ಅಥವಾ

ಒಟ್ಟು 73 ಕಡೆಗಳಲ್ಲಿ , 2 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಸಿಯ ವ್ಯಾಧನು ನಿಜದಿಂದ ಕ್ಷತ್ರಿಯನೆಂದು ಬೋಧಿಸಲು ಬೋಧೆ ದೊರಕೊಂಬುದಲ್ಲದೆ ಎಲೆ ಕ್ಷತ್ರಿಯ ನೀ ವ್ಯಾಧನೆಂದು ಬೋಧಿಸಲು ಬೋಧೆ ದೊರಕೊಂಬುದೆ ಹೇಳಾ! ಜೀವ ಭೋಕ್ತೃ ನಿಜ ಪರಮನೆಂದೆನ್ನದೆ ಪರಮನೆ ಹುಸಿ ಜೀವನೆ ದಿಟವೆಂದು ಬೋಧಿಸಲು ಬೋಧೆ ದೊರಕೊಳ್ಳದು ನೋಡಾ! ಜ್ಞಾತೃ ಜ್ಞಾನ ಜ್ಞೇಯಾದಿ ಜ್ಞಪ್ತಿ ಸುಖ ಪರಿಪೂರ್ಣನಲ್ಲ ``ಕೋಯಮಾತ್ಮಾನಾನೃತೋಸ್ತಿ ಯಸ್ಮಿನ್ನೇಕಮೇವಾ ದ್ವಿತೀಯಂ ತತ್ವಮಸಿ' ಎಂದುದು ವೇದ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕವಿ ಗಮಕಿ ವಾದಿ ವಾಗ್ಮಿಯೆಂಬವರ ಮಾತಿಂಗಿಲ್ಲ. ಶಾಸ್ತ್ರಿಕರ ಶಾಸ್ತ್ರಕ್ಕಿಲ್ಲ. ತರ್ಕಿಗಳ ತರ್ಕಕ್ಕಿಲ್ಲ. ಶಬ್ದಿಕರ ಶಬ್ದ ನೆರೆಯವ ತೋರುವಡೆ ವಿಷಯವಾಗಿರದು. ಅರಿವೊಡೆ ಅತಕ್ರ್ಯ, ಅದು ನಿನ್ನಲ್ಲಿಯೆ ಅದೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಚತುರ್ವಿಂಶತಿಯೇ ದೇಹ, ಪಂಚವಿಂಶಕನೇ ದೇಹಿ, ಷಡ್‍ವಿಂಶಕನೇ ಆತ್ಮಕನು. ಅರಿದಡೆ ಸಚ್ಚಿದಾನಂದಮಪ್ಪ ನಿಜವು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಿಚ್ಚ ಕನಸಿನಲ್ಲಿ ಅಶ್ವಮೇಧ ಬ್ರಹ್ಮಹತ್ಯವ ಮಾಡಿದಡಂ ಎಂತು ನಡೆದಡಂ ದೇವದತ್ತಂಗೆ ಗುಣದೋಷವುಂಟೆ? ಸ್ವರ್ಗನರಕವುಂಟೆ ಹೇಳಾ? ಅದೆತ್ತಣ ಮಾತೊ! ಕನಸು ತಾ ಮಿಥ್ಯೆಯಪ್ಪುದರಿಂ ಮಾಯಾಮಯ. ಈ ಮಾಯೆಯನರಿದು ಹುಸಿ ಜೀವಭಾವದಿಂದ ಏನ ಮಾಡಿದಡೇನೋ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು ಬೆಂಬೀಳದಿರು ಮರುಳೆ! ಮಾಯೆ ದಿಟಕ್ಕಿಲ್ಲ; ಇಲ್ಲದುದನೆಂತು ಕೆಡಿಸುವಿರೊ? ತನ್ನನರಿದಡೆ ಸಾಕು. ಅರಿದೆನರಿಯೆನೆಂಬುದು ಮಾಯೆ. ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕನಸಿನಲ್ಲಿ ಹುಟ್ಟಿದ ಕಂದಂಗೆ ನೆನಸಿನಲ್ಲಿ ಜಾತಕರ್ಮವ ಮಾಡುವರೆ? ಭ್ರಮೆಯಿಂದ ತೋರುವಹಂ ಮಮತೆಯ ಚಿಃಯೆಂದು ತನ್ನನರಿದಂಗೆ ಕ್ರೀಯೆನಿಸಿ ಏನೂ ಇಲ್ಲ ನಿನ್ನಲ್ಲಿ ನೋಡುವಡೆ. ನಿಜಗುಣ ಸಕಲ ಕರ್ಮರಹಿತ ಚಿನ್ಮಯ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು ನಾಲ್ಕೂ ದೆಸೆಯಲಟ್ಟುತ ಬರೆ ಕಂಡು ಭಯದಿಂದ ಹೋಗ ದೆಸೆಯಿಲ್ಲದೆ ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ ಜೇನುಹುಳು ಮೈಯನೂರುವಾಗ ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು ನಿರ್ವಿಷಯನಾಗಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತನ್ನ ತನ್ನಿಂದವೆ ತಿಳಿದು ನೋಡೆಲವೊ! ತನ್ನ ತನ್ನಿಂದವೆ ಆನೆನ್ನದೆ, ಎನ್ನದೆನ್ನದೆ ಅನ್ಯ ವಿಷಯಕ್ಕೆರಗದೆ ತನ್ನ ನಿಜಸುಖದಲ್ಲಿ ನಿಂದಂದು ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಲ್ಲದ ತನುವಿಲ್ಲೆಂಬುದಕ್ಕೆ ಉಳ್ಳಾತನನುಂಟೆಂಬುದಕ್ಕೆ ಶಾಸ್ತ್ರಪುರಾಣಾಗಮಂಗಳನೋದಿ ಕೇಳಿ ತಲ್ಲಣಗೊಂಬುದಕ್ಕೆ ಕಾರಣವೇನೂ ಇಲ್ಲದುದಿಲ್ಲ, ಉಂಟಾದುದುಂಟು. ಇಲ್ಲ ಉಂಟೆಂಬುದಕ್ಕೆ ತೆರಹಿಲ್ಲದ ಸಚ್ಚಿದಾನಂದಮಪ್ಪ ನಿಜವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಾಯ ಕುನ್ನಿಯ ಕಚ್ಚಬೇಡ, ಬಗುಳಬೇಡವೆಂದಡೆ ಮಾಣ್ಬುದೆ? ಹಂದಿಯನಶುದ್ಧವ ತಿನಬೇಡ, ಹೊರಳಬೇಡವೆಂದಡೆ ಮಾಣ್ಬುದೆ? ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ? ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನೇಣಿನಲ್ಲಿ ಹಾವನಿಲ್ಲೆಂದು ಹೇಳುವಂಗೆ ಹಾವಿನಲ್ಲಿನೇಣು ಉಂಟಾಗಬಲ್ಲುದೆ ಹೇಳಾ? ಶಿವನಿಂದನ್ಯವೇನೂ ಇಲ್ಲೆಂದು ಬೋಧಿಸುವಂಗೆ ತನು ಕರಣೇಂದ್ರಿಯ ಶಬ್ದಾದಿ ವಿಷಯ ಸಂಸಾರ ಸುಖದುಃಖಗಳಾಗಬಲ್ಲವೆ? ಇಲ್ಲದುದ ಕಂಡೆ, ಉಂಟೆಂಬುದತರ್ಕ `ನೇಹನಾ ನಾಸ್ತಿಕಿಂಚನ, ಏಕಮೇವ ನಿರಂತರಂ' ಎಂದುದು ವೇದ. ಶಿವನಿಂದನ್ಯವೇನೂ ಇಲ್ಲ ಎಂದರಿದರಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಲೋಕಗತಿ ಬೇರೆ ತನ್ನ ಗತಿ ಬೇರೆ ನಿಜಗುಣನಿಗೆ, ಜಡಾಜಡ ಕರ್ಮಭೇದದಿಂದ ಲೋಕಕ್ಕೆ ಜ್ಞಾನಿ ಮರುಳು ಜ್ಞಾನಿಗೆ ಲೋಕ ಮರುಳು. ಈ ಭಾವಭೇದವ ತಿಳಿಯಲರಿದು ನೋಡಾ, ವಿಪರೀತಗತಿ. ನೋಡುವಡೆ ನಿಜಗುಣ ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನೀನಲ್ಲದುದ ನೀನೆಂಬೆ, ನಿನಗಿಲ್ಲದುದ ನಿನ್ನದೆಂಬೆ, ನೀನಲ್ಲದುದಿನ್ನಿಲ್ಲ ಕಾಣಾ! ನಿನಗೇನೂ ಇಲ್ಲ, ಅಹಂಮಮತೆಯ ಬಿಟ್ಟು ನೋಡಾ, ನೀನೇ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಎಕ್ಕಸಿಕ್ಕಗೆಡದವನೆ ಅದ್ವೈತಿ, ಆನೇನೆಂಬೆನಯ್ಯಾ. ತಾನಲ್ಲದನ್ಯವಿಲ್ಲೆಂದರಿದ ನಿಜಗುಣ ಶಿವಯೋಗಿ ಏನುವನು ತಾನರಿಯಬಲ್ಲನೆ ಹೇಳಾ. ಇನ್ನು ಸ್ತುತಿ ನಿಂದೆಗೆಡೆಯುಂಟೆ? ನಿಜಗುಣನಲ್ಲಿ ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸನ್ಮಣಿ ಎಂತು ಹೊದ್ಧಿದಂತೆ ತೋರುತಿಪ್ಪುದು? ನಿಜ ತನ್ನಂತೆ. ಅನುಭವಿ ಅವರವರಂತೆ ತೋರುವ. ತಾ ತನ್ನಂತೆ ಮತ್ತಾರಂತೆಯೂ ಆಗ. ಸನ್ಮಾತ್ರ ಚಿನ್ಮಯ ಪರಮಾನಂದ ತಿಳಿದು ನೋಡುವಡೆ ನಿಜಗುಣ ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇನ್ನಷ್ಟು ... -->