ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ತನ್ನ ತಾನರಿಯದೆ, ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ, ಕಾಮವ ತೊರೆಯದೆ, ಹೇಮವ ಜರೆಯದೆ, ನಾವು ಹರ ಗುರು ಚರ ಷಟ್‍ಸ್ಥಲದ ವಿರಕ್ತರೆಂದು ಚೆನ್ನಾಗಿ ನುಡಿದುಕೊಂಡು, ಕಾವಿ ಕಾಷಾಯಾಂಬರವ ಹೊದ್ದು, ಶಂಖ ಗಿಳಿಲು ದಂಡಾಗ್ರವ ಹೊತ್ತು, ಕೂಳಿಗಾಗಿ ನಾನಾ ದೇಶವ ತಿರುಗಿ, ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು ಕೂಗಿಸುತಿರ್ಪ[ನು] ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ ಪರಮಸುಖಿಯಾಗಿಪ್ಪವರಾರು ಹೇಳಾ ? ನಿಜದ ನಿರ್ಣಯವನರಿದು ಭಜನೆ ಭಾವನೆಯಳಿದು ತ್ರಿಜಗಪತಿಯಾಗಿಪ್ಪವರಾರು ಹೇಳಾ ? ಕೋಡಗದ ಮನದೊಳಗೆ ಮನವಿರಹಿತನಾಗಿ ಗಮನಗೆಡದಿಪ್ಪರಿನ್ನಾರು ಹೇಳಾ ? ಹಗೆಯಲ್ಲಿ ಹೊಕ್ಕು ಹಗೆಯಳಿದು ಸುಖಿಯಾಗಿ ತನಗೆ ತಾ ಕೆಳೆಯಾಗಿಪ್ಪರಾರು ಹೇಳಾ ? ಒಳಹೊರಗೆ ಸರ್ವಾಂಗ ಲಿಂಗವೆ ತಾನಾಗಿ ಇರಬಲ್ಲ ಪರಮಾರ್ಥರಾರು ಹೇಳಾ ? ಕಲಿದೇವಾ, ನಿಮ್ಮ ಶರಣ ಚೆನ್ನಬಸವಣ್ಣನ ನಿಲವನರಿದು, ಶರಣೆಂದು ನಾನು ಸುಖಿಯಾದೆನು.
--------------
ಮಡಿವಾಳ ಮಾಚಿದೇವ
ಅಹುದಹುದು ಇಂತಿರಬೇಡವೆ ನಿರಹಂಕಾರ. ಮಹಾಜ್ಞಾನಕ್ಕೆ ನಿರಹಂಕಾರವೆ ಶೃಂಗಾರ. ನಿರಹಂಕಾರಕ್ಕೆ ಭಕ್ತಿಯೆ ಶೃಂಗಾರ. ಭಕ್ತಿಗೆ ಬಸವಣ್ಣನೆ ಶೃಂಗಾರ. ಬಸವಣ್ಣಂಗೆ ಚೆನ್ನಬಸವಣ್ಣನೆ ಶೃಂಗಾರ. ಕಲಿದೇವರದೇವಾ, ಎನಗೆಯೂ ನಿನಗೆಯೂ ಚೆನ್ನಬಸವಣ್ಣನೆ ಶೃಂಗಾರ.
--------------
ಮಡಿವಾಳ ಮಾಚಿದೇವ
ಅಯ್ಯಾ, ಭಕ್ತ ಜಂಗಮದ ವಿವರವೆಂತೆಂದಡೆಃ ಭಕ್ತನ ಅಂಗ ಮನ ಪ್ರಾಣಂಗಳೆಲ್ಲ ಭಸ್ಮಫುಟಿಕೆಗಳಂತೆ. ಜಂಗಮದ ಅಂಗ ಮನ ಪ್ರಾಣಂಗಳೆಲ್ಲ ರುದ್ರಾಕ್ಷಿಮಣಿಯಂತೆ. ಭಕ್ತನ ಅಂಗತ್ರಯಂಗಳು ಪಂಚಲೋಹಗಳಂತೆ. ಜಂಗಮದ ಅಂಗತ್ರಯಂಗಳು ಮೃತ್ತಿಕೆ ಭಾಂಡದಂತೆ. ಭಕ್ತನ ಅಂಗತ್ರಯಂಗಳು ಬಂಗಾರದಂತೆ. ಭಕ್ತನ ಅಂಗತ್ರಯಂಗಳು ಮೌಕ್ತಿಕದಂತೆ. ಭಕ್ತನ ಅಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ ಪ್ರಾಯಶ್ಚಿತ್ತವುಂಟು. ಜಂಗಮದ ಅಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ. ಪ್ರಾಣವೇ ಪ್ರಾಯಶ್ಚಿತ್ತವಲ್ಲದೆ ಪೂರ್ವಾಚಾರಕ್ಕೆ ಯೋಗ್ಯವಲ್ಲ ಕಾಣಾ. ಮಹಾಘನ ಭಕ್ತಜಂಗಮದ ಸತ್ಯ ನಡೆನುಡಿಯ ವಿಚಾರವೆಂತೆಂದಡೆ: ಗುರುಲಿಂಗಜಂಗಮವಲ್ಲದೆ ಅನ್ಯಾರ್ಚನೆ, ಪಾದೋದಕ ಪ್ರಸಾದವಲ್ಲದೆ ಭಂಗಿ ಮದ್ದು ತಂಬಾಕು ನಾನಾ ಗಿಡಮೂಲಿಕೆ ವೈದ್ಯ ಫಲಾಹಾರ ಕ್ಷೀರಾಹಾರ, ಸ್ವಸ್ತ್ರೀಯಲ್ಲದೆ ಪರಸ್ತ್ರೀ ಗಮನ, ಸತ್ಯಕಾಯಕ ಬ್ಥಿಕ್ಷಾಹಾರವಲ್ಲದೆ ಚೋರತನ ಕುಟಿಲ ಮಂತ್ರಗಾರಿಕೆ ವೈದ್ಯ ಋಣಭಾರವಿಂತಿವನು ಹಿಡಿದಾಚರಿಸುವಾತನು ಸತ್ಯಸಹಜಜಂಗಮವಲ್ಲ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಲೀಯವಾಗಿ ಬಂದ ಪರಿಯ, ಅಕಾರ ಉಕಾರ ಮಕಾರಂಗಳು ಸೋಂಕದಿರ್ದ ಪರಿಯ, ನಿರ್ಲೇಪಸ್ಥಲವಾಧಾರವಾದ ಪರಿಯ, ನಿಮ್ಮ ಶರಣ ಬಸವಣ್ಣ ಬಲ್ಲನು. ಬೆಸಗೊಳ್ಳಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಮೃತಮಥನದಲ್ಲಿ ಅಜ ಹರಿ ಸುರಪ ವಾಲಿ ಸುಗ್ರೀವರಳಿದರು. ಕಾಶಿಯಲ್ಲಿ ಬ್ರಹ್ಮ ವಿಷ್ಣುಗಳಳಿದರು. ಕೇದಾರದಲ್ಲಿ ಪಾಂಡವರಳಿದರು, ಕಲ್ಯಾಣದಲ್ಲಿ ವ್ಯಾಳನಳಿದನು. ಶ್ರೀಶೈಲದಲ್ಲಿ ಹಿರಣ್ಯ ಧನುಜ ನಾಗಾರ್ಜುನರಳಿದರು. ಪಾತಾಳ ಲಂಕೆಯಲ್ಲಿ ಮಹಿರಾವಣನಳಿದನು. ಲವಣ ಲಂಕೆಯಲ್ಲಿ ಲಕ್ಷ್ಮಿಗಳುಪಿದವನಳಿದನು. ದಶರಥನ ತೋಹಿನಲ್ಲಿ ಮಂಡುಬಲಚೌಡನಳಿದನು. ಬ್ಥೀಮನ ಕೈಯಲ್ಲಿ ಕೀಚಕನಳಿದನು. ಮುನಿ ಕರ್ಣಿಕೆಯ ಶಿರವ ಹರಿದು, ಸುರಪನಜಹರಿಗಳು ಶಾಪಹತರಾದರು. ಋಷಿಯ ಸತಿಗಳುಪಿ ಸುರಪ ಮೈಯನಳಿದ. ಬ್ಥೀಷ್ಮರು ಕುಂಭಕರ್ಣ ದ್ರೋಣ ಜಾಂಬರು ನಿದ್ರೆಯಲ್ಲಿ ಅಳಿದರು. ವ್ಯಾಧರ ಬಾಣದಲ್ಲಿ ಬಿದ್ದರು ವಿಷ್ಣು ಪಾಂಡ್ಯರಾಯರು. ವಿಷದ ಪಣ್ಣಿಂದಳಿದ ಪರೀಕ್ಷಿತರಾಯನು. ಪರಶುರಾಮನ ಕೈಯಲಿ ಜಮದಗ್ನಿ ಮುನಿಯ ವಧೆಯಿಂದ ಕಾರ್ತಿಕರಳಿದರು. ವೃಷಭನ ವಧೆಯಿಂದ ವೀತರಾಜನಳಿದ. ಕುರುಕ್ಷೇತ್ರದಲ್ಲಿ ಕೌರವರಳಿದರು. ಮಾಸನೂರಲ್ಲಿ ಸಿದ್ಧರಳಿದರು. ಕೊಲ್ಲಾಪುರದಲ್ಲಿ ಹರಿ ಅಜ ಇಂದ್ರ ದಿಕ್ಪಾಲಕರು ತೃಣಕೆ ಲಫುವಾದರು. ಹೋಮ ಕಾಮ ತ್ರಿಣೇತ್ರ ಪಂಚಮುಖರೆಲ್ಲ ಮಹಾಪ್ರಳಯದಲ್ಲಿ ಅಳಿದರು. ಇನ್ನು ಬಿಜ್ಜಳರಾಯನ ಅಳಿವಿನುಳಿವಿನ ಹವಣವೇನು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ ತನ್ನ ಪವಿತ್ರಸ್ವರೂಪವಾದ ಗುರುಲಿಂಗಜಂಗಮಕ್ಕೆ ನಿಂದ್ಯಕುಂದ್ಯಗಳ ಕಲ್ಪಿಸಿ, ಅರ್ಥಪ್ರಾಣಾಬ್ಥಿಮಾನವ ಕೊಂಡ ಗುರುಲಿಂಗಜಂಗಮದ್ರೋಹಿಗಳ ಸಮಪಙÂ್ತಯಲ್ಲಿ ಅರ್ಚನಾರ್ಪಣಗಳ ಮಾಡ ನೋಡಾ. ಆ ದ್ರೋಹಿಗಳಿಗೆ ಪಾದೋದಕ ಪ್ರಸಾದವ ಕೊಟ್ಟು ಕೊಳ್ಳ ನೋಡಾ. ಆ ದ್ರೋಹಿಗಳ ಸರ್ವಾವಸ್ಥೆಯಲ್ಲಿ ಧ್ಯಾನಕ್ಕೆ ತಾರ ನೋಡಾ. ಆ ದ್ರೋಹಿಗಳಿಗೆ ಶರಣೆಂದು ನುಡಿದು ವಂದಿಸ ನೋಡಾ. ಈ ವಿಚಾರವನರಿದಡೆ ಮಹಾಚಿದ್ಘನಪ್ರಸಾದಿಯೆಂಬೆನಯ್ಯಾ. ಈ ವಿಚಾರವನರಿಯದ ವೇಷಧಾರಕ ಉದರಪೋಷಕ ನುಡಿಜಾಣರ ನೋಡಿ, ಮನ ಭಾವಂಗಳಲ್ಲಿ ಊರಿಂದ ಹೊರಗಣ ಹಿರಿಯಕುಲದವರ ಮನೆಯ ಹೊರಬಳಕೆಯ ಬೋಕಿಯೆಂದು ಬಿಡುವೆ ನೋಡಾ, ಕಲಿದೇವರ ದೇವ. ಇಂತು ಗುರುವಾಕ್ಯವ ಮೀರಿ ತನ್ನ ಅಂಗವಿಕಾರದಾಸೆಗೆ ಚರಿಸುವಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾದೋದಕ ಪ್ರಸಾದ ಮುನ್ನವೆ ಇಲ್ಲ ನೋಡಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಅಯ್ಯಾ, ಇಹಪರಂಗಳಂ ಗೆಲಿದ ಭಕ್ತ ಜಂಗಮಕ್ಕೆ, ಸದಾಚಾರವೆ ವಸ್ತು ನೋಡಾ. ಸದಾಚಾರವನರಿಯದ ಪಾಪಿ, ಸೂಕರನಿಂದ ಕಷ್ಟ ನೋಡಾ. ಭಕ್ತ ಜಂಗಮಕ್ಕೆ ಸದಾಚಾರವೇ ಬೇಕು. ಸದಾಚಾರವಿಲ್ಲದವಂಗೆ ಭವವುಂಟು. ಭವವುಂಟಾದವಂಗೆ ಆಚಾರವಿಲ್ಲ. ಆಚಾರವಿಲ್ಲದವ ಭಕ್ತನಲ್ಲ, ಜಂಗಮವಲ್ಲ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ, ಸತ್ಯಸದಾಚಾರ ಸದ್ಭಕ್ತನಾದಡೆ ಷೋಡಶಭಕ್ತಿಯ ತಿಳಿಯಬೇಕು. ವೀರಮಾಹೇಶ್ವರನಾದಡೆ ಷೋಡಶಜ್ಞಾನವ ತಿಳಿಯಬೇಕು. ಪರಮವಿರಕ್ತನಾದಡೆ ಷೋಡಶಾವರಣವ ತಿಳಿಯಬೇಕು. ಶರಣನಾದಡೆ ಅಷ್ಟಾವಧಾನವ ತಿಳಿಯಬೇಕು. ಐಕ್ಯನಾದಡೆ ತನ್ನಾದಿಮದ್ಯಾವಸಾನವ ತಿಳಿಯಬೇಕು. ಲಿಂಗಾನುಭಾವಿಯಾದಡೆ ಸರ್ವಾಚಾರಸಂಪತ್ತಿನಾಚರಣೆಯ ತಿಳಿಯಬೇಕು. ಈ ವಿಚಾರವನರಿಯದೆ ಬರಿದೆ ಷಟ್ಸ್ಥಲವ ಬೊಗಳುವ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಚ್ಚಪ್ರಸಾದವೆಂದು ಮನದಿಚ್ಫೆಗೆ ಗಡಣಿಸಿಕೊಂಬ ದುರಾಚಾರಿಯ ಮಾತ ಕೇಳಲಾಗದು. ಭವಿ ಕೊಂಡುದು ಓಗರ, ಭಕ್ತ ಕೊಂಡುದು ಅನರ್ಪಿತ. ಇಂತೀ ಉಭಯವನರಿದು ಪ್ರಸಾದವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಾವು ಗುರು ಲಿಂಗ ಜಂಗಮದ ಪಾದೋದಕ ಪ್ರಸಾದಸಂಬಂದ್ಥಿಗಳೆಂದು ನುಡಿದುಕೊಂಬ ಪಾತಕರ ಮುಖವ ನೋಡಲಾಗದು. ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ, ಜನನದ ಬೇರ ಕಿತ್ತೊರಸಬೇಕು. ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು. ಇಂತಪ್ಪ ಚಿದ್ರಸ ಪಾದೋದಕ ಚಿತ್‍ಪ್ರಕಾಶ ಪ್ರಸಾದ. ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ ಸಂಬಂದ್ಥಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು, ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ, ಸದಾಚಾರದಿಂದ ಆಚರಿಸಲರಿಯದೆ, ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ, ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ ಅಷ್ಟಾವರಣವೆಂತು ಸಿದ್ಧಿಯಹುದೋ? ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ ಉಪಮಂತ್ರ ಕೋಟ್ಯಾನುಕೋಟಿಗೆ ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು. ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು. ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು. ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು. ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು. ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ ಇಂಥವರಿಗೆಂತು ಸಾಧ್ಯವಹುದು? ಆಗದೆಂದಾತ ನಮ್ಮ ಶರಣ ಕಲಿದೇವರದೇವ
--------------
ಮಡಿವಾಳ ಮಾಚಿದೇವ
ಅಂಗಾಲಕಣ್ಣವರಾಗಬಹುದಲ್ಲದೆ ಮೈಯೆಲ್ಲ ಕಣ್ಣವರಾಗಬಾರದು. ಮೈಯೆಲ್ಲ ಕಣ್ಣವರಾಗಬಹುದಲ್ಲದೆ ನೂಸಲ ಕಣ್ಣು ಚತುರ್ಭುಜರಾಗಬಾರದು. ನೊಸಲಕಣ್ಣು ಚತುರ್ಭುಜದವರಾಗಹುದಲ್ಲದೆ ಪಂಚವಕ್ತ್ರ ದಶಭುಜದವರಾಗಬಾರದು. ಪಂಚವಕ್ತ್ರ ದಶಭುಜದವರಾಗಬಹುದಲ್ಲದೆ ಸರ್ವಾಂಗಲಿಂಗಿಗಳಾಗಬಾರದು. ಸರ್ವಾಂಗಲಿಂಗಿಗಳಾಗಬಹುದಲ್ಲದೆ, ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಅಣುರೇಣು ಮಹಾತ್ಮನೆಂದೆಂಬರು. ಅಣುರೇಣು ತೃಣಕಾಷ*ದೊಳಗಿರ್ಪನೆಂಬರು. ಅಮ್ಮೆನಯ್ಯಾ, ನಾನೆನಲಮ್ಮೆನಯ್ಯಾ. ಶರಣಸನ್ನಹಿತನು, ಭಕ್ತಕಾಯ ಮಮಕಾಯನು, ದಾಸೋಹ ಪರಿಪೂರ್ಣನು, ಸದುಹೃದಯದಲ್ಲಿ ಸಿಂಹಾಸನವಾಗಿ ಅಗಲದಿರ್ಪನು ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು. ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು. ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು. ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು. ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅಸಮ ಶಿವಲಿಂಗ ಕೈವಶವಾಗಿರಲು, ವಸುಧೆಯ ಮೇಲಣ ಪ್ರತಿಷೆ*ಗೆ ಶರಣೆಂದಡೆ, ಬಸವಣ್ಣಪ್ರಿಯ ಲಿಂಗದ ಚೇತನವದಂದೆ ತೊಲಗುವದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಂಗದ ಮೇಲೆ ಲಿಂಗವ ಧರಿಸಿ ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ. ಮನೆಗೊಂದು ದೈವ, ನಿಮಗೊಂದು ದೈವ. ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ, ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು, ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆ ಕುಂಭೀಪಾತಕ, ನಾಯಕನರಕ ತಪ್ಪದೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ. ಜಂಗಮಕ್ಕಲ್ಲದೆ ನೀಡೆ, ಶರಣಸಂಗವಲ್ಲದೆ ಮಾಡೆ. ಕಲ್ಯಾಣದ ಮಹಾಗಣಂಗಳೊಂದು ಹೊಳೆಯ ಮಾಡಿಕೊಟ್ಟರು. ಆ ಹೊಳೆಯಲ್ಲಿ ಹೆಣ್ಣು ಗಂಡು ಸುಳಿಯಲೀಯೆನು. ಚಿಕ್ಕವರು ಹಿರಿಯರ ಸುಳಿಯಲೀಯೆನು. ಎಲ್ಲಾ ಮಹಾಗಣಂಗಳು ಎನ್ನ ಹೊಳೆಯಲೆ ಹಾಯುವರು. ಲಿಂಗದ ವಸ್ತ್ರವನೊಗೆದು ಕಾಯಕದಲ್ಲಿ ಶುದ್ಧನಾದೆನು. ಎನ್ನ ಕಾಯಕವನವಧರಿಸು ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ, ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ ವಿಪ್ರರು, ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು, ಬೆಂಕಿಯ ಮೇಲೆ ಹಾಕಿ, ತಾನು ಪರಬ್ರಹ್ಮನಾದೆನೆಂದು ನರಕಕ್ಕೆ ಹೋದರೊಂದುಕೋಟ್ಯಾನುಕೋಟಿ ಬ್ರಹ್ಮರು. ವೇದದ ಅರ್ಥವನರಿಯದೆ ಜೀವನ ಬಾಧೆಯಂ ಮಾಡುವ ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು. ಆದಿಯ ಪ್ರಮಥರು ಕಂಡುದೆಂತೆಂದಡೆ: ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ, ಕೋಣನೆಂಬುದು ಕ್ರೋಧ, ಅಂಗವಿಕಾರವೆಂಬುದು ಹೋತ. ಇಂತು ನಾಲ್ಕು ವರ್ಗಂಗಳು. ಶಿವಜ್ಞಾನವೆಂಬ ಅಗ್ನಿಯಲ್ಲಿ ದಹನ ಮಾಡುವರು ನಮ್ಮವರು. ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ, ಜೀವಹಿಂಸೆಯ ಮಾಡುವ ವಿಪ್ರರ ಮುಖವ ನೋಡಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಷ್ಟತನುವಿನ ನಿಷಾ*ಪರವ ಬಿಟ್ಟು, ಬಟ್ಟಬಯಲಲಿ ನಿಂದ ನಿಜವ ನೋಡಾ. ಹತ್ತೆಂಬ ಪ್ರಾಣವ ಸುತ್ತಿ ಸುಳಿಯಲೀಸದೆ ಬತ್ತಿ ಸುಟ್ಟು ಸಯವಾದ ಘನಚೈತನ್ಯವ ನೋಡಾ. ನಿಷೆ* ನಿಬ್ಬರ ತೊಟ್ಟುಬಿಟ್ಟು ಸಚ್ಚಿದಾನಂದವಾದ ಪರಿಯ ನೋಡಾ. ಕಲಿದೇವರದೇವನ ನಿಲುವಿಂಗೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಅಯ್ಯಾ, ಮಾತೆ ಪಿತರಾಗಲಿ, ಸಹೋದರ ಬಂಧುಗಳಾಗಲಿ, ಅತ್ಯಂತ ಸ್ನೇಹದಲ್ಲಿ ಕೂಡಿದವರಾಗಲಿ, ಗುರುಕಾರುಣ್ಯವ ಪಡೆದು ಶಿವಸೋದರರಾಗಲಿ, ಶಿವಾಚಾರ ಶಿವಕಾರ್ಯಕ್ಕೆ ಸಹಕಾರಿಗಳಲ್ಲದೆ ವಕ್ರವಾದವನು ಮಾತಿನಲ್ಲಿ ನಿರಾಕರಿಸಿ ನುಡಿಯದೆ, ಮನದಲ್ಲಿ ಪತಿಕರಿಸಿ ಕೂಡಿಸಿಕೊಂಡು ನಡೆದೆನಾದಡೆ, ಅಫೋರನರಕದಲ್ಲಿಕ್ಕು ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಿತ್ಯನಿಃಕಳಂಕ ಸತ್ಯಸದಾಚಾರ ಭಕ್ತಜಂಗಮದ ಆಚರಣೆಸಂಬಂಧವ ಒಳಗು ಹೊರಗು ಎನ್ನದೆ, ಸಾಕಾರ ನಿರಾಕಾರವಾದ ಒಂದೆ ವಸ್ತುವೆಂದು ತಿಳಿದು, ಚಿದಂಗಕ್ಕೆ ಇಷ್ಟಲಿಂಗ ಚಿದ್ವಿಭೂತಿ ಚಿದ್ರುದ್ರಾಕ್ಷಿ ಸದ್ಭಕ್ತಿಯ ಸಂಬಂಧಿಸಿ, ಚಿತ್ಪ್ರಾಣಕ್ಕೆ ಪಾದೋದಕ ಪ್ರಸಾದ ಶಿವಮಂತ್ರ ಸಮ್ಯಜ್ಞಾನವ ಸಂಬಂಧಿಸಿ, ಭಕ್ತ ಧವಳಾಂಬರಧಾರಕನಾಗಿ, ಜಂಗಮ ಶಿವಲಾಂಛನಧಾರಕನಾಗಿ, ಪರದೈವ ಪರಪಾಕ ಪರಶಾಸ್ತ್ರ ಪರಬೋಧೆ ಪರದ್ರವ್ಯ ಪರಸ್ತ್ರೀ ಪರಜಪ ಪರನಿಂದೆ ಅತಿಯಾಸೆ ಕಾಂಕ್ಷೆ ಮಲತ್ರಯದಲ್ಲಿ ಮೋಹಿಸದೆ, ಮಥನದಲ್ಲಿ ಕೂಡದೆ ಭವಿಮಾರ್ಗ ಸಂಗವ ಬಳಸಿದ ಶಿಷ್ಯ ಪುತ್ರ ಸ್ತ್ರೀ ಬಂಧು ಬಳಗ ಒಡಹುಟ್ಟಿದವರು ಪಿತ ಮಾತೆ ಗುರುವೆಂದು ಒಡಗೂಡಿ ಬಳಸಿದಡೆ ಭಕ್ತಜಂಗಮಸ್ಥಲಕ್ಕೆ ಸಲ್ಲ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ. ಪೂರ್ವಜ್ಞಾನವೆಂಬುದೆ ವೇದ, ಶಾಸ್ತ್ರ ಆಗಮಂಗಳೆಂಬುವು ಪೂರ್ಣ ಪ್ರಮಾಣ ಇವಲ್ಲ ಕಂಡಯ್ಯಾ. ಇಂತೀ ಪ್ರಮಾಣವನರಿಯದೆ ನಿಂದ ನಿಮ್ಮ ಶರಣರ ತೋರಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಯ್ಯಾ, ಸದಾಚಾರವೆಂದಡೆ ಗುರುಲಿಂಗಜಂಗಮದಾರ್ಚನೆ, ಪಾದೋದಕ ಪ್ರಸಾದ ಸೇವನೆ, ಪಂಚಾಕ್ಷರ ಷಡಕ್ಷರ ಸ್ತೋತ್ರ, ಚಿದ್ಘನ ಮಹಾಲಿಂಗಧ್ಯಾನ, ಪರದ್ರವ್ಯ ನಿರಸನ. ಇಂತಿದು ನಿತ್ಯವೆಂದು ಸದ್ಗುರು ಮುಖದಿಂ ತಿಳಿದು, ಭಿನ್ನವಿಲ್ಲದೆ ಆಚರಿಸುವದೆ ಆಚಾರವಲ್ಲದೆ ಶುದ್ಧಶೈವರ ಹಾಂಗೆ ನಂದಿ ವೀರಭದ್ರ ಹಾವುಗೆ ಗದ್ದುಗೆ ಕಂಥೆ ಕಮಂಡಲು ಲಿಂಗಂಗಳೆಂದು ಇದಿರಿಟ್ಟು ಪೂಜಿಸುವವನ ಮನೆಯ ಪಾಕ, ಮದ್ಯ ಮಾಂಸ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಂಗವಿಕಾರವಳಿದು, ಜಂಗಮಲಿಂಗಲಾಂಛನ ವಿಭೂತಿ ರುದ್ರಾಕ್ಷಿಯ ದರ್ಶನವಿಲ್ಲದೆ ಜಂಗಮವೆನಿಸಿಕೊಂಬ ಭಂಗಿತರು, ಭಕ್ತ, ವಿರಕ್ತರಾಗಲಾಗದೆಂಬ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು. ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು. ಅಹುದೆಂದಡೆ ಅಲ್ಲವೆಂದತಿಗಳೆವರು. ಕುತರ್ಕ ಶಾಸ್ತ್ರದಿಂದ ಯಮಗತಿಗರ ಕೂಡೆ ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ

ಇನ್ನಷ್ಟು ...