ಅಥವಾ

ಒಟ್ಟು 40 ಕಡೆಗಳಲ್ಲಿ , 17 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿಗಳ ತರ್ಕದ ಪ್ರಸ್ತಾವನ ವಚನ: ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು ಅಲ್ಲಿದ್ದ ವಿಮಳವಾದ ಗಂಟ ಕೊಯಿದು, ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ ಕ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು. ಪರಬ್ರಹ್ಮನ ಆಶ್ರೈಸಬಲ್ಲಡೆ ವಿ ಎಂಬ ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು, ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ ಗುರುಗುಡುವುದು ಕಾರಣವಲ್ಲ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?) ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ ಹೊನ್ನ ಬಿಟ್ಟೆನೆಂದು ಜಗದ ಕಣ್ಣ ಕಟ್ಟಿ ಮೆರೆವ ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ. ಮಾತಿನಲ್ಲಿ ಬಿಟ್ಟಿರೋ, ಮನದಲ್ಲಿ ಬಿಟ್ಟಿರೋ? ಈ ನೀತಿಯ ಹೇಳಿರಿ ಎನಗೊಮ್ಮೆ. ತನುಮನದ ಮಧ್ಯದಲ್ಲಿ ಇವರ ನೆನಹು ಕೆಟ್ಟು ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ. ಮಾತಿನಲ್ಲಿ ಬಿಟ್ಟು, ಮನದಲ್ಲಿ ಉಳ್ಳರೆ ಭವಭವದಲ್ಲಿ ತಂದು ಕುನ್ನಿ ನಾಯ, ಕೆರವ ಕಚ್ಚಿಸುವ ಹಾಂಗೆ ಕಚ್ಚಿಸಿದಲ್ಲದೆ ಮಾಣದು ಕಾಣಿರಯ್ಯ. ಹಿಡಿದು ಸಂಸಾರಿಗಳಲ್ಲ. ಬಿಟ್ಟು ನಿಸ್ಸಂಸಾರಿಗಳಲ್ಲ. ಎರಡೂ ಅಲ್ಲದ ಎಟುವರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿಪ್ರರ ಕರೆದು `ನೃಪರುಗಳು ಇಪ್ಪರೆ ತಮ್ಮ ಶಿಶುವಿನೊಡನೆ'ಂದು ಬೆಸಗೊಂಡಡೆ, `ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ ತಾವು ಉಣ್ಣದವರುಂಟೆ ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು. ಅಂತೆಂದ ಮಾತ ಶಿಶು ಕೇಳಿ, ಕೆಟ್ಟೋಡಿ ಬಂದು, ಲಿಂಗದ ಹೊಟ್ಟೆಯ ಹೊಗಲು, ಅಟ್ಟಿಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು, ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು, ಘಟಸರ್ಪನ ತುಡುಕಿ ನಾಗನಾಥನಾಗಿ, ಇಪ್ಪತ್ತೇಳು ಬಸದಿಯನೊಡೆಯನೆ ಆಗಳಂತೆ ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು. ಮುನ್ನೊಬ್ಬ ಕೆಡಿಸಿಹನೆಂದು ಬಂದು ತುತ್ತನಿಟ್ಟು ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು. ಕೂಡಲಸಂಗಮದೇವ ಸಾಕ್ಷಿಯಾಗಿ ಮಕರಭೋಜನವಾಗನೆ ವಿನಾಶಕ್ತಿರಾಯನು.
--------------
ಬಸವಣ್ಣ
ಶರೀರದಲ್ಲಿ ಷಡಾಧಾರಚಕ್ರವುಂಟೆಂಬ ಜಡೆಗಡಗಿದಲೆಯ, ಬಿಡುಗುರುಳ ಅಣ್ಣಗಳು ನೀವು ಕೇಳಿರೊ. ಬ್ರಹ್ಮಚಕ್ರದಲ್ಲಿ ಹುಟ್ಟಿ, ವಿಷ್ಣುಚಕ್ರದಲ್ಲಿ ಬೆಳೆದು, ರುದ್ರಚಕ್ರದಲ್ಲಿ ಸಾವುದನರಿಯದೆ, ಬಣ್ಣಬಚ್ಚನೆಯ ಮಾತ ಕಲಿತು, ಹೊನ್ನು ಹೆಣ್ಣು ಮಣ್ಣಿಗಾಗಿ ಅನ್ನವನಿಕ್ಕುವರ ಪ್ರಸನ್ನವ ಹಡೆಯಬಂದ ಗನ್ನಗಾರರಿಗೇಕೆ ಅರಿವಿನ ಸುದ್ದಿ ? ಆನಂದಕ್ಕತಿದೂರ, ಸ್ವಾನುಭಾವಾತ್ಮಕನೆ ಜಾಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಣ್ಣಗಳು ಅಕ್ಕನ ಕೂಡ ಹನ್ನೆರಡುವರ್ಷ ಮಾತನಾಡದೆ ಶಬ್ದಮುಗ್ಧನಾಗಿ ಲಿಂಗೈಕ್ಯರಾದರೆಂದು ಪುರಾಣವಾಕ್ಯವ ಕೇಳಿ, ಮತ್ರ್ಯಲೋಕದ ಶಿವಗಣಂಗಳು ಪೇಳುತ್ತಿರ್ಪರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ, ಆತ್ಮನು ಸಂಚರಿಸಬಾರದೆಂಬ ಯೋಗಾಂಗದ ಅಣ್ಣಗಳು ಕೇಳಿರಯ್ಯಾ. ಆ ವಾಯುವನಧೋಮುಖಕ್ಕೆ ತರಬಾರದೆಂದು, ಊಧ್ರ್ವಮುಖಕ್ಕೆ ತಂದು, ಅಮೃತವನುಂಡೆಹೆನೆಂಬ ಅಷ್ಟಾಂಗಕರ್ಮಿಗಳು ಕೇಳಿರೊ. ಶರೀರದಲ್ಲಿ ಶುಕ್ಲ ಶೋಣಿತ ಮಜ್ಜೆ ಮಾಂಸ ಇವರೊಳಗಾದ ಸಾಕಾರದ ತಲೆಯಲ್ಲಿ ನಿರಾಕಾರದ ಅಮೃತದ ಉಂಡೆಹೆನೆಂಬುದು ಹುಸಿಯಲ್ಲವೆ? ಬಂಜೆಯಾವಿಂಗೆ ಕ್ಷೀರದ ಕೆಚ್ಚಲುಂಟೆ? ಕಲ್ಲಿನ ಹಳ್ಳದಲ್ಲಿ ಚಿಲುಮೆಯ ಸಾರವುಂಟೆ? ಹೊಲ್ಲಹ ದೇಹದಲ್ಲಿ ನಲ್ಲಹ ಕ್ಷೀರವುಂಟೆ? ಇವನೆಲ್ಲವನರಿಯದೆ ಬಲ್ಲತನವ ಸೂರೆಗೊಟ್ಟ ಗೆಲ್ಲಗೂಳಿಗೆಲ್ಲಿಯದೊ, ಲಿಂಗಾಂಗಸಂಯೋಗದ ಪರಿ? ಹರಿವ ವಾರಿಧಿಗೆ ನೊರೆ ಪಾಂಸೆ ಮುಸುಕುವುದೆ? ಸುಡುವ ಅನಲಂಗೆ ತೃಣದ ಕಟ್ಟು ನಿಲುವುದೆ? ಅರಿವ ಪರಂಜ್ಯೋತಿ ಪ್ರಕಾಶಂಗೆ ತನುವ ದಂಡಿಸಿ, ಕಂಡೆಹೆನೆಂಬ ಭ್ರಾಂತೆಲ್ಲಿಯದೊ? ಆತನಿರವು ಘಟಮಠದೊಳಗೆ ಗ್ರಹಿಸಿರ್ಪ ಬಯಲಿನ ಇರವಿನಂತೆ ರವಿಯೊಳಗೆ ಸೂಸುವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ ಬಿತ್ತಳಿದ ರಜ್ಜುವಿನ ತೈಲದ ಕುಡಿವೆಳಗಿನ ಕಳೆಯಂತೆ ಭಾವದ ಮಧ್ಯದಲ್ಲಿ ನಿಂದ ಓಂಕಾರಸ್ವರೂಪವನರಿಯದೆ ಕೆಟ್ಟರಲ್ಲ ಕರ್ಮಯೋಗಿಗಳು. ಪಳುಕಿನ ಶಿಲೆಯ ತೆರದಲ್ಲಿ ನಿಂದ ವಾರಣದಂತೆ, ನಿನ್ನ ನೀ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗಭರಿತವಾದ ಶರಣ.
--------------
ಮೋಳಿಗೆ ಮಾರಯ್ಯ
ಕರಣ ನಾಲ್ಕು, ಮದುವೆಂಟು, ವ್ಯಸನವೇಳು, ಅರಿಷಡ್ವರ್ಗಂಗಳಲ್ಲಿ ಬುದ್ಧಿಯಾಗಿರಬೇಕೆಂದು ಹೇಳುತ್ತಿರ್ಪ ಅಣ್ಣಗಳು ಕೇಳಿರೊ. ಆತ್ಮ ಸಂಬಂಧವಾದಲ್ಲಿ ಆವ ಕರಣಂಗಳೂ ಇಲ್ಲ. ಆತ್ಮನಿಂದ ಒದಗಿದ ಇಂದ್ರಿಯಂಗಳಲ್ಲದೆ, ಬೇರೆ ಕರಣಂಗಳಿಗೆ ಗುಣವಿಲ್ಲವಾಗಿ, ಸ್ಥಾವರ ಮೂಲವ ಕಡಿದು ಶಾಖೆಗಳಿಲ್ಲವಾದ ಕಾರಣ, ಆತ್ಮನ ನಿಲವನರಿದವಂಗೆ, ಬೇರೆ ಕರಣಂಗಳ ಬಂಧನವಿಲ್ಲವಾದ ಕಾರಣ, ಲಿಂಗವ ಕುರಿತಲ್ಲಿ, ಅಂಗವ [ಮ]ರೆಯಬಾರದು. ಅಂಗಕ್ಕೂ ಪ್ರಾಣಕ್ಕೂ ಹಿಂಗಿತೆನಬಾರದು, ನಿಃಕಳಂಕ ಮಲ್ಲಿಕಾರ್ಜುನನ ಸಂಗದಲ್ಲಿ ನಿರ್ವಾಣವಾದವಂಗೆ.
--------------
ಮೋಳಿಗೆ ಮಾರಯ್ಯ
ಗುರು ಲಿಂಗ ಜಂಗಮದ ಭಕ್ತರೆಂದು ಗುಣಕಥನವ ನುಡಿದುಕೊಂಡು ಎಮಗೆ ಅನ್ಯದೈವವಿಲ್ಲವೆಂಬ ಸೋರೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ. ನೀವರಿಯದಿದ್ದರೆ ನಾ ಹೇಳಿಹೆ ಕೇಳಿಭೋ. ಹೆಣ್ಣೊಂದು ಭೂತ; ಮಣ್ಣೊಂದು ಭೂತ; ಹೊನ್ನೊಂದು ಭೂತ. ಹೆಣ್ಣು ನಿಮ್ಮದೆಂಬಿರಿ; ಮಣ್ಣು ನಿಮ್ಮದೆಂಬಿರಿ; ಹೊನ್ನು ನಿಮ್ಮದೆಂಬಿರಿ. ಅವೇ ಪ್ರಾಣವಾಗಿ ಸಾವುತ್ತ ಹುಟ್ಟುತ್ತಿಪ್ಪಿರಿ. ಆ ಭೂತ ನಿಮ್ಮಹಿಡಿದು, ಹಿಸಿಕಿ ಕೊಂದು ಕೂಗಿ, ತಿಂದು ತೇಗಿ, ಹೀರಿ ಹಿಪ್ಪೆಯ ಮಾಡಿ ಗಾರುಮಾಡುತಿಪ್ಪವು ಕಾಣಿಭೋ. ಅ[ವ] ನೀವು ಹಿಡಿದು ಕೀರ್ತಿಸುತಿರ್ದು ಎಮಗೆ ಅನ್ಯದೈವವಿಲ್ಲೆಂಬ ಕುನ್ನಿಮನುಜರ ಮೆಚ್ಚುವನೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರೊ. ಪವನದ ಉತ್ಪತ್ಯದಲ್ಲಿದ್ದ ಮೂಲವನರಿದು ಆ ನಾಲ್ಕು ಪವನ ಒಂದುಗೂಡಿ ಪೃಥ್ವಿಯ ಗುಣವನರಿಯಬಲ್ಲರೆ ಭಕ್ತಯೆಂದೆನಿಸಬಹುದು. ಎಂಟಸಳ ಕಮಲದಲ್ಲಿ ಮೆಟ್ಟಿ ಆಡುವ ಹಂಸನ ಸ್ಥಳವನರಿಯದೆ ಪಟ್ಟಗಟ್ಟಿದರಸನ ಸಂದರುಶನವ ಮಾಡಬಲ್ಲರೆ ಜ್ಞಾನಿಯೆಂದೆಸಬಹುದು. ಮಾರ್ಗ ಇಲ್ಲದೆ ಹಾದಿಯ ನಡದು ಇಪ್ಪತ್ತೊಂದುಮಣಿಯ ಯಜ್ಜನಮಾಡಿ ಪೋಣಿಸಿ ಸುಮಾರ್ಗದಲ್ಲಿ ಬೆರಸ್ಯಾಡುತಿರ್ದ ತ್ರಿವಿಧಮಣಿಯ ಮೇರುವೆಯಂ ಕಟ್ಟಿ ಜಪವ ಮಾಡಬಲ್ಲರೆ, ಜಪವು ಬಲಿದು ಸ್ಥೂಲಕರ್ಮವೆಂಬ ಜಾಡ್ಯವನಳಿದುದು ವೈರಾಗ್ಯವಲ್ಲದೆ, ಇಂತೀ ಭೇದಂಗಳನರಿಯದೆ ಕುಲುಮದ, ಧನಮದ, ವಿದ್ಯಾಮದ, ಪ್ರಾಯಮದವೆಂಬ ಮದಂಗಳೊಳು ಮುಳುಗಿ ಕ್ರೋಧ, ಇಂದ್ರಿಯ ಕಪಟ, ವ್ಯಸನದಲ್ಲಿ ವೈರಾಗ್ಯವೆಂದೆನಿಸುವ ದ್ರೋಹಿಗಳಿಗೆ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕಲ್ಲು ಮಣ್ಣು ಮರದಲ್ಲಿ ದೇವನಿದ್ದಹನೆಂದು ಎಲ್ಲಿಯೂ ತೊಳಲುತ್ತಿರ್ಪ ಅಣ್ಣಗಳು ಕೇಳಿರೊ. ಅದನಲ್ಲಲ್ಲಿಟ್ಟು ಬಲ್ಲತನದ ಕುರುಹಲ್ಲದೆ, ಸೊಲ್ಲಿ[ಂ]ಗತೀತನನರಿಯ ಮನದಿರವೆಲ್ಲಿಹುದೊ ಅವನಲ್ಲಿಹ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಡವಿಯ ತೊಪ್ಪಲ ತರತರ ತಂದು ತಿಂದು ಒಡಲ ದಂಡಿಸಿಕೊಂಡು, ಪಡೆ, ಗವಿಯೊಳಗೆ ತಪಸ್ಸಿದ್ದೇವೆಯೆಂದು ಕಡು ಹೆಮ್ಮೆಯಲ್ಲಿ ನುಡಿವ ಅಣ್ಣಗಳು ನೀವು ಕೇಳಿರೋ. ಷಡುರಸಂಗಳು ಹುಟ್ಟಿದವು ಶಿವನ ಕರುಣರಸದಲ್ಲಿ, ಆ ರುಚಿಗಳ ಸುಖಮಂ ಪಡೆದವುದಕ್ಕೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥವ ಹಿಡಿದ ಭಕ್ತನ ಮನೆಯಲ್ಲಿ ಗುರುಲಿಂಗಜಂಗಮಕ್ಕೆ ನೀಡಿ ಮಾಡುವ ಭಕ್ತಿಪದಾರ್ಥವಾದ ಷಡುರುಚಿಯ ಕೊಂಬುದಕ್ಕೆ ನಿಮ್ಮಲ್ಲಿಯೆ ಷಡ್ವಿಧಲಿಂಗಂಗಳುಂಟು. ಅವ ನೋಡಿ ಎಚ್ಚತ್ತು ಸವಿಸವಿದರ್ಪಿಸಬಲ್ಲಡೆ ಮಹಾಮಹಿಮ, ತಾನೇನ ಮಾಡಲು ಜಡನಲ್ಲ, ಅಜಡನು ತಾನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರುಸ್ಥಲದಲ್ಲಿ ಅರತೆನೆಂದು ಸಹಭೋಜನದಲ್ಲಿ ಉಂಬುವ ಅಣ್ಣಗಳು ನೀವು ಕೇಳಿರೋ. ಅಂಗದ ಮೇಲೆ ಲಿಂಗವಿರ್ದಡೇನಯ್ಯಾ, ಲಿಂಗವ ಪ್ರಾಣಕ್ಕೆ ಅವಧರಿಸದನ್ನಕ್ಕ? ಲಿಂಗದ ಅಷ್ಟವಿಧಾರ್ಚನೆಯ ಬಲ್ಲ[ರೇ]ನಯ್ಯಾ, ಅಷ್ಟ [ಮದಂಗಳ] ನಷ್ಟವ ಮಾಡಿ, ಪಂಚೇಂದ್ರಿಯಂ[ಗಳ ಬಂಧಿಸಿ], ಲಿಂಗದ ಮುಖ ನೋಡದನ್ನಕ್ಕ? ಇಂತಪ್ಪ ವರ್ಮಾದಿವರ್ಮಂಗಳ ಭೇದವನರಿಯದೆ, ಕರಸ್ಥಲದಿ ಲಿಂಗವ ಪಿಡಿದು ಸಹಭೋಜನವೆಂದು ಒಂದಾಗಿ ಉಂಬುವ ಆ ಲಿಂಗದ್ರೋಹಿಗಳ ನೋಡಿ, ನಗುತಿರ್ದ, ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಬಂದುದನತಿಗಳೆದು ಬಾರದುದ ಬಯಸೆನೆಂಬುದು ಒಡಲ ಗುಣಧರ್ಮರಹಿತಂಗಲ್ಲದೆ, ಒಡಲ ಗುಣಧರ್ಮ ಉಳ್ಳವಂಗೆ ಆಗದು ನೋಡಾ. ಅದೆಂತೆಂದಡೆ: ರಾಜಭಯ ಚೋರಭಯ ಮೃಗಭಯ ದೆಸೆಭಯ ಸ್ತ್ರೀಭಯ ಬಂದು ಸೋಂಕಿದಲ್ಲಿ ಹೆಚ್ಚು ಕುಂದಿಲ್ಲದೆ ಒಂದೆ ಸಮವಾಗಿ ಕಾಣಬೇಕು. ಕ್ಷೀರ ಘೃತ ನವರತ್ನ ಆಭರಣ ಮನೆ ಮಂಚ ಹಸು ಧನ ವನಿತೆಯರ ಭೋಗಂಗಳು, ಲಿಂಗದಾಣತಿಯಿಂದ ಬಂದವೆಂದು, ಬಿಡದೆ ಭೋಗಿಸುವ ಅಣ್ಣಗಳು ನೀವು ಕೇಳಿರೊ, ಮದಸೊಕ್ಕಿದಾನೆ ಪೆರ್ಬುಲಿ ಕಾಳೋರಗ ಮಹಾಜ್ವಾಲೆ ಅಪ್ರಯತ್ನದಿಂದ ಬಂದು ಸಂಧಿಸೆ, ಸಂದು ಸಂಶಯವಿಲ್ಲದೆ `ಲಿಂಗದಾಣತಿ' ಎನ್ನದಿದ್ದಡೆ ಸ್ವಯವಚನ ವಿರುದ್ಧ ನೋಡಾ. ಇದು ಜೀವಜಾಲಂಗಳ ಉಪಾಧಿಕೆಯಲ್ಲದೆ ನಿರುಪಾಧಿಕೆಯಲ್ಲ. ಪೇಯಾಪೇಯವನರಿದು ಭೋಗಿಸಬೇಕು. ಭಯ ಲಜ್ಜೆ ಮೋಹ ಉಳ್ಳನ್ನಕ್ಕರ ಎಂತಪ್ಪುದೊ ? ಇದು ಕಾರಣ_ಅಂಗಕ್ಕಾಚಾರ, ಭಾವಕ್ಕೆ ಕೇವಲ ಜ್ಞಾನ. ಬಂದಿತ್ತು ಬಾರದು ಎಂಬ ತಥ್ಯಮಿಥ್ಯ ರಾಗದ್ವೇಷವನಳಿದು ತನ್ನ ನಿಜದಲ್ಲಿ ತಾನೆ ಪರಿಣಾಮಿಯಾಗಿಪ್ಪ[ನು] ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಹಾಲು ಅನಿಲ ಕಂದಮೂಲ ಪರ್ಣಾಂಬು ಫಲಾದಿಗಳನೆ ಆಹಾರವ ಕೊಂಡು ಮುಕ್ತರಾದೆಹೆವೆಂಬ ಅಣ್ಣಗಳು ನೀವು ಕೇಳಿರೆ. ಆಹಾರವ ಕೊಂಡು ಅಣುರೇಣು ನೊರಜ ಸರ್ವ ಸರ್ಪ ಪಕ್ಷಿಗಳು ವಾಯುವನೇ ಉಂಡು ಬೆಳೆವವು ನೋಡಾ. ಖಗ ಮೃಗ ವಾನರ ಕ್ರಿಮಿ ಕೀಟಕ ಇವೆಲ್ಲವೂ ಕಂದಮೂಲ ಪರ್ಣಾಂಬುವನೆ ಉಂಡು ಬೆಳೆವವು ಕೇಳಿರಣ್ಣಾ. ಕ್ಷೀರಾಬ್ಧಿಯೊಳಗೆ ಹುಟ್ಟಿದ ಪ್ರಾಣಿಗಳೆಲ್ಲ ಕ್ಷೀರವನೆ ಉಂಡು ಬೆಳೆವವು. ನಿಮಗೆ ಮುಕ್ತಿಯುಂಟಾದಡೆ ಇವು ಮಾಡಿದ ಪಾಪವೇನು ಹೇಳಿರೇ ? ವಿಚಾರಿಸುವಡೆ ನಿಮ್ಮಿಂದ ಅವೆ ಹಿರಿಯರು ನೋಡಾ. ವಾಗದ್ವೈತವ ನುಡಿದು ಅನುವನರಿಯದೆ ಬರುಸೂರೆವೋದಿರಲ್ಲಾ. ಆದಿ ಅನಾದಿಯ ಅಂಗವ ಮಾಡಿ, ಆ ಮಹಾ ಅನಾದಿಯ ಪ್ರಕಾಶವನೆ ಶ್ರೀಗುರು ಸಾಕಾರಮೂರ್ತಿಯಂ ಮಾಡಿ, ಅಂಗ ಮನ ಪ್ರಾಣ ಸರ್ವಾಂಗದಲ್ಲಿ ನೆಲೆಗೊಳಿಸಿದ ಭೇದವನರಿತು, ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ಮೊದಲಾದ ಸರ್ವೇಂದ್ರಿಯದಲ್ಲಿ ವೇಧಿಸಿಕೊಂಡು, ಶುದ್ಧ ಸುಯಿದಾನ ಸುಜ್ಞಾನದಿಂದ ಲಿಂಗಾವಧಾನ ಹಿಡಿದು ಅರ್ಪಿಸಿ, ಆ ಪರಮ ಪ್ರಸಾದವನುಂಡು, ಮಾತಂಗ ನುಂಗಿದ ನಾರಿವಾಳದ ಫಲದಂತೆ ಬಯಲುಂಡ ಪರಿಮಳದಂತೆ ನಿಜಗುರು ಭೋಗಸಂಗನೊಳು ಸಯವಾದ ಶರಣರಿರವು, ಮಿಕ್ಕಿನ ಭವಭಾರಿಗಳಿಗೆಂತು ಸಾಧ್ಯವಪ್ಪುದೊ, ಕೇಳಯ್ಯಾ.
--------------
ಭೋಗಣ್ಣ
ಇನ್ನಷ್ಟು ... -->