ಅಥವಾ

ಒಟ್ಟು 23 ಕಡೆಗಳಲ್ಲಿ , 11 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದ್ದುಮುಖದ ಮಾನಿನಿಯ ಮಸ್ತಕದ ಮೇಲೆ ಅಗ್ನಿವರ್ಣದ ಪಂಜರದಲ್ಲಿ ಶ್ವೇತವರ್ಣದ ಒಂದು ಗಿಳಿ ಇಹುದು. ಆ ಗಿಳಿಯ ಕೊಳ್ಳಬೇಕೆಂದು ಆನೆ, ಕುದುರೆ, ವೈಲಿ, ಪಲ್ಲಕ್ಕಿಯನೇರಿಕೊಂಡು ಹೋದವರಿಗೆ ಆ ಗಿಳಿಯ ಕೊಡಳು. ದ್ರವ್ಯವುಳ್ಳವರಿಗೆ ಆ ಗಿಳಿಯ ತೋರಳು. ಕೈ ಕಾಲು ಕಣ್ಣು ಇಲ್ಲದ ಒಬ್ಬ ಬಡವ್ಯಾಧನು ಬಂದರೆ, ಆ ಗಿಳಿಯ ಕೊಟ್ಟು ಸುಖಿಸುವಳು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದಾಸಿಯ ಸಂಗವ ಮಾಡುವ ಪಾಪಿಗೆ ಈಶ್ವರನ ಪೂಜಿಸುವ ಆಶೆಯಬೇಕೆ ? ವೇಶಿಯ ಸಂಗವ ಮಾಡುವ ದ್ರೋಹಿಗೆ ಶಿವಪ್ರಸಾದವ ಕೊಂಬ ಆಶೆಯದೇಕೆ ? ಪರಸ್ತ್ರೀ ಸಂಗವ ಮಾಡುವ ಪಂಚಮಹಾಪಾತಕರಿಗೆ ಪರಬ್ರಹ್ಮದ ಮಾತಿನ ಮಾಲೆಯ ಅದ್ವೈತವದೇಕೆ ? ಇಂತಿವರ ನಡೆನುಡಿ ಎಂತಾಯಿತ್ತೆಂದಡೆ, ಗಿಳಿ ಓದಿ ಹೇಳಿ, ತನ್ನ ಮಲವ ತಾ ತಿಂದಂತಾಯಿತ್ತೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ವೇದವನೋದಿ ಕೇಳಿ ವೇದದ ವರ್ಮವನರಿದ ಫಲ ದಾಸೋಹವಯ್ಯಾ. ಶಾಸ್ತ್ರವನೋದಿ ಕೇಳಿ ಶಾಸ್ತ್ರದ ವರ್ಮವನರಿದ ಫಲ ದಾಸೋಹವಯ್ಯಾ. ಪುರಾಣವನೋದಿ ಕೇಳಿ ಪುರಾಣದ ವರ್ಮವನರಿದ ಫಲ ದಾಸೋಹವಯ್ಯಾ. ಆಗಮವನೋದಿ ಕೇಳಿ ಆಗಮದ ವರ್ಮವನರಿದ ಫಲ ದಾಸೋಹವಯ್ಯಾ. ಪುರಾತನರ ಗೀತ ವಚನ ಪ್ರಸಂಗಾನುಭವದಲ್ಲಿ ದೃಷ್ಟಫಲ ದಾಸೋಹವಯ್ಯಾ. ವೇದಶಾಸ್ತ್ರ ಪುರಾಣ ಆಗಮ ಪುರಾತನರ ಗೀತದ ವಚನ ಪ್ರಸಂಗವನರಿದು ದಾಸೋಹವಿಲ್ಲದಿದ್ದಡೆ ಆ ಓದು ಗಿಳಿ ಓದಿದಂತೆ. ಆ ಕೇಳುವೆ, ಮರುಳ ಕೇಳುವೆಯಂತೆ. ಅವನೇತಕ್ಕೂ ಬಾರ್ತೆಯಲ್ಲಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ ? ಅಟ್ಟುಣ್ಣಬಾರದ ಮಡಕೆ ಇರ್ದಡೇನಯ್ಯಾ ಮನೆಯೊಳಗೆ ? ಶಿವ ನಿಮ್ಮ ಮುಟ್ಟದ ಮನವಿರ್ದಡೇನಯ್ಯಾ ತನುನಿನೊಳಗೆ ? ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ? ಬಚ್ಚಲೊಳಗಣ ಬಾಲ್ಪುಳು ಬಲ್ಲುದೆ ನಿಚ್ಚಳದ ನೀರಸುಖವ ? ನಿಚ್ಚನಿಚ್ಚಲೋದುವ ಗಿಳಿ ಬಲ್ಲುದೆ ತನಗೆ ಬಹ ಬೆಕ್ಕಿನ ಬಾಧೆಯ ? ಹುಚ್ಚುಕೊಂಡ ನಾಯಿ ಬಲ್ಲುದೆ ತನ್ನ ಸಾಕಿದೊಡೆಯನ ? ಇದು ಕಾರಣ, ಒಡಲ ಪಡೆದಡೇನು ? ಮಡದಿಯ ನೆರಹಿದಡೇನು ? ಒಡವೆಯ ಗಳಿಸಿದಡೇನು ? ಶಿವನೆ ನಿಮ್ಮನರಿಯದ ಮನುಜನ ಒಡಲೆಂಬುದು, ಹೊಲೆಜೋಗಿಯ ಕೈಯ ಒಡೆದ ಸೋರೆಯಂತೆ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ವಟವೃಕ್ಷದ ಘಟದ ಹೊಟ್ಟೆಯಲ್ಲಿ ತತ್ತಿಯನಿಕ್ಕಿತ್ತೊಂದು ಗಿಳಿ. ತತ್ತಿ ಮೂರು, ಆ ತತ್ತಿಗೆ ಪಕ್ಷಿ ಮೂರು. ಕಂಡನೊಬ್ಬ ಅಂಧಕ. ವೃಕ್ಷವ ಹತ್ತುವುದಕ್ಕೆ ಮೆಟ್ಟಿಲ್ಲ. ಹೊಟ್ಟೆಯಲ್ಲಿ ಇಕ್ಕುವುದಕ್ಕೆ ಕೈಯಿಲ್ಲ. ಗಿಳಿಯಾಸೆ ಬಿಡದು. ಇದಿರಾಸೆಯ ಬಿಡಿಸು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
-->