ಅಥವಾ

ಒಟ್ಟು 144 ಕಡೆಗಳಲ್ಲಿ , 36 ವಚನಕಾರರು , 117 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿಯಃ ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾಃ ನಮಂತಿ ದೇವಾ ದೇವೇಶಂ `ನ' ಕಾರಾಯ ನಮೋ ನಮಃ ಮಹಾದೇವಂ ಮಹಾತ್ಮಾನಂ ಮಹಾಜ್ಞಾನಪರಾಯಣಂ ಮಹಾಪಾಪ ಹರಂ ನಿತ್ಯಂ `ಮ' ಕಾರಾಯ ನಮೋ ನಮಃ ಶಿವಂ ಶಾಂತಧರಂ ದೇವಂ ಲೋಕಾನುಗ್ರಹ ಕಾರಣಂ ಶಿವಮೇಕಂ ಪರಬ್ರಹ್ಮ `ಶಿ'ಕಾರಾಯ ನಮೋ ನಮಃ ವಾಹನಂ ವೈಷಭೋ ಯಸ್ಯ ವಾಸುಕಿಃ ಕಂಠಭೂಷಣಂ ವಾಮಶಕ್ತಿಧರಂ ದೇವಂ `ವ'ಕಾರಾಯ ನಮೋ ನಮಃ ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪಿ ಮಹೇಶ್ವರಃ ಯೋ ಗುರುಃ ಸರ್ವದೇವಾನಾಂ `ಯ'ಕಾರಾಯ ನಮೋ ನಮಃ ವೇದ: ನಕಾರಾಯ ಮಕಾರಾಯ ಶಿಕಾರಾಯ ತಥೈವ ಚ ವಕಾರಾಯ ಯಕಾರಾಯ ಓಂಕಾರಾಯ ನಮೋ ನಮಃ ವೇದಮಾತಾ ಚ ಗಾಯಿತ್ರೀ ಮಂತ್ರಮಾತಾ ಷಡಕ್ಷರೀ ಸರ್ವದೇವಪಿತಾ ಶಂಭುಃ ಭರ್ಗೋ ದೇವಸ್ಯ ದ್ಥೀಮಹಿ ಷಡಕ್ಷರಮಿದಂ ಪುಣ್ಯಂ ಯಃ ಪಠೀತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿರ್ದಡೆ ಭವಬಂಧನ ಇಹಪರ ಸಂಸಾರಾದಿ ಪ್ರಪಂಚಬಂಧನ ಬಿಡದು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷಸಿದ್ಧಿ. ಸಾಕ್ಷಿ: ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋ ಮುಕ್ತೋ ನ ಸಂಶಯಃ ಎಂಬುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯ ಬಂದು ಮೋಕ್ಷ ತಾನೇ ಓಂ ನಮಃ ಶಿವಾಯ.
--------------
ಉರಿಲಿಂಗಪೆದ್ದಿ
ವೇದಾಂತವ ನುಡಿವವರ ಕಂಡೆ, ಸಿದ್ಧಾಂತವ ನಡೆವವರ ಕಾಣೆ. ಇಲ್ಲ ಎಂದಡೆ ಸಮಯಕ್ಕೆ ದೂರ, ಉಂಟೆಂದಡೆ ಜ್ಞಾನಕ್ಕೆ ದೂರ. ಉಭಯವ ಸಂಪಾದಿಸುವದಕ್ಕೆ ಎನಗೆ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜನ್ಮಕ್ಕೊಮ್ಮೆ ಬಂದು `ಶಿವಾಯ ನಮಃ' ಎಂದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು `ಹರಾಯ ನಮಃ' ಎಂದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಬಸವನ ಪ್ರಸಾದವ ತೆಗೆದುಕೊಂಡಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಚೆನ್ನಬಸವಣ್ಣನ ಪಾದೋದಕ[ವ] ತೆಗೆದುಕೊಂಡಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಪ್ರಭುವಿನ ಪಾದಕ್ಕೆ ವಂದಿಸಿದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಮಡಿವಾಳಣ್ಣನ ಅನುಭವದಲ್ಲಿದ್ದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿದಡೆ ಸಾಲದೇನೋ ಕಲ್ಲಯ್ಯಾ
--------------
ಸಿದ್ಧರಾಮೇಶ್ವರ
ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ, `ಅಯ್ಯಾ ಎಂದಡೆ ಸ್ವರ್ಗ, `ಎಲವೊ ಎಂದಡೆ ನರಕ. ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ ಕೈಲಾಸವೈದುವುದೆ ಕೂಡಲಸಂಗಮದೇವಾ. 240
--------------
ಬಸವಣ್ಣ
ಶರಣ ಎಂಬ ಶಬ್ದವಂ್ಕಂತಲ್ಲ. [ನೋಣಃ] ಎಂಬ ಸೂತ್ರಂದ ಶರಣನೆನಿಸಿದನು. ಶರ ಎಂದರೆ ಬಾಣ, ನ ಎಂದಡೆ ಅಂಥ ಮನ್ಮಥಬಾಣವಿಲ್ಲದವ. [ಅವ್ವನೇ ಶರಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಊರವಂಕದ ಹೊರಗಿದ್ದು, ಮನೆಯ ಬಾಗಿಲ ಕಾಣೆನೆಂದು ಅರಸುವನಂತೆ, ಇದಿರಿನಲ್ಲಿ ತೋರುವ ಕುರುಹ ಮರದು ಅರಿವನೊಳಕೊಂಡೆನೆಂಬುವನಂತೆ, ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ
ಕುಲ ಎಷ್ಟು ಎಂದಡೆ, ಎರಡು ಕುಲ. ಅವಾವೆಂದಡೆ : ಭವಿ ಒಂದು ಕುಲ, ಭಕ್ತ ಒಂದು ಕುಲ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿಪ್ಪ ಭಕ್ತರ ಕುಲವನರಸಿದಡೆ ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ ? ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ ? ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ ? ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ ಬಿನ್ನಹವ ಕೈಕೊಂಡು ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ, ಹಾವಿನಹಾಳ ಕಲ್ಲಯ್ಯಗಳ ಮನೆಯ ಶ್ವಾನನಾಗಿ ಹುಟ್ಟಲಿಲ್ಲವೆ ? ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ ಪ್ರಸಾದವ ಕೊಳಬೇಕು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ, ಮೇರಳ ಸಿಪ್ಪೆ ಮುಚ್ಚಿಯಲ್ಲದೆ ಅಂಕುರದ ತಿರುಳಿಗೆ ಆದಿಯಿಲ್ಲ. ತಿರುಳು ಅಂಕುರ ನಾಸ್ತಿಯಾದಲ್ಲಿ ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು. ಅಲ್ಲಾ ಎಂದಡೆ ಕ್ರೀವಂತರೊಪ್ಪರು, ಅಹುದೆಂದಡೆ ಅಮಲಿನ ಮಲಿನವಾಗದು. ದಗ್ಧವಾದ ಪಟ ಸಾಭ್ರಕ್ಕೊದಗದು. ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು. ಸದಾಶಿವಮೂರ್ತಿಲಿಂಗವೆಂದಲ್ಲಿ ಉಭಯನಾಮ ಲೀಯವಾಯಿತ್ತು.
--------------
ಅರಿವಿನ ಮಾರಿತಂದೆ
ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾದಿಯಾದ ತನುಗುಣಂಗಳು ದೇವ ದಾನವ ಮಾನವರಂತೆ ಆದಡೆ, ಲಿಂಗವಂತನೆಂಬ ಪರಿಯೆಂತಯ್ಯಾ? ತನುಗುಣಂಗಳು ಭೂತದೇಹಿಗಳಂತಾದಡೆ ಲಿಂಗದೇಹಿಕನೆಂಬ ಪರಿಯೆಂತಯ್ಯಾ? ಲಿಂಗಚಿಹ್ನವಿಲ್ಲದಡೆ ಲಿಂಗದೇಹಿಯೆಂಬ ಪರಿಯೆಂತಯ್ಯಾ? ಹಸಿವು ತೃಷೆ ವಿಷಯ ವ್ಯಸನವಡಗಿದಡೆ ಲಿಂಗಚಿಹ್ನೆ. ಕ್ರೋಧ ಲೋಭ ಮೋಹ ಮದ ಮತ್ಸರ ಇವಾದಿಯಾದ ದೇಹಗುಣಂಗಳಳಿದಡೆ ಲಿಂಗಚಿಹ್ನೆ. ದೇಹಗುಣಭರಿತನಾಗಿ ಲಿಂಗದೇಹಿ ಎಂದಡೆ, ಲಿಂಗವಂತರು ನಗುವರಯ್ಯಾ. ಅಂಗಗುಣವಳಿದು ಗುರುಲಿಂಗಜಂಗಮದಲ್ಲಿ ತನು ಮನ ಧನ ಲೀಯವಾದಡೆ ಆತನು ಸರ್ವಾಂಗಲಿಂಗಿಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ ಶಿವಜ್ಞಾನಿಗಳು ಮೆಚ್ಚುವರೆ ? ಶಿವ ಶಕ್ತಿಗಳೆರಡೂ ನೀನೇ ಎಂದಡೆ ಮಹಾನುಭಾವಿಗಳು ಪರಿಣಾಮಿಸುವರೆ ? ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ, ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
--------------
ಅಲ್ಲಮಪ್ರಭುದೇವರು
ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿದ್ದಡೆ ಬಂಧನ, ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷ, ಅದೆಂತೆಂದಡೆ: ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ ತನ್ಮಂತ್ರಜಪತೋ ಭಕ್ತ್ಯಾ ಸದ್ಯೋ ಮೋಕ್ಷೋ ನ ಸಂಶಯಃ ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯಾ, ಬಂಧನ ಮೋಕ್ಷವು ಓಂ ನಮಃ ಶಿವಾಯ.
--------------
ಉರಿಲಿಂಗಪೆದ್ದಿ
ಆ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ. ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ. ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ. ಆ ಆದಿ ಕಲೆ ನಾದ ಬಿಂದುಪ್ರಣವಕ್ಕೆ ಆದಿ ಪ್ರಕೃತಿಪ್ರಣವವೇ ಆಧಾರ. ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಯಪ್ರಣವವೇ ಆಧಾರ. ಆ ಪ್ರಾಣಮಾತ್ರೆಯಪ್ರಣವಕ್ಕೆ ಅಖಂಡಜ್ಯೋತಿರ್ಮಯವಾಗಿಹ ಲಿಂಗವೇ ಆಧಾರ. `ಮ' ಎಂದಡೆ ಆದಿ ಅನುಸ್ವಾರಪ್ರಣವ, `ಅ' ಎಂದಡೆ ಆದಿ ನಾದ ಪ್ರಣವ, `ಉ' ಎಂಬ ಆದಿಬಿಂದುಪ್ರಣವದಲ್ಲಿ ಬಂದು ಕೂಡಿ ಮಯೆಂಬ ಅನುಸ್ವಾರಪ್ರಣವದಲ್ಲಿ ಬಂದು ಕೂಡಲು ಮಹದೋಂಕಾರವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಸ್ಥಿ ಮಾಂಸ ಶುಕ್ಲ ಶೋಣಿತವುಳ್ಳನ್ನಕ್ಕ ಆರಿಗೂ ಅದಿವ್ಯಾದ್ಥಿಯ ತಾಪತ್ರಯದ ತನುತ್ರಯದ ಕೂಟಸ್ಥ ಬಿಡದು. ರೋಗವನರಿದು ವೈದ್ಯವ ಮಾಡಿಹೆನೆಂದಡೆ, ತನು ಪ್ರಮಾಣು, ಪೈತ್ಯಪ್ರಮಾಣು, ವಾತಪ್ರಮಾಣು, ಶ್ಲೇಷ್ಮಪ್ರಮಾಣು, ಆತ್ಮತತ್ವಪ್ರಮಾಣು, ಚಂದ್ರ ಸೂರ್ಯ ಬಿಂದು ಪ್ರಮಾಣು, ಮಿಕ್ಕಾದ ಸರ್ವಾಂಗ ಪ್ರಮಾಣ ಹೇಳಿಹೆನೆಂದಡೆ, ಮರೀಚಿಕಾಜಲದಂತೆ, ಸುರಚಾಪದಂತೆ, ಆಕಾಶದ ಪರಿಬಣ್ಣದಂತೆ, ಇಂತೀ ಶರೀರದ ತೆರ. ಅಲ್ಪಾಂತರ ತಿರುಗುವನ್ನಕ್ಕರ ಶರೀರ ಸಿಕ್ಕುಹುದಲ್ಲದೆ, ಮತ್ತೆಯೂ ಆತ್ಮನ ಕಟ್ಟಿಕೊಂಡಿಹೆನೆಂದಡೆ ಸತ್ವವುಂಟೆ ? ವ್ಯಾದ್ಥಿಯಲ್ಲಿ ಹೊಂದುವ ತೆರನಾದಡೆ, ಬ್ರಹ್ಮಂಗೆ ಸೃಷ್ಟಿಯಿಲ್ಲ, ವಿಷ್ಣುವಿಂಗೆ ಸ್ಥಿತಿ ಇಲ್ಲ, ರುದ್ರಂಗೆ ಲಯವಿಲ್ಲ. ಇಂತೀ ಕರ್ಮಕಾಂಡದಲ್ಲಿ ಪ್ರಾಪ್ತಿ, ವರ್ಮಕಾಂಡದಲ್ಲಿ ಸರ್ವ, ಜ್ಞಾನಕಾಂಡದಲ್ಲಿ ತ್ರಿವಿಧವಳಿದ ಮಹದೊಡಗೂಟ. ಇಂತೀ ಜಗದಲ್ಲಿ ಒಂದನಹುದು, ಒಂದನಲ್ಲಾ ಎಂದಡೆ, ಅಮೃತಕ್ಕೂ ಸುರಾಪಾನಕ್ಕೂ ಸರಿಯೆಂದು ಮಾರುವನ ತೆರದಂತೆ, ಆರಾರ ತೆರನನು ನೋಡಿ ಸುಖಿಯಾಗಿ, ತನ್ನನರಿವರಲ್ಲಿ ಮನಮುಕ್ತವಾಗಿ ಉಭಯವಳಿದು ಒಡಗೂಡಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಕಳುಹಿದಂತೆ ಮಾಡಿ, ಭಕ್ತಿಗೆ ಖೋಡಿ ಇಲ್ಲದೆ ಸತ್ಯವನೊಡಗೂಡಬೇಕು.
--------------
ವೈದ್ಯ ಸಂಗಣ್ಣ
ಲಿಂಗೈಕ್ಯರು ಲಿಂಗೈಕ್ಯರು ಎಂದೆಂಬಿರಿ. ಲಿಂಗೈಕ್ಯರ ನಿಲವ ಆರು ಬಲ್ಲರಯ್ಯ ಎಂದಡೆ, ಅಜಗಣ್ಣತಂದೆ, ಮೋಳಿಗೆ ಮಾರಿತಂದೆ, ಕೂಗಿನ ಮಾರಿತಂದೆ, ನುಲಿಯಚಂದಯ್ಯ, ಹಡಪದ ಅಪ್ಪಣ್ಣ, ಮುಗ್ಧಸಂಗಯ್ಯನವರು, ಘಟ್ಟಿವಾಳತಂದೆ ಮೊದಲಾದ ಪ್ರಮಥಗಣಂಗಳು, ಶಿವಜ್ಞಾನೋದಯವಾದಂಥ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರು ನೋಡೆಂದನಯ್ಯ ನಿಮ್ಮ ಲಿಂಗೈಕ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿಯುಗದಲ್ಲೊಬ್ಬಳು ಮಾಯಾಂಗನೆ, ಹಲವು ಬಣ್ಣದ ವಸ್ತ್ರವನುಟ್ಟುಕೊಂಡು, ಹೆಡಿಗೆ ತುಂಬ ದೇವರ ಹೊತ್ತುಕೊಂಡು, ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು. ಎಂದಡೆ ಆ ದೇವರನಾರೂ ಕೊಂಬವರಿಲ್ಲ. ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು, ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದ ಬದುಕಿದೆನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->