ಅಥವಾ

ಒಟ್ಟು 25 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಿಲ್ಲದಡೆ ಪರ್ವತ ಸಂಧಿಯದೇಕಯ್ಯಾ ಯತಿಗೆ? ಅಂದಾಶ್ರಯಿಸಿದ ಮಯೂರ ಚಂದವಾಯಿತ್ತೇನಯ್ಯಾ? ಇವೆಲ್ಲ ಬರಿಯ ಭ್ರಮೆ! ಸಂದಳಿದು ಇಂದುಧರ ತಾನಾಗಬಲ್ಲಡೆ, ಗಿರಿ ಗ್ರಾಮ ವನವಾಸದ ಗೊಂದಿ ಏಕಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸೋಮವಾರಕ್ಕೆ ಮೀಸಲೆಂದು ಊರ ಹೊರಗಣ ದೈವವ ಆರಾಧಿಸಿ, ಅವಕ್ಕೆ ಇಕ್ಕಿದ ಮಿಕ್ಕಿನ ಕೂಳ ಸೋಮಧರಗರ್ಪಿತವೆಂಬವರ ಭಕ್ತಿಯ ತೆರ ಎಂತಾಯಿತ್ತೆಂದಡೆ, ಗ್ರಾಮ ಸೂಕರನು ಶುನಕನು ಗಂಗೆಯನೀಸಿ ಅಶುದ್ಧ ಭುಂಜಿಸಿದ ತೆರನಾಯಿತ್ತೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದೇಶ ಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆ ಇಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೇ ಸುಖಿ. ನಿಧಾನಿಸಿ ಕೂಡಿದಲ್ಲಿಯೇ ತೃಪ್ತಿ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ, ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಗ್ರಾಮ ಮಧ್ಯದೊಳಗೆ ದೇಗುಲ, ದೇಗುಲದೊಳಗೆ ಮೂವರ ಕಂಡೆ. ಒಬ್ಬನೆಡೆಯಾಡುತ್ತಿರ್ದ, ಒಬ್ಬ ನುಡಿಯುತ್ತಿರ್ದ, ಒಬ್ಬ ಅಳುತ್ತಿರ್ದ, ಬಂದು ನೋಡಲಾಗಿ ನಡೆವನ ಕಾಲ ನಡಗಿಸಿ, ನುಡಿವನ ಬಾಯ ಮುಚ್ಚಿ, ಅಳುವನ ಕಣ್ಣಿನಲ್ಲಿ ಬಣ್ಣಬಚ್ಚಣೆಯ ಮಣ್ಣ ತುಂಬಿ, ಈ ಮೂವರೆಡೆಯಾಟದಲ್ಲಿ ನೋಯಲಾರದೆ, ಅಂಜಿ ಅಲಸಿ ಹಿಂಗಿರ್ದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಳಿಕಿಂತು ಹೃತ್ಕಮಲಕರ್ಣಿಕಾಮಧ್ಯದಲ್ಲಿ ಗುರುವಿಚಿತ್ತಿಷ್ಟಲಿಂಗದಲ್ಲಿ ಸಿಂಹಾಸನದಲ್ಲಿ ಮಾಡುವಾತ್ಮಾರ್ಥವಾದ ಪೂಜೆಗಳಂ ಗ್ರಾಮ ನದಿತೀರಾದಿ ಕ್ಷೇತ್ರಂಗಳಲ್ಲಿ ದೇವದಾನವಾದಿಗಳಿಂ ಪ್ರತಿಷಿ*ತಮಾದ ಲಿಂಗಂಗಳಲ್ಲಿ ಮಾಳ್ಪ ಪದಾರ್ಥಪೂಜೆಗಳಂ ಬಿಡದಾರಾಧಿಸುತ್ತಮಾತ್ಮಾರ್ಥ ಪೂಜೆಯೋಳೀಶ್ವ ರಾವರಣಮಾದ ವೃಷಭ ಭಾಸ್ಕರ ವೀರಭದ್ರ ಮಾತೃಕೆ ಸ್ಕಂದ ಕ್ಷೇತ್ರಪಾಲ ಬ್ರಹ್ಮ ವಿಷ್ಣು ರುದ್ರರೆಂಬ ದೇವತೆಗಳನವರವರ ಸ್ಥಾನಕ್ರಮವರಿದಾರಾಧಿಸುತ್ತೆ ಬೇರೆ ಸ್ಥಾಪಿತಂಗಳಾದ ವಿಷ್ಣಾ ್ವದಿ ದೇವತಾಭಜನೆಗಳಂ ತ್ಯಜಿಸಿ, ತನ್ನಿಷ್ಟಲಿಂಗವು ಚೋರಾದಿಗಳಿಂ ಪೋಗಿ ಬಾರದಿರ್ದೊಡೊಂದು ಲಕ್ಷ ಅಘೋರಮಂತ್ರ ಜಪದಿ ಶುದ್ಧಾತ್ಮನಾಗಿ, ಮೇಲಾಚಾರ್ಯನಿಂ ವಿಧ್ಯುಕ್ತಮಾಗಿ ಮತ್ತೆ ಪಡೆದು ವ್ರತ ನಿಯ ಮಾದಿ ಲೋಪಮಾಗ ಲಷ್ಟೋತ್ತರಶತ ಗಾಯತ್ರಿ ಜಪದಿಂ ಪರಿಶುದ್ಧಿವಡೆದು, ಬಳಿಕ ಪರಮಪವಿತ್ರಮಾದ ಶಿವಪಾದೋದಕ ಸ್ವೀಕಾರ ಶಿವಪ್ರಸಾದಾನ್ನ ಸೇವನೆ ಶಿವಪ್ರಾಸಾದಾಂಬುಪಾನ ಶಿವನಿರ್ಮಾಲ್ಯದಳ ಕುಸುಮಧಾರಣಂಘಳು ಸದ್ಬ್ರಾಹ್ಮಣರು ಮೊದಲಾದ ಶ್ರೀವಿಶಿಷ್ಟರ್ಗೆ ಕರ್ತವ್ಯವಹುದು. ಮಿಕ್ಕ ಪಾಪಾತ್ಮರ್ಗೆ ಪಾಷಂಡಿಘಳಿಗೆ ಶಾಪದಗ್ಧರಿಗೆ ಶಿವಸಂಸ್ಕಾರಹೀನರ್ಗೆ ನಾಸ್ತಿಕರ್ಗೆ ವೇದಬಾಹ್ಯರಿಗೆ ಯೋಗ್ಯವಲ್ಲೆಂದು ಪರಿಭಾವಿಸುತ್ತಿಂತು ಸಕಲಸತ್ಕಿøಯೆಗಳಿಂ ನಿರ್ಮಲಾಂತಃಕರಣನಾಗಿರ್ಪಾತನೆ ಶುದ್ಧ ಶೈವನಪ್ಪನಯ್ಯಾ ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಗುರುಲಿಂಗವಿದ್ದ ಊರು ಸೀಮೆಯ ಕಂಡಾಕ್ಷಣವೆ ತುರಗ ಅಂದಣಾದಿಗಳನಿಳಿದು, ಭಯಭಕ್ತಿಕಿಂಕುರ್ವಾಣದಿಂದ ಹೋಗಿ, ಗುರುವಿನ ಪಾದೋದಕವ ಕೊಂಬುದು ಶಿಷ್ಯಗೆ ನೀತಿ. ಸಾಕ್ಷಿ :`` ಶಿಷ್ಯೋ ಗುರುಸ್ಥಿತಂ ಗ್ರಾಮಂ ಪ್ರವೇಶಿತಂ ವಾಹನಾದಿಕಂ | ವರ್ಜಯೇತ್ ಗೃಹಸಾವಿೂಪ್ಯಂ ಛಂದಯೋಶ್ಚ ವಿಪಾದುಕಃ || '' ಎಂದುದಾಗಿ, ಹೀಗೆಂಬುದನರಿಯದೆ ಅಹಂಕಾರದಲ್ಲಿ ಬೆಬ್ಬನೆ ಬೆರತು, ಗುರುವಿದ್ದ ಊರು ಸೀಮೆಯೊಳು ಅಂದಣ ಕುದುರೆಯನೇರಿ ನಡೆದರೆ ರೌರವ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನವಖಂಡಪೃಥ್ವಿ ಎಂಬುದು ಪಂಚಶತಕೋಟಿ ಯೋಜನ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಕ್ಕೆ ಮಂಡಲಾಕಾರವಾದ ಭೂಮಂಡಲ ಒಂದೇ ಅಂತಪ್ಪ ಭೂಮಂಡಲದ ಮಧ್ಯದಲ್ಲಿ ಸಪ್ತಸಮುದ್ರ, ಸಪ್ತದ್ವೀಪಾಂತರ ಹಿಮಾಚಲ ಮಹಾಮೇರುವರ್ಪತ ಮೊದಲಾದ ಅಷ್ಟ ಪರ್ವತಂಗಳು. ಕಾಶಿ, ರಾಮೇಶ್ವರ ಮೊದಲಾದ ಮುನ್ನೂರಾ ಅರುವತ್ತು ಕ್ಷೇತ್ರಂಗಳು. ಕೃಷ್ಣಾ, ಭಾಗೀರಥಿ, ಯಮುನಾ, ಸರಸ್ವತಿ, ಗಂಗಾ ಮೊದಲಾದ ಅರುವತ್ತಾರುಕೋಟಿ ತೀರ್ಥಂಗಳು ಇಂತೀ ತೀರ್ಥಕ್ಷೇತ್ರಂಗಳ ತೆತ್ತೀಸಕೋಟಿ ದೇವರ್ಕಳು ಸ್ಥಾಪಿಸಿದರು. ಮತ್ತಂ, ಮಂದಮತಿಗಳಾದ ಜೀವಾತ್ಮರು ಕೂಡಿ, ಇದು ದೇವಭೂಮಿ, ಇದು ಹೊಲೆಭೂಮಿ, ಇದು ಮಠಮಾನ್ಯದ ಭೂಮಿ, ಇದು ಗ್ರಾಮ ಗೃಹದ ಭೂಮಿ, ಇದು ಲಿಂಗಸ್ಥಾಪನೆಯಾದ ರುದ್ರಭೂಮಿ, ಇದು ಶ್ಮಶಾನ ಭೂಮಿ ಎಂದು ಹೆಸರಿಟ್ಟು ಸ್ಥಾಪನೆಯ ಮಾಡುವಿರಿ. ಎಲಾ ದಡ್ಡ ಪ್ರಾಣಿಗಳಿರಾ, ಇದಕೊಂದು ದೃಷ್ಟವ ಪೇಳ್ವೆ ಕೇಳಿರಯ್ಯಾ. ಅದೆಂತೆಂದೊಡೆ : ಒಂದು ನದಿಯಲ್ಲಿ ಕೋಲು ಹಾಕಿ, ಗೆರೆಯ ಬರೆದು ಎರಡು ಮಾಡಿ, ಇದು ಸೀ ಉದಕ, ಇದು ಲವಣೋದಕವೆಂದಡೆ ಆಗಬಲ್ಲುದೇನಯ್ಯಾ ? ಆಗಲರಿಯದು. ಮತ್ತಂ, ಒಂದೇ ಬೇವಿನಮರದೊಳಗೆ ಒಂದು ಶಾಖೆಗೆ ಮಾವಿನಹಣ್ಣು, ಒಂದು ಶಾಖೆಗೆ ಬೇವಿನಹಣ್ಣು, ಒಂದು ಶಾಖೆಗೆ ಬಾಳೆಯಹಣ್ಣು, ಒಂದು ಶಾಖೆಗೆ ಹಸಲು, ನೀರಲಹಣ್ಣು, ಆಗೆಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು ಎಂಬ ಹಾಗೆ. ಇಂತೀ ದೃಷ್ಟದಂತೆ ಒಂದು ನವಖಂಡಮಂಡಲಭೂಮಿಯೊಳಗೆ, ಇದು ಮಂಗಲಭೂಮಿ, ಇದು ಅಮಂಗಳಭೂಮಿ, ಇದು ಶುದ್ಧಭೂಮಿ, ಇದು ಅಶುದ್ಧಭೂಮಿ, ಎಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು. ಅದೇನು ಕಾರಣವೆಂದಡೆ : ಆದಿ ಅನಾದಿಯಿಂದತ್ತತ್ತಲಾದ ಪರಶಿವನ ಮಹಾ ಪ್ರಸಾದದಿಂದುದ್ಭವಿಸಿದ ಬ್ರಹ್ಮಾಂಡವು, ಒಮ್ಮೆ ಶುದ್ಧ ಒಮ್ಮೆ ಅಶುದ್ಧವಾಗಬಲ್ಲುದೆ ಎಲೆ ಮರುಳ ಮನುಜರಿರಾ. ನಿಮ್ಮ ಮನದ ಸಂಕಲ್ಪ ವಿಕಲ್ಪದಿಂ ಶುದ್ಧ ಅಶುದ್ಧವಾಗಿ ತೋರುವುದಲ್ಲದೆ. ನಿಮ್ಮ ಮನದ ಸಂಕಲ್ಪವನಳಿದಡೆ ಸಕಲಬ್ರಹ್ಮಾಂಡಗಳೆಲ್ಲ ನಿರ್ಮಳವಾಗಿ ತೋರುವವು. ನಿಮ್ಮ ಮನದ ಸಂಕಲ್ಪವನಳಿಯದಿರ್ದಡೆ ಸಕಲಬ್ರಹ್ಮಾಂಡಗಳೆಲ್ಲ ಅಮಂಗಳವಾಗಿ ತೋರುವವು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->