ಅಥವಾ

ಒಟ್ಟು 22 ಕಡೆಗಳಲ್ಲಿ , 14 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಟ್ಟುಬಿಟ್ಟ ಹಣ್ಣಾಗಿ ಎನಗೆ ನಿಜೈಕ್ಯದ ಬಟ್ಟೆ ನಿರುತವಾಯಿತಯ್ಯ. ಪರಿಭವಕ್ಕೆ ತರುವ ಪಂಚಭೂತಂಗಳೆಂಬ ವಾರಕವ ಪಂಚಬ್ರಹ್ಮಕ್ಕೊಪ್ಪಿಸಿದೆ. ಅಗಣಿತ ಕರಣಂಗಳನೊಳಕೊಂಡು ಸುಖವೊಂದು ದುಃಖಹದಿನಾರಕ್ಕೊಳಗು ಮಾಡುವ ಆತ್ಮನೆಂಬ ವಾರಕವ ಪರಬ್ರಹ್ಮಕ್ಕೊಪ್ಪಿಸಿದೆ. ಉತ್ಪತ್ತಿ ಸ್ಥಿತಿ ಪ್ರಳಯವೆಂಬ ವಾರಕವ ಮೂದೇವರಿಗೊಪ್ಪಿಸಿದೆ. ಇಂತಪ್ಪ ಋಣಂಗಳ ತಿದ್ದಿ ಸಿರಿವಂತನಾಗಿ ಭವರಾಜನ ಬಲವ ಗೆದ್ದೆ. ಭೂತಳದ ಭೋಗವ ನಚ್ಚು ಮುಚ್ಚೆಂಬ ಕೋಳಮಂ ಕಳೆದೆ. ಹೊಕ್ಕು ಹೊರಡುವ ತ್ರಿಭುವನವೆಂಬ ತ್ರಿಪುರಮಂ ಸುಟ್ಟು ಸಂಸಾರವೆಂಬ ಸಪ್ತಸಮುದ್ರಂಗಳಂ ದಾಂಟಿದೆ. ಉನ್ಮನಿಯಪುರದ ಬಚ್ಚಬರಿಯ ಬೆಳಗಿನ ಬಯಲಬ್ರಹ್ಮವ ಮರೆಹೊಕ್ಕೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆದಿ ಮಧ್ಯಾವಸಾನಂಗಳಿಂದತ್ತತ್ತಲಾದ ಶಿವಾಂಗರೂಪ ತಾನೆಂದರಿಯದೆ, ನಿತ್ಯ ನಿರ್ಗುಣ ನಿರವಯ ಅಗಣಿತ ಅಕ್ಷಯ ತಾನೆಂದರಿಯದೆ, ನಿತ್ಯೋದಿತ ಸ್ವಯಂಪ್ರಕಾಶ ತಾನೆಂದರಿಯದೆ, ಸರ್ವಗತ ಸರ್ವಜ್ಞ ಸರ್ವಶಕ್ತಿಯನುಳ್ಳ ಪರಮಾತ್ಮ ತಾನೆಂದರಿಯದೆ, ಮಹದಾದಿ ತತ್ತ್ವಂಗಳ ಮೇಲಿಹ ಸಚ್ಚಿದಾನಂದರೂಪ ತಾನೆಂದರಿಯದೆ, ಅಜ್ಞಾನದ ಬಲದಿಂದ ಅಹಂಕಾರವಶನಾಗಿ, ನಾನು ಕರ್ತನು, ನಾನು ಭೋಕ್ತನೆಂದು ಬಗೆದು, ಇಲ್ಲದ ಮಾಯಾ ಮೋಹರೂಪಾದ ಕರ್ಮಜನ್ಯ- ಸಂಸಾರವ ಹೊಂದಿಸಿಕೊಂಡು, ತನ್ನ ನಿಜಸ್ವರೂಪವನರಿಯದೆ, ಎಂದೆಂದೂ ಭವದಲ್ಲಿ ಬಳಲುತ್ತಿಹರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅನುಭಾವಕ್ಕೆ ಬಾರದ ಅಗಣಿತ ಸ್ವತಂತ್ರ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಪ್ರತಿರಹಿತ.
--------------
ನಿಜಮುಕ್ತಿ ರಾಮೇಶ್ವರ
ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು ಭಾವದ ದೃಕ್ಕಿನಿಂದ ನವಲಿಂಗಗಳ ನೋಡಿ ಪೂಜಿಸಿ, ಕದಡುವ ಭೇದವೆಂತೆಂದೊಡೆ : ಆಧಾರಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಆಚಾರಲಿಂಗಕ್ಕೆ ಶಿವಾನಂದ ಜಲದಿಂ ಮಜ್ಜನಕ್ಕೆರೆದು ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ, ಚಿತ್ತ ಸುಚಿತ್ತವಾದ ಅಕ್ಷತೆಯನಿಟ್ಟು, ಅಲ್ಲಿಯ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಪೀತವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ಜಾಗ್ರಾವಸ್ಥೆಯೆಂಬ ನವೀನ ವಸ್ತ್ರವ ಹೊದಿಸಿ, ನಿಷ್ಕಾಮವೆಂಬ ಆಭರಣವ ತೊಡಿಸಿ, ಸುಗಂಧವೆಂಬ ನೈವೇದ್ಯವನರ್ಪಿಸಿ, ಶ್ರದ್ಧೆಯೆಂಬ ತಾಂಬೂಲವನಿತ್ತು, ಇಂತು ಆಚಾರಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಆಚಾರಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಆಚಾರಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ನಂ ನಂ ನಂ ನಂ ನಂ ನಂ ಎಂಬ ನಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಆಚಾರಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ, ಸ್ವಾಧಿಷಾ*ನಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಗುರುಲಿಂಗಕ್ಕೆ ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರೆದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ ಬುದ್ಧಿ ಸುಬುದ್ಧಿಯಾದ ಅಕ್ಷತೆಯನಿಟ್ಟು ಅಲ್ಲಿಯ ಷಡುದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ನೀಲವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸ್ವಪ್ನಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿಃಕ್ರೋಧವೆಂಬ ಆಭರಣವ ತೊಡಿಸಿ ಸುರುಚಿಯೆಂಬ ನೈವೇದ್ಯವನರ್ಪಿಸಿ, ನಿಷೆ*ಯೆಂಬ ತಾಂಬೂಲವನಿತ್ತು, ಇಂತು ಗುರುಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಗುರುಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಗುರುಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಮಣಿಪೂರಕವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಶಿವಲಿಂಗಕ್ಕೆ ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರೆದು, ಅಗ್ನಿನಿವೃತ್ತಿಯಾದ ಗಂಧವ ಧರಿಸಿ ಅಹಂಕಾರ ನಿರಹಂಕಾರವಾದ ಅಕ್ಷತೆಯನಿಟ್ಟು ಅಲ್ಲಿಯ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ ಅಲ್ಲಿ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಕೆಂಪುವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸುಷುಪ್ತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಲೋಭವೆಂಬ ಆಭರಣವ ತೊಡಿಸಿ ಸುರೂಪವೆಂಬ ನೈವೇದ್ಯವನರ್ಪಿಸಿ ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಶಿವಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತಸಂಗೊಂಡು ಆ ಶಿವಲಿಂಗದ ಪೂಜೆಯ ನಿರ್ಮಾಲ್ಯಮಂ ಮಾಡದೆ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವನು ಕೂಡಿ ಎಡರಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಅನಾಹತಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಜಂಗಮಲಿಂಗಕ್ಕೆ ಶಾಂತಿಯೆಂಬ ಜಲದಿಂ ಮಜ್ಜನಕ್ಕೆರೆದು ವಾಯುನಿವೃತ್ತಿಯಾದ ಗಂಧವ ಧರಿಸಿ ಮನ ಸುಮನವಾದ ಅಕ್ಷತೆಯನಿಟ್ಟು ಅಲ್ಲಿಯ ದ್ವಾದಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಂಜಿಷ್ಟವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮೋಹವೆಂಬ ಆಭರಣವ ತೊಡಿಸಿ ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಜಂಗಮಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಜಂಗಮಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಮಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ವಿಶುದ್ಧಿಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಪ್ರಸಾದಲಿಂಗಕ್ಕೆ ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದ ಅಕ್ಷತೆಯನಿಟ್ಟು, ಅಲ್ಲಿಯ ಷೋಡಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಕೃಷ್ಣವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾತೀತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮದವೆಂಬ ಆಭರಣವ ತೊಡಿಸಿ ಸುಶಬ್ದವೆಂಬ ನೈವೇದ್ಯವನರ್ಪಿಸಿ ಆನಂದವೆಂಬ ತಾಂಬೂಲವನಿತ್ತು, ಇಂತು ಪ್ರಸಾದಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿ ಸೂರ್ಯಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಪ್ರಸಾದಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಆಜ್ಞಾಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಮಹಾಲಿಂಗಕ್ಕೆ ಸಂತೋಷವೆಂಬ ಜಲದಿಂ ಮಜ್ಜನಕ್ಕೆರೆದು ಆತ್ಮನಿವೃತ್ತಿಯಾದ ಗಂಧವ ಧರಿಸಿ, ಭಾವ ಸದ್ಭಾವವಾದ ಅಕ್ಷತೆಯನಿಟ್ಟು, ಅಲ್ಲಿಯ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಣಿಕ್ಯವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ನಿರಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮಲವೆಂಬ ಆಭರಣವ ತೊಡಿಸಿ ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ ಸಮರಸವೆಂಬ ತಾಂಬೂಲವನಿತ್ತು, ಇಂತು ಮಹಾಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಮಹಾಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಮಹಾಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಒಂ ಒಂ ಒಂ ಒಂ ಒಂ ಒಂ ಎಂಬ ಓಂಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಮಹಾಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಬ್ರಹ್ಮರಂಧ್ರವೆಂಬ ಸಹಸ್ರದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿಷ್ಕಳಲಿಂಗಕ್ಕೆ ಅನುಪಮವೆಂಬ ಜಲದಿಂ ಮಜ್ಜನಕ್ಕೆರೆದು ಅನಾದಿಯೆಂಬ ಗಂಧವ ಧರಿಸಿ, ಅಗಮ್ಯವೆಂಬ ಅಕ್ಷತೆಯನಿಟ್ಟು ಅವಿರಳವೆಂಬ ಪುಷ್ಪದ ಮಾಲೆಯ ಧರಿಸಿ, ಅಪ್ರಮಾಣವೆಂಬ ಧೂಪವ ಬೀಸಿ ಅಖಂಡವೆಂಬ ಜ್ಯೋತಿಯ ಬೆಳಗಿ ಸತ್ಯವೆಂಬ ವಸ್ತ್ರವ ಹೊದಿಸಿ ಸದಾನಂದವೆಂಬ ಆಭರಣವ ತೊಡಿಸಿ ನಿತ್ಯವೆಂಬ ನೈವೇದ್ಯವನರ್ಪಿಸಿ ನಿರುಪಮವೆಂಬ ತಾಂಬೂಲವನಿತ್ತು, ಇಂತು ನಿಷ್ಕಲಲಿಂಗದ ಅಷ್ಟವಿಧಾರ್ಚನೆಯ ಮಾಡಿ ಅನಂತಕೋಟಿಸೂರ್ಯಪ್ರಭೆಯಂತೆ ಬೆಳಗುವ ನಿಷ್ಕಲಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ನಿಷ್ಕಲಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಅಗಣಿತವೆಂಬ ನಮಸ್ಕಾರಮಂ ಮಾಡಿ, ಆ ನಿಷ್ಕಲಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಶಿಖಾಚಕ್ರವೆಂಬ ತ್ರಿದಳಮಂಟಪದಲ್ಲಿ ಮೂರ್ತಿಗೊಂಡಿರ್ದ ಶೂನ್ಯಲಿಂಗಕ್ಕೆ ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರೆದು, ನಿರ್ಜಾತವೆಂಬ ಗಂಧವ ಧರಿಸಿ ನಿರ್ಜಡವೆಂಬ ಅಕ್ಷತೆಯನಿಟ್ಟು ನಿಧ್ರ್ವಂದ್ವವೆಂಬ ಪುಷ್ಪದಮಾಲೆಯ ಧರಿಸಿ ನಿರ್ಲಜ್ಜೆಯೆಂಬ ಧೂಪವ ಬೀಸಿ ನಿರಾಭಾರವೆಂಬ ಜ್ಯೋತಿಯ ಬೆಳಗಿ ನಿರಾಮಯವೆಂಬ ವಸ್ತ್ರವ ಹೊದಿಸಿ ನಿಸ್ಪೃಹವೆಂಬ ಆಭರಣವ ತೊಡಸಿ ನಿರಾಳವೆಂಬ ನೈವೇದ್ಯವನರ್ಪಿಸಿ ನಿರಾಲಂಬವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗದ ಅಷ್ಟವಿಧಾರ್ಚನೆಯಂ ಮಾಡಿ, ಅಗಣಿತ ಕೋಟಿಸೂರ್ಯ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಶೂನ್ಯಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ನಿರ್ಭೇದ್ಯವೆಂಬ ನಮಸ್ಕಾರಮಂ ಮಾಡಿ ಆ ಶೂನ್ಯಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ, ಪಶ್ಚಿಮಚಕ್ರವೆಂಬ ಏಕದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿರಂಜನಲಿಂಗಕ್ಕೆ ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರೆದು ನಿಷ್ಕಾರಣವೆಂಬ ಗಂಧವ ಧರಿಸಿ ನಿಃಸಂಗವೆಂಬ ಅಕ್ಷತೆಯನಿಟ್ಟು ನಿಸ್ಸಾರವೆಂಬ ಪುಷ್ಪವ ಧರಿಸಿ ನಿರುಪಾಧಿಕವೆಂಬ ಧೂಪವ ಬೀಸಿ ನಿಷ್ಕಳೆಯೆಂಬ ಜ್ಯೋತಿಯ ಬೆಳಗಿ ನಿಶ್ಚಲವೆಂಬ ವಸ್ತ್ರವ ಹೊದಿಸಿ ನಿರ್ವಾಸನೆಯೆಂಬ ಆಭರಣವ ತೊಡಿಸಿ ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ ನಿರವಯವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗದ ಅಷ್ಟವಿಧಾರ್ಚನೆಯ ಮಾಡಿ ತೆರಹಿಲ್ಲದೆ ಬೆಳಗಿನ ಮಹಾಬೆಳಗನೊಳಕೊಂಡು ಬೆಳಗುವ ನಿರಂಜನಲಿಂಗವನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ನಿರಂಜನಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ನಿಃಶಬ್ದವೆಂಬ ನಮಸ್ಕಾರಮಂ ಮಾಡಿ ಆ ನಿರಂಜನಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದೆ ನೋಡಲು ಬಚ್ಚಬರಿಯ ಬಯಲಿರ್ಪುದ ಕಂಡು ಆ ಬಯಲೆ ತನ್ನ ನಿಜನಿವಾಸವೆಂದು ತಿಳಿದು ಆ ನಿಜವಾಸದಲ್ಲಿ ತಾ ನಿಂದು ತನ್ನಿಂದ ಕೆಳಗಣ ನವಚಕ್ರಂಗಳಲ್ಲಿರ್ದ ನವಲಿಂಗಗಳ ಪೂಜೆಯ ನಿರಂತರದಲ್ಲಿ ಮಾಡುವ ಶಿವಯೋಗಿಗೆ ಭವಬಂಧನವಿಲ್ಲ. ಆ ಭವಬಂಧನವಿಲ್ಲವಾಗಿ ಜೀವಕಲ್ಪಿತವು ಮುನ್ನವೇ ಇಲ್ಲ. ಆ ಜೀವಕಲ್ಪಿತವಿಲ್ಲವಾಗಿ ಆತನು ಪರಿಪೂರ್ಣನಾಗಿ ಪರಾತ್ಪರನಾಗಿ ಪರಶಿವಬ್ರಹ್ಮವೇ ಆಗಿ ಇರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗಕ್ಕೆ ಎನ್ನ ಅಷ್ಟತನುವೆ ಅಷ್ಟ ವಿಧಾರ್ಚನೆಯಾಗಿ, ಎನ್ನ ಅಷ್ಟಾತ್ಮ-ಅಷ್ಟಕರಣಂಗಳೆ ಷೋಡಶೋಪಚಾರವಾಗಿ, ಶರಣಸತಿ-ಲಿಂಗಪತಿಯೆಂಬ ಉಭಯ ಭೇದವಳಿದು ಏಕವಾಗಿ ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯ. ತೆರೆಯಳಿದ ಅಂಬುಧಿಯಂತೆ ಪರಮ ಚಿದ್ಘನಗುರು ಶಿವಸಾಗರದೊಳಗೆ ಮುಳುಗಿ ಪರಮ ಚಿದ್ಗಂಭೀರನಾಗಿರ್ದೆನಯ್ಯ ಘಟವನಳಿದ ಅವಕಾಶದಂತೆ ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯಾ ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ ಅನುಮಿಷ ಅನುಪಮ ಅಪ್ರಮಾಣ ಅನಾಮಯ ಅಗಣಿತ ಅಚಲಾನಂದ ನಿತ್ಯ ನಿಃಕಳಂಕ ನಿರ್ಮಾಯ ನಿರಾಲಂಬ ನಿರ್ಗುಣ ನಿತ್ಯಮುಕ್ತ ನಿತ್ಯತೃಪ್ತ ನಿಶ್ಚಿಂತ ನಿಃಕಾಮ್ಯ ನಿಜಷಡ್ಗುಣೈಶ್ವರ್ಯ ಮದ್ಗುರು ಸಂಗನಬಸವಣ್ಣನ ಚಿದ್ಬೆಳಗಿನ ಬಯಲೊಳಗೆ ಬಯಲಪ್ಪುದು ತಪ್ಪದು ! ನಿಮ್ಮ ಕೃಪೆಯಿಂದ ! ನೋಡ ! ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ : ಶೈವಪಾಷಂಡಿಗಳು ಆಚರಿಸಿದ ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ, ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ, ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ, ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ, ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ, ಪರಮಜ್ಞಾನಾಂಜನ ಸದ್ವಾಸನಪರಿಮಳವೆ ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ , ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ, ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ, ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ, ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ, ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ, ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ, ಮಹಾಜ್ಞಾನವೆಂಬ ಲಿಂಗದಲ್ಲಿ ನೈಷೆ* , ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ, ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ, ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ, ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ, ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ , ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ , ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ, ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ ತನ್ನ ಸ್ವಾನುಭಾವಜ್ಞಾನದಿಂದರಿದು, ಅಂಗ ಮನಪ್ರಾಣಭಾವನಿಷಾ*ಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ, ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ, ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ, ಘನಗಂಭೀರ ಪರುಷಸೋಂಕುಗಳೆ ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ ಮಹಾಬಯಲೊಳಗೆ ಬಯಲಾಗಿ ತೋರುವ ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ ನಿರ್ಭೇದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ ನಿರಹಂಕಾರ ನಿರ್ದೇಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ದೇವರ ಪೂಜಿಸಿ, ಕಾಯಗೊಂಡು ಹುಟ್ಟಿ, ಪುತ್ರ ಮಿತ್ರ ಕಳತ್ರತ್ರಯ ಧನಧಾನ್ಯ ಷಡುಚಂದನಾದಿ ಭೋಗಾದಿಭೋಗಂಗಳ ಪಡೆದು ಭೋಗಿಸಿ ಸುಖಿಸಿಹೆನೆಂಬೆಯೆಲೆ ಮರುಳು ಮಾನವ, ಕಾಯವೇ ದುಃಖದಾಗರವೆಂದು ಅರಿಯೆಯಲ್ಲ? ಕಾಯವೇ ಸಕಲಧರ್ಮಕರ್ಮಕ್ಕಾಶ್ರಯವೆಂದರಿಯೆಯಲ್ಲ? ಪುಣ್ಯ ಪಾಪವಶದಿಂದ ಸ್ವರ್ಗನರಕಕ್ಕೆಡೆಯಾಡುತ್ತಿಪ್ಪುದನರಿಯೆಯಲ್ಲ? ಹುಟ್ಟುವುದು ಮಹಾದುಃಖ; ಹುಟ್ಟಿ ಸಂಸಾರಶರಧಿಯೊಳು ಬದುಕುವುದು ದುಃಖ. ಸಾವ ಸಂಕಟವನದ ನಾನೇನೆಂಬೆನಯ್ಯಾ, ಅದು ಅಗಣಿತ ದುಃಖ. ಆವಾವ ಪರಿಯಲ್ಲಿ ತಿಳಿದುನೋಡಲು, ಈ ಮೂರು ಪರಿಯ ದುಃಖ ಮುಖ್ಯವಾದ ಅನಂತ ದುಃಖ ನೋಡಾ. ಈ ಕಾಯದ ಕಂಥೆಯ ತೊಟ್ಟು ಕರ್ಮದೊಳಗಿರದೆ, ಮಾಯಾಮೋಹನ ತಾಳ್ದು ಮತ್ತನಾಗಿರದೆ, ಪಂಚೇಂದ್ರಿಯಂಗಳ ಸುಖಕ್ಕೆ ಮೆಚ್ಚಿ ಮರುಳಾಗದೆ, ಪಂಚವದನನ ನೆನೆನೆನೆದು ಸಂಸಾರಪ್ರಪಂಚವ ತಪ್ಪಿಸಿಕೊಂಬ ಸುಬುದ್ಧಿಯ ಕಲಿಸಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->