾ, ದಳರೂಪಿತದಲ್ಲಿ ಕುರುಹಡಗಿದ ಬಸವಾ, ಕುರುಹಿನ ರೂಪ ಕಂಡು ದೃಢ ಸ್ವರೂಪನರಿದು ಅನುಭಾವಿಯಾಗಿ ಅನುಭಾವದಿಂದ ಮುಕ್ತಿಯ ಕಂಡು ಮುಖವಿಕಸಿತವನೆಯ್ದಿ ನಿಂದನಯ್ಯ ಸಂಗಯ್ಯನಲ್ಲಿ ಬಸವಯ್ಯನು
--------------
ನೀಲಮ್ಮ
ಆಗಮಜ್ಞಾನಕ್ಕೆ ನೀನೆ ಕರ್ತನು ಬಸವಾ ಬಸವಾ; ಆಗಮವಿಡಿದ ಶಿವಭಕ್ತಿಗೆ ನೀನೆ ಕರ್ತನು ಬಸವಾ ಬಸವಾ; ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಾ.
--------------
ಸಿದ್ಧರಾಮೇಶ್ವರ
ಪ್ರಣವದ ಚಿನ್ನಾದವೆ ಅಕಾರ, ಪ್ರಣವದ ಚಿದ್ಬಿಂದುವೆ ಉಕಾರ, ಪ್ರಣವದ ಚಿತ್ಕಲೆಯೆ ಮಕಾರ. ಪ್ರಣವದ ಬಟ್ಟೆಯೆ ಬಕಾರ, ಪ್ರಣವದ ಸೋಪಾನವೆ ಸಕಾರ, ಪ್ರಣವದ ವರ್ತನೆಯೆ ವಕಾರ. ಪ್ರಣವದ ಬಹಳಾಕಾರವೆ ಬಕಾರ ಪ್ರಣವದ ಸಾಹಸವೆ ಸಕಾರ, ಪ್ರಣವದ ವಶವೆ ವಕಾರ. ಪ್ರಣವದ ಬರವೆ ಬಕಾರ, ಪ್ರಣವದ ಸರವೆ ಸಕಾರ, ಪ್ರಣವದ ಇರವೆ ವಕಾರ. ಪ್ರಣವದ ಬಲ್ಮೆಯೆ ಬಕಾರ, ಪ್ರಣವದ ಸಲ್ಮೆಯೆ ಸಕಾರ, ಪ್ರಣವದ ಒಲ್ಮೆಯೆ ವಕಾರ. ಪ್ರಣವದ ಪಶ್ಯಂತಿವಾಕೇ ಬಕಾರ, ಪ್ರಣವದ ಸೂಕ್ಷ ್ಮವಾಕೇ ಸಕಾರ, ಪ್ರಣವದ ವೈಕಲ್ಯವಾಕೇ ವಕಾರ. ಪ್ರಣವದ ಬಹಳ ಜ್ಞಾನವೆ ಬಕಾರ, ಪ್ರಣವದ ಸಹಜ ಜ್ಞಾನವೆ ಸಕಾರ, ಪ್ರಣವದ ಶುದ್ಧ ಜ್ಞಾನದೀಪ್ತಿಯೆ ವಕಾರ. ಪ್ರಣವದ ಮೂಲವೆ ಬಕಾರ, ಪ್ರಣವದ ಶಾಖೆಯೆ ಸಕಾರ, ಪ್ರಣವದ ಫಲವೆ ವಕಾರ. ಪ್ರಣವದ ಬಹಳ ನಾದವೆ ಬಕಾರ, ಪ್ರಣವದ ಸನಾದವೆ ಸಕಾರ, ಪ್ರಣವದ ಸುನಾದವೆ ವಕಾರ. ಪ್ರಣವದ ಭಕ್ತಿಯೆ ಬಕಾರ, ಪ್ರಣವದ ಸುಜ್ಞಾನವೆ ಸಕಾರ, ಪ್ರಣವದ ವೈರಾಗೈವೆ ವಕಾರ. ಪ್ರಣವದ ಶಬ್ದವೆ ಬಕಾರ, ಪ್ರಣವದ ನಿಃಶಬ್ದವೆ ಸಕಾರ, ಪ್ರಣವದ ಶಬ್ದ ನಿಶಬ್ದದ ವಾಕುಗಳೆ ವಕಾರ. ಇಂತಪ್ಪ ಪ್ರಣವ ಮಂತ್ರಂಗಳೇ ಬಸವಾ ಎಂಬ ಪ್ರಣವ ನಾದತ್ರಯಸಂಬಂಧವಾದುದಂ ತ್ರಿಪುರಾಂತಕಲಿಂಗದಲ್ಲಿ ಅರಿದು ಸುಖಿಯಾಗಿ ಆನು ಬಸವಾ, ಬಸವಾ, ಬಸವಾ, ಎಂದು ಜಪಿಸುತ್ತಿದ್ದೆನಯ್ಯಾ.
--------------
ಕಿನ್ನರಿ ಬ್ರಹ್ಮಯ್ಯ
ಕಾಲವ ಕಂಡ ಬಸವಾ, ಕಲ್ಪಿತವ ಕಂಡ ಬಸವಾ, ಕಾಲಕಲ್ಪಿತವರ್ಜಿತವಾದೆ ಬಸವಾ. ನಯನುಡಿಯಿಲ್ಲದ ಬಸವಾ. ನೀ ನಿಃಪತಿಯಾದೆಯಾ ಸಂಗಯ್ಯನ ಗುರುಬಸವಾ.
--------------
ನೀಲಮ್ಮ
ಇನ್ನಷ್ಟು ... -->