ಅಥವಾ

ಒಟ್ಟು 75 ಕಡೆಗಳಲ್ಲಿ , 34 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನೋವಾಕ್ಕಾಯದಿಂದ ಹುಟ್ಟಿದ ಕರ್ಮ ತೊಟ್ಟನೆ ತೊಳಲಿಸಿ ಬಳಲಿಸಿದಲ್ಲದೆ ಬಿಡದು. ಕರ್ಮವ ಮೀರಿ ನಡೆವ ಬಲ್ಲಿದರನಾರನೂ ಕಾಣೆ. ಬೊಮ್ಮವಾದಿಗಳೆಲ್ಲ ಕರ್ಮಕ್ಕೀಡಾದರು. ಕರ್ಮವು ಅಜ ಹರಿಗಳ ಬಾರದ ಭವದಲ್ಲಿ ಬರಿಸಿತ್ತು. ಕಾಣದ ದುಃಖವ ಕಾಣಿಸಿತ್ತು. ಇನ್ನುಳಿದವರ ಹೇಳಲೇನುಂಟು?. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಆಧೀನವಿಡಿದು ಕಾಡುವ ಕರ್ಮದ ಬಲುಹ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು. ನೀ ಹೊರೆವ ಜಗದ ಜೀವರಾಸಿಗಳೊಳಗೆ, ಆಸೆಗೆ ಬೇರೆ ಕೊಟ್ಟುದುಳ್ಳಡೆ ಹೇಳು ದೇವಾ. ಅರ್ಚಿಸಿ ಪೂಜಿಸಿ, ನಿಮ್ಮ ವರವ ಬೇಡಿದೆನಾದಡೆ ಬಾರದ ಭವಂಗಳಲ್ಲಿ ಎನ್ನ ಬರಿಸು, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಪ್ರಥಮದಲ್ಲಿ ವಾಙ್ಮನಕ್ಕೆ ಬಾರದ ಸಚ್ಚಿದಾನಂದ ನಿತ್ಯಪರಿಪೂರ್ಣ ಲಕ್ಷಣವನುಳ್ಳ ನಿಃಕಲದೇವರು. ದ್ವಿತೀಯದಲ್ಲಿ `ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್' ಎಂಬ ಪಂಚಸಂಜ್ಞೆಯನ್ನುಳ್ಳ ಮಹಾಲಿಂಗದೇವರು. ತೃತೀಯದಲ್ಲಿ ಕರ್ಮ ಕರ್ತೃ ಮೂರ್ತಿ ಅಮೂರ್ತಿ ಶಿವಸಾದಾಖ್ಯವನುಳ್ಳ ಸದಾಶಿವದೇವರು. ಚತುರ್ಥದಲ್ಲಿ ಭವ ಶರ್ವ ರುದ್ರ ಭೀಮ ಸದಾಶಿವ ಉಗ್ರ ಸೋಮ ಪಶುಪತಿ ಎಂಬ ಎಂಟು ಪ್ರಕಾರವನುಳ್ಳ ಈಶ್ವರದೇವರು. ಪಂಚಮದಲ್ಲಿ ಶರ್ವ ಶಿವ ಮಹಾದೇವರು ನೀಲಕಂಠ ವೃಷಭದ್ವಜ ಈಶಾನ ಶಂಕರ ಭೀಮ ಪಿನಾಕಿ ಚಂದ್ರಶೇಖರ ಕಪರ್ದಿ ವಿರೂಪಾಕ್ಷ ವಾಮದೇವ ಮೃಡ ಭೂತೇಶ ಶೂಲಿ ಸರ್ವಜ್ಞ ಸ್ಥಾಣು ಪಾರ್ವತಿಪ್ರಿಯ ಮಹಾಂಕಾಳ ಮಹಾದೀರ್ಘ ಮಹಾತಾಂಡವ ಗಂಗಾಧರ ಗಣೇಶ್ವರ ಗಜಧ್ವಂಸಿ ಎಂಬ ಇಪ್ಪತ್ತೆ ೈದು ಪ್ರಕಾರವನುಳ್ಳ ಮಾಹೇಶ್ವರದೇವರು. ಷಷ*ಮದಲ್ಲಿ ಶಿವ ಮಾಹೇಶ್ವರ ರುದ್ರ ಶ್ರೀಕಂಠ ಶಂಭು ಈಶ್ವರ ಮಹಾದೇವರು ಪಶುಪತಿ ನೀಲಕಂಠ ವೃಷಭಧ್ವಜ ಪರಮೇಶ್ವರನೆಂಬ ಹನ್ನೊಂದು ಪ್ರಕಾರವನುಳ್ಳ ರುದ್ರದೇವರು. ಸಪ್ತಮದಲ್ಲಿ ಭವ ಮೃಡ ಹರನೆಂಬ ಮೂರು ಪ್ರಕಾರವನುಳ್ಳ ತ್ರಯಾವಯದೇವರು. ಅಷ್ಟಮದಲ್ಲಿ ಭಯಂಕರವನುಳ್ಳ ವಿರಾಟಮೂರ್ತಿದೇವರು. ನವಮದಲ್ಲಿ ಸರ್ವಚೈತನ್ಯಾತ್ಮಕವನುಳ್ಳ ಹಿರಣ್ಯದೇವರು. ದಶಮದಲ್ಲಿ ಸುಷುಪ್ತಾವಸ್ಥೆಯನುಳ್ಳ ಪ್ರಾಜ್ಞದೇವರು. ದ್ವಾದಶದಲ್ಲಿ ಜಾಗ್ರಾವಸ್ಥೆಯನುಳ್ಳ ವಿಶೇಶ್ವರದೇವರು. ಇಂತೀ ನಾಮ ಪರಿಯಾಯಂಗಳನೆಲ್ಲವನು ಬಸವೇಶ್ವರನೆ ಅಲಂಕರಿಸಿ `ಏಕಮೂರ್ತಿಸ್ತ್ರಯೋರ್ಭಾಗಂ' ಎಂಬ ಶ್ರುತಿ ಪ್ರಮಾಣದಿಂದ ಎನ್ನ ಸಾಕಾರ ಮೂರು ಮೂರು ನವವಿಂಶತಿ ನವವಿಂಶತಿ ಸ್ವರೂಪವನೊಳಕೊಂಡು ಎನ್ನ ಬಹಿರಂಗದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ನಿರಾಕಾರ ಮೂರು ಮೂರು ವಿಂಶತಿ ವಿಂಶತಿ ಸ್ವರೂಪವನೊಳಕೊಂಡು ಎನ್ನ ಅಂತರಂಗದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಸಚ್ಚಿದಾನಂದ ಲಕ್ಷಣವನುಳ್ಳ ಬ್ರಹ್ಮವೇ ಉಭಯಸಂಗದಲ್ಲಿ ಸನ್ನಿಹಿತವಾದನಯ್ಯ ಪ್ರಭುದೇವರು. ಇಂತೀ ಪಿಂಡಾದಿ ಜ್ಞಾನಶೂನ್ಯಾಂತ ಸ್ಥಲ ಕುಳ ಭೇದವನು ಸಿದ್ಧೇಶ್ವರನೆನಗೆ ಅರುಹಿ ತನ್ನ ನಿಜಪದದೊಳಗೆ ಇಂಬಿಟ್ಟುಕೊಂಡ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಸಿದ್ಧೇಶ್ವರನ ಘನವು ಎನಗೆ ವಾರಿಕಲ್ಲ ಪುತ್ಥಳಿಯನಪ್ಪಿಕೊಂಡಂತಾಯಿತ್ತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ತನ್ನ ಲಿಂಗಕ್ಕೆ ಬಾರದ ರುಚಿಯ, ಜಂಗಮಕ್ಕೆ ಸಲಿಸಿ ಕೈಯ ನೀಡಿ ಪ್ರಸಾದವನಿಕ್ಕೆಂಬಿರಿ, ಅದು ಪ್ರಸಾದವಲ್ಲ, ಸಿಂಗಿ ಕಾಳಕೂಟ ವಿಷವು, ಕೇಳಿರಣ್ಣಾ. ಆ ಪ್ರಸಾದ ಪದವೆಂಬಿರಿ, ಆ ಪ್ರಸಾದ ಕಿಲ್ಬಿಷವೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹಿಂದ ಮರಹಿಸದೆ, ಮುಂದನರುಹಿಸದೆ ಹರಿಹರಿದು ಉಪದೇಶವ ಮಾಡುವ ಹೀಹಂದಿಗಳನೇನೆಂಬೆಯ್ಯಾ ? ಗಂಡನ ಗುರು ಹೆಂಡತಿಯ ಮಾವನೆ ? ಹೆಂಡತಿಯ ಗುರು ಗಂಡನ ಮಾವನೆ ? ಉಪಮೆಗೆ ಬಾರದ ವಸ್ತುವ ಭಾವಕ್ಕೆ ತಂದು ನುಡಿವ ನರಕಿಗಳ ಕೂಗಿಡೆ ಕೂಗಿಡೆ ನರಕದಲದ್ದೂದ ಮಾಬನೆ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೋಟವ ಮಾಡಿದಡೆ, ತುಂಬಿದ ತೊರೆಯ ನಡುವೆ ಮಾಮರ ಕಾತಂತೆ. ಚೆನ್ನಮಲ್ಲಿಕಾರ್ಜುನದೇವಾ, ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ.
--------------
ಅಕ್ಕಮಹಾದೇವಿ
ನಿಮ್ಮ ತಾಯಿತನವನೊಲ್ಲದವರು, ನಾಯಿ ಬಾರದ ಭವದಲ್ಲಿ ಬಂದರು. ಒಬ್ಬ ಹೆಬ್ಬಕ್ಕಿಯಾದ, ಒಬ್ಬ ಸೂಕರನಾದ. ಒಬ್ಬ ಬೆರಳನೆತ್ತಿ ಕಟ್ಟುವಡೆದ. ಒಬ್ಬರೊಬ್ಬರ ವಿಧಿಯನೊಮ್ಮಿಂಗೆ ಕೈಕೊಳ್ಳಾ, ಉರ್ವೀಶ ಸೊಡ್ಡಳಾ, ಭಾಪು ಭಾಪುರೆ.
--------------
ಸೊಡ್ಡಳ ಬಾಚರಸ
ಜಾಳು ಮಾತೆಂದಡೆ ನಲಿದು ನಲಿದು ನುಡಿವರು. ಕಾಳುಗೆಲಸವೆಂದಡೆ ನಲಿದು ನಲಿದು ಮಾಡುವರು. ಶ್ರೀಗುರು ಸೇವೆಯೆಂದಡೆ, ನಿತ್ಯ ಲಿಂಗಾರ್ಚನೆಯೆಂದಡೆ, ಮತ್ತೆ ಪಂಚಾಕ್ಷರಿಜಪವೆಂದಡೆ, ಅಳಲುವರು, ಬಳಲುವರು. ಇಂತಪ್ಪ ದುರುಳರಿಗೆ, ದುಃಖವೆ ಪ್ರಾಪ್ತಿಯಲ್ಲದೆ, ನಿಜಸುಖವೆಂಬುದಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಅವರ ಬಾರದ ಭವದಲ್ಲಿ ಬರಿಸದೆ ಮಾಣ್ಬನೇ?
--------------
ಸ್ವತಂತ್ರ ಸಿದ್ಧಲಿಂಗ
ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ:ಕ್ರಮವನರಿಯದೆ ನುಡಿವಿರೊ ! ವೇದಶ್ರುತಿಗಳ ತಿಳಿಯಲರಿಯದೆ ವಾದುಮಾಡುವರೆಲ್ಲ ಕೇಳಿ: ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ, ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ ! ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ ಇಂದ್ರಸ್ಯ ಯುಜ್ಯಃ ಸಖಾ ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ ದಿವೀವ ಚಕ್ಷುರಾತತಂ ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ ! ವಿಷ್ಣೋರ್ಯತ್ಪರಮಂ ಪದಂ ಎಂಬ ಶ್ರುತಿವಚನವ ತಿಳಿಯಿಂ ಭೋ ! ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ; ನಿಮ್ಮ ಕರ್ಮವು ಅತ್ಯತಿಷ*ದ್ದಶಾಂಗುಲದಿಂದತ್ತತ್ತಲೆ, ಕೂಡಲಸಂಗಮದೇವಾ.
--------------
ಬಸವಣ್ಣ
ಪಾರಮಾರ್ಥಜಂಗಮಲಿಂಗವು ಜಂಗಿಟ್ಟು ಅನಾದಿಭಕ್ತನ ಮಂದಿರೆಕ್ಕೈಯ್ದಿದಲ್ಲಿ ಬಯಕೆ ಬಾರದ ಮುನ್ನ ಮಾಡಿ ನೀಡುತಿಪ್ಪನು. ಮಾಡಿ ನೀಡದ ಮುನ್ನ ಕಾಡಿಕೊಂಬ ಕಲ್ಪಿತಕರಣತ್ರಯದಲ್ಲಿ ಕಾಣಿಸದಿಪ್ಪನು. ಭಕ್ತಿಬೆಳಗಿನೊಳಗಿಪ್ಪಾತನೇ ಭಕ್ತ. ವೈರಾಗ್ಯಪ್ರಭೆಯೊಳಿಪ್ಪಾತನೇ ಜಂಗಮ. ಈ ಭೇದವನರಿಯದೆ ಬೇಡಿಸಿ ಕೊಟ್ಟ ಕೊಂಬ ಭಕ್ತ, ಬೇಡಿ ಕೊಂಡು ಕೊಡುವ ಜಂಗಮ, ಉಭಯವೇಷಕ್ಕೆ ಭವ ತಪ್ಪದು. ಈ ಉಭಯಕೂಟದಲ್ಲಿ ಪಾದೋದಕ ಪ್ರಸಾದ ಉದಯವಾಗುವ ಪರಿಯೆಂತೊ! ಸತಿಪತಿಭಾವ ಕಾಣಿಸದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಗತ್ತೆಂಬ ಯಂತ್ರದ ಹಾಹೆ ಹೇಂಗೆಂದರಿಯಲು ಅಜ್ಞಾನವೆಂಬ ತುಷದ ಚೋಹವ ತೊಡಿಸಿ, ಅಹಂ ಮಮತೆಯೆಂಬ ಸೊಕ್ಕನಿಕ್ಕಿ, ಬಾರದ ಭವದ ಬಟ್ಟೆಯಲ್ಲಿ ಬರಿಸಿ, ಕಾಣದ ಕರ್ಮ ದುಃಖವ ಕಾಣಿಸಿ, ಉಣ್ಣದ ಅಪೇಯವನುಣಿಸಿ, ಮಾರಾರಿ ವಿನೋದಿಸಿದೆಯಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಬಾರದ ಭವವ ಬಂದೆನುಣ್ಣದುದನುಂಡೆನಯ್ಯಾ; ನಾನು ಮಾಡಿದುದನು. ಇನ್ನು ಭವಕ್ಕೆ ಬಾರದಂತೆ ಮಾಡಾ ತಂದೆ. ಕರ್ಮವನುಣ್ಣದಂತೆ ನಿರೂಪಿಸಯ್ಯಾ, ಅಯ್ಯಾ ನಿಮ್ಮ ಧರ್ಮ. ವಿಚಿತ್ರಮೂಲ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಹತ್ತೆ ಸಾರುವ ಮನಕ್ಕೆ ಮಂಗಳವನೀಯಯ್ಯಾ ಗುರುವೆ.
--------------
ಸಿದ್ಧರಾಮೇಶ್ವರ
ಮನವಿದು ಕ್ಷಣದೊಳಗೆ ಹೋಗದ ಠಾವಿಗೆ ಹೋದಂತೆ ನೆನೆವುತ್ತಿದೆ. ಬಾರದ ಠಾವಿಂಗೆ ಬಂದಂತೆ ನೆನೆವುತ್ತಿದೆ. ಕಾಣದುದ ಕಂಡಂತೆ ನೆನೆವುತ್ತಿದೆ. ಕೇಳದುದ ಕೇಳಿದಂತೆ ನೆನೆವುತ್ತಿದೆ. ಕ್ಷಣದೊಳಗೆ ದಶದಿಕ್ಕಿಗೈಯುತ್ತಿದೆ. ಶತಮರ್ಕಟವಿಧಿ ಬಂದು ಮನಕ್ಕಾದರೆ ಇದನೆಂತು ತಾಳಬಹುದಯ್ಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಈ ಮನವ ಸೆರೆಯಿಟ್ಟಾಳಯ್ಯಾ ನಿಮ್ಮ ಧರ್ಮ ಬೇಡಿಕೊಂಬೆ.
--------------
ಸ್ವತಂತ್ರ ಸಿದ್ಧಲಿಂಗ
ಶಕುನವೆಂದೆಂಬೆ, ಅವಶಕುನವೆಂದೆಂಬೆ. ನಿಮ್ಮವರು ಅಳಲಿಕೆ ಅಂದೇಕೆ ಬಂದೆ ನಿಮ್ಮವರು ಅಳಲಿಕೆ ಇಂದೇಕೆ ಹೋದೆ ನೀ ಹೋಹಾಗಳಕ್ಕೆ ! ಬಾಹಾಗಳಕ್ಕೆ ! ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ. 167
--------------
ಬಸವಣ್ಣ
ಭಕ್ತನೆಂಬವ ಸೂತಕಿ, ಲಿಂಗೈಕ್ಯನೆಂಬವ ವ್ರತಗೇಡಿ. ಶರಣಸತಿ ಲಿಂಗಪತಿ ಎಂಬ ಶಬ್ದ ಸರ್ವಗುಣಸಾಹಿತ್ಯ ಎಂಬಾತ ಕರ್ಮೇಂದ್ರಿಯ ಭೋಗಕ್ಕೆ ಬಾರದ ಭೋಗಿ, ಗುಹೇಶ್ವರಾ ನಿಮ್ಮ ಶರಣ, ಆವ ಭೀತನೂ ಅಲ್ಲ ಆವ ಕರ್ಮಿಯೂ ಅಲ್ಲ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->