ಅಥವಾ

ಒಟ್ಟು 22 ಕಡೆಗಳಲ್ಲಿ , 15 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವೀಚಕ್ರಕ್ಕೆ ಶರೀರವೇ ಪೂರ್ವ, ಶರೀರದೊಳಗಣ ಪೃಥ್ವಿಯೇ ಪಶ್ಚಿಮ, ಜಿಹ್ವೆಯಲ್ಲಿ ಕೊಂಬ ಆಹಾರಾದಿಪೃಥ್ವಿಯೇ ಉತ್ತರ, ಅಧೋಮುಖದಲ್ಲಿ ವಿಸರ್ಜನರೂಪಮಾದ ಪುತ್ರಾದಿಪೃಥ್ವಿಯೇ ದಕ್ಷಿಣ, ಪೂರ್ವರೂಪವಾದ ಶರೀರಕ್ಕೂ ದಕ್ಷಿಣರೂಪವಾದ ಪುತ್ರಾದಿಗಳಿಗೂ ಸಂಧಿಕಾಲಮಾಗಿರ್ಪ ಅರ್ಥಾದಿಪೃಥ್ವಿಯೇ ಆಗ್ನೇಯ, ಪುತ್ರಾದಿ ದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ಮಲವಿಸರ್ಜನರೂಪಮಾದ ಪೃಥ್ವಿಯೇ ನೈರುತ್ಯ, ಆ ಶರೀರದೊಳಗಣ ಪೃಥ್ವಿಗೂ ಆಹಾರರೂಪವಾದ ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಗೂ ಸಂಧಿಕಾಲದಲ್ಲಿ ಪರಮಪವಿತ್ರಮಾಗಿ ಪರಿಪಕ್ವಮಯವಾಗಿ ಪ್ರಸಾದರೂಪವಾದ ಅನ್ನಾದಿ ಭೋಜನಕ್ರಿಯೆಯೆಂಬ ಪೃಥ್ವಿಯೇ ಈಶಾನ್ಯ. ಜಲಚಕ್ರಕ್ಕೆ ಗುಹ್ಯಜಲವೇ ಪೂರ್ವ, ಶರೀರಜಲವೇ ದಕ್ಷಿಣ, ಜಿಹ್ವಾಜಲವೇ ಪಶ್ಚಿಮ, ನೇತ್ರಜಲವೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಕಾಲದಲ್ಲಿರ್ಪ ಬಿಂದುಜಲವೇ ಆಗ್ನೇಯ, ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಸಂಧಿಯಲ್ಲಿರ್ಪ ವಾತ ಪಿತ್ತ ಶ್ಲೇಷ್ಮಜಲವೇ ನೈರುತ್ಯ, ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಸಂಧಿಯಲ್ಲಿರ್ಪ ಉಚ್ಛ್ವಾಸವಾಯುಮುಖದಲ್ಲಿ ದ್ರವಿಸುತ್ತಿರ್ಪ ಜಲವೇ ವಾಯವ್ಯಜಲ, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯದಲ್ಲಿರ್ಪ ಜಲಕ್ಕೂ ಸಂಧಿಯಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಈಶಾನ್ಯಜಲ. ಅಗ್ನಿಚಕ್ರಕ್ಕೆ ಗುಹ್ಯದಲಿರ್ಪ ತೇಜೊರೂಪಮಾದ ಆಗ್ನಿಯೇ ಪೂರ್ವ, ಉದರದಲ್ಲಿರ್ಪ ಅಗ್ನಿಯೇ ದಕ್ಷಿಣ, ನೇತ್ರದಲ್ಲಿರ್ಪ ಆಗ್ನಿಯೇ ಪಶ್ಚಿಮ, ಹಸ್ತದಲ್ಪಿರ್ಪ ಸಂಹಾರಾಗ್ನಿಯೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಾಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನದಲ್ಲಿರ್ಪ ಕಾಮಾಗ್ನಿಯೇ ಆಗ್ನೇಯಾಗ್ನಿ, ಉದರದಲ್ಲಿರ್ಪ ಅಗ್ನಿಗೂ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಗೂ ಸಂಧಿಯಲ್ಲಿರ್ಪ ಕ್ರೋಧ ಮತ್ಸರ ರೂಪವಾಗಿರ್ಪ ತಾಮಸಾಗ್ನಿಯೇ ನೈರುತ್ಯಾಗ್ನಿ, ನೇತ್ರದಲ್ಲಿರ್ಪ ಅಗ್ನಿಗೂ ಹಸ್ತದಲ್ಲಿರ್ಪ ಉತ್ತರಾಗ್ನಿಗೂ ಸಂಧಿಯಲ್ಲಿ ವಸ್ತುಗ್ರಹಣಚಲನೋದ್ರೇಕಾಗ್ನಿಯೇ ವಾಯವ್ಯಾಗ್ನಿ, ಆ ಹಸ್ತಕ್ಕೂ ಗುಹ್ಯಕ್ಕೂ ಸಂಧಿಯಲ್ಲಿ ಧರ್ಮಪ್ರಜಾಸೃಷ್ಟಿನಿಮಿತ್ತ ಪಾಣಿಗ್ರಹಣಮಪ್ಪಲ್ಲಿ ಸಾಕ್ಷಿರೂಪಮಾದ ಹೋಮಾಗ್ನಿಯೇ ಈಶಾನ್ಯಾಗ್ನಿ. ವಾಯುಚಕ್ರಕ್ಕೆ ನಾಸಿಕಚಕ್ರದಲ್ಲಿರ್ಪ ಪ್ರಾಣವಾಯುವೇ ಪೂರ್ವವಾಯು, ಹೃದಯವೇ ಪಶ್ಚಿಮ, ಚಲನಾತ್ಮಕವಾದ ಚೈತನ್ಯವಾಯುಮುಖವಿಕಸನವೇ ಉತ್ತರವಾಯು, ಗಂಧವಿಸರ್ಜನೆಯೇ ದಕ್ಷಿಣವಾಯು, ನಾಸಿಕದಲ್ಲಿರ್ಪ ಪೂರ್ವವಾಯುವಿಗೂ ಗಂಧದಲ್ಲಿರ್ಪ ದಕ್ಷಿಣವಾಯುವಿಗೂ ಸಂಧಿಯಲ್ಲಿರ್ಪ ಗಂಧವಾಯುವೇ ಆಗ್ನೇಯವಾಯು, ಗುದದಲ್ಲಿರ್ಪ ವಾಯುವಿಗೂ ಹೃದಯದಲ್ಲಿರ್ಪ ಪಶ್ಚಿಮವಾಯುವಿಗೂ ಸಂಧಿಯಲ್ಲಿ ಆದ್ಯನಾದಿವ್ಯಾಧಿಗಳಂ ಕಲ್ಪಿಸಿ ದೀಪನಾಗ್ನಿಯಲ್ಲಿ ಕೂಡಿಸಿ ಅನಂತಮಲವಂ ಮಾಡಿ ಅಧೋಮುಖದಲ್ಲಿ ಕೆಡವುತ್ತಿರ್ಪ ತಾಮಸವಾಯುವೇ ನೈರುತ್ಯವಾಯು, ಹೃದಯವಾಯುವಿಗೂ ವದನದಲ್ಲಿರ್ಪ ಉತ್ತರವಾಯುವಿಗೂ ಸಂಧಿಯಲ್ಲಿರ್ಪ ಕಂಠದಲ್ಲಿ ಹಸನ ರೋದನ ಗರ್ಜನಾದಿಗಳಂ ಮಾಡುತ್ತಿರ್ಪ ವಾಯುವೇ ವಾಯವ್ಯವಾಯು, ವದನದಲ್ಲಿರ್ಪ ವಾಯುವಿಗೂ ನಾಸಿಕದಲ್ಲಿರ್ಪ ವಾಯುವಿಗೂ ಸಂಧಿಯಲ್ಲಿರ್ಪ ಅಕ್ಷರಾತ್ಮಕವಾಯುವೇ ಈಶಾನ್ಯ. ಆಕಾಶಚಕ್ರಕ್ಕೆ ಶ್ರೋತ್ರದಲ್ಲಿರ್ಪ ಆಕಾಶವೇ ಪೂರ್ವ, ಶರೀರದಲ್ಲಿರ್ಪ ಆಕಾಶವೇ ಪಶ್ಚಿಮ, ಪಾದದಲ್ಲಿರ್ಪ ಆಕಾಶವೇ ದಕ್ಷಿಣ, ಜಿಹ್ವೆಯಲ್ಲಿರ್ಪ ಆಕಾಶವೇ ಉತ್ತರ, ಶ್ರೋತ್ರದಲ್ಲಿರ್ಪ ಪೂರ್ವಾಕಾಶಕ್ಕೂ ಪಾದದಲ್ಲಿರ್ಪ ದಕ್ಷಿಣಾಕಾಶಕ್ಕೂ ಕಿವಿಯಲ್ಲಿ ಪಾದದಲ್ಲಿ ಗಮಿಸುತ್ತಿರ್ಪಲ್ಲಿ ಮುಂದೆ ಗಮಿಸುತ್ತಿರ್ಪಾಕಾಶವೇ ಆಗ್ನೇಯಾಕಾಶ, ಪಾದದಲ್ಲಿರ್ಪ ಆಕಾಶಕ್ಕೂ ಶರೀರದಲ್ಲಿರ್ಪ ಪಶ್ಚಿಮಾಕಾಶಕ್ಕೂ ಸಂಧಿಯಲ್ಲಿ ಮಲಮೂತ್ರ ವಿಸರ್ಜನಾಕಾಶವೇ ನೈರುತ್ಯಾಕಾಶ, ಆ ಶರೀರದೊಳಗಿರ್ಪ ಆಕಾಶಕ್ಕೂ ಜಿಹ್ವೆಯಲ್ಲಿರ್ಪ ಉತ್ತರಾಕಾಶಕ್ಕೂ ಸಂಧಿಯಲ್ಲಿ ಗುಣಗ್ರಹಣವಂ ಮಾಡುತ್ತಿರ್ಪ ಹೃದಯವೇ ವಾಯವ್ಯಾಕಾಶ, ಜಿಹ್ವೆಯಲ್ಲಿರ್ಪ ಆಕಾಶಕ್ಕೂ ಶ್ರೋತ್ರದಲ್ಲಿರ್ಪ ಆಕಾಶಕ್ಕೂ ಸಂಧಿಯಲ್ಲಿ ಗುರುವು ಮುಖದಿಂದುಪದೇಶಿಸಲು, ಶಿಷ್ಯನು ಕರ್ಣಮುಖದಲ್ಲಿ ಗ್ರಹಿಸಲು, ತನ್ಮಂತ್ರಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಆಕಾಶವೇ ಈಶಾನ್ಯಾಕಾಶ, ಆತ್ಮಚಕ್ರಕ್ಕೆ ವಾಸನಾಜ್ಞಾನವೇ ಪಶ್ಚಿಮ, ರುಚಿಜ್ಞಾನವೇ ಉತ್ತರ, ಸ್ಪರ್ಶಜ್ಞಾನವೇ ಪೂರ್ವ, ರೂಪಜ್ಞಾನವೇ ದಕ್ಷಿಣ. ಸ್ಪರ್ಶನರೂಪಮಾದ ಪೂರ್ವಜ್ಞಾನವೇ ಜೀವನು, ರೂಪಜ್ಞತ್ವಮುಳ್ಳ ದಕ್ಷಿಣಜ್ಞಾನವೇ ಶರೀರ. ಸ್ಪರ್ಶನದಲ್ಲಿ ಜೀವನು ವ್ಯಾಪ್ತನಾದಂತೆ ರೂಪಜ್ಞಾನದಲ್ಲಿ ಶರೀರವು ವ್ಯಾಪ್ತಮಾಗಿರ್ಪುದರಿಂ ರೂಪಜ್ಞಾನತ್ವವೇ ಶರೀರ, ಸ್ಪರ್ಶನಜ್ಞಾನತ್ವವೇ ಜೀವ. ತತ್ಸಂಧಿಯಲ್ಲಿ ತೇಜೋವಾಯುರೂಪಮಾಗಿರ್ಪ ಮನೋಜ್ಞಾನತ್ವವೇ ಆಗ್ನೇಯಾತ್ಮನು. ಮನೋಜ್ಞಾನಕ್ಕೂ ಪಶ್ಚಿಮದಲ್ಲಿರ್ಪ ವಾಸನಾಜ್ಞಾನಕ್ಕೂ ಸಂಧಿಯಲ್ಲಿ ಜನ್ಮಾಂತರವಾಸನಾಜ್ಞಾನವೇ ಪರೋಕ್ಷಜ್ಞಾನ, ರೂಪಜ್ಞಾನವೇ ಪ್ರತ್ಯಕ್ಷಜ್ಞಾನ. ಈ ಎರಡರ ಮಧ್ಯದಲ್ಲಿ ಭಾವಜ್ಞತ್ವಮಿರ್ಪುದು. ಜಾಗ್ರತ್ಸ್ವಪ್ನಗಳ ಮಧ್ಯದಲ್ಲಿ ಸುಷುಪ್ತಿಯು ಇರ್ಪಂತೆ ಸುಷುಪ್ತಿಗೆ ತನ್ನಲ್ಲಿರ್ಪ ಸ್ವಪ್ನವೇ ಪ್ರತ್ಯಕ್ಷಮಾಗಿ ತನಗೆ ಬಾಹ್ಯಮಾಗಿರ್ಪ ಜಾಗ್ರವು ಪ್ರತ್ಯಕ್ಷಮಾಗಿಹುದು. ಅಂತು ಭಾವಜ್ಞತ್ವಕ್ಕೆ ರೂಪಜ್ಞಾನಪ್ರತ್ಯಕ್ಷಮಾಗಿ ವಾಸನಾಜ್ಞಾನಕ್ಕೆ ತಾನೇ ಮರೆಯಾಗಿರ್ಪುದರಿಂ ಆ ಭಾವಜ್ಞಾನವೇ ನೈರುತ್ಯಾತ್ಮನು. ಆ ವಾಸನಾಜ್ಞಾನಕ್ಕೂ ಉತ್ತರದಲ್ಲಿರ್ಪ ರುಚಿಜ್ಞಾನಕ್ಕೂ ಸಂಧಿಯಲ್ಲಿ ರುಚಿಯೆಂದರೆ ಅನುಭವಪದಾರ್ಥ, ತಜ್ಞಾನವೇ ರುಚಿಜ್ಞಾನ. ವಾಸನಾಜ್ಞಾನವೇ ಪರೋಕ್ಷಜ್ಞಾನ, ಅದೇ ಭೂತಜ್ಞಾನ, ಆ ರುಚಿಜ್ಞಾನವೇ ಭವಿಷ್ಯಜ್ಞಾನ. ಅಂತಪ್ಪ ಭೂತಭವಿಷ್ಯತ್ತುಗಳ ಮಧ್ಯದಲ್ಲಿ ವಾಯುರೂಪಮಾದ ಶಬ್ದಮುಖದಲ್ಲಿ ತಿಳಿವುತ್ತಿರ್ಪ ಶಬ್ದಜ್ಞಾನವೇ ವಾಯವ್ಯಾತ್ಮನು. ರುಚಿಜ್ಞಾನಕ್ಕೂ ಸ್ಪರ್ಶನಜ್ಞಾನಕ್ಕೂ ಮಧ್ಯದಲ್ಲಿ ಜೀವನು ರುಚಿಗಳನನುಭವಿಸುವ ಸಂಧಿಯಲ್ಲಿರ್ಪ ಶಿವಜ್ಞಾನಮಧ್ಯದಲ್ಲಿರುವನೇ ಈಶಾನ್ಯಾತ್ಮನು. ಜ್ಞಾನಾನಂದಮೂರ್ತಿಯೇ ಕರಕಮಲದಲ್ಲಿ ಇಷ್ಟಲಿಂಗಮಾಗಿ, ಆ ಶಿವಜ್ಞಾನವೇ ಹೃತ್ಕಮಲಮಧ್ಯದಲ್ಲಿ ರುಚ್ಯನುಭವಸಂಧಿಯಲ್ಲಿ ಪ್ರಾಣಲಿಂಗಮಾಗಿ, ಪ್ರತ್ಯಕ್ಷ ಪರೋಕ್ಷಂಗಳಿಗೆ ತಾನೇ ಕಾರಣವಾಗಿ, ಆ ಶಿವಜ್ಞಾನಂಗಳು ಭಾವದಲ್ಲೊಂದೇ ಆಗಿ ಪ್ರಕಾಶಿಸಿದಲ್ಲಿ ಭಾವದಲ್ಲಿರ್ಪ ತಾಮಸವಳಿದು, ಪ್ರತ್ಯಕ್ಷ ಪರೋಕ್ಷಂಗಳೊಂದೇ ಆಗಿ, ಪರೋಕ್ಷಜ್ಞಾನದಲ್ಲಿ ಪ್ರತ್ಯಕ್ಷಭಾವಂಗಳಳಿದು, ಭೂತಭವಿಷ್ಯಂಗಳೊಂದೇ ಆಗಿ ಅಖಂಡಮಯಮಾಗಿ ಎಲ್ಲವೂ ಒಂದೆಯಾಗಿರ್ಪುದೇ ಆಗ್ನೇಯ. ಅದಕ್ಕೆ ಇಷ್ಟಪ್ರಾಣಂಗಳೆಂಬೆರಡು ದಳಂಗಳು. ವಿಶುದ್ಧದಲ್ಲಿ ಪ್ರಮಾಣಕ್ಕೆ ಪೂರ್ವಾತ್ಮನಾದ ಜೀವನೇ ಸ್ಥಾನ, ಸಂಶಯಕ್ಕೆ ಆಗ್ನೇಯಾತ್ಮವಾದ ಮನವೇ ಸ್ಥಾನ, ದೃಷ್ಟಾಂತಕ್ಕೆ ದಕ್ಷಿಣಾತ್ಮಕವಾದ ಶರೀರವೇ ಸ್ಥಾನ, ಅವಯವಕ್ಕೆ ನೈರುತ್ಯವಾದ ಭಾವವೇ ಸ್ಥಾನ, ನಿರ್ಣಯಕ್ಕೆ ಪಶ್ಚಿಮಾತ್ಮಕವಾದ ಶಬ್ದಜ್ಞಾನವೇ ಸ್ಥಾನ, ಜಲ್ಪಕ್ಕೆ ವಾಯುವ್ಯಾತ್ಮವಾದ ಶಬ್ದಜ್ಞಾನವೇ ಸ್ಥಾನ, ಹೇತ್ವಭಾವಕ್ಕೆ ರುಚಿಜ್ಞತ್ವವೇ ಸ್ಥಾನ. ಜಾತಿಯೆಂದರೆ ಪದಾರ್ಥನಿಷ*ಧರ್ಮ. ಆ ಧರ್ಮಕ್ಕೆ ಈಶಾನ್ಯಾತ್ಮನಾದ ಶಿವನೇ ಸ್ಥಾನ, ಪ್ರಮೇಯಕ್ಕೆ ಶ್ರೋತ್ರದಲ್ಲಿರ್ಪ ವಿಶುದ್ಧರೂಪಮಾದ ಪೂರ್ವಾಕಾಶವೇ ಸ್ಥಾನ, ಪ್ರಯೋಜನಕ್ಕೆ ಧಾವತೀರೂಪಮಾದ ಆಗ್ನೇಯಾಕಾಶವೇ ಸ್ಥಾನ, ಸಿದ್ಧಾಂತಕ್ಕೆ ಪದದಲ್ಲಿರ್ಪ ದಕ್ಷಿಣಾಕಾಶವೇ ಸ್ಥಾನ, ತರ್ಕಕ್ಕೆ ಮಲವಿಸರ್ಜನರೂಪವಾದ ನೈರುತ್ಯಾಕಾಶವೇ ಸ್ಥಾನ, ಛಲಕ್ಕೆ ಜಿಹ್ವೆಯಲ್ಲಿ ವಾಗ್ರೂಪಮಾಗಿರ್ಪ ಉತ್ತರಾಕಾಶವೇ ಸ್ಥಾನ, ನಿಗ್ರಹಕ್ಕೆ ಉಪದೇಶಮಧ್ಯದಲ್ಲಿರ್ಪ ಈಶಾನ್ಯಾಕಾಶವೇ ಸ್ಥಾನ. ಇಂತು ಆತ್ಮಾಕಾಶಮಾಗಿರ್ಪ ಷೋಡಶದಳಂಗಳಿಂ ಪ್ರಕಾಶಿಸುತ್ತಿರ್ಪುದೇ ವಿಶುದ್ಧಿಚಕ್ರವು. ತದ್ಬೀಜಮಾಗಿರ್ಪ ಷೋಡಶಸ್ವರಂಗಳಲ್ಲಿ ಹ್ರಸ್ವಸ್ವರಂಗಳೆಲ್ಲವೂ ಆತ್ಮಚಕ್ರಬೀಜ ದೀರ್ಘಸ್ವರಂಗಳೆಲ್ಲವೂ ಆಕಾಶಚಕ್ರಬೀಜ, ಮುಕುಳನವೇ ಹ್ರಸ್ವ ; ಅದು ಆತ್ಮರೂಪಮಾದ ಸಂಹಾರಮಯಮಾಗಿಹುದು. ವಿಕಸನವೇ ದೀರ್ಘ; ಅದು ಮಿಥ್ಯಾರೂಪಮಾದ ಸೃಷ್ಟಿಮಯಮಾಗಿಹುದು. ಇಂತಪ್ಪ ಆತ್ಮಾಕಾಶಚಕ್ರಗಳೆರಡೂ ಏಕಾಕಾರಮಾಗಿರ್ಪುದೇ ವಿಶುದ್ಧಿಚಕ್ರವು. ಅನಾಹತದಲ್ಲಿ ತನುವಿಗೆ ಪೂರ್ವರೂಪಮಾದ ವಾಯುವೇ ಸ್ಥಾನ, ನಿಧನಕ್ಕೆ ವಾಸನಾಗ್ರಹಣರೂಪಮಾದ ಆಗ್ನೇಯವಾಯುವೇ ಸ್ಥಾನ, ಸಹಜವೆಂದರೆ ಪ್ರಕೃತಿ, ಆ ಸಹಜಕ್ಕೆ ದಕ್ಷಿಣರೂಪಮಾದ ವಿಸರ್ಜನವಾಯುವೇ ಸ್ಥಾನ, ಸೂಹೃತಿಗೆ ನೈರುತ್ಯರೂಪಮಾದ ಗರ್ಭವಾಯುವೇ ಸ್ಥಾನ, ಸುತಕ್ಕೆ ಪಶ್ಚಿಮದಲ್ಲಿರ್ಪ ಹೃದಯವಾಯುವೇ ಸ್ಥಾನ, ರಿಪುವಿಗೆ ಕಂಠದಲ್ಲಿ ವಾಯವ್ಯರೂಪಮಾಗಿರ್ಪ ಉತ್ಕøಷ್ಟಘೋಷವಾಯುವೇ ಸ್ಥಾನ, ಜಾಯಕ್ಕೆ ಉತ್ತರದಲ್ಲಿರ್ಪ ಜಿಹ್ವಾಚಲನವಾಯುವೇ ಸ್ಥಾನವಾಯಿತ್ತು. ನಾದವಿಸರ್ಜನಸ್ಥಾನವೇ ಜಿಹ್ವಾಚಲನ, ಬಿಂದುವಿಸರ್ಜನಸ್ಥಾನವೇ ಜಾಯೆ, ಜಾಯೆಯಿಂದಾದ ಸುತಾದಿ ರೂಪಗಳಿಗೆ ಜಿಹ್ವಾವಾಯುವಿನಿಂದಾದ ನಾಮವೇ ಕ್ರಿಯಾಸಂಬಂಧಮಾದುದರಿಂದಲೂ ಪತಿವಾಕ್ಯವನನುಸರಿಸುವುದೇ ಸತಿಗೆ ಧರ್ಮವಾದುದರಿಂದಲೂ ಜಾಯಿಗೆ ಜಿಹ್ವಾವಾಯುವೇ ಸ್ಥಾನವಾಯಿತ್ತು . ನಿಧನಕ್ಕೆ ಜಿಹ್ವಾವಾಯುವಿಗೂ ನಾಸಿಕಾವಾಯುವಿಗೂ ಸಂಧಿಯಲ್ಲಿ ಕ್ಷಯರಹಿತಮಾದ ಅಕ್ಷರವಾಯುವೇ ಸ್ಥಾನವಾಯಿತ್ತು. ಪೂರ್ವದಲ್ಲಿರ್ಪ ಅನಾಹತಚಕ್ರದಲ್ಲಿ ಪಶ್ಚಿಮದಲ್ಲಿರ್ಪ ಪೃಥ್ವೀಚಕ್ರದ ನಾಲ್ಕುದಳಂಗಳು ಕೂಡಿರ್ಪುದರಿಂ ಅನಾಹತನಲ್ಲಿ ಹನ್ನೆರಡು ದಶಗಳಾದವು. ಅನಾಹತದಲ್ಲಿ ಬೆರೆದ ನಾಲ್ಕು ದಳಂಗಳಾವುವೆಂದರೆ : ಶರೀರರೂಪಮಾದ ಪೂರ್ವಪೃಥ್ವಿಗೂ ಪುತ್ರಾದಿರೂಪಮಾದ ದಕ್ಷಿಣಪೃಥ್ವಿಗೂ ಮಧ್ಯದಲ್ಲಿರ್ಪ ಧನರೂಪಮಾದ ಆಗ್ನೇಯಪೃಥ್ವಿಯೇ ಧರ್ಮಸ್ಥಾನಮಾಯಿತ್ತು. ಪುತ್ರಾದಿದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ನೈರುತ್ಯಪೃಥ್ವಿಯೇ ಕರ್ಮಸ್ಥಾನಮಾಯಿತ್ತು. ಶೌಚವೇ ಕರ್ಮಕ್ಕೆ ಆದಿಯಾದುದರಿಂದ ಆ ಶರೀರದೊಳಗಿರ್ಪ ಪೃಥ್ವಿಗೂ ಜಿಹ್ವೆಯಲ್ಲಿರ್ಪ ಆಹಾರೋತ್ತರಪೃಥ್ವಿಗೂ ಸಂಧಿಯಲ್ಲಿರ್ಪ ವಾಯವ್ಯಪೃಥ್ವಿಯೇ ಲಯಸ್ಥಾನಮಾಯಿತ್ತು. ಆ ಜಿಹ್ವೆಯಲ್ಲಿರ್ಪ ಪೃಥ್ವಿಗೂ ಶರೀರದಲ್ಲಿರ್ಪ ಪೃಥ್ವಿಗೂ ಸಂಧಿಯಲ್ಲಿರ್ಪ ಅನ್ನರೂಪಮಾದ ಈಶಾನ್ಯಪೃಥ್ವಿಯೇ ವ್ಯಯಸ್ಥಾನಮಾಯಿತ್ತು. ಇಂತು ಭಾವರೂಪಮಾದ ದ್ವಾದಶದಳಗಳುಳ್ಳುದೇ ಅನಾಹತಚಕ್ರವು. ಮಣಿಪೂರಕಚಕ್ರದಲ್ಲಿ ಪೂರ್ವರೂಪಮಾದ ಅಗ್ನಿಯೇ ಸ್ಥಾನವು, ಅದು ಆದಿಯಲ್ಲಿ ಶ್ರೋತ್ರವಿಷಯದಿಂದುತ್ಪನ್ನಮಾಗುತ್ತಿರ್ಪುದರಿಂ ಅದಕ್ಕೆ ಶ್ರೋತ್ರವೇ ಸ್ಥಾನಮಾಯಿತ್ತು. ಗುಹ್ಯೆಯಲ್ಲಿರ್ಪ ಅಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನವಾಗಿ ಪ್ರಕಾಶಿಸುತ್ತಿರ್ಪ ಕಾಮರೂಪಮಾದ ಆಗ್ನೇಯಾಗ್ನಿಗೆ ತ್ವಕ್ಕೇ ಸ್ಥಾನಮಾಯಿತ್ತು , ಉದರದಲ್ಲಿರ್ಪ ದಕ್ಷಿಣಾಗ್ನಿಯು ರೂಪಮಾಗಿಹುದು. ದೀಪನವೆಂದರೆ ವಾಂಛೆ, ಅಂತಪ್ಪ ವಾಂಛೆಯು ನೇತ್ರಮೂಲಕಮಾದುದರಿಂದಲೂ ರೂಪಕ್ಕೆ ನೇತ್ರವೇ ಕಾರಣಮಾದುದರಿಂದಲೂ ರೂಪಮಾಗಿರ್ಪ ಆಹಾರದಿಂದಾ ದೀಪನವೇ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಯಾಗಿ ನಾಸಿಕಾಗ್ರದಲ್ಲೇಕಮಾಗಿ ಕೂಡುತ್ತಿರ್ಪುದರಿಂದ ನಾಸಿಕಾಗ್ರದಲ್ಲಿರ್ಪ ಸಮದೃಷ್ಟಿಯು ಸಕಲಯೋಗಕ್ಕೂ ಕಾರಣಮಾಗಿರ್ಪುದರಿಂ ನೇತ್ರಾಗ್ನಿಗೆ ನಾಸಿಕವೇ ಸ್ಥಾನಮಾಯಿತ್ತು. ಪಾಣಿಗೂ ಗುಹ್ಯಕ್ಕೂ ಸಂಧಿಕಾಲಮಾಗಿರ್ಪ ಸ್ವಸ್ತ್ರೀ ವಿವಾಹಸಾಕ್ಷಿಕವಾದ ಈಶಾನ್ಯಹೋಮಾಗ್ನಿಗೂ ಜಾಯಾಪಾದವೇ ಸ್ಥಾನಮಾಯಿತ್ತು. ಲಾಜಾಹೋಮಕಾಲದಲ್ಲಿ ಜಾಯಾಪಾದದಿಂದಗ್ನಿ ಸಿದ್ಧವಾಗುತ್ತಿರ್ಪುದರಿಂ ಆ ಹೋಮಾಗ್ನಿಯನ್ನು ಪಾದದಲ್ಲಿ ತಂದು ಶಿಲೆಯಲ್ಲಿ ಆವಾಹನೆಯಂ ಮಾಡುತ್ತಿರ್ಪುದರಿಂ ಈಶ್ವರರೂಪಮಾದ ಅಗ್ನಿಗೂ ಗಿರಿಜಾರೂಪಮಾದ ಶಿಲೆಗೂ ಆ ಪಾದವೇ ಕಾರಣಮಾಗಿರ್ಪುದರಿಂ ಈಶಾನ್ಯಾಗ್ನಿಗೆ ಪಾದವೇ ಸ್ಥಾನಮಾಯಿತ್ತು . ಈ ಮಣಿಪೂರಕದಶದಳಗಳಲ್ಲಿ ಅಗ್ನಿದಳಗಳೆಂಟು, ಜಲದಳಗಳೆರಡು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಗುಹ್ಯದಳವೇ ಸ್ಥಾನಮಾಯಿತ್ತು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಯಲ್ಲಿರ್ಪ ಆಗ್ನೇಯಬಿಂದುಜಲಕ್ಕೂ ಗುದವೇ ಸ್ಥಾನಮಾಯಿತ್ತು, ಆ ಬಿಂದುವು ಗುದಸ್ಥಾನದಲ್ಲಿ ನಿಂತು ಗುಹ್ಯಮುಖದಲ್ಲಿ ನಿವೃತ್ತಿಯಾಗುತ್ತಿರ್ಪುದರಿಂ ಆ ಬಿಂದುವಿಗೆ ಗುದವೇ ಸ್ಥಾನಮಾಯಿತ್ತು. ಇಂತಪ್ಪ ದಶದಳಂಗಳುಳ್ಳುದೇ ಮಣಿಪೂರಕ. ಸ್ವಾಧಿಷಾ*ನದಲ್ಲಿ ಯಜನಕ್ಕೆ ಕರ್ಮಾಯಾಸದಿಂದುತ್ಪನ್ನಮಾಗುವ ಪೂರ್ವಜಲವೇ ಸ್ಥಾನಮಾಯಿತ್ತು. ಯಾಜನಕ್ಕೆ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಮಧ್ಯದಲ್ಲಿರ್ಪ ಜಲವೇ ಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಪಶ್ಚಿಮಜಲವೇ ಅಧ್ಯಯನಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಮಧ್ಯದಲ್ಲಿ ನಾಸಿಕದಲ್ಲಿ ವಾಸನಾಮುಖದಿಂ ದ್ರವಿಸುತ್ತಿರ್ಪ ವಾಯವ್ಯಜಲವೇ ಅಧ್ಯಾಪನಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಆನಂದಜಲವೇ ದಾನಕ್ಕೆ ಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯೆಯಲ್ಲಿರ್ಪ ಜಲಕ್ಕೂ ಮಧ್ಯದಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಪ್ರತಿಗ್ರಹಸ್ಥಾನಮಾಯಿತ್ತು. ಇಂತಪ್ಪ ಆರುದಳಂಗಳುಳ್ಳುದೇ ಸ್ವಾಧಿಷಾ*ನಚಕ್ರವು, ಆಧಾರದಲ್ಲಿ ಬ್ರಹ್ಮಚರ್ಯಕ್ಕೆ ತನುವೇ ಸ್ಥಾನಮಾಯಿತ್ತು. ಬ್ರಹ್ಮಚರ್ಯವೆಂದರೆ ಕರ್ಮ. ``ಶರೀರಮಾಧ್ಯಂ ಖಲು ಧರ್ಮಸಾಧನಂ'' ಎಂದಿರುವುದರಿಂದ ಆ ಕರ್ಮಮೂಲವೇ ಶರೀರಮಾದುದರಿಂದದಕ್ಕೆ ದೇಹವೇ ಸ್ಥಾನಮಾಯಿತ್ತು. ಪುತ್ರಾದಿ ದಕ್ಷಿಣಪೃಥ್ವಿಯೇ ಗೃಹಸ್ಥಸ್ಥಾನಮಾಯಿತ್ತು. ಶರೀರದೊಳಗೆ ಮಾಂಸಾದಿಧಾತುರೂಪಮಾಗಿರ್ಪ ಪಶ್ಚಿಮಪೃಥ್ವಿಯೇ ವಾನಪ್ರಸ್ಥಮಾಯಿತ್ತು. ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಯೇ ಪರಿಶುದ್ಧಮಾಗಿ ಶಿವಪ್ರಸಾದಕಾರಣಮಾಗಿರ್ಪುದು. ಜಿಹ್ವೆಯಲ್ಲಿರ್ಪ ಅನ್ನವೇ ದೀಪನಹರಣವೂ ತೃಪ್ತಿಕಾರಣವೂ ಜ್ಞಾನಾನಂದಕಾರಣವೂ ಆಗಿರ್ಪುದು. ಅಂತಪ್ಪ ಅನ್ನವೇ ಕೇವಲ ಸತ್ವಸ್ವರೂಪಮಾಗಿ ರಕ್ಷಣರೂಪಮಾದುದರಿಂದಾ ಸತ್ವವು ಸ್ಥಾನಮಾಗಿರ್ಪುದೇ ಸಂನ್ಯಾಸವು, ಇಂತಪ್ಪ ಚತುರ್ದಳಂಗಳಿಂದೊಪ್ಪುತ್ತಿರ್ಪುದೇ ಆಧಾರಚಕ್ರವು. ಪೃಥ್ವಿಗೆ ಈಶಾನ್ಯರೂಪಮಾಗಿರ್ಪ ಅನ್ನವೇ ಆಧಾರಚಕ್ರದಲ್ಲಿ ಆಚಾರಲಿಂಗಮಾಯಿತ್ತು. ಆ ಅನ್ನವೇ ಪ್ರಾಣಮಾಗಿರ್ಪುದರಿಂ ನಾಸಿಕವನನುಸರಿಸುತ್ತಿರ್ಪುದು. ಜಲಕ್ಕೆ ಈಶಾನ್ಯಮಾಗಿರ್ಪ ದಯಾರಸವೇ ಸ್ವಾಧಿಷಾ*ನದಲ್ಲಿ ಗುರುಲಿಂಗಮಾಯಿತ್ತು. ಅದು ಜಿಹ್ವಾಮುಖದಿಂ ರಕ್ಷಿಸುತ್ತಿರ್ಪುದರಿಂ ಜಿಹ್ವೆಯನನುಸರಿಸುತ್ತಿರ್ಪುದು. ಅಗ್ನಿಗೆ ಈಶಾನ್ಯವಾದ ಹೋಮಾಗ್ನಿಯೇ ಮಣಿಪೂರಕದಲ್ಲಿ ಶಿವಲಿಂಗಮಾಯಿತ್ತು. ಅದು ಯಾವಜ್ಜೀವವೂ ಅಗ್ನಿಗಿಂತಲೂ ಭಿನ್ನಮಾಗದೆ ಪ್ರಕಾಶಿಸುತ್ತಿರುವುದರಿಂ ತೇಜೋಮಯವಾದ ನೇತ್ರವನನುಸರಿಸುತ್ತಿರ್ಪುದು. ವಾಯುವಿಗೆ ಈಶಾನ್ಯರೂಪಮಾದ ಅಕ್ಷರಮಯಮಾದ ಮಂತ್ರವಾಯುವೇ ಅನಾಹತದಲ್ಲಿ ಜಂಗಮಲಿಂಗಮಾಯಿತ್ತು. ಅದು ಕ್ಷಯವಿಲ್ಲದ್ದು ; ಆ ಮಂತ್ರವು ಶರೀರವನ್ನು ಪವಿತ್ರವಂ ಮಾಡಲು, ಶರೀರ ಪೂರ್ವವಾಸನೆಯಳಿದು ಮಂತ್ರಮಯಮಾಗಿರ್ಪುದರಿಂ ತ್ವಕ್ಕನ್ನನುಸರಿಸಿರ್ಪುದು. ಆಕಾಶಕ್ಕೆ ಈಶಾನ್ಯಮಾದ ಉಪದೇಶಾಕಾಶವೇ ವಿಶುದ್ಧದಲ್ಲಿ ಪ್ರಸಾದಲಿಂಗಮಾಯಿತ್ತು. ಅದು ಪರತತ್ವಮಯಮಾಗಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು. ಆತ್ಮನಿಗೆ ಈಶಾನ್ಯದಲ್ಲಿರ್ಪ ಶಿವಜ್ಞಾನವೇ ಆಗ್ನೇಯದಲ್ಲಿ ಮಹಾಲಿಂಗಮಾಯಿತ್ತು . ಅದು ಮನದೊಳ್ಕೂಡಿ ಪಂಚೇಂದ್ರಿಯಂಗಳಿಗೂ ಮನಸ್ಸೇ ಚೈತನ್ಯಮಾಗಿರ್ಪಂತೆ, ಪಂಚಲಿಂಗಂಗಳಿಗೆ ತಾನೇ ಚೈತನ್ಯಮಾಗಿ ದೃಷ್ಟವಶದಿಂದುದಿಸಿದ ಕಾರಣ ಆ ದೃಷ್ಟಕಾರಣಮಾದ ಲಲಾಟವನನುಸರಿಸಿರ್ಪುದು. ಆ ಶಿವಜ್ಞಾನದಿಂ ಗುರುಮುಖದಿಂದುದಿಸಿದ ಕರ್ಮಯೋಗ್ಯಮಾದುದೇ ಇಷ್ಟಲಿಂಗವು. ಆತ್ಮತೇಜಸ್ಸನ್ನೇ ಬಹಿಷ್ಕರಿಸಿ ಹೋಮಾಗ್ನಿಯಂ ಪ್ರಬಲವಂ ಮಾಡಿ ಇಷ್ಟಲಿಂಗಪ್ರಸಾದಸಾಮಗ್ರಿಯನಾಹುತಿಗೊಟ್ಟು, ಆ ತೇಜಸ್ಸನ್ನಾತ್ಮಸಮಾರೋಪಣೆಯಂ ಮಾಡಿ, ತದ್ಯಜನಶೇಷಮಾಗಿರ್ಪ ರುಚಿಮಯದಿವ್ಯತೇಜಸ್ಸೇ ಶಿವಧ್ಯಾನರೂಪಮಾದ ಪ್ರಾಣಲಿಂಗಾನುಭವವು. ಆ ಶಿವಧ್ಯಾನದಿಂದ ಗುರೂಪದೇಶಸಿದ್ಧಮಾಗಿರ್ಪ ಮಹಪ್ರಕಾಶವೇ ಪ್ರಾಣಲಿಂಗವು. ತೃಪ್ತಿರೂಪಮಾದ ತತ್ವಾನುಭಾವವೇ ನಿಜಾನುಭವಮಾಗಿರ್ಪುದೇ ಭಾವಲಿಂಗವು. ಗುರುದತ್ತವಾದಿಷ್ಟಲಿಂಗದಿಂ ಶರೀರವು ಪೂತಮಾಗಿ, ಜಂಗಮದತ್ತ ಶಿವಧ್ಯಾನತೇಜಸ್ಸಿನಿಂ ಪ್ರಾಣವು ಪವಿತ್ರಮಾಗಿ ಮಹಾಚಿದ್ರೂಪಮಾದ ಶಿವಜ್ಞಾನನಿಮಿತ್ತಸಿದ್ಧಿಯಿಂ ಭಾವವು ಪರಿಶುದ್ಧಮಾಗಿ, ಆ ಶರೀರವೇ ಇಷ್ಟಲಿಂಗಕರಣಮಾಗಿಯೂ ಪ್ರಾಣವೇ ಧ್ಯಾನಕರಣಮಾಗಿಯೂ ಭಾವವೇ ಸಿದ್ಧೀಕರಣಮಾಗಿಯೂ ಆ ಕರಣಂಗಳ್ಗೆ ಶಕ್ತಿಯಾಗಿಯೂ ಇರ್ಪುದರಿಂದಾ ಲಿಂಗವೇ ಪತಿ ತಾನೇ ಸತಿಯಾಗಿರ್ಪುದರಿಂದೆರಡರಸಂಗವೇ ಪರಮಾನಂದಮಯಮಾಗಿರ್ಪುದೇ ಪರಿಣಾಮವು. ಅಂತಪ್ಪ ಲಿಂಗಸಂಗಪರಮಾನಂದರಸದಿಂ ಪರವಶನಾಗುವಂತೆನ್ನಂ ಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಗೆ ಮೈಯೆಲ್ಲಾ ಯೋನಿ, ಜಲಕ್ಕೆ ಶರೀರವೆಲ್ಲಾ ಕಾಲು, ಅಗ್ನಿಗೆ ಶರೀರವೆಲ್ಲಾ ಬಾಯಿ, ವಾಯುವಿಗೆ ತನುವೆಲ್ಲಾ ಮೂಗು, ಆಕಾಶಕ್ಕೆ ಕಾಯವೆಲ್ಲಾ ಹೊಟ್ಟೆ, ಆತ್ಮನಿಗೆ ಮೈಯೆಲ್ಲಾ ಕಣ್ಣು, ಪೃಥ್ವಿಗೆ ಘ್ರಾಣವೇ ಇಂದ್ರಿಯ, ಗಂಧವೇ ವಿಷಯ. ಜಲಕ್ಕೆ ಜಿಹ್ವೆಯೇ ಇಂದ್ರಿಯ, ರುಚಿಯೇ ವಿಷಯ. ಅಗ್ನಿಗೆ ನೇತ್ರವೇ ಇಂದ್ರಿಯ, ರೂಪೇ ವಿಷಯ. ವಾಯುವಿಗೆ ತ್ವಕ್ಕೇ ಇಂದ್ರಿಯ, ಸ್ಪರ್ಶನವೇ ವಿಷಯ. ಆಕಾಶಕ್ಕೆ ಶ್ರೋತ್ರವೇ ಇಂದ್ರಿಯ, ಶಬ್ದವೇ ವಿಷಯ. ಆತ್ಮನಿಗೆ ಮನಸ್ಸೇ ಇಂದ್ರಿಯ, ಭಾವವೇ ವಿಷಯ. ಪೃಥ್ವಿಯಲ್ಲಿರ್ಪ ಗಂಧಕ್ಕೆ ಘ್ರಾಣೇಂದ್ರಿಯವೇ ಕಾರಣಮಾಯಿತ್ತು. ಜಲದೊಳಗಿರ್ಪ ರುಚಿಗೆ ಜಿಹ್ವೇಂದ್ರಿಯದಲ್ಲಿರ್ಪ ಅಗ್ನಿಯೇ ಕಾರಣಮಾಯಿತ್ತು ಅಗ್ನಿಯಲ್ಲಿರ್ಪ ರೂಪಿಗೆ ನೇತ್ರೇಂದ್ರಿಯದಲ್ಲಿರ್ಪ ಜಲಮೆ ಕಾರಣಮಾಯಿತ್ತು. ವಾಯುವಿನೊಳಗಿರ್ಪ ಸ್ಪರುಶನಕ್ಕೆ ತ್ವಗೀಂದ್ರಿಯದಲ್ಲಿರ್ಪ ಪೃಥ್ವಿಯೇ ಕಾರಣಮಾಯಿತ್ತು. ಆಕಾಶದಲ್ಲಿರ್ಪ ಶಬ್ದಕ್ಕೆ ಶ್ರೋತ್ರೇಂದ್ರಿಯದಲ್ಲಿರ್ಪ ಆತ್ಮನೇ ಕಾರಣಮಾಯಿತ್ತು. ಆತ್ಮನಲ್ಲಿರ್ಪ ಭಾವಕ್ಕೆ ಹೃದಯೇಂದ್ರಿಯದಲ್ಲಿರ್ಪ ಆಕಾಶಮೇ ಕಾರಣಮಾಯಿತ್ತು. ಇಂತಪ್ಪ ಭಾವದಲ್ಲಿ ಜ್ಞಾನಶಕ್ತಿ ಹುಟ್ಟಲು, ಮನವೇ ಮಹಾಲಿಂಗವಾಯಿತ್ತು. ಶಬ್ದದಲ್ಲಿ ಪರಾಶಕ್ತಿ ಹುಟ್ಟಲು, ಶ್ರೋತ್ರವೇ ಪ್ರಸಾದಲಿಂಗಮಾಯಿತ್ತು. ಸ್ಪರ್ಶನದಲ್ಲಿ ಆದಿಶಕ್ತಿ ಹುಟ್ಟಲು, ಘ್ರಾಣವೇ ಆಚಾರಲಿಂಗಮಾಯಿತ್ತು. ಗ್ರಹಿಸುವುದೇ ಜ್ಞಾನೇಂದ್ರಿಯಮಾಯಿತ್ತು ; ಬಿಡುವುದೇ ಕರ್ಮೇಂದ್ರಿಯಮಾಯಿತ್ತು. ಇಂತಪ್ಪ ಇಂದ್ರಿಯಂಗಳೆಲ್ಲಾ ಲಿಂಗಸ್ವರೂಪಗಳಾಗಿ, ವಿಷಯಂಗಳೇ ಶಕ್ತಿಸ್ವರೂಪಮಾದ ಮಹಾಪುರುಷನಸ್ವರೂಪಿನಲ್ಲಿ ಇಷ್ಟಲಿಂಗವು ನೆಲೆಗೊಂಡಲ್ಲಿ, ಆ ಲಿಂಗದ ಮೋಹವೇ ಪ್ರಾಣಲಿಂಗಮಾಯಿತ್ತು, ಆ ಲಿಂಗದ ವಿಚಾರವೇ ಭಾವಲಿಂಗಮಾಯಿತ್ತು. ಭೂತಂಗಳೇ ಲಿಂಗಕ್ಕೆ ಅಂತರಂಗಂಗಳಾದವು. ಅಲ್ಲಲ್ಲಿರ್ಪ ಲಿಂಗಂಗಳೇ ಭೂತಂಗಳಿಗೆ ಚೈತನ್ಯಮಾದ ಪ್ರಾಣಂಗಳಾಗಿ, ಆ ಲಿಂಗಂಗಳೇ ಶರಣನಂಗಂಗಳಾಗಿ, ಲಿಂಗಂಗಳೇ ಶಿವನಾಗಿ, ಶರಣನೇ ಸತಿ ಲಿಂಗವೇ ಪತಿಯಾಗಿ, ಇಬ್ಬರ ಸಮರಸಭಾವವೇ ಪರಮಾನಂದರತಿಸುಖಮಾಗಿ, ಆ ಸುಖದಲ್ಲಿ ಎರಡಂ ಏಕಮಾಗಿ ಭೇದದೋರದೆ ನಿಶ್ಶಬ್ದಬ್ರಹ್ಮವಾಗಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕೇವಲ ಸದ್ರೂಪಮಾದ ನಿಷ್ಕಳಶಿವತತ್ವವು ತನ್ನೊಳ್ತಾನೇ ಪ್ರಕಾಶಿಸುತ್ತಿರ್ಪುದರಿಂ ಪರಮಾತ್ಮನೆಂಬ ಸಂಜ್ಞೆಯಿಂ ತನ್ನ ನಿಜಮಹಾತ್ಮ್ಯ ಪ್ರಕಟನೆಗೋಸುಗ ತಾನೇ ಆತ್ಮನಾಗಿ, ಆತ್ಮನೇ ಆಕಾಶವಾಗಿ, ಆಕಾಶವೇ ವಾಯುವಾಗಿ, ವಾಯುವೇ ಅಗ್ನಿಯಾಗಿ, ಅಗ್ನಿಯೇ ಜಲಮಾಗಿ, ಆ ಜಲವೇ ಪೃಥ್ವೀರೂಪವಾಗಿ ಘÀಟ್ಟಿಕೊಂಡು ಆ ಪೃಥ್ವಿಗೆ ಜಲವೇ ಕಾರಣಮಾಗಿ, ಆ ಜಲಕಗ್ನಿಯೇ ಕಾರಣಮಾಗಿ, ಆ ಅಗ್ನಿಗೆ ವಾಯುವೇ ಕಾರಣಮಾಗಿ, ಆ ವಾಯುವಿಗೆ ಆಕಾಶವೇ ಕಾರಣಮಾಗಿ, ಆ ಆಕಾಶಕ್ಕಾತ್ಮನೇ ಕಾರಣಮಾಗಿ, ಆ ಆತ್ಮನಿಗೆ ಪರಮಾತ್ಮನೇ ಕಾರಣಮಾಗಿ, ಒಂದಕ್ಕೊಂದು ತಮ್ಮಲ್ಲಿಯೇ ತಾವು ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಗಿರ್ಪ, ಆತ್ಮಾದಿ ಷಡ್ಭೂತಂಗಳಿಗೆ ತಾನೇ ಚೈತನ್ಯ ಸ್ವರೂಪಮಾಗಿರ್ಪ ಪರಮನು ಆತ್ಮಸಂಗದಿಂ ಜೀವಕೋಟಿಗಳಂ ಸೃಷ್ಟಿಸಿ, ಕರ್ಮಕ್ಕೆ ಕಾರಣಮಂ ಮಾಡಿ ಕ್ರೀಡಿಸುತ್ತಿರ್ದನದೆಂತೆಂದೊಡೆ: ಜಲವು ತಾನೇ ಪೃಥ್ವೀಸ್ವರೂಪಮಾಗಿ ಬಲಿದು, ಆ ಪೃಥ್ವಿಯನ್ನೇ ತನಗಾಧಾರವಂ ಮಾಡಿಕೊಂಡು, ತಾನೇ ಪೃಥ್ವಿಗೆ ಆಧಾರಮಾಗಿ, ಪೃಥ್ವಿಯಂ ಪರಿವೇಷಿ*ಸಿರ್ಪ ಜಲವೇ ಪತಿಯಾಗಿ, ಪೃಥ್ವಿಯಲ್ಲಿ ಪರಿವ ಜಲವೇ ಸತಿಯಾಗಿರ್ಪ ಆ ಜಲಬಂಧದಿಂ ಕುಡ್ಯ ಸೌಧ ಗೃಹಾದಿ ನಾನಾಸ್ವರೂಪಂಗಳಾಗಿ ನಿಂತು, ತನ್ನಲ್ಲಿರ್ಪ ಜಲವಾರಿಹೋಗಲು, ಆ ಸೃಷ್ಟಿಶಕ್ತಿಯಿಂ ತಾಂ ಘಟ್ಟಿಕೊಂಡು, ಜೀವರಿಗೆ ಜಲಹಿಂಸೆಯಂ ನಿವಾರಣಮಾಡುತ್ತಾ, ಆ ಜಲದಿಂದಲ್ಲೇ ತಾನು ಲಯವನೈದುತ್ತಿರ್ದಂದದಿ, ಆ ಪರಮಾತ್ಮನೇ ಆತ್ಮನಂ ಸುತ್ತಿ, ಆತ್ಮನಲ್ಲೇ ಸುಳಿದು, ತಾನೇ ಶಿವಶಕ್ತಿಸ್ವರೂಪಮಾಗಿ, ತನ್ನಿಂದ ಬುದ್ಧಮಾಗಿರ್ಪ ಆತ್ಮಪದಾರ್ಥದಲ್ಲಿ ಜೀವಜಾಲಂಗಳಂ ಸೃಷ್ಟಿಸಿ, ಪೃಥ್ವಿಯಲ್ಲಿ ಬೆಳೆದ ಬೆಳೆಯನ್ನು ಗೃಹದಲ್ಲಿ ತುಂಬಿ, ಶರೀರದಿಂದ ಅನುಭವಿಸುವಂದದಿ ಆತ್ಮನಿಂದ ಬೆಳೆದ ಕರ್ಮದ ಬೆಳಸನ್ನು ಜೀವಂಗಳಲ್ಲಿ ತುಂಬಿ, ತದನುಭವಕ್ಕೆ ತಾನೇ ಕಾರಣಮಾಗಿ, ನಿಜಮಹಾತ್ಮ್ಯ ಪ್ರಕಟನಮಂ ಮಾಡಿಯಾಡುತಿರ್ಪಭವನೆ ನಿನ್ನ ಸಂಬಂಧಮಾಗಿರ್ಪುದಂ ಭಾವದಲ್ಲಿ ತಿಳಿದುನೋಡಿದಲ್ಲಿ, ಎಲ್ಲವೂ ನೀನಾಗಿರ್ಪೆಯಲ್ಲದೆ, ಪೆರೆತೊಂದುಂಟೇನಯಾ? ನಿನ್ನ ಕ್ರೀಡಾನಿಮಿತ್ತ ನಾನೆಂಬ ಬರಿಯ ಭ್ರನೆಯಂ ಸೃಷ್ಟಿಸಿ, ಕಷ್ಟಬಡಿಪುದೊಳ್ಳಿತ್ತೇನಯ್ಯಾ? ಅರಿತವನ ಮುಂದೆ ಇಂದ್ರಜಾಲವಂ ಮಾಡಲು ಪರಿಶೋಭಿಸಬಲ್ಲುದೆ? ನಿನ್ನ ಮಾಯೆಯೆನಗೆ ಮನೋರಥಮಾಗಬಲ್ಲುದೆ? ಬೇರ ಬಲ್ಲವಂಗೆ ಎಲೆಯಂ ತೋಋಹೋದರೆ, ಅಪಹಾಸ್ಯಕಾರಣಮಾಗಿಹುದು. ಇದನರಿತು ನನ್ನಂ ಕಾಡದಿರು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕುರಿತೊಗಲು ಬಿಸಿಲಿಗೆ ಹದಮಾಡಿ, ಮರಿತೊಗಲು ಬೆಳದಿಂಗಳಿಗೆ ಹದಮಾಡಿ, ಹೋತಿನ ತೊಗಲು ಅಗ್ನಿಗೆ ಹದಮಾಡಿ, ಉಳಿಮುಟ್ಟದೆ ಎಳೆಯಿಂದ ಮೂರು ಮಚ್ಚೆಯ ಹೊಲಿದು ಕೊಡ್ಡ ಹಾಕಿ ತಿದ್ದಿ, ಕೈ ಕಾಲಿದ್ದವರಿಗೆ ಕೊಡೆ, ಕಣ್ಣು ತಲೆಯುಳ್ಳವರಿಗೆ ಕೊಟ್ಟು, ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪೃಥ್ವಿಗೆ ಹಲವು ತೆರ, ಅಪ್ಪುವಿಗೆ ನಾನಾ ಸಾರ. ಅಗ್ನಿಗೆ ಹಲವು ಘಟಕ್ಷುಧೆ, ವಾಯುವಿಗೆ ನಾನಾ ರೂಪು ಸಂಚಾರ. ಆಕಾಶಕ್ಕೆ ಬಹುವರ್ಣ ಚೇತನ. ಇಂತೀ ದೃಕ್ಕಿಂಗೆ ಲಕ್ಷ್ಯವಿದ್ದಂತೆ ಲಕ್ಷಿಸಿ, ಕಂಡಂತೆ ಕಂಡು, ಸದ್ಗುಣ ಆರೆಂದಂತೆಯೆಂದಡೆಂದು, ಮನಕ್ಕೆ ಕುರುಹುದೋರದೆ, ತನ್ನ ತಾನರಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಭಿನ್ನರೂಪನಲ್ಲ.
--------------
ಮೋಳಿಗೆ ಮಾರಯ್ಯ
ಓಂ ವಿಶ್ವನಿರಾಕಾರ ನಿರವಯನಿರ್ವಿಕಾರ ಅವಗತವಾಗ್ಮನವಾಗತ ಆಕಾಶ ಸಭಾಮೂರ್ತಿ ನಿರಾಕಾರವೆಂಬ ನಿಜಲಿಂಗವಪ್ಪ ಪರಶಿವಾನಂದ ಮೂರ್ತಿ ತನ್ನೊಳು ತ್ರಿಗುಣಾತ್ಮಕನಾಗಿಹ. ಅದೆಂತೆಂದಡೆ : ಶಿವ ಸದಾಶಿವ ಮಹೇಶ್ವರನೆಂದು ಪರಶಿವನ ತ್ರಿಗುಣಾತ್ಮಕ ಭೇದಂಗಳು, ಇಂತಪ್ಪ ಪರಶಿವನು ವಿಶ್ವದುತ್ಪತ್ಯಕಾರಣನಾಗಿ ಪಂಚಸಾದಾಖ್ಯ ರೂಪಗಳಂ ಪ್ರತ್ಯೇಕ ತ್ರಿಗುಣಾತ್ಮಕರಾಗಿ ಜ್ಯೋತಿಯಿಂ ಪೊತ್ತಿಸಲಾಪುದು. ಘನವಾದುದು ಉಪಮಿಸಬಾರದ ಮಹಾಘನದಂತೆ ಆ ಮಹಾಬೆಳಗು ತನ್ನೊಳೈದು ರೂಪಾಯಿತ್ತು. ಅದೆಂತೆಂದಡೆ : ಶಿವ ಅಮೂರ್ತಿ ಮೂರ್ತಿ ಕರ್ತೃ ಕರ್ಮರೆಂಬ ಪಂಚಬ್ರಹ್ಮ ಹುಟ್ಟಿದವು; ಅದಕೈವರು ಶಕ್ತಿಯರುದಯಿಸಿದರು, ಅವರ ನಾಮಂಗಳು:ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ. ಇಂತಿಂತು ಐವರನು ಪಂಚಬ್ರಹ್ಮರಿಗೆ ವಿವಾಹಂ ಮಾಡಿದೊಡಾ ಶಿವಶಕ್ತಿ ಪಂಚಕದಿಂದೊಂದು ಓಂಕಾರವೆಂಬ ಬೀಜವಂ ನಿರ್ಮಿಸಿದಡಾ, ಓಂಕಾರ ಬೀಜದಿಂದೊಂದು ವಿರಾಟಸ್ವರೂಪಮಪ್ಪ ಮಹಾಘನ ತೇಜೋಮಯವಪ್ಪ ಅನಾದಿರುದ್ರಸಹಸ್ರಾಂಶುವಿಂಗೆ ಸಾವಿರ ಶಿರ ಸಾವಿರ ನಯನ ಸಾವಿರ ದೇಹ ಸಾವಿರಪಾದವುಳ್ಳ ಸ್ವಯಂಭುಮೂರ್ತಿ ಪುಟ್ಟಿದ ಆ ಸ್ವಯಂಭುಮೂರ್ತಿಯ ಮುಖದಲ್ಲಿ ಈಶ್ವರಪುಟ್ಟಿದ, ಈಶ್ವರನ ವಾಮಭಾಗದಲ್ಲಿ ವಿಷ್ಣುಪುಟ್ಟಿದ. ದಕ್ಷಿಣಭಾಗದಲ್ಲಿ ಬ್ರಹ್ಮಪುಟ್ಟಿದ. ಇಂತು ತ್ರಿದೇವತೆಯರೊಳಗಗ್ರಜನಪ್ಪ ಮಹಾಮಹಿಮ ಈಶ್ವರನ ಪಂಚಮುಖದಲ್ಲಿ ಪಂಚಬ್ರಹ್ಮ ತೇಜೋಮಯ ರುದ್ರರು ಪುಟ್ಟಿದರು. ಅವರ ನಾಮಂಗಳು : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯರೆಂದಿಂತು. ಅವರೋಳ್ಸದ್ಯೋಜಾತನೆಂಬ ಅಗ್ರಜರುದ್ರ ಪುಟ್ಟಿದನು. ಆ ಸದ್ಯೋಜಾತಂಗೆ ಮಹಾರುದ್ರ ಪುಟ್ಟಿದನು. ಆ ಮಹಾರುದ್ರಂಗೆ ಶ್ರೀರುದ್ರ ಪುಟ್ಟಿದನು. ಆ ಶ್ರೀರುದ್ರಂಗೆ ರುದ್ರ ಪುಟ್ಟಿದನು. ಆ ರುದ್ರಂಗೆ ಅಗ್ನಿಯು ಅವಗತ ಪುಟ್ಟಿದವು. ಆ ಅಗ್ನಿಗೆ ಕಾಶ್ಶಪಬ್ರಹ್ಮ ಪುಟ್ಟಿದನು. ಅವಗತಕ್ಕೆ ಮಾಯಾಸ್ವಪ್ನಬ್ರಹ್ಮ ಪುಟ್ಟಿದನು. ಅದೆಂತೆಂದಡೆ : ಮಾಯವೆ ಮೃತ್ಯು, ಬ್ರಹ್ಮವೆ ಸತ್ಯ ಅದು ಮಾಯಾಸ್ವವಪ್ನಬ್ರಹ್ಮವೆನಿಸಿತ್ತು. ಇಂತಿಪ್ಪ ಬ್ರಹ್ಮವು ಮಾಯಾ ಅವಲಂಬಿಸಿಹುದಾಗಿ ಅದು ಮಾಯಾಸ್ವಪ್ನಬ್ರಹ್ಮವೆನಿಸಿತ್ತು. ಇಂತಪ್ಪ ಮಾಯಾ ಸ್ವಪ್ನಬ್ರಹ್ಮಂಗೆ ತ್ರಯೋದಶಕುಮಾರಿಯರು ಪುಟ್ಟಿದರು. ಅವರ ನಾಮಂಗಳು : ಬೃಹತಿ, ಅದಿತಿ, ದಿತಿ, ವಿನುತಾದೇವಿ, ಕದ್ರು, ಸುವರ್ಣಪ್ರಭೆ, ಕುಮುದಿನಿ, ಪ್ರಭಾದೇವಿ, ಕಾಳಿದಂಡಿ, ಮೇಘದಂಡಿ, ದಾತೃಪ್ರಭೆ, ಕುಸುಮಾವತಿ, ಪಾರ್ವಂದಿನಿ ಎಂದಿಂತು ತ್ರಯೋದಶಕುಮಾರಿಯರು ಪುಟ್ಟಿದರು. ಇದಕ್ಕೆ ಆದಿ ಪರಮೇಶ್ವರನು ಸೃಷ್ಟಿ ನಿರ್ಮಿತ ಜಗದುತ್ಪತ್ಯ ಸ್ಥಿತಿ ಲಯಗಳಾಗಬೇಕೆಂದು, ಆ ಕಾಶ್ಯಪಬ್ರಹ್ಮಗು ತ್ರಯೋದಶ ಸ್ತ್ರೀಯರಿಗೆಯು ವಿವಾಹವ ಮಾಡಿದನು. ಆ ಕಾಶ್ಯಪಬ್ರಹ್ಮನ ಮೊದಲ ಸ್ತ್ರೀಯ ಪೆಸರು ಬೃಹತಿ. ಆ ಬೃಹತಿಗೆ ಪುಟ್ಟಿದ ಮಕ್ಕಳ ಪೆಸರು ಹಿರಣ್ಯಕಾಂಕ್ಷ. ಹಿರಣ್ಯಕಾಂಕ್ಷನ ಮಗ ಪ್ರಹರಾಜ, ಪ್ರಹರಾಜ ಮಗ ಕುಂಭಿ, ಆ ಕುಂಭಿಯ ಮಗ ನಿಃಕುಂಭಿ, ನಿಃಕುಂಭಿಯ ಮಗ ದುಂದುಭಿ, ಆ ದುಂದುಭಿಯ ಮಗ ಬಲಿ, ಬಲಿಯ ಮಗ ಬಾಣಾಸುರ. ಇಂತಿವರು ಮೊದಲಾದ ಛಪ್ಪನ್ನಕೋಟಿ ರಾಕ್ಷಸರು ಪುಟ್ಟಿದರು. ಎರಡನೆಯ ಸ್ತ್ರೀಯ ಪೆಸರು ಅದಿತಿ. ಆ ಅದಿತಿಗೆ ಸೂರ್ಯ ಮೊದಲಾದ ಮೂವತ್ತುಕೋಟಿ ದೇವರ್ಕಳು ದೇವಗಣ ಪುಟ್ಟಿದವು. ಮೂರನೆಯ ಸ್ತ್ರೀಯ ಪೆಸರು ದಿತಿದೇವಿ. ಆ ದಿತಿದೇವಿಗೆ ಕೂರ್ಮ ಮೊದಲಾದ ಜಲಚರಂಗಳು ಪುಟ್ಟಿದವು. ನಾಲ್ಕನೆಯ ಸ್ತ್ರೀಯ ಪೆಸರು ವಿನುತಾದೇವಿ. ಆ ವಿನುತಾದೇವಿಗೆ ಸಿಡಿಲು, ಮಿಂಚು, ವರುಣ, ಗರುಡ ಮೊದಲಾದ ಖಗಜಾತಿಗ?ು ಪುಟ್ಟಿದವು. ಐದನೆಯ ಸ್ತ್ರೀಯ ಪೆಸರು ಕದ್ರುದೇವಿ. ಆ ಕದ್ರುವಿಗೆ ಶೇಷ, ಅನಂತ, ವಾಸುಗಿ, ಶಂಬವಾಳ, ಕಕ್ಷರ, ಕರ್ಕೋಟ, ಕರಾಂಡ, ಭುಜಂಗ, ಕುಳ್ಳಿಕ, ಅಲ್ಲಮಾಜಾರ್ಯ ಇಂತಿವು ಮೊದಲಾದ ನವಕುಲನಾಗಂಗಳು ಪುಟ್ಟಿದವು. ಆರನೆಯ ಸ್ತ್ರೀಯ ಪೆಸರು ಸುವರ್ಣಪ್ರಭೆ. ಆ ಸುವರ್ಣಪ್ರಭೆಗೆ ಚಂದ್ರ, ತಾರಾಗಣ, ನಕ್ಷತ್ರಂಗಳು ಪುಟ್ಟಿದವು. ಏಳನೆಯ ಸ್ತ್ರೀಯ ಪೆಸರು ಕುಮುದಿನಿ. ಆ ಕುಮುದಿನಿಗೆ ಐರಾವತ, ಪುಂಡರೀಕ, ಪುಷ್ಪದಂತ, ವಾಮನ, ಸುಪ್ರದೀಪ, ಅಂಜನ, ಸಾರ್ವಭೌಮ, ಕುಮುದ, ಭಗದತ್ತ ಇಂತಿವು ಮೊದಲಾದ ಮೃಗಕುಲಾದಿ ವ್ಯಾಘ್ರ ಶರಭ ಶಾರ್ದೂಲಂಗಳು ಪುಟ್ಟಿದವು. ಎಂಟನೆಯ ಸ್ತ್ರೀಯ ಪೆಸರು ಪ್ರಭಾದೇವಿ. ಆ ಪ್ರಭಾದೇವಿಗೆ ಕನಕಗಿರಿ, ರಜತಗಿರಿ, ಸೇನಗಿರಿ, ನೀಲಗಿರಿ, ನಿಷಧಗಿರಿ, ಮೇರುಗಿರಿ, ಮಾನಸಗಿರಿ ಇಂತಿವು ಮೊದಲಾದ ಪರ್ವತಂಗಳು ಪುಟ್ಟಿದವು. ಒಂಬತ್ತನೆಯ ಸ್ತ್ರೀಯ ಪೆಸರು ಕಾಳಿದಂಡಿ. ಆ ಕಾಳಿದಂಡಿಗೆ ಸಪ್ತಋಷಿಯರು ಮೊದಲಾದ ಅಷ್ಟಾಸೀತಿ ಸಹಸ್ರ ಋಷಿಯರು ಪುಟ್ಟಿದರು. ಹತ್ತನೆಯ ಸ್ತ್ರೀಯ ಪೆಸರು ಮೇಘದಂಡಿ. ಆ ಮೇಘದಂಡಿಗೆ ನೀಲಮೇಘ, ಕುಂಭಮೇಘ, ದ್ರೋಣಮೇಘ, ಧೂಮಮೇಘ, ಕಾರ್ಮೇಘ ಇಂತಿವು ಮೊದಲಾದ ಮೇಘಂಗಳು ಪುಟ್ಟಿದವು. ಹನ್ನೊಂದನೆಯ ಸ್ತ್ರೀಯ ಪೆಸರು ದಾತೃಪ್ರಭೆ. ಆ ದಾತೃಪ್ರಭೆಗೆ ಚಿಂತಾಮಣಿ ಮೊದಲಾದ ನವರತ್ನಂಗಳು ಪುಟ್ಟಿದವು. ಹನ್ನೆರಡನೆಯ ಸ್ತ್ರೀಯ ಪೆಸರು ಕುಸುಮಾವತಿ. ಆ ಕುಸುಮಾವತಿಗೆ ಕಾಮಧೇನು, ಕಲ್ಪವೃಕ್ಷಂಗಳು ಪುಟ್ಟಿದವು. ಹದಿಮೂರನೆಯ ಸ್ತ್ರೀಯ ಪೆಸರು ಪಾರ್ವಂದಿನಿ. ಆ ಪಾರ್ವಂದಿನಿಗೆ ಅಷ್ಟದಿಕ್ಪಾಲಕರು ಪುಟ್ಟಿದರು. ಇಂತಿವರುಗಳ ರಜಸ್ಸೀಲಾಶೋಣಿತದಿಂದ ಸಹಸ್ರವೇದಿ ಮೊದಲಾದ ಅಷ್ಟ ಪಾಷಾಣಂಗಳು ಪುಟ್ಟಿದವು. ಇವರುಗಳ ಮಲಮೂತ್ರದಿಂದ ಪರುಷರಸ ಸಿದ್ಧರಸ ನಿರ್ಜರೋದಕ ಪುಟ್ಟಿದವು. ಇಂತಿವರುಗಳ ಬೆಚ್ಚು ಬೆದರಿಂದ ದೇವಗ್ರಹ, ಯಕ್ಷಗ್ರಹ, ನಾಗಗ್ರಹ, ಗಾಂಧರ್ವಗ್ರಹ, ಪಿಶಾಚಗ್ರಹ, ಪೆಂತರಗ್ರಹ, ಬ್ರಹ್ಮರಾಕ್ಷಸಗ್ರಹ ಶತಕೋಟಿ ದೇವಗ್ರಹ, ಸರ್ವದರ್ಪಗ್ರಹ, ಶಾಕಿನಿ, ಡಾಕಿನಿ ಮೊದಲಾದ ಗ್ರಹಭೂತ ಪ್ರೇತ ಪಿಶಾಚಂಗಳು ಪುಟ್ಟಿದವು. ಇವರುಗಳ ಪ್ರಸೂತಿಕಾಲ ಮಾಸಿನಿಂದ ಅಷ್ಟಲೋಹ ಪಾಷಾಣಂಗಳು ಪುಟ್ಟಿದವು. ಕಾಲರಾಶಿ, ಕರಣರಾಶಿ, ಭೂತರಾಶಿ, ಮೂಲರಾಶಿ, ಪ್ರಾಣರಾಶಿಗಳು ಮೊದಲಾದ ಕೀಟಕ ಜಾತಿಗಳು ಪುಟ್ಟಿದವು. ಇಂತು ಚತುರ್ದಶ ಭುವನಂಗಳು, ಐವತ್ತಾರುಕೋಟಿ ರಾಕ್ಷಸರು, ದ್ವಾದಶಾದಿತ್ಯರು, ಮೂವತ್ತುಮೂರುಕೋಟಿದೇವರ್ಕಗಳು, ದೇವಗಣ ಸುರಪತಿ, ಖಗಪತಿ, ಸಿಡಿಲು, ಮಿಂಚು, ವರುಣ, ಗರುಡ, ನವಕುಲ ನಾಗಂಗಳು, ಚಿಂತಾಮಣಿನವರತ್ನಂಗಳು, ಕಾಮಧೇನು, ಕಲ್ಪವೃಕ್ಷ ಪರುಷರಸ, ಸಿದ್ದರಸ ನಿರ್ಜರೋದಕ, ದಿಕ್ಕರಿಗಳು, ಕೂರ್ಮ ಮೊದಲಾದ ಜಲಚರಂಗಳು, ಚಂದ್ರತಾರಾಗಣ ನಕ್ಷತ್ರಂಗಳು ಪುಟ್ಟಿದವು. ಇದಕ್ಕೆ ಶ್ರುತಿ : ಓಂ ವಿಶ್ವಕರ್ಮಹೃದಯೇ ಬ್ರಹ್ಮಚಂದ್ರಮಾ ಮನಸೋ ಜಾತಃ ಚಕ್ಷೋಸ್ಸೂರ್ಯದಯಾಭ್ಯೋ ಸರ್ವಾಂಗ ಭೂಷಿಣಿ ದೇವಸ್ಯ ಬಾಹುದ್ವಯಾಂಶಕಃ ಪ್ರತಿಬಾಹು ವಿಷ್ಣುಮೇವಚ ಮಣಿಬಂಧೇ ಪಿತಾಮಹಃ ಜ್ಯೇಷಾ*ಂಗುಲೇ ದೇವೇಂದ್ರ ತರ್ಜಂನ್ಯಂಗುಲೇ ಈಶಾನಃ ಪ್ರೋಕ್ತಃ ಮಾಧ್ಯಮಾದಂಗುಲೇ ಮಾಧವಃ ಅನಾಮಿಕಾಂಗುಲೇ ಅಗ್ನಿ ದೇವಃ ಕನಿಷ್ಟಾಂಗುಲೇ ಭಾಸ್ಕರಃ ಅಚಲಕುಚಿತಮಧ್ಯೇ ವನರ್ಚಪಾದ ಆಹ್ವಾನಾಂತು ಜಗತ್ ನಿರ್ಮಿತ ವಿಶ್ವಕರ್ಮಣಾಂ ಇಂತು ಕಾಶ್ಯಪಬ್ರಹ್ಮನ ಹದಿಮೂರು ಸ್ತ್ರೀಯರುಗಳಿಗೆ ಸಚರಾಚರಂಗಳು ಪುಟ್ಟಿದವಾಗಿ, ಇವರ ಪರಿಪ್ರಮಾಣ ನಮ್ಮ ಶರಣಸ್ಥಲದಲ್ಲಿದ್ದವರು ಬಲ್ಲರು. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ, ಪಂಚವಕ್ತ್ರ, ಆದಿಲಿಂಗ, ಅನಾದಿಶರಣ ಇವರೆಲ್ಲರು ಸಾಕ್ಷಿಯಾಗಿ ಕೂಡಲಚೆನ್ನಸಂಗಯ್ಯನೆ ವಿಶ್ವಕರ್ಮ ಜಗದ್ಗುರು
--------------
ಚನ್ನಬಸವಣ್ಣ
-->