ಅಥವಾ

ಒಟ್ಟು 42 ಕಡೆಗಳಲ್ಲಿ , 24 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂಬೆನೇನೆಂಬೆನಯ್ಯ? ಮತಿಗೆಟ್ಟು ಮಾನವಲೋಕಕ್ಕೆ ಬಂದೆ. ಬಂದ ಬರವಿನಲ್ಲಿಯೆ ಭವವೆಂಬ ಭೂಪತಿ ಎನ್ನ ಸೆರೆವಿಡಿದು ಕಾಲ-ಕಾಮರ ವಶಕ್ಕೆ ಕೊಟ್ಟನಯ್ಯ. ಕಾಲಂಗೆ ಕಾಯುವ ದಂಡವ ತೆತ್ತದ್ದು ಲೆಕ್ಕವಿಲ್ಲ. ಮನಸಿಜಂಗೆ ಮನವ ದಂಡವಿತ್ತುದ್ದು ಲೆಕ್ಕವಿಲ್ಲ. ಹೋದಹೆನೆಂದರೆ ಒಳಕಾವಲವರು, ಹೊರಕಾವಲವರು ಹೊಗಲೀಸರು. ನನ್ನ ಸೆರೆಯಲ್ಲಿ ನಾನು ಬಿಡಿಸಿಕೊಂಡು ಹೋದಹೆನೆಂದರೆ ನಾನು ದರಿದ್ರನಯ್ಯ. ಎನ್ನ ಸೆರೆಯ ಬಿಡಿಸಿಕೊಳ್ಳಿರಯ್ಯ ಬಸವಾದಿ ಪ್ರಮಥರೇ. ನಿಮ್ಮ ಸೆರಗೊಡ್ಡಿ ಬೇಡಿಕೊಂಬೆನಯ್ಯ. ಭಕ್ತಿಗೆ ಭಂಡಾರವಾಗಿಪ್ಪ ಸಂಗನ ಬಸವಣ್ಣ, ಎನಗೆ ಹಾಗತೂಕ ಭಕ್ತಿಯ ಕೊಡಯ್ಯ. ಪ್ರಸಾದವೆ ಚಿತ್ಪಿಂಡಸ್ವರೂಪವಾದ ಚೆನ್ನಬಸವಣ್ಣ, ಎನಗೆ ಹಾಗತೂಕ ಜ್ಞಾನವ ಕೊಡಯ್ಯ. ಮಾಯಾಕೋಲಾಹಲನಪ್ಪ ಅಲ್ಲಮಪ್ರಭುವೇ, ಎನಗೆ ಹಾಗತೂಕ ವೈರಾಗ್ಯವ ಕೊಡಯ್ಯ. ಬೆಟ್ಟದ ಗುಂಡತಂದು ಇಷ್ಟಲಿಂಗದಲ್ಲಿ ಐಕ್ಯವ ಮಾಡಿದ ಘಟ್ಟಿವಾಳಲಿಂಗವೇ, ಎನಗೆ ಹಾಗತೂಕ ಲಿಂಗವ ಕೊಡಯ್ಯ. ಈ ನಾಲ್ಕು ಹಾಗ ಕೂಡಿದಲ್ಲಿಯೆ ಮನಲಿಂಗದಲ್ಲಿ ಒಂದು ಹಣಮಪ್ಪುದು. ಮನಲಿಂಗದಲ್ಲಿ ಒಂದು ಹಣವಾದಲ್ಲಿಯೇ ಆ ಚಂದ್ರಾಯುಧ ದೊರಕೊಂಬುದು. ಎನಗೆ ಚಂದ್ರಾಯುಧವಂ ಪಿಡಿದು, ಒಳಕಾವಲ ನಾಲ್ವರ ಕೊರಳ ಕೊಯ್ದು, ಹೊರಕಾವಲೈವರ ಹರಿಹಂಚುಮಾಡಿ ಕೂಟದ ಕಾವಲವರ ಪಾಟಿಮಾಡದೆ, ಭವದ ಬಳ್ಳಿಯ ಕೊಯ್ದು, ಕಾಲ ಕಾಮರ ಕಣ್ಣ ಕಳೆದು, ಎಡಬಲದ ಹಾದಿಯ ಹೊದ್ದದೆ, ನಡುವಣ ಸಣ್ಣ ಬಟ್ಟೆಗೊಂಡು, ರತ್ನಾಚಲವನೇರಿ, ಅಲ್ಲಿಪ್ಪ ಲಿಂಗಮಂ ಬಲಗೊಂಡು, ನೀವಿದ್ದ ಉನ್ಮನಿಯ ಪುರಕ್ಕೆ ಬಂದು, ನಿಮ್ಮ ಪಡುಗ ಪಾದರಕ್ಷೆಯಿಂ ಪಿಡಿದು, ನಿಮ್ಮ ಬಾಗಿಲ ಕಾಯ್ದಿಪ್ಪುದೇ ಎನಗೆ ಭಾಷೆ. ಎನ್ನ ಬಿನ್ನಪವ ನೀವು ಮನವೊಲಿದು ಕರುಣಿಪುದಯ್ಯ ಇದಕೆ ನೀವೇ ಸಾಕ್ಷಿಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಘನಲಿಂಗಿದೇವ
ಏಕಜಲ ಬಹುಜಲವಾದ ಕ್ರಮವನರಿವುದು. ಅದಕ್ಕೆ ದೃಷ್ಟ; ಅನಾದಿಯ ಪ್ರಣವನರಿಯದೆ, ಹಾದಿಯ ಕಲ್ಲ ಪೂಜಿಸಿದರಯ್ಯಾ, ಸಂಸಾರಕ್ಕೆ ಬೋಧೆಗೆ ಸಿಕ್ಕಿರೆ ಅನಾಗತಸಿದ್ಧಿಯ ಹೋದ ಹೊಲಬನರಿಯದೆ ಕೆಟ್ಟರಯ್ಯಾ. ಅಂಧಕಂಗೆ ಚಂದಾದ ಮುಖವುಂಟೆ? ಶೃಂಗಾರ ಪಂಗುಳಂಗೆ ಯೋಜನದ ಸುದ್ದಿಯಿಲ್ಲ. ಲಿಂಗವನರಿಯದಂಗೆ ಜಗದ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಾದಿಗೆ ಜೂಜನಾಡುವಾತನೊಬ್ಬ ಪಾತಕ. ಪರರ ಹಾದಿಯ ಹೋಗುವಾತನೊಬ್ಬ ಪಾತಕ. ಪಶುವಧೆಯ ಮಾಡುವಾತನೊಬ್ಬ ಪಾತಕ. ಇವರು ಮೂವರು ಹೋದ ಹಾದಿಯಲ್ಲಿ ಹೋಗಲಾಗದು. ಅದೇನು ಕಾರಣವೆಂದರೆ, ಅವರು ಚಂದ್ರ ಸೂರ್ಯರುಳ್ಳನ್ನಕ್ಕ ನರಕದಲ್ಲಿಪ್ಪುದು ತಪ್ಪದು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹಾದರವನಾಡುವನೆ ಸದ್ಭಕ್ತ? ಹಾದಿಯ ಕಟ್ಟುವನೆ ನಿಜಶರಣ? ಹಸುಗೊಲೆಯ ಕೊಲುವನೆ ಅಸುವಿನ ಕಲೆಯ ಬಲ್ಲವ? ಇಂತಿವರ ನೀ ಬಲ್ಲೆ, ನಾನರಿಯೆ ಕಾಮದಹನಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಹಾದಿಯ ಬೆಳ್ಳನ ಕಳ್ಳರು ತಾಕಿದಡೆ ಇನ್ನಾರಿಗೆ ಮೊರೆಗೊಡುವ? ತಾ ಸತ್ತ ಮತ್ತೆ ತನ್ನನರಿದವಂಗೆ ಇನ್ನಾರಿಗೂ ಮಿಥ್ಯವೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಶಿವಭಕ್ತರ ಹಾದಿಯ ಕಾಣದೆ, ಹರಗಣಂಗಳೆಲ್ಲಕ್ಕೆ ಪರಮಗುರುವಾಗಿ, ಪರಮಾರಾಧ್ಯರಾಗಿ ಸುಳಿದಿರಲ್ಲದೆ ನೀವು ಒಡಲುವಿಡಿದಿದ್ದರೆನ್ನಬಹುದೆ ? ಅದೇನು ಕಾರಣವೆಂದರೆ, ಎನ್ನ ಭವವ ಛೇದನೆಯ ಮಾಡಿದುದಕ್ಕೆ ಎನ್ನ ಮನಕ್ಕೆ ಮನವೇ ಸಾಕ್ಷಿ. ಮತ್ತೆ ಚೆನ್ನಮಲ್ಲೇಶ್ವರ ಸಾಕ್ಷಿ. ಮರವೆಯಿಂದ ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದವರು ಬ್ರಹ್ಮನಾದರೂ ಆಗಲಿ, ವಿಷ್ಣುವಾದರೂ ಆಗಲಿ, ರುದ್ರನಾದರೂ ಆಗಲಿ, ಶಿವನಾದರೂ ಆಗಲಿ, ಸದಾಶಿವನಾದರೂ ಆಗಲಿ, ಮಾಯೆವಿಡಿಸಿ ಕಾಡಿದಲ್ಲದೆ ಮಾಣದು. ಮಿಕ್ಕಿನವರ ಭವಕ್ಕೆ ಕಡೆ ಇಲ್ಲ . ಎನ್ನ ಪರಮಾರಾಧ್ಯರು ಚೆನ್ನಮಲ್ಲೇಶ್ವರ ಮಾಯೆಯ ಮಂಡೆಯ ಮೆಟ್ಟಿ, ಎನ್ನ ತನು ಮನ ಧನಕ್ಕೆ ಒಡೆಯನಾಗಿ ತನ್ಮಯನಾಗಿ ತಾನೇ ರೂಪಾದನಯ್ಯ. ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಆಶನ ವಸನಕ್ಕಾಗಿ ಒಂದು ಪಶುವು ಹುಟ್ಟಿತ್ತು. ತನ್ನ ಸುಖವನರಿಯಲಾಗಿ, ತನಗೊಂದು ಶಿಶು ಹುಟ್ಟಿತ್ತು. ಆ ಶಿಶುವಿನ ಮೇಲಣ ಮೋಹದಿಂದ, ಮೊಲೆಯಲ್ಲಿ ಅಮೃತ ಹುಟ್ಟಿತ್ತು. ಅಮೃತವ ಸೇವಿಸಿ, ಆ ಶಿಶುವು ನಲಿದಾಡುವುದ ಕಂಡು, ನಾನದರ ಬೆಂಬಳಿವಿಡಿದು ಹೋಗಿ, ಅದು ಕೊಂಬ ಅಮೃತವ ನಾ ಕೊಳ್ಳಲಾಗಿ, ಪರಮಸುಖಪರಿಣಾಮ ತಲೆದೋರಿತ್ತು . ಅದರ ನೆಲೆವಿಡಿದು, ತಲೆಹೊಲನನೇರಿ ನೋಡಲಾಗಿ, ಉಲುಹು ಅಡಗಿತ್ತು . ಪುರುದಗಲಕೆ ನಿಂದಿತ್ತು. ಇಳಿದುಬರುವುದಕ್ಕೆ ಹಾದಿಯ ಕಾಣದೆ, ಅದರಲ್ಲಿಯೇ ನಿರ್ಮುಕ್ತನಾದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ ,
--------------
ಹಡಪದ ಅಪ್ಪಣ್ಣ
ಎಲಾ ಬ್ರಾಹ್ಮಣಾ ನೀ ಕೇಳು : ಬರಿದೆ 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವಿರಲ್ಲದೆ, ಬ್ರಹ್ಮದ ನೆಲೆಯ ಬಲ್ಲಿರೇನಯ್ಯಾ? ಅದು ಎಂತೆಂದಡೆ : ವೇದಮಯವಾಗಿರ್ಪುದೇ ಬ್ರಹ್ಮ; ಬ್ರಹ್ಮಮಯವಾಗಿರ್ಪುದೇ ವೇದ. ಇಂತೀ ಚತುರ್ವೇದ ಪ್ರಕರಣಮಂ ಓದಿ ಹಾದಿಯಂ ತಪ್ಪಿ ಬೀದಿಯ ಸೂಳೆ[ಯ] ಹಿಂದೆ ತಿರುಗಿದ ಬಳಿಕ ನಿನಗೆ ಬ್ರಹ್ಮತ್ವವು ಎಲೈತೆಲಾ? ಬ್ರಹ್ಮತ್ವವು ದಾವುದೆಂದಡೆ ಪೇಳುವೆನು ಕೇಳೆಲಾ: ವೇದದೊಳಗಣ ತತ್ತ್ವಸಾರವನು ತೆಗೆದು, ಗುರುಪಥವು ಅನುಸರಣೆಯಾಗಿ, ನಿಜಮಾರ್ಗವ ಕಂಡು ನಿತ್ಯತ್ವ ನೀನಾಗಿ, ನಿರುಪಮ ನಿರ್ಮಾಯ ನಿರ್ವೇದ ವಸ್ತುವ ತಿಳಿದು, ಸಾಧುಸಜ್ಜನರೊಡನಾಡಿ ಸಾಕ್ಷಾತ್ಕಾರವಾಗಿ, ಸಾಯುಜ್ಯ ಸಾಮಿಪ್ಯ ಪಥಮಂ ಕಂಡುಳಿದು, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಬ್ರಾಹ್ಮಣನೆಂದು ನಮೋ ಎಂಬುವೆನಯ್ಯಾ. ಬರಿದೆ ಬಡಿವಾರಕ್ಕೆ ಮಿಂದುಟ್ಟು 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ, ಕೂಡಲಾದಿ ಚೆನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
-->