ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗ ಪ್ರಾಣ ಸಂಗವುಳ್ಳನ್ನಕ್ಕ, ಲಿಂಗಪೂಜೆಯೆಂಬ ದಂದುಗ ಬಿಡದು. ಈ ಹೊರಗು ಒಳಗಾಗಿಯಲ್ಲದೆ, ಪ್ರಾಣಲಿಂಗಿಯೆಂಬ ಸಂಬಂದ್ಥಿಯಲ್ಲ. ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ ಉಭಯಸಂಬಂಧವಾದಲ್ಲಿ, ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ ರೂಪೋ, ವಿರೂಪೋ ? ಎಂಬುದ ತಾನರಿತಲ್ಲಿ, ಅಂಗ ಅರಿಯಿತ್ತೋ, ಆತ್ಮ ಅರಿಯಿತ್ತೋ ? ಇಂತೀ ಉಭಯದ ಸಂದಣಿಯಲ್ಲಿ ಗೊಂದಳಗೊಳಲಾರದೆ, ಆರಾರೆಂದಂತೆ ಆರೈಕೆಯಲ್ಲಿದ್ದು ; ತಾನು ತಾನಾದವಂಗೆ ಮತ್ತೇನೂ ಎನಲಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂದು ಸಂದೇಹಗೊಂಬುದು ಅರಿವೋ, ಆತ್ಮನೋ ? ಅಂಗಕ್ಕೆ ಅರಿವೆಂಬುದೊಂದು ಜೀವ, ಜೀವಕ್ಕೆ ಕೊಡುವುದೊಂದು ಬೆಳಗು. ತನ್ನಲ್ಲಿ ತೋರುವ ಘಟಬಿಂಬದ bs್ಞಯೆ ಹಲವು ತೆರನಾದಂತೆ, ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ ಹೆಚ್ಚು ಕುಂದಿಲ್ಲದೆ ತೋರುವ ತೋರಿಕೆ, ಘಟದ ಗುಣವೋ, ಬಿಂಬದ ಗುಣವೋ ? ಎಂಬುದ ತಾನರಿತಲ್ಲಿ, ಉಭಯದ ಸೂತಕಕ್ಕೆ ಹೊರಗು. ಹೊರಗೆಂಬ ಭಾವವ ಅರಿದಲ್ಲಿ, ಕಾಮಧೂಮ ಧೂಳೇಶ್ವರನೆಲ್ಲಿಯೂ ತಾನೆ.
--------------
ಮಾದಾರ ಧೂಳಯ್ಯ
ಅರಿದು ಚುಚ್ಚುವರೆಲ್ಲರೂ ದನದಟ್ಟೆ. ಮರೆದು ಚುಚ್ಚುವರೆಲ್ಲರೂ ದನದಟ್ಟೆ. ನಾ ಚುಚ್ಚುವುದೆಲ್ಲ ಸತ್ತ ಜೀವದನದಟ್ಟೆ. ಅಟ್ಟೆಯ ಕೊಯ್ದು ಮೆಟ್ಟಿಸಿದ ಸತ್ಯರಿಗೆಲ್ಲಕ್ಕೂ ಎನಗೆ ಬಟ್ಟಬಯಲ ತೋರಬೇಕೆಂದು. ನಿಮ್ಮ ಬಟ್ಟೆಯಲ್ಲಿ ನೀವೆ ಹೋಗಿ, ಎನ್ನ ಬಟ್ಟೆ ಕಾಮಧೂಮ ಧೂಳೇಶ್ವರನ ಬಟ್ಟೆಯೇ ಸಾಕು.
--------------
ಮಾದಾರ ಧೂಳಯ್ಯ
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ, ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು. ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ. ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ? ಕಾಷ*ವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ*ಕ್ಕೆ, ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ. ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ. ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಅಣುವಿಂಗಣು, ಮಹತ್ತಿಂಗೆ ಮಹತ್ತಪ್ಪ ಘನವನರಿತಲ್ಲಿ, ಮಣಿಮಾಲೆಯ ತಿರುಹಿ ತೊಳಲಲೇತಕ್ಕೆ ? ಅತ್ಯತಿಷ*ದ್ದಶಾಂಗುಲ ವಸ್ತುವಿಪ್ಪ ನೆಲೆಯನರಿತ ಮತ್ತೆ, ಹತ್ತಿಹಿತ್ತು ಹಾವಸೆಯೆಂದು ಒರಸಲೇತಕ್ಕೆ ? ಉತ್ತರಕಕ್ಷೆಯ ತಿಳಿದು, ಪೂರ್ವಕಕ್ಷೆಯನರಿತು, ಹೆಚ್ಚುಕುಂದೆಂಬ ಭಾವ ಅಚ್ಚೊತ್ತಿದಂತೆ ನಿಂದ ಮತ್ತೆ, ಕರ್ತೃ ಭೃತ್ಯತ್ವವೆಂಬ ಉಭಯದ ಸೂತಕ ಅಳಿದಲ್ಲಿಯೆ, ಕಾಮಧೂಮ ಧೂಳೇಶ್ವರನೆಂದೆನಲಿಲ್ಲ.
--------------
ಮಾದಾರ ಧೂಳಯ್ಯ
ಅರಿದು ಮರೆದು ಎಚ್ಚತ್ತೆನೆಂಬಲ್ಲಿ ಅರಿವುಂಟೆ ? ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು ಕೆಡುವಲ್ಲಿ, ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ ? ಇಂತಿವ ಹಿಡಿವಲ್ಲಿ, ಬಿಡುವಲ್ಲಿ, ಮಿಕ್ಕಾದವ ಒಡಗೂಡುವಲ್ಲಿ, ಅಡಿಯೇರಿದ ಮತ್ತೆ ಪುನರಪಿ ಅಡಿ ಉಂಟೆ ? ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ ? ನಿಶ್ಚಯವೆಂಬುದು ನಷ್ಟವಾದಲ್ಲಿ, ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ ?
--------------
ಮಾದಾರ ಧೂಳಯ್ಯ
ಅಪ್ಪು ಉಳ್ಳನ್ನಕ್ಕ ತೊಪ್ಪೆ ಕಿಚ್ಚಿಗೊಳಗಪ್ಪುದೆ ? ಅಪ್ಪುವಾರಿ, ಕಿಚ್ಚು ಮುಟ್ಟಿದ ಮತ್ತೆ ತೊಪ್ಪೆಯೆಂಬ ನಾಮ ಎತ್ತಹೋಯಿತ್ತು ? ಈ ಕಷ್ಟವ ಮುಟ್ಟಿದ್ದ ತನು, ದೃಷ್ಟವ ಕಂಡಿದ್ದ ಚಿತ್ತ, ಈ ಉಭಯದ ಗೊತ್ತ ಕಂಡು, ಈ ಗುಣ ಮುಕ್ತಿಯಹ ಭೇದವೆಂದು ಅರಿದ ಮತ್ತೆ, ಕಟ್ಟಿ ಬಿಟ್ಟು ನೋಡಿ, ವಸ್ತುವ ಕಂಡೆಹೆನೆಂಬುದು ಎತ್ತಣ ಶುದ್ಧಿ ಹೇಳಾ, ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಅರಿದೆಹೆ ಅರುಹಿಸಿಕೊಂಡೆಹೆನೆಂಬ ಉಭಯವುಳ್ಳನ್ನಕ್ಕ, ಆ ಗುಣ ಅರಿವೋ, ಮರವೆಯೋ ಎಂಬುದ ತಿಳಿವುದು ಅದೇನು ಹೇಳಾ ? ಕ್ರೀ ಉಳ್ಳನ್ನಕ್ಕ ನಿಃಕ್ರೀ ಕುರುಹುಗೊಂಡಿತ್ತು. ಅರಿವುಳ್ಳನ್ನಕ್ಕ ಅಜ್ಞಾನ ಒಡಲುಗೊಂಡಿತ್ತು. ತಮವುಳ್ಳನ್ನಕ್ಕ ಆ ಬೆಳಗು ತಮಕ್ಕೊಳಗಾಯಿತ್ತು. ಅದೆಂತೆಂದಡೆ: ವಾಯುವ ಬೆಂಬಳಿಯಲ್ಲಿ ಗಂಧಸ್ವರೂಪವಾದಂತೆ, ಆವಾವ ಕುಸುಮದ ಗಂಧವ ವಾಯು ತಾ ಬೆರೆದಲ್ಲಿ, ಬಂಧವಿಲ್ಲದ ತೆರದಂತೆ. ಅರಿವುದು, ಅರುಹಿಸಿಕೊಂಬುದು ಎರಡಳಿದಲ್ಲಿ, ಕುರುಹೆಂದು ಪ್ರಮಾಣಿಸುವುದಕ್ಕೆ, ಅರಿವೆಂದು ಕೂಡುವುದಕ್ಕೆ, ಆ ಉಭಯದ ಎಡೆಯ ಹೇಳಾ. ಕ್ರೀಯಿಂದ ಕಾಬ ಮುಕ್ತಿ, ಜ್ಞಾನದಿಂದ ಕಾಬ ನಿರವಯ. ಆ ಗುಣ, ಶುಕ್ತಿಯಲ್ಲಿ ಅಡಗಿಪ್ಪ ಅಪ್ಪುವಿನಂತೆ, ಒಪ್ಪಕ್ಕೆ ತಾನಾಗಿ ಕುಕ್ಕಿದಡೆ, ಅಪ್ಪುವೆಂಬ ನಾಮಕ್ಕೆ ಸಿಕ್ಕಿಲ್ಲದೆ ನಿಶ್ಚಯವಾದುದು. ನೀರು ಸಾರ ಕೂಡಿದಲ್ಲಿ, ಏರ ಕಾಸಲಿಕ್ಕೆ ನೀರರತು ಸಾರ ಉಳಿದಂತೆ, ಸಾರ ನೀರಿಂದ ಕುರುಹುಗೊಂಡಿತ್ತು. ಆ ನೀರೆ ಸಾರವಾದಲ್ಲಿ, ಕೂಡಿ ಸವಿಯೆಂಬ ನಾಮವಾಯಿತ್ತು. ಸವಿ ಸಾರ ಕೂಡಿ ಅಂಗದ ಮೇಲೆ ರೂಪವಾಯಿತ್ತು. ನುಂಗಿದ ಮತ್ತೆ ಸವಿಸಾರ ಒಂದೂ ಇಲ್ಲ. ಅಂಗವೆಂಬನ್ನಕ್ಕ ಲಿಂಗ, ಲಿಂಗವೆಂಬನ್ನಕ್ಕ ಅಂಗ. ಉಭಯದ ಸಂಗವ ಜಡನೆಂದು ನುಂಗಿದ ಮತ್ತೆ, ಆತ್ಮಂಗೆ ಬಂಧ ಮೋಕ್ಷವೆಂಬುದೊಂದೂ ಇಲ್ಲ. ಕಾಮಧೂಮ ಧೂಳೇಶ್ವರನೆಂದು ಎನಲಿಲ್ಲ.
--------------
ಮಾದಾರ ಧೂಳಯ್ಯ
ಅಲಗು ಮೊನೆಧಾರೆ ಕಟ್ಟುಳ್ಳವ ರಣಕ್ಕಂಜುವನೆ ? ಮಲತ್ರಯದೂರ ಹಲವ ಕೆಲವರ ಒಲವರಕ್ಕೆ ಸಿಕ್ಕುವನೆ ? ವಿರಳವೆಂಬುದ ಕಂಡು, ಅವಿರಳವೆಂಬುದನರಿತು, ಶ್ರುತದೃಷ್ಟ ಅನುಮಾನಂಗಳ ಕಳೆದುಳಿದ ಮತ್ತೆ, ಅರ್ಚಿಸಿ, ಪೂಜಿಸಿ ಕಂಡೆಹೆನೆಂಬುದು ಇತ್ತಲೆ ಉಳಿಯಿತ್ತು, ಕಾಮಧೂಮ ಧೂಳೇಶ್ವರನತ್ತಲೈದಾನೆ.
--------------
ಮಾದಾರ ಧೂಳಯ್ಯ
ಅಂಗದಲ್ಲಿ ಸೋಂಕಿದ ಸೋಂಕ ಲಿಂಗವೆಂದು ಪ್ರಮಾಣಿಸಿ ಕೊಟ್ಟೆಹೆನೆಂಬುದು, ಆ ಅಂಗ ಲಿಂಗದಂಗವೋ ? ಲಿಂಗ ಅಂಗದಂಗವೋ ? ಉಭಯದಂಗ ಬೇರೊಂದು ಆತ್ಮನ ಸಂಗವೋ ? ಅದು ವಾರಿಯ ಶಿಲೆಯಂತೆ, ನೋಡನೋಡಲಿಕ್ಕೆ ನೀರಾಯಿತ್ತು. ನೀರು ಕಲ್ಲಾದ ಭೇದ, ಕಲ್ಲು ನೀರಾದ ಭೇದ. ಈ ಉಭಯದಲ್ಲಿಯೆ ದೃಷ್ಟ ನಿರ್ಲೇಪ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅರಿದು ಕಂಡೆಹೆನೆಂಬನ್ನಬರ, ಅರಿವಿಂಗೆ ಮುನ್ನವೆ ಪರಿಪೂರ್ಣವಸ್ತು. ಬೇರೊಂದ ಕುರುಹಿನಿಂದ ಅರಿದೆಹೆನೆಂದಡೆ, ಆ ಅರಿವಿನಿಂದ ಕುರುಹಿನ ಕುಲ ಹರಿಯಬೇಕು. ಉತ್ತರ ಪೂರ್ವವೆಂಬ ಉಭಯದ ರಕ್ಷೆಯ ಸೂತಕ ಹರಿದು, ನಿಶ್ಚಯವಾದ ಪರಿಪೂರ್ಣಂಗೆ ಹೆಚ್ಚು ಕುಂದೆಂಬುದಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವನ ಮುಂದೆ ? ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು. ನೀ ಹೊತ್ತ ಬಹುರೂಪ[ದಿ] ತಪ್ಪದೆ ರಜತಬೆಟ್ಟದ ಮೇಲಕ್ಕೆ ಹೋಗು, ನಿನ್ನ ಭಕ್ತರ ಮುಕ್ತಿಯ ಮಾಡು. ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುಕು.
--------------
ಮಾದಾರ ಧೂಳಯ್ಯ
ಅಂಗಲಿಂಗವೆಂಬನ್ನಕ್ಕರ ಕಾಯದ ಸೂತಕ. ಪ್ರಾಣಲಿಂಗವೆಂಬನ್ನಕ್ಕರ ಅರಸುವುದೆ ಜನನಸೂತಕ. ಮರೆವುದೆ ಮರಣಸೂತಕ. ಸೂತಕವ ಹಿಂಗಿ ಅಜಾತನಾಗಬಲ್ಲಡೆ, ಆತಂಗೆ ಏತರ ಬಂಧವೂ ಇಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅರಿವು ಅರಿದಲ್ಲದೆ ಲಿಂಗವೆಂಬ ರೂಪಿಲ್ಲ. ಅರಿವು ಅರಿದಲ್ಲದೆ ಜೀವಭಾವ ಹಿಂಗದು. ಅರಿವೆಂಬ ಸೂತಕ ಹೆರೆಹಿಂಗುವನ್ನಬರ, ನಾ ನೀನೆಂಬನ್ನಕ್ಕ ಒಡಲು. ಅದೇನು ಕಾರಣ ಹೇಳಾ , ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಗ್ನಿಯ ದೃಷ್ಟಿಯಂತೆ, ವಾಯುವಿನ ಆತ್ಮನಂತೆ, ಬೆಳಗಿನ ಕಳೆಯಂತೆ, ಕಳೆಯ ಕಾಂತಿಯಂತೆ, ಕಾಂತಿಯ ಬೆಳಗಿನಂತೆ, ಆ ಬೆಳಗಿನ ಬಳುವಳಿಯ ಸುಳುಹಿನಲ್ಲಿ ಒಳಗಾಯಿತ್ತು, ನಿಜಾತ್ಮನ ನಿರ್ಲೇಪಭಾವ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ