ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಡಿಯಿಡಲಿಲ್ಲ, ನುಡಿಯನೇನೆನಲಿಲ್ಲ,ಸರಸವೆನಲಿಲ್ಲ, ಆ ಸರಸ ವಿರೂಪಾದ ಬಳಿಕ ಪ್ರಸಾದವೆನಲಿಲ್ಲ. ಆ ಪ್ರಸಾದ ಪರಿಣಾಮದಲ್ಲಿಯಡಗಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಅಧಿಕ ತೇಜೋನ್ಮಯ ಬಸವಾ. ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ. ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ ಪ್ರಣವಮೂರ್ತಿಯಯ್ಯಾ ಬಸವಯ್ಯನು. ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಅಘೋರವಕ್ತ್ರ, ಅಜಾತವಕ್ತ್ರ, ಸಾಧ್ಯವಿಲ್ಲದ ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು, ಸದ್ಯೋನ್ಮುಕ್ತಿಯ ಪಡೆಯಲು, ಪ್ರಸಾದ ಇಹಪರಕ್ಕೆ ಸಾಲದೆ ಹೋಯಿತ್ತು. ಎನಗೆ ಕಾಯದ ಹಂಗಿಲ್ಲ, ಕರ್ಮದ ಹಂಗಿಲ್ಲ ಸಂಗಯ್ಯ.
--------------
ನೀಲಮ್ಮ
ಅರಿವನರಸಿ, ಅರಿವ ಕುರುಹಿನಲ್ಲಿ ಕಂಡು, ಆ ಕುರುಹ ಮರೆದು, ಮನ ಮಹಾಲಿಂಗದಲ್ಲಿ ಒಚ್ಚತಗೊಟ್ಟು, ಉಭಯಪ್ರಸಾದವನುಂಡು, ಉಣಲಿಲ್ಲದೆ ಉಭಯಗೆಟ್ಟೆನಯ್ಯ ಸಂಗಯ್ಯ.
--------------
ನೀಲಮ್ಮ
ಅಪ್ರಮಾಣದ ತಾಣದಲ್ಲಿ ಅಘೋರವಕ್ತ್ರ ಸಂಭಾಷಣೆಯ ಮಾಡಲು ಬಸವಯ್ಯನ ರೂಪು ಎನುತಿದ್ದೆನು. ಸಂಗಯ್ಯನಲ್ಲಿ ಪ್ರಭೆಯಳಿಯಿತ್ತು ಬಸವಾ.
--------------
ನೀಲಮ್ಮ
ಅಮೃತಡೊವಿಗೆಯೊಳಗೆ ಅಮೃತಡೊವಿಗೆ, ಪ್ರಸಾದದ ಕುರುಹಿಲ್ಲ ಬಸವಗೆ. ಆ ಪ್ರಸಾದಕ್ಕೆ ರೂಹಿಲ್ಲದ ಮೂರ್ತಿಯ ಕಂಡು ಸಂಗಯ್ಯನಲ್ಲಿ ನಿಜಸುಖಿಯಾದ ಬಸವ.
--------------
ನೀಲಮ್ಮ
ಅಲ್ಲಲ್ಲಿಯ ಸುಖಂ ಭೋ ಎನ್ನಲಿಲ್ಲ. ಅಲ್ಲಲ್ಲಿಯ ಪಶುತ್ವವಿಲ್ಲಂ ಭೋ. ಆ ಪಶು ಕಾಯವಂ ಕಳೆದು ಆನು ಪರಿಣಾಮವಡಗಿದವಳಯ್ಯಾ. ಪರಿಣಾಮದ ವಿವರದಿಂದ ಪರವಸ್ತುವಿನ ನೆಲೆಯ ತಿಳಿದು, ಪರಮಪ್ರಸಾದಿಯಾದೆನು. ಪ್ರಾಣಯೋಗ ಪ್ರಸಾದಮೂರ್ತಿಯುಳ್ಳವಳಾದ ಕಾರಣ, ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಅಂಗವಡಗಿ ನಿರಂಗಿಯಾನಾದೆನು. ನಿರಂಗಸಂಗ ಮಂತ್ರದ ಮಂತ್ರದಿಂದ ಮನೋವಿಲಾಸವ ಕಂಡು ಮೂರ್ತಿಯನರಿದು ಆ ಮೂರ್ತಿ ಸಂಗ ಹಿಂಗಿ, ನಾನು ಪ್ರಸನ್ನಮೂರ್ತಿಯ ಇರವನರಿದು ಪರವ ನಂಬಿ, ಬಹುವಿಕಾರವ ಕಳೆದು ವಿಶುದ್ಧದಾಯಕಳು ನಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಅರಿಯೆನರಿಯೆನಿಂತಹ ಮೂರ್ತಿಯ, ಅರಿಯದವನಲ್ಲ. ನಾನು ಬೆರಸಿರಲು ಸುಖದಿಂದ ಪ್ರಣವಾಕ್ಷರವಾಯಿತ್ತಯ್ಯ. ಆ ಪ್ರಣವಾಕ್ಷರವೆ ಪ್ರಸಾದವಾಯಿತ್ತು. ಆ ಪ್ರಸಾದದ ನೆಲೆಯಿಂದ ಮನ ವಿಶೇಷವಾಯಿತ್ತು. ವಿಶೇಷವಿಚಾರದಿಂದ ವಿನಯಾರ್ತ ಪ್ರಸಾದಿಯಾನಾದೆನಯ್ಯ. ಪ್ರಸಾದಸುಖದಿಂದ ಮುಖ ವಿಶೇಷವಾಯಿತ್ತು. ಸಂಗಯ್ಯ, ನಿಮ್ಮ ಬಸವನಿಂದಲಾನು ಪರಿಣಾಮಿಯಾದೆನು.
--------------
ನೀಲಮ್ಮ
ಅನಾದಿಯ ಸ್ಥೂಲ, ಆದಿಯ ನಿಃಕಲ, ಆದಿಯನಾದಿಯೆಂಬ ಕುಳವಳಿದು ಕುಳಸ್ಥಳವಳಿದೆನಯ್ಯ. ಆ ಕುಳಸ್ಥಳದ ಮೂರ್ತಿಯನರಿದು ಆನು ಬದುಕಿದೆನಯ್ಯ. ಸಂಗಯ್ಯನಲ್ಲಿ ನಾನು ಬಸವನ ಸ್ವರೂಪಿಯಾದೆನಯ್ಯ.
--------------
ನೀಲಮ್ಮ
ಅಲ್ಲಮನ ಸಂಗ, ಅಜಗಣ್ಣನ ಸಂಗ, ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ, ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ, ಮಾನ್ಯರ ಸಂಗ, ಮುಖ್ಯರ ಸಂಗ. ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ.
--------------
ನೀಲಮ್ಮ
ಅಣ್ಣೆವಾಲ ಕರೆದು, ಪುಣ್ಯದ ಕಡೆಗೋಲಿನಲ್ಲಿ ಕಡೆದು, ಕಂಪಿಲ್ಲದ ತುಪ್ಪವನು ಅನಂತ ಹಿರಿಯರಿಗೆಡೆಮಾಡಿ ಉಣಬಡಿಸಲೊಡನೆ, ಊಟ ನಿರಾಕುಳವಾಗಿ ನಿಂದಿತ್ತು; ಪ್ರಾಣವಿಲ್ಲದೆ ಪರಿಣಾಮಿಗಳಾದರು ಅನಂತಕೋಟಿ ಹಿರಿಯರು. ಅವರುಂಡ ಪ್ರಸಾದವನುಣಹೋದಡೆ ಎನಗವಧಿಯಾಯಿತಯ್ಯಾ. ಹಿರಿಯತನದುಪಕಾರವ ನೋಡದೆ, ಅವರ ಕಡಿದು ಆನಡಿಯಿಟ್ಟೆನಯ್ಯಾ ಸಂಗಯ್ಯನಲ್ಲಿಗೆ.
--------------
ನೀಲಮ್ಮ
ಅರುಹನರಿಯಲು ಕುರುಹ ಮರೆಯಲೇಬೇಕು. ಅರುಹನನುಗೊಳಿಸಲು ಆನು ಪ್ರಸನ್ನಮೂರ್ತಿಯ ಪಡೆದೆನಯ್ಯ. ಆನು ಉಭಯವಳಿದು ನಿರಾಭಾರಿಯಾದೆನಯ್ಯ. ನಿರ್ಮಲ ನಿಜವ ಕಂಡು ಮುಕ್ತಿಪದವ ಪಡದೆನಯ್ಯ ಸಂಗಯ್ಯ.
--------------
ನೀಲಮ್ಮ
ಅರಿಯೆನರಿಯೆ ನಾನು, ಏನುವನರಿಯೆನಯ್ಯ; ಎಲ್ಲವ ಮರದೆನಯ್ಯ, ಎಲ್ಲಾ ಪುರಾತರ ಹಂಗ ಹರಿದು ನಾನು ಸಂಗ ನಿಸ್ಸಂಗಿಯಾದೆನು. ಗುಣಕಥನದ ಮಾತ ಹರಿದು ಬಸವ ಬಸವಾಯೆಂಬ ಮಾತಿನ ಭ್ರಮೆಯ ಕಳೆದುಳಿದೆನಯ್ಯ.
--------------
ನೀಲಮ್ಮ
ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ; ಆಕಾರವಳಿದ ಬಸವಾ; ನಿರಾಕಾರವಳಿದ ಬಸವಾ; ಸಂಗವಳಿದ ಬಸವಾ; ನಿಸ್ಸಂಗವಳಿದ ಬಸವಾ; ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ.
--------------
ನೀಲಮ್ಮ
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ. ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ. ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ. ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ. ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ?
--------------
ನೀಲಮ್ಮ
ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು. ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು. ಉಭಯದ ಹಂಗಹರಿದು ಉಪಮಾತೀತನಾದ ನಮ್ಮ ಬಸವಯ್ಯನು. ಸಂಗಯ್ಯನಲ್ಲಿ ಕೂಡಿ ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು.
--------------
ನೀಲಮ್ಮ
ಅರಿವಡೆ ನಾನು ಅರಿವುಳ್ಳ ಹೆಣ್ಣಲ್ಲ ಮರವಡೆ ನಾನು ಮರೆಯಿಲ್ಲದ ಕಾಮಿನಿಯಲ್ಲ. ಏನೂ ರೂಪಿಲ್ಲವೆನಗೆ, ಏನೂ ನೆಲೆಯಿಲ್ಲವೆನಗಯ್ಯ ಸಂಗಯ್ಯ.
--------------
ನೀಲಮ್ಮ
ಅಂಡಜವ ಕಲ್ಪಿಸಲು ಆ ಅಂಡಜದ ರೂಪೆನ್ನಲಿಲ್ಲದ ಕಾರಣ ಸಂಗಯ್ಯಾ, ಗುರುಬಸವನೆನ್ನ ಕಾಯದಲ್ಲಿ ಕಯ್ಯಲಗಿನಂತಿದ್ದನು.
--------------
ನೀಲಮ್ಮ
ಅಡಲಿಲ್ಲದ ಊಟವನುಣಹೋದಡೆ, ಆ ಊಟವೆನಗೆ ವಿಷವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಅರಸರಸಲು ನಾನು ಅರಸುವ ವಸ್ತು ಎನ್ನ ಕಣ್ಣಿಂಗೆ ಕಾಣಲಾಯಿತ್ತು. ಬಯಕೆಯ ಬಯಸಲು ನಾನು ಬಯಸುವ ವಸ್ತು ಕೈಗೂಡಿತ್ತು. ನಾನೆಂತಹ ಪುಣ್ಯವುಳ್ಳವಳೋ ! ನಾನೆಂತಹ ಮುಕ್ತಿಯುಳ್ಳವಳೋ ! ನಾನುಭಯದ ಸಂಗವ ಹರಿದು ನಿಸ್ಸಂಗಿಯಾದೆನು ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು.
--------------
ನೀಲಮ್ಮ
ಅತೀತವಡಗಿ, ನಿರಾಲಂಬದ ಮನದ ಮೂರ್ತಿಯಂ ತಿಳಿದು, ಮನೋವ್ಯಾಧಿಯಂ ಪರಿಹರಿಸಿಕೊಂಡು, ಭಾವದ ಸೂತಕವಳಿದು ಬ್ರಹ್ಮದ ನೆಮ್ಮುಗೆಯಂ ತಿಳಿದು, ಮನ ವಿಶ್ರಾಂತಿಯನೆಯ್ದಿ, ವಿಚಾರದನುಭವವನರಿದು, ವಿವೇಕದಿಂದಾನು ವಿಶೇಷಸುಖವ ಕಂಡೆನಯ್ಯಾ ಸಂಗಯ್ಯಾ, ಬಸವನಿಂದಲಿ !
--------------
ನೀಲಮ್ಮ
ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು, ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು. ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು. ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ.
--------------
ನೀಲಮ್ಮ
ಅಂಗವನರಿದು ಹಿಂಗಿದೆ ಪ್ರಾಣವ, ಅಂಗ ಲಿಂಗವನುಂಡು ಪರಮ ಪರಿಣಾಮದೊಳೋಲಾಡುತಿರ್ದೆನಯ್ಯ. ದಿನಮಣಿ ದಿನಪ್ರಕಾಶ ಸಾಧ್ಯವಾಯಿತ್ತಯ್ಯ. ದಿನಮಣಿ ದಿನಪ್ರಕಾಶದ ಕೂಟದಿಂದ ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಅಂಗನೆಯ ಸಂಗವ ಮಾಡಿಹೆನು ನಾನು, ಆನುವಂಗನೆಯಲ್ಲ. ಆ ಅಂಗನೆಯ ಅಂಗಸಂಗವ ಕಂಡು ನಿಂದವಳಯ್ಯ. ನಿಲವನರಿದು, ನೆಲೆಯ ತಿಳಿದು, ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ

ಇನ್ನಷ್ಟು ...