ಅಥವಾ

ಒಟ್ಟು 45 ಕಡೆಗಳಲ್ಲಿ , 20 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ ಮಣಿಹ ಹಿಂಗಿತ್ತು. ಎದೆಯಲ್ಲಿದ್ದ ಲಿಂಗದ ಕುರುಹೇಕೆ ಅಡಗದು ? ಸಂದಣಿಸಿ ಸಂಶಯವ ಮಾಡುವ ನಿರಂಗದ ನಿಜವೇಕೆ ಉಡುಗದು ? ಹಾಗೆಂಬುದಕ್ಕೆ ಮುನ್ನವೆ ಕಾಯದ ಕುರುಹು ಶೂನ್ಯವಾಗಿ, ಭಾವ ಭಾವಿಸುವುದಕ್ಕೆ ಇಂಬಿಲ್ಲದೆ, ಉಭಯ ನಿರ್ಮಾಣ ನಿರಾಳವಾಯಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಗುರುಲಿಂಗಜಂಗಮದ ಪಾದೋದಕ ಪ್ರಸಾದಪ್ರೇಮಿಗಳೆಂದು, ನುಡಿದುಕೊಂಬ ನುಡಿಯಜಾಣರಲ್ಲದೆ, ಆ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಸೇವಿಸಿ ಭವಹಿಂಗಿಸಲರಿಯರು. ಅದೆಂತೆಂದಡೆ : ಶುದ್ಧಪ್ರಸಾದದಿಂದ ಮತ್ರ್ಯದ ಹಂಗು ಹಿಂಗಿತ್ತು. ಸಿದ್ಧಪ್ರಸಾದದಿಂದ ಸ್ವರ್ಗದ ಹಂಗು ಹಿಂಗಿತ್ತು. ಪ್ರಸಿದ್ಧಪ್ರಸಾದದಿಂದ ಪಾತಾಳದ ಹಂಗು ಹಿಂಗಿತ್ತು. ಮಹಾಪ್ರಸಾದದಿಂದ ಹದಿನಾಲ್ಕುಲೋಕದ ಹಂಗು ಹಿಂಗಿತ್ತು. ಇಂತೀ ಪ್ರಸಾದದ ಗ್ರಾಹಕದಿಂ ಗುರು-ಲಿಂಗ-ಜಂಗಮದ ಹಂಗು ಹಿಂಗಿ, ಸತಿಪತಿಯರು ಸತ್ತು ಅವರೆಲ್ಲಿರ್ದರು ಎಂಬುದನಾರೂ ಅರಿಯರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಜ್ಞಾನ ಹಿಂಗಿತ್ತು, ಅಹಂಕಾರವಡಗಿತ್ತು, ಅರಿಷಡ್ವರ್ಗಂಗಳು ಹರಿಹಂಚಾದವು, ಅಷ್ಟಮದಂಗಳು ಪಟ್ಟಪರಿಯಾದವು, ದಶವಾಯುಗಳು ವಶವರ್ತಿಯಾದವು, ಇಂದ್ರಿಯಂಗಳು ಬಂಧನವಡೆದವು, ಮನೋವಿಕಾರ ನಿಂದಿತ್ತು. ಕೂಡಲಸಂಗಮದೇವಾ, ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ ನಿರ್ವಾಣದ ಸಹಜ ನಿಲವ ಕಂಡು, ನಮೋ ನಮೋ ಎನುತಿರ್ದೆನಯ್ಯಾ, ಪ್ರಭುವೆ.
--------------
ಬಸವಣ್ಣ
ಭಕ್ತ ಮಾಹೇಶ್ವರ ಪ್ರಸಾದಿ ಈ ಮೂರು ಭಕ್ತನಂಗ. ಪ್ರಾಣಲಿಂಗಿ ಶರಣ ಐಕ್ಯ ಈ ಮೂರು ಜಂಗಮದಂಗ. ಮೂರಕ್ಕಾರು ಸತಿಪತಿಭೇದವನರಿವುದು. ಆ ಆರರ ಒದಗು ಇಪ್ಪತ್ತೈದರ ಬೀಜ. ಈ ಭೇದವನರಿದ ಮತ್ತೆ ನೂರೊಂದು ಆರರಲ್ಲಿ ಅಡಗಿ, ಆ ಆರು ಐದರಲ್ಲಿ ನಿಂದು, ಐದು ಮೂರರಲ್ಲಿ ನಿಂದು ಭೇದಿಸಿ, ಮೂರು ಒಂದರಲ್ಲಿ ನಿಂದು ಸಂದೇಹವಳಿಯಿತ್ತು. ಇಂತು ಎನ್ನ ಭ್ರಮೆ ಹಿಂಗಿತ್ತು. ಇಂತಿವರ ನಾನಾ ಸ್ಥಳ ಕುಳಂಗಳೆಲ್ಲವು ಆದಿಗತೀತವಾದ ಮತ್ತೆ ಭಾವದ ಗುರುವೆನಲೇಕೆ ? ಅವತಾರದ ಲಿಂಗವೆನಲೇಕೆ ? ಅರಿದು ಮರೆದವ ಜಂಗಮವೆನಲೇಕೆ ? ಇಂತಿವ ಕಂಡೂ ಕಾಣದ, ನಂಬಿಯೂ ನಂಬದ ಸಂದೇಹಿಗೇಕೆ, ಗುರು ಲಿಂಗ ಜಂಗಮ ? ಪ್ರಥಮ ಕ್ರಿಯೆಯಲ್ಲಿ ಮೋಸ, ಜ್ಞಾನಕ್ಕೆ ಲಾಭವೆ ? ಇದು ದೃಷ್ಟದ ದರ್ಪಣದ ಒಳಹೊರಗಿನಂತೆ ತಿಳಿದು ನೋಡೆ, ಉಭಯಸ್ಥಲವೈಕ್ಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->