ಅಥವಾ

ಒಟ್ಟು 54 ಕಡೆಗಳಲ್ಲಿ , 24 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಲಿಂಗವ ಪರಲಿಂಗವ ಮಾಡಿ ಇಷ್ಟಲಿಂಗವ ಪೂಜಿಸುವರ ಕಷ್ಟವ ನೋಡಾ! ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ? ಬಯಲಾಸೆ ಹಾಸ್ಯವಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲದ ಕಾರಣ!
--------------
ಘಟ್ಟಿವಾಳಯ್ಯ
ಭಕ್ತರೆಂಬವರೆಲ್ಲರೂ ಲೆಕ್ಕಕ್ಕೆ ಹಾಯ್ದು, ದೃಷ್ಟವಪ್ಪ ಜಂಗಮದ ಕೈಯಲೂ ಕಷ್ಟತನವಹ ಊಳಿಗವ ಕೊಂಡು, ಮತ್ತೆ ಜಂಗಮವೆಂದು ಪ್ರಸಾದವನಿಕ್ಕಿಸಿಕೊಂಡುಂಬ ಸಿಕ್ಕಿಸುಗಾರರ ನೋಡಾ. ಇಂತೀ ಹೊಟ್ಟೆಯ ಹೊರೆವ ಜಂಗಮಕ್ಕೆಯೂ ಠಕ್ಕಿಂದ ಮಾಡುವ ಭಕ್ತಂಗೆಯೂ ಹುಚ್ಚುಗೊಂಡ ನಾಯಿ ಒಡೆಯನ ತಿಂದು, ಅದರಲ್ಲಿ ಮಿಕ್ಕುದ ನರಿ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚೊಚ್ಚಿಲ ಕೂಸು ಹೆತ್ತತಾಯ ಮೊಲೆಯನುಂಬಾಗ, ಕತ್ತೆಯ ಮರಿ ಕೊರಳ ಕಚ್ಚಿತ್ತು, ಕತ್ತೆಯ ಮರಿಯ ಚೊಚ್ಚಿಲ ಕೂಸ, ಮೊಲೆಯ ತೊಟ್ಟು ನುಂಗಿತ್ತು. ಮೊಲೆಯ ಹೊತ್ತಿದವಳ ಹೊಟ್ಟೆಯ ಸುಳಿ ನುಂಗಿತ್ತು. ಈ ಬಟ್ಟೆಯ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನಾಥನಾದ
--------------
ವಚನಭಂಡಾರಿ ಶಾಂತರಸ
ನಾಯಿಗೆ ಕಾಲು ಕೊಟ್ಟು, ತೋಳಗೆ ಹೊಟ್ಟೆಯ ಕೊಟ್ಟು, ಹುಲಿಗೆ ತಲೆಯ ಕೊಟ್ಟು, ಮೆಲಿಸಿಕೊಂಬವರೆಲ್ಲಕ್ಕು ಬಲವಂತತನವೆ ? ಅದರ ಸಲೆ ಬಲುಮೆ, ಅರ್ಕೇಶ್ವರಲಿಂಗವನರಿತವರಿಗಲ್ಲದೆ ಆಗದು.
--------------
ಮಧುವಯ್ಯ
ಹರಿವ ಹರಕುಳಿಯಲ್ಲಿ ಕೈಯನಿಕ್ಕಿ ನೋಡಿ ಅಡಗಿದ್ದ ಆವೆಯ ಹಿಡಿದೆ. ಒಂದು ಬಿಗಿದ ಬಿಲವ ಕಂಡು ಏಗೆಯ್ದು ಕೈಯನಿಕ್ಕಿ ನೋಡಿ ಸಾಗಿಸಿ ಹಿಡಿದೆ, ಉಭಯರಳಗೈಯಣ್ಣನ. ಇಂತೀ ಸರುಹಿನ ತಪ್ಪಲಲ್ಲಿ ನೆಪ್ಪ ನೋಡುತ್ತ ಹೋಗುತ್ತಿರಲಾಗಿ ಮುಂದೆ ಒಂದು ಕಟ್ಟೆ ಕಟ್ಟಿದುದು ಕಂಡೆ. ಆ ಕಟ್ಟೆಯೊಳಗೆ ನೀರತಡಿಯಲ್ಲಿ ಕಪೋತ, ಮಧ್ಯದಲ್ಲಿ ಪೀತ, ಕಡೆಯಲ್ಲಿ ಶ್ವೇತವಾಗಿದ್ದಿತು. ಈ ತ್ರಿವಿಧದ ನೀರ ಹೊಳದು ನೋಡುತ್ತಿರಲಾಗಿ ಎನ್ನ ಕಣ್ಣಿನ ಹೊಳಹುಗೂಡಿ ಹೊಳೆಯಿತ್ತೊಂದು ಮತ್ಸ ್ಯ. ಆ ಹೊಳಹಿನ ಬೆಂಬಳಿಯಲ್ಲಿ ತಿಳಿದು ಕಂಡೆಹೆನೆಂದಡೆ ಉದಕವನೊಡಗೂಡಿದ ವರ್ಣ, ವರ್ಣವನೊಡಗೂಡಿದ ಮತ್ಸ ್ಯ ನೋಡಾ. ಅದು ಎನಗೆ ಅಸಾಧ್ಯ, ಸಿಕ್ಕಿದವೆರಡೇ ಸಾಕು. ಆವೆಯ ಹೊಟ್ಟೆಯ ಕಳದು, ಏಡಿಯ ಕಾಲ ಮುರಿದು, ಇಷ್ಟೇ ಸಾಕೆಂದು ಬರುತ್ತಿರಲಾಗಿ, ಒಂದು ಉಡುವ ಕಂಡೆ. ದಡಿಯಲ್ಲಿ ಹೊಯ್ದೆ, ಆ ದಡಿ ಉಡುವಿನೊಳಡಗಿತ್ತು. ಆ ಉಡು ತ್ರಿವಿಧದ ತಡಿಯಲ್ಲಿ ಒಡಗೂಡಿತ್ತು. ಇದಕ್ಕೆ ಕಡೆ ನಡು ಮೊದಲ ಹೇಳಾ, ಕದಕತನ ಬೇಡ ಕದಂಬಲಿಂಗಾ.
--------------
ಗೋಣಿ ಮಾರಯ್ಯ
ಅಂಗವ ಬೆರಸದ ಲಿಂಗ ಪ್ರಾಣವ ಬೆರಸುವ ಪರಿಯೆಂತೊ? ಬೆನಕನ ತೋರಿ ಬೆಲ್ಲವ ಮೆಲುವಂತೆ ಇಷ್ಟಂಗವ ತೋರಿ ಹೊಟ್ಟೆಯ ಹೊರೆವರು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ದೂರ ನೀ ಹೊತ್ತೆ ; ಸೂರೆಯನಾರಿಕೆ ಕೊಂಡರು.
--------------
ಸಿದ್ಧರಾಮೇಶ್ವರ
ಭೂಮಿಯ ಮೇಲೆ ಹುಟ್ಟಿದ ಕಲ್ಲ ತಂದು ಭೂತದೇಹಿಗಳ ಕೈಯಲ್ಲಿ ಕೊಟ್ಟು ಕೊಟ್ಟ ಕೂಲಿಯ ತಕ್ಕೊಂಡು, ಹೊಟ್ಟೆಯ ಹೊರೆವ ಭ್ರಷ್ಟರಿಗೆ ಪ್ರಸಾದವೆಲ್ಲಿಯದೋ? `ನಾದಂ ಲಿಂಗಮಿತಿ ಜ್ಞೇಯಂ| ಬಿಂದು ಪೀಠಮುದಾಹೃತಂ|| ನಾದ ಬಿಂದುಯುತಂ ರೂಪಂ| ಲಿಂಗಾಕಾರಮಿಹೋಚ್ಯತೇ||' ಎಂದುದಾಗಿ ಇಷ್ಟಲಿಂಗದಾದಿಯನಿವರೆತ್ತ ಬಲ್ಲರು?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಯೆಯ ಕಾಲು ಬಾಯಿಗೆ ಸಿಕ್ಕಿಕೊಂಡು ತೊತ್ತಳದುಳಿಸಿಕೊಂಬ ಮರುಳುಮಾನವರ ಬಗೆಯ ನೋಡಯ್ಯ ಮನವೇ. ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು ಮುಂಡೆ ಹಾರುವಿತಿಯಂತೆ ಬೆಳುವಲ್ಲ ಮಾಡಿಕೊಂಡು ತೆಂಗ ಪೋಟಾಡುವಂತೆ ಕರಸ್ಥಳದಲ್ಲಿ ಲಿಂಗವ ಹಿಡಿದುಕೊಂಡು ಠವುಳಿಕಾರನಂತೆ ಮನವ ಕದ್ದು ಮಾತನಾಡುತ್ತ ಮನೆಮನೆಗೆ ಹೋಗಿ ಹೊಟ್ಟೆಯ ಕಿಚ್ಚೆಗೆ ಸಟೆಯ ಶಾಸ್ತ್ರವ ಹೇಳುವ ಡೊಂಬರಂತೆ ಪುಸ್ತಕವ ಹಿಡಿದುಕೊಂಡು ಪುರಜನವ ಮೆಚ್ಚಿಸುವ ಕೋಡಿಗರಂತೆ ವೇಷಮಂ ಹಲ್ಲುಣಿಸಿ ಕೊಂಡು ನಿಜ ವಿರಕ್ತರಂತೆ ದೇಶಮಧ್ಯದಲ್ಲಿ ಸುಳಿದು ವಿರಕ್ತರ ಕಂಡಲ್ಲಿ ಸಟೆಯ ಭಕ್ತಿಯ ಹೊಕ್ಕು ಹೂಸಕದುಪಚಾರಮಂ ನುಡಿದು ಮಾಡಿ ನೀಡುವ ಭಕ್ತರ ಮನೆಗೆ ಭಿಕ್ಷಮುಖದಿಂದ ಹೋಗಿ ನಚ್ಚು ಮಚ್ಚ ನುಡಿದು ಉಂಡುಕೊಂಡು ದಿನಕಾಲಮಂ ನೂಂಕಿ ಮನೋವಿಕಾರದಿಂದ ಪರಧನ ಪರಸ್ತ್ರೀಯರಿಗಳುಪಿ ಭವಿ ಭಕ್ತರೆನ್ನದೆ ಉಂಡುಟ್ಟಾಡಿ ತೀರ್ಥ ಪ್ರಸಾದವೆಂಬ ಅಳುಕಿಲ್ಲದೆ ಚೆಲ್ಲಾಡಿ ನಡೆಯಿಲ್ಲದ ನಡೆಯ ನಡೆದು ನುಡಿಯಿಲ್ಲದ ನುಡಿಯ ನುಡಿದು ತನ್ನ ಕಪಟವನರಿಯದೆ ಶಿವಶರಣರ ಮೇಲೆ [ಮಿಥ್ಯವನಾಡಿ] ಹಗೆಯಂ ಸಾಧಿಸಿ ಹಸಿಯ ಮಾದಿಗರಂತೆ ಹುಸಿಯ ನುಡಿದು ಶಿವಶರಣರ ಮೇಲೆ ಒಂದೊಂದ ನುಡಿಯ ಗಳಹುತಿಪ್ಪ ನರಕ ಜೀವರುಗಳಿಗೆ ಮಾಡಿದ ಪರಿಭವದ ರಾಟವಾಳವು ಗಿರುಕು ಗಿರುಕೆಂದು ತಿರುಗುತ್ತಲಿದೆಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುರುಕರಜಾತರಾಗಿ ಬಂದವರೆಂದು ಹರಿವಾಣತುಂಬಿ ಸೂಸುತ ನೀಡಿಸಿಕೊಂಡು, ತೋರಿಕೊಂಬ ಭೇದವನರಿಯದೆ ಕುಂಡಿತುಂಬಿದ ತೊಂಡುಪಶುವಿನಂತೆ ಕೈಬಾಯಿದುಡುಕಿ ತಿಂದು, ಸೂರ್ಯಾಡಿ ಸಮಯಾಚಾರಕ್ಕೆ ಛೀ ಛೀ ಎಂದು ಢೂಕ ಹಾಕುವರೆಂದು ಕೊಟ್ಟು ಕೊಟ್ಟುಂಬ ಸೊಟ್ಟನಡೆಯ ಭ್ರಷ್ಟ ಮೂಳ ಹೊಲೆಯರ ಹೊಟ್ಟೆಯ ತುಳಿದುಹಾಕುವರು ದುರ್ಗತಿಗೆ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಕಲಜನರು ಹೇಸಿದ ಉದಾನವ ಶ್ವಾನ ಭುಂಜಿಸಿ ತನ್ನ ಹೊಟ್ಟೆಯ ಹೊರೆವುದಲ್ಲದೆ. ತನ್ನ ತಾ ಹೇಸಿದ ಉದಾನವ ಮುಟ್ಟದು ನೋಡಾ. ಶ್ವಾನಗಿಂದವೂ ಕಡೆಯೆ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ, ಮರಳಿ ಭವಿಯ ಬೆರಸಿದಡೆ ಅವ ಭಕ್ತನಲ್ಲ, ಅವ ಶ್ವಾನನಿಂದ ಕರಕಷ್ಟ. ಇದು ನೀನೊಲಿದ ಶರಣಂಗಲ್ಲದೆ ಎಲ್ಲರಿಗೇಕಹುದು ಹೇಳಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹೊಟ್ಟೆಯ ಹೊರೆವ ಪಶು, ಕಟ್ಟಿ ಕೊಲ್ಲುವುದ ಬಲ್ಲುದೆ ? ಕಷ್ಟಜೀವಗಳ್ಳರು; ಕರ್ತುವಿನ ವೇಷವ ತೊಟ್ಟು ಕತ್ತೆಯಂತೆ ತಿರುಗುವ ಕಳ್ಳರನೊಲ್ಲ ಅಮುಗೇಶ್ವರಲಿಂಗವು.
--------------
ಅಮುಗೆ ರಾಯಮ್ಮ
ಭಕ್ತಿ ಮಂದಿರದಲ್ಲಿ ಪೂಜಿಸಿಕೊಂಬ ಜಂಗಮವ ನೋಡಾ, ಅಯ್ಯಾ. ಜಂಗಮವೆಂಬುದಕ್ಕೆ ನಾಚರಯ್ಯಾ. ಭಕ್ತರ ಮಂದಿರಕ್ಕೆ ಹೂ ಕಾಯಿ ಹಣ್ಣು ಹುಲ್ಲು ಹೊರೆ ಬೊಕ್ಕಸ ಪಹರಿ ಪಾಡಿತನ ಬಾಗಿಲು ಮುಂತಾಗಿ ಶುಶ್ರೂಷೆಯಂ ಮಾಡಿ ಉಂಬಾಗ, ಒಡೆಯರೆನಿಸಿಕೊಂಬ ತುಡುಗುಣಿಗೆಲ್ಲಿಯದೊ, ನಿಜಜಂಗಮಸ್ಥಲ ? ಹೊಟ್ಟೆಯ ಕಕ್ಕುಲತೆಗೆ ಕಷ್ಟಜೀವವ ಹೊರೆವ ಹೆಬ್ಬೊಟ್ಟೆಯ ಡೊಂಬರ ಕಂಡು, ಬಟ್ಟಬಯಲಾದೆಯಾ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಆದಿಯನರಿಯದೆ, ಅನಾದಿಯಿಂದತ್ತತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ; ಮಾಡಿದಡೆ ಫಲವೇನಯ್ಯಾ ಬಸವಯ್ಯಾ ? ಸಾವನ್ನಕ್ಕ ಸಾಧನೆಯ ಮಾಡಿದಡೆ, ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ ? ಬಾಳುವನ್ನಕ್ಕ ಭಜನೆಯ ಬಾಡಿದಡೆ ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ ?_ ಇದು ಕಾರಣ, ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ, ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು, ತಮ್ಮ ತಾವರಿಯದೆ ಕೆಟ್ಟರು. ತಲೆಯ ಕೊಯಿದು ದೇಹವ ಕಡಿದು, ಕಣ್ಣ ಕಳೆದು ಹೊಟ್ಟೆಯ ಸೀಳಿ, ಮಗನ ಕೊಂದು ಬಾಣಸವ ಮಾಡಿ, ವಾದಿಗೆ ಪುರಂಗಳನೊಯ್ದು, ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ ? ಅವರಿಗೆ ಶಿವಪಥವು ಸಾಧ್ಯವಾಯಿತ್ತೆ ? ಭವ ಹಿಂಗಿತ್ತೆ ? ಅದು ಸಹಜವೆ ?_ಅಲ್ಲಲ್ಲ ನಿಲ್ಲು ಮಾಣು. ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು, ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು, ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು, ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು, ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು, ಲಿಂಗವ ಹಿಡಿದವರೆಲ್ಲರು ಫಲ_ಪದಗಳೆಂಬ ಸಂಸಾರಕ್ಕೊಳಗಾದರು, ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ ? ಇದು ಕಾರಣ; ನಿತ್ಯ ನಿಜತತ್ವ ತಾನೆಂದರಿಯದೆ, `ತತ್ವಮಸಿ' ವಾಕ್ಯವ ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು, ಸತ್ತರಲ್ಲಾ ನಾಯಿ ಸಾವ ! ಸತ್ತವರ ಹೆಸರ ಪತ್ರವ ನೋಡಿದಡೆ (ಓದಿದಡೆ?) ಅದೆತ್ತಣ ಮುಕ್ತಿಯೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಈರೇಳುಭುವನ ವಳಯ ಮಧ್ಯದಲ್ಲಿ, ಹುಟ್ಟಿದುದೊಂದು ಚಿತ್ರ. ಅದನೇನ ಹೇಳುವೆ? ಕಣ್ಣಿಂಗೆ ರೂಪಿಲ್ಲ. ಕೈಗೆ ಹಿಡಿಯಿಲ್ಲ. ನೆನೆವುದಕ್ಕೆ ಗೋಚರವಾಗಿ ನಿಂದು ಸುಳಿಯಿತ್ತು ನೋಡಾ. ಆ ಸುಳುಹಿನ ಮರೆಯಲ್ಲಿ ಬಂದು ಹಿಡಿಯಲಾಗಿ, ಕೂಸು ಸತ್ತು, ಅತ್ತ ನೀರಿನಲ್ಲಿ ಮುಕ್ತಿಯೆಂಬವಳು ಹುಟ್ಟಿದಳು. ಮುಕ್ತಿಯ ಬಸುರಲ್ಲಿ ಸತ್ತವರೆಲ್ಲ ಐದಾರೆ. ಹೊತ್ತುಹೋರಿ ಕರೆಯಲಾಗಿ, ನಿಚ್ಚಟದ ಅಲಗ ಹಿಡಿದು ಕುತ್ತಿದರಯ್ಯಾ, ಹೊಟ್ಟೆಯ ಹುರಿಯ. ಕುತ್ತಿದ ಬಾಯಲ್ಲಿ ಕೂಳ ಸುರಿದು, ಅವರೆಲ್ಲ ಉಂಟಾದರು. ಅವರಿಗಿನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಸಂದಿ ಕೇರಿ ಗೊಂದಿ ಪಕ್ಷಿಯ ಕೋಡು ಕಿತ್ತು, ಕಣ್ಣು ಕಾಲು ಹಲ್ಲು ತೆಗೆದು, ರೆಕ್ಕೆಯ ಮುರಿದು, ಹೊಟ್ಟೆಯ ಬಿಟ್ಟು, ತಲೆಯ ಬೇಯಿಸಿ ಪಾಕವ ಮಾಡಿ, ಡೊಂಕಮೋರೆಯ ಹನುಮಗೆ ಕೊಟ್ಟು, ನಾನುಂಡು ಕಾಯಕವ ಮಾಡಿದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->